ಭಾಗಿಯ ಬದುಕಿಗೆ ನೆರಳಾದ ಉಪ್ಪಿನಂಗಡಿಯ ಶ್ರೀ ಗಣೇಶೋತ್ಸವ ಸಮಿತಿ : ಸುವರ್ಣ ಮಹೋತ್ಸವದ ಸವಿನೆನಪಿನಲ್ಲಿ ಮನೆ ನಿರ್ಮಾಣ

0

ಉಪ್ಪಿನಂಗಡಿ: ಇಲ್ಲಿನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಸೇವಾ ಟ್ರಸ್ಟ್ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದ್ದು, ಈ ಸವಿ ನೆನಪಿನಲ್ಲಿ ಬಡ ಮಹಿಳೆಯೋರ್ವರಿಗೆ ಮನೆಯೊಂದನ್ನು ನಿರ್ಮಿಸಿಕೊಡುವ ಮೂಲಕ ಅವರ ಬದುಕಿಗೆ ನೆರಳಾಗಿದ್ದು, ನೂತನ ಮನೆಯ ಹಸ್ತಾಂತರ ಕಾರ್ಯ ಸೆ.10ರಂದು ನಡೆಯಲಿದೆ.


ಉಪ್ಪಿನಂಗಡಿ ಗ್ರಾಮದ ಕಜೆಕ್ಕಾರ್‌ನ ಅಂಬೇಡ್ಕರ್ ಕಾಲನಿಯ ನಿವಾಸಿ ಭಾಗಿ ಎಂಬವರು ತೀರಾ ಬಡವರಾಗಿದ್ದು, ಟರ್ಫಾಲಿನ ಜೋಪಡಿಯೊಂದರಲ್ಲಿ ವಾಸಿಸುತ್ತಿದ್ದರು. ಈ ಒಂಟಿ ಮಹಿಳೆಗೆ ಯಾರೂ ದಿಕ್ಕಿರಲಿಲ್ಲ. ಕೂಲಿ ಕೆಲಸದಿಂದ ದೈನಂದಿನ ಬದುಕು ಸಾಗುತ್ತಿತ್ತು. ಇವರ ಪರಿಸ್ಥಿತಿಯನ್ನು ಅರಿತ ಉಪ್ಪಿನಂಗಡಿಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಸೇವಾ ಟ್ರಸ್ಟ್‌ನವರು ಉಪ್ಪಿನಂಗಡಿಯ ಸಾರ್ವಜನಿಕ ಶ್ರೀ ಗಣೇಶೋತ್ಸವಕ್ಕೆ 50 ವರ್ಷವಾಗುತ್ತಿರುವ ಹಿನ್ನೆಲೆಯಲ್ಲಿ ಭಾಗಿಯವರಿಗೆ ಮನೆಯೊಂದನ್ನು ನಿರ್ಮಿಸಿಕೊಡುವ ಪುಣ್ಯ ಕಾರ್ಯಕ್ಕೆ ಮುಂದಾದರು. ಇದಕ್ಕಾಗಿ 2026ರ ಜನವರಿಯಲ್ಲಿ ಶಿಲಾನ್ಯಾಸ ನಡೆದು, ಮನೆ ನಿರ್ಮಾಣದ ಕಾರ್ಯ ಆರಂಭವಾಯಿತು. ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಸೇವಾ ಟ್ರಸ್ಟ್‌ನವರ ಈ ಕಾರ್ಯಕ್ಕೆ ಹಲವು ದಾನಿಗಳು ಸಹಕಾರ ನೀಡಿದರು. ಈ ಬಾರಿಯ ಉಪ್ಪಿನಂಗಡಿಯ ಸಾರ್ವಜನಿಕ ಶ್ರೀ ಗಣೇಶೋತ್ಸವದ ಮೊದಲೇ ಮನೆ ನಿರ್ಮಾಣ ಕಾರ್ಯ ಭಾಗಶಃ ಮುಗಿದಿದ್ದು, ಇನ್ನು ಸಣ್ಣ ಪುಟ್ಟ ಕೆಲ ಕೆಲಸಗಳು ಮಾತ್ರ ಬಾಕಿಯಿವೆ. ಇವೆಲ್ಲಾ ಕೆಲಸಗಳನ್ನು ಪೂರ್ಣಗೊಳಿಸಿ ಸೆ.10ರಂದು ಭಾಗಿಯವರಿಗೆ ಮನೆಯ ಹಸ್ತಾಂತರವಾಗಲಿದೆ.


ಆರ್‌ಸಿಸಿಯ ಮನೆ ಇದಾಗಿದ್ದು, ಇದಕ್ಕೆ ಸುಮಾರು 8 ಲಕ್ಷ ರೂ. ವೆಚ್ಚ ತಗುಲಿದೆ. ಒಂದು ಹಾಲ್, ಒಂದು ಊಟದ ಹಾಲ್, ಒಂದು ಬೆಡ್ ರೂಂ, ಅಡುಗೆ ಕೋಣೆ ಹಾಗೂ ಮನೆಗೆ ತಾಗಿಕೊಂಡೇ ಸ್ನಾನಗೃಹ ಮತ್ತು ಶೌಚಾಲಯದ ನಿರ್ಮಾಣವಾಗಿದೆ. ಇದರೊಂದಿಗೆ ಸ್ನಾನ ಗೃಹಕ್ಕೆ ನೀರಿನ ಸ್ಟೀಲ್ ಅಂಡೆಯನ್ನು ಕೂಡಾ ಸಮಿತಿಯೇ ಅಳವಡಿಸಿದೆ. ಎಲ್ಲಾ ಕೋಣೆಗಳಿಗೆ ಕಿಟಕಿ ಬಾಗಿಲುಗಳ ಜೋಡಣೆಯೂ ಆಗಿದ್ದು, ವಯರಿಂಗ್, ಪ್ಲಮ್ಮಿಂಗ್ ಕೆಲಸವನ್ನೂ ಸಮಿತಿಯ ವತಿಯಿಂದಲೇ ನಡೆಸಲಾಗಿದೆ. ಇನ್ನು ಮನೆಯ ಸುತ್ತಲೂ ಇಂಟರ್‌ಲಾಕ್ ಅಳವಡಿಸಿಕೊಡುವ ಕುರಿತು ಸಮಿತಿಯವರು ಚಿಂತಿಸಿದ್ದು, ಇನ್ನೆರಡು ದಿನದಲ್ಲಿ ಈ ಕಾರ್ಯವೂ ಮುಗಿಯಲಿದೆ. ಒಟ್ಟಿನಲ್ಲಿ ಜೋಪಡಿಯಲ್ಲಿ ಮಳೆ, ಬಿಸಿಲಿಗೆ ಮೈಯೊಡ್ಡಿ ಕಷ್ಟದ ಬದುಕು ನಡೆಸುತ್ತಿದ್ದ ಭಾಗಿಯವರಿಗೆ ಸುಸಜ್ಜಿತ ಮನೆಯನ್ನು ನಿರ್ಮಿಸಿಕೊಡುವ ಮೂಲಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಸೇವಾ ಟ್ರಸ್ಟ್ ಅವರ ಪಾಲಿಗೆ ಬೆಳಕಾಗಿದೆ.


ಸೆ.10ರಂದು ಹಸ್ತಾಂತರ
ಉಪ್ಪಿನಂಗಡಿಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಸೇವಾ ಟ್ರಸ್ಟ್ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದೆ. ಇದರ ಸವಿ ನೆನಪಿಗಾಗಿ ತೀರಾ ನಿರ್ಗತಿಕರಾದವರಿಗೆ ಮನೆಯೊಂದನ್ನು ನಿರ್ಮಿಸಿಕೊಡಬೇಕೆಂದು ನಾವು ಚಿಂತಿಸಿದ್ದೆವು. ಆಗ ಟರ್ಫಾಲಿನ ಜೋಪಡಿಯೊಂದರಲ್ಲಿ ಕಷ್ಟದ ಬದುಕು ಕಟ್ಟಿಕೊಂಡಿದ್ದ ಭಾಗಿಯವರ ಬಗ್ಗೆ ತಿಳಿಯಿತು. ಇವರಿಗೆ ಮನೆ ನಿರ್ಮಿಸಿಕೊಡಬೇಕೆಂದು ಸಂಕಲ್ಪಿಸಿ ಅದಕ್ಕೆ ಮುಂದಡಿಯಿಟ್ಟೆವು. ಸಮಿತಿಯ ನೇತೃತ್ವದಲ್ಲಿ ನಡೆದ ಈ ಮಹಾನ್ ಕಾರ್ಯದಲ್ಲಿ ಕೆಲವು ದಾನಿಗಳೂ ಸಹಕಾರ ನೀಡಿದರು. ಇವರೆಲ್ಲರ ಸಹಕಾರದೊಂದಿಗೆ ಸುಮಾರು 8 ಲಕ್ಷ ರೂ. ವೆಚ್ಚದಲ್ಲಿ ಅವರಿಗೆ ಸುಂದರವಾದ ಮನೆಯನ್ನು ನಿರ್ಮಿಸಲಾಗಿದೆ. ಸೆ.10ರಂದು ಹಸ್ತಾಂತರ ಕಾರ್ಯ ನಡೆಯಲಿದ್ದು, ಬೆಳಗ್ಗೆ ಗಣಹೋಮ ನಡೆಯಲಿದೆ. ಸಂಜೆ ಮನೆ ನಿರ್ಮಾಣ ಕಾರ್ಯಕ್ಕೆ ಕೈಜೋಡಿಸಿದ ಎಲ್ಲರನ್ನೂ ಕರೆದು ದೀಪ ಬೆಳಗಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ.
ಕೆ. ಸುಧಾಕರ ಶೆಟ್ಟಿ ಗಾಂಧಿಪಾರ್ಕ್, ಅಧ್ಯಕ್ಷರು, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಸೇವಾ ಟ್ರಸ್ಟ್ ಉಪ್ಪಿನಂಗಡಿ

LEAVE A REPLY

Please enter your comment!
Please enter your name here