






ಕಾಣಿಯೂರು: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿಗೆ ಹಲ್ಲೆ ನಡೆಸಿದ ಬಳಿಕ ಪತಿ ವಿಷ ಸೇವಿಸಿ ಅಸ್ವಸ್ಥಗೊಂಡ ಘಟನೆ ಕಡಬ ತಾಲೂಕಿನ ಕುದ್ಮಾರು ಗ್ರಾಮದಲ್ಲಿ ಸೆ.6ರಂದು ನಡೆದಿದೆ.


ಕುದ್ಮಾರು ನಿವಾಸಿ ಸುಚಿತ್ರಾ ಪಿ.ಜೆ. (38) ಅವರು ನೀಡಿದ ದೂರಿನಂತೆ, ಸುಮಾರು ನಾಲ್ಕು ವರ್ಷಗಳ ಹಿಂದೆ ಇದೇ ಗ್ರಾಮದ ಚಿದಾನಂದ ಕೆ. ಎಂಬವರನ್ನು ವಿವಾಹವಾಗಿದ್ದರು. ಸೆ.6ರಂದು ಬೆಳಗ್ಗೆ ದಂಪತಿ ನಡುವೆ ಕೌಟುಂಬಿಕ ವಿಚಾರಕ್ಕೆ ಸಂಬಂಧಿಸಿ ಜಗಳ ನಡೆದಿದ್ದು, ಈ ವೇಳೆ ಚಿದಾನಂದ ಅವರು ಸುಚಿತ್ರಾ ಅವರಿಗೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.



ಹಲ್ಲೆಯಿಂದ ಕುಸಿದು ಬಿದ್ದ ಸುಚಿತ್ರಾ ಅವರಿಗೆ ನೆರೆಮನೆಯವರು ನೆರವು ನೀಡಿ, ಬಳಿಕ ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಇದೇ ವೇಳೆ ಹಲ್ಲೆ ನಡೆಸಿದ ಆರೋಪದ ಬಳಿಕ ಚಿದಾನಂದ ಅವರು ವಿಷ ಸೇವಿಸಿ ಅಸ್ವಸ್ಥಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಕುರಿತು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಿಎನ್‌ಎಸ್ 2023ರ ಕಲಂ 85, 115(2), 352ರ ಅಡಿಯಲ್ಲಿ ಅ.ಕ್ರ. 56/2026 ಎಂದು ಪ್ರಕರಣ ದಾಖಲಿಸಲಾಗಿದೆ. ಆರೋಪಿ ಚಿಕಿತ್ಸೆಯಿಂದ ಬಿಡುಗಡೆಯಾದ ಬಳಿಕ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.










