






ಶಿಕ್ಷಕರ ಆದರ್ಶಯುತವಾದ ಜೀವನ ಶೈಲಿ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುತ್ತದೆ: ದಯಾನಂದ ರೈ ಕೊರ್ಮಂಡ


ಪುತ್ತೂರು : ನಮ್ಮ ದೇಶದ ಪ್ರಥಮ ಉಪರಾಷ್ಟ್ರಪತಿ ಹಾಗೂ 2ನೇ ರಾಷ್ಟ್ರಪತಿಗಳಾಗಿದ್ದ ಸರ್ವಪಲ್ಲಿ ರಾಧಾಕೃಷ್ಣನ್ ರವರ 138ನೇ ಜನ್ಮ ದಿನಾಚರಣೆಯನ್ನು ಪುತ್ತೂರಿನ ಪ್ರತಿಷ್ಠಿತ ಸಂಸ್ಥೆಗಳಾದ ವಿದ್ಯಾಮಾತಾ ಅಕಾಡೆಮಿ ಮತ್ತು ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು ಇದರ ಜಂಟೀ ಆಶ್ರಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರತಿಷ್ಠಿತ ತರಬೇತಿ ಸಂಸ್ಥೆಯಾದ ವಿದ್ಯಾಮಾತಾ ಅಕಾಡೆಮಿಯಲ್ಲಿ ಸೆ.5ರಂದು ರಾಷ್ಟೀಯ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು.



ಕಾರ್ಯಕ್ರಮವನ್ನು ವಿದ್ಯಾಮಾತಾ ಅಕಾಡೆಮಿಯ ಆಡಳಿತ ನಿರ್ದೇಶಕ ಭಾಗ್ಯೇಶ್ ರೈ ರವರು ದೀಪ ಬೆಳಗಿಸಿ, ಉದ್ಘಾಟಿಸಿ ಪ್ರಸ್ತಾವಿಕ ನೆಲೆಯಲ್ಲಿ ಮಾತನಾಡಿ ಪ್ರಸ್ತುತ ಕಾಲಘಟ್ಟದ ಶಿಕ್ಷಣ ವ್ಯವಸ್ಥೆಗಳ ಕುರಿತು ಬೆಳಕು ಚೆಲ್ಲಿದರು.

ಎಸ್. ರಾಧಾಕೃಷ್ಣನ್ ರವರಿಗೆ ನುಡಿ-ನಮನ
ದೇಶದ ಶಿಕ್ಷಣ ಕ್ಷೇತ್ರಕ್ಕೆ ಅತ್ಯಮೂಲ್ಯ ಕೊಡುಗೆ ನೀಡಿದ ಸರ್ವಪಲ್ಲಿ ರಾಧಾಕೃಷ್ಣನ್ ರವರ ಭಾವಚಿತ್ರಕ್ಕೆ ಪುಷ್ಪವನ್ನು ಅರ್ಪಿಸಿ ನುಡಿ ನಮನ ಸಲ್ಲಿಸಲಾಯಿತು.
ಇದೇ ಸಂದರ್ಭದಲ್ಲಿ ರಾಜ್ಯ ಶಿಕ್ಷಕ ಪ್ರಶಸ್ತಿ ಪುರಸ್ಕೃತರು ಹಾಗೂ ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು ಇದರ ಅಧ್ಯಕ್ಷರಾದ ದಯಾನಂದ ರೈ ಕೊರ್ಮಂಡ ರವರು ಮಾತನಾಡಿ “ಪ್ರತೀ ಶಿಕ್ಷಕನ ಜೀವನವು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುತ್ತಿದ್ದು ವಿದ್ಯಾರ್ಥಿಗಳಿಗೆ ಉನ್ನತವಾದ ಮಾರ್ಗದರ್ಶವನ್ನು ನೀಡಿ ಉತ್ತಮ ಸಮಾಜವನ್ನು ವಿದ್ಯಾರ್ಥಿಗಳ ಮೂಲಕ ನಿರ್ಮಿಸಲು ಶಿಕ್ಷಕರು ದಾರಿ ದೀಪವಾಗಿ ಬೆಳಗಬೇಕು” ಎಂದು ನುಡಿದರು.
ವೃತ್ತಿಯಲ್ಲಿ ನಿವೃತ್ತರಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಹಿರಿಯ ಶಿಕ್ಷಕರಿಗೆ ಸನ್ಮಾನ
ಶಿಕ್ಷಕರ ದಿನಾಚರಣೆಯ ಈ ಸುಸಂದರ್ಭದಲ್ಲಿ ನಿವೃತ್ತರಾಗಿದ್ದರೂ ಸಮಾಜಮುಖಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಾದ ದಯಾನಂದ ರೈ ಕೊರ್ಮಂಡ, ನಿವೃತ್ತ ಶಿಕ್ಷಕಿ ವೇದಾವತಿ ರಾಜೇಶ್, ನಿವೃತ್ತ ಶಿಕ್ಷಕಿ ಅನುಸೂಯ ಬಾಯ್, ಮೀನಾಕ್ಷಿ ಹಾಗೂ ವಿದ್ಯಾಮಾತಾ ಅಕಾಡೆಮಿಯ ಗೌರವ ತರಬೇತುದಾರರಾದ ನವೀನ್ ಸುವರ್ಣ ರವರನ್ನು ಸನ್ಮಾನಿಸಿ ಗೌರವ ಸಲ್ಲಿಸಲಾಯಿತು.
ಶಿಕ್ಷಕರ ದಿನಾಚರಣೆಯ ಈ ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು ಇದರ ಸರ್ವ ಸದಸ್ಯರು, ವಿದ್ಯಾಮಾತಾ ಅಕಾಡೆಮಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯಲ್ಲಿರುವ ವಿದ್ಯಾರ್ಥಿಗಳು ಹಾಗೂ ತರಬೇತುದಾರರು ಹಾಗೂ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.










