






ಸೆ.11ರಂದು ಸ್ವಾಯತ್ತ ಸಂಸ್ಥೆಯ ಪ್ರಥಮ ಪದವೀಧರರ ಸಮಾರಂಭ


ಪುತ್ತೂರು:ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ) ತನ್ನ ಶೈಕ್ಷಣಿಕ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲೊಂದನ್ನು ಆಚರಿಸಲಿದ್ದು, ಸ್ವಾಯತ್ತ ಸಂಸ್ಥೆಯ ಪ್ರಥಮ ಪದವೀಧರರ ಸಮಾರಂಭವು ಸೆ.11ರಂದು ಕಾಲೇಜಿನ ಸಿಲ್ವರ್ ಜ್ಯುಬಿಲಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಕಾಲೇಜಿನ ಸಂಚಾಲಕ ವಂ| ಡಾ| ಜೆ.ಬಿ. ಸಲ್ದಾನ್ಹಾ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಕಾಲೇಜಿನ ಪ್ರಥಮ ಪದವೀಧರರ ಸಮಾರಂಭವು ಸಂಸ್ಥೆಯ ಶೈಕ್ಷಣಿಕ ಪಯಣದಲ್ಲಿ ವಿಶೇಷ ಮಹತ್ವವನ್ನು ಹೊಂದಿದೆ. ಸ್ನಾಯತ್ತ ಸಂಸ್ಥೆಯಾಗಿ ಕಾಲೇಜಿನ ನಿರಂತರ ಪ್ರಗತಿ ಮತ್ತು ಬೆಳವಣಿಗೆಯಲ್ಲಿ ಇದು ಒಂದು ಪ್ರಮುಖ ಮೈಲಿಗಲ್ಲಾಗುವುದರ ಜೊತೆಗೆ, ಶೈಕ್ಷಣಿಕ ಶ್ರೇಷ್ಠತೆ, ವ್ಯಕ್ತಿತ್ವ ನಿರ್ಮಾಣ ಹಾಗೂ ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಯ ಕುರಿತಾಗಿ ಕಾಲೇಜು ಹೊಂದಿರುವ ಬದ್ಧತೆಯನ್ನು ಮತ್ತೊಮ್ಮೆ ದೃಢಪಡಿಸುವ ಸಂದರ್ಭವೂ ಆಗಿದೆ. ಸ್ವಾಯತ್ತ ವ್ಯವಸ್ಥೆಯಡಿ ಪದವಿ ಪಡೆಯುತ್ತಿರುವ ಪ್ರಥಮ ಸ್ನಾತಕೋತ್ತರ ವಿದ್ಯಾರ್ಥಿಗಳ ತಂಡವನ್ನು ಅಧಿಕೃತವಾಗಿ ಗೌರವಿಸುವ ಮೂಲಕ ಈ ಸಮಾರಂಭವು ಸಂಸ್ಥೆಯ ಶೈಕ್ಷಣಿಕ ಪಯಣದಲ್ಲಿ ಹೊಸ ಅಧ್ಯಾಯವೊಂದಕ್ಕೆ ನಾಂದಿ ಹಾಡಲಿದೆ.
ಪದವೀಧರರ ಸಮಾರಂಭದಲ್ಲಿ ಮಂಗಳೂರು ಧರ್ಮಪ್ರಾಂತ್ಯದ ಬಿಷಪ್, ಕ್ಯಾಥೋಲಿಕ್ ಬೋರ್ಡ್ ಆಫ್ ಎಜುಕೇಶನ್, ಮಂಗಳೂರು ಇದರ ಅಧ್ಯಕ್ಷರಾಗಿರುವ ವಂದನೀಯ ಡಾ| ಪೀಟರ್ ಪಾಲ್ ಸಲ್ದಾನ್ಹಾ ಅಧ್ಯಕ್ಷತೆ ವಹಿಸಲಿದ್ದಾರೆ.
ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ.ಎಲ್. ಧರ್ಮ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಕರ್ನಾಟಕ ಸರ್ಕಾರದ ಕಾಲೇಜು ಶಿಕ್ಷಣ ಇಲಾಖೆಯ ಮಂಗಳೂರು ವಿಭಾಗದ ಜಂಟಿ ನಿರ್ದೇಶಕಿ ಪ್ರೊ. ಕವಿತಾ ಕೆ. ಆರ್., ಕ್ಯಾಥೋಲಿಕ್ ಬೋರ್ಡ್ ಆಫ್ ಎಜುಕೇಶನ್, ಮಂಗಳೂರು ಇದರ ಕಾರ್ಯದರ್ಶಿ ಡಾ| ಪ್ರವೀಣ್ ಲಿಯೋ ಲಸ್ರಾದೊ ಹಾಗೂ ಸಂತ ಫಿಲೋಮಿನಾ ಕಾಲೇಜಿನ ಸಂಚಾಲಕ ವಂದನೀಯ ಡಾ| ಜೆ. ಬಿ. ಸಲ್ದಾನ್ಹಾ ಅವರು ಗೌರವ ಅತಿಥಿಗಳಾಗಿ ಉಪಸ್ಥಿತರಿರುವರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗಳನ್ನು ಗುರುತಿಸಿ ಗೌರವಿಸುವುದರ ಜೊತೆಗೆ, ಅವರ ಶೈಕ್ಷಣಿಕ ಪಯಣದಲ್ಲಿ ಪೋಷಕರು, ಶಿಕ್ಷಕರು ಹಾಗೂ ಇಡೀ ಕಾಲೇಜು ಸಮುದಾಯ ನೀಡಿದ ಬೆಂಬಲ ಮತ್ತು ಸಹಕಾರವನ್ನು ಸ್ಮರಿಸುವ ಕಾರ್ಯಕ್ರಮವೂ ಆಗಿರುತ್ತದೆ. ಕಾರ್ಯಕ್ರಮದಲ್ಲಿ ಶೈಕ್ಷಣಿಕ ಶಿಷ್ಟಾಚಾರ, ಸಮಾರಂಭದ ಅಧಿಕೃತ ಉಡುಪು, ಶೈಕ್ಷಣಿಕ ಮೆರವಣಿಗೆ ಮತ್ತು ನಿರ್ಗಮನ ಮೆರವಣಿಗೆ, ಆಸನ ವ್ಯವಸ್ಥೆ, ಶೈಕ್ಷಣಿಕ ಶ್ರೇಣಿಯಲ್ಲಿ ಸ್ಥಾನ ಪಡೆದ ವಿದ್ಯಾರ್ಥಿಗಳ ಗೌರವ ಹಾಗೂ ಪದವಿ ಪ್ರಮಾಣಪತ್ರಗಳ ವಿತರಣೆ ಸೇರಿದಂತೆ ವಿವಿಧ ಅಂಶಗಳಿಗೆ ವಿಶೇಷ ಗಮನ ನೀಡಿ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ.
ಕಾಲೇಜಿನ ಪ್ರಾಂಶುಪಾಲರಾದ ವಂದನೀಯ ಡಾ| ಆಂಟನಿ ಪ್ರಕಾಶ್ ಮೊಂತೆರೊ, ಕಾಲೇಜಿನ ಉಪಪ್ರಾಂಶುಪಾಲ ಡಾ| ವಿಜಯಕುಮಾರ್ ಮೊಳೆಯರ್, ಮೌಲ್ಯಮಾಪನ ವಿಭಾಗದ ರಿಜಿಸ್ಟ್ರಾರ್ ಡಾ| ವಿನಯಚಂದ್ರ ಶೈಕ್ಷಣಿಕ ವಿಭಾಗದ ರಿಜಿಸ್ಟ್ರಾರ್ ಡಾ| ನಾರ್ಬರ್ಟ್ ಮಸ್ಕರೇನ್ಹಸ್, ಪುತ್ತೂರು ಮಾಯಿದೆ ದೇವುಸ್ ಚರ್ಚ್ ಪಾಲನಾ ಪರಿಷತ್ತಿನ ಉಪಾಧ್ಯಕ್ಷ ರೋಶನ್ ಲಸ್ರಾದೋ ಹಾಗೂ ಕಾಲೇಜಿನ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ| ಭಾರತಿ ಎಸ್. ರೈ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
60ಮಂದಿಗೆ ಪದವಿ, 5 ಮಂದಿಗೆ ರ್ಯಾಂಕ್
ಸಂತ ಫಿಲೋಮಿನಾ ಪದವಿ ಕಾಲೇಜಿನಲ್ಲಿ 1580 ಹಾಗೂ ಸ್ನಾತಕೋತ್ತರ ಪದವಿ ಕಾಲೇಜಿನಲ್ಲಿ 153 ಸೇರಿದಂತೆ ಒಟ್ಟು 1703 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ಈ ಪೈಕಿ ಸ್ವಾಯತ್ತ ಸಂಸ್ಥೆಯಾದ ಬಳಿಕ ಸ್ನಾತಕೋತ್ತರ ಪದವಿಯ ಪ್ರಥಮ ಬ್ಯಾಚ್ ಹೊರಹೋಗುತ್ತಿದ್ದು 60 ಮಂದಿ ವಿದ್ಯಾರ್ಥಿಗಳಿಗೆ ಪದವೀ ಸಮಾರಂಭ ಹಾಗೂ 5 ಮಂದಿ ವಿದ್ಯಾರ್ಥಿಗಳಿಗೆ ರ್ಯಾಂಕ್ ನೀಡಲಾಗುವುದು ಎಂದು ಕಾಲೇಜಿನ ಸಂಚಾಲಕ ವಂ| ಡಾ| ಜೆ.ಬಿ. ಸಲ್ದಾನ್ಹಾ ಹೇಳಿದರು.













