







ಪುತ್ತೂರು: ನಗರದ ಪ್ರಮುಖ ಸಂಪರ್ಕ ರಸ್ತೆಗಳಲ್ಲೊಂದಾದ ಆರ್.ಟಿ.ಒ ರಸ್ತೆಯಲ್ಲಿ ವಾಹನ ತಪಾಸಣೆಗೆ ಬರುವ ವಾಹನಗಳಿಂದಾಗಿ ಉಂಟಾಗುತ್ತಿರುವ ಸಂಚಾರದ ಅಡಚಣೆ ಸಾರ್ವಜನಿಕರಿಗೆ ನಿತ್ಯದ ಸಮಸ್ಯೆಯಾಗಿ ಪರಿಣಮಿಸಿದೆ. ವಾಹನಗಳ ದಾಖಲೆ ಹಾಗೂ ನಿಯಮ ಪಾಲನೆ ಪರಿಶೀಲಿಸುವುದು ಅಗತ್ಯವಾದರೂ, ತಪಾಸಣೆಯ ಸಂದರ್ಭ ರಸ್ತೆ ಸಂಚಾರಕ್ಕೆ ಅಡ್ಡಿಯಾಗದಂತೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕೆಂಬ ಆಗ್ರಹ ಸಾರ್ವಜನಿಕರಿಂದ ಕೇಳಿಬರುತ್ತಿದೆ.


ಆರ್.ಟಿ.ಒ ಇಲಾಖೆಯಿಂದ ವಾಹನ ತಪಾಸಣೆ ನಡೆಸುವ ಸಂದರ್ಭದಲ್ಲಿ ವಾಹನಗಳನ್ನು ರಸ್ತೆಯಲ್ಲೇ ನಿಲ್ಲಿಸುವುದರಿಂದ ಕೆಲವೊಮ್ಮೆ ಒಂದರ ಹಿಂದೆ ಒಂದರಂತೆ ವಾಹನಗಳು ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇದರಿಂದ ಈ ರಸ್ತೆಯಲ್ಲಿ ಸಂಚರಿಸುವ ಇತರ ವಾಹನಗಳಿಗೆ ಸುಗಮವಾಗಿ ಸಾಗಲು ಸಾಧ್ಯವಾಗದೆ ಸಂಚಾರ ನಿಧಾನಗೊಳ್ಳುವುದು, ವಾಹನ ದಟ್ಟಣೆ ಉಂಟಾಗುವುದು ಹಾಗೂ ಸಾರ್ವಜನಿಕರು ಅನಗತ್ಯವಾಗಿ ಕಾಯುವಂತಾಗುವುದು ಕಂಡುಬರುತ್ತಿದೆ.



ತಪಾಸಣೆ ಅಗತ್ಯ, ಆದರೆ ಸಂಚಾರಕ್ಕೂ ಆದ್ಯತೆ ಬೇಕು;
ವಾಹನಗಳ ದಾಖಲೆ, ನೋಂದಾವಣೆ, ಎಫ್.ಸಿ.ಗೆ ಸಂಬಂಽಸಿ ವಾಹನಗಳನ್ನು ಆರ್ಟಿಒ ಇಲಾಖೆಗೆ ತರುವುದು ಅಗತ್ಯ. ಇದನ್ನು ಸಾರ್ವಜನಿಕರು ಸ್ವಾಗತಿಸುತ್ತಾರೆ. ಆದರೆ ಆರ್.ಟಿ.ಒ ಇಲಾಖೆಯ ದ್ವಾರದ ಬಳಿ ಉದ್ದಕ್ಕೆ ವಾಹನ ನಿಲ್ಲಿಸುವುದರಿಂದ ಇತರ ವಾಹನಗಳಿಗೆ ಸಂಚರಿಸಲು ಅಡ್ಡಿಯಾಗುತ್ತಿದೆ. ತಪಾಸಣೆಯ ಉದ್ದೇಶ ಸಾರ್ವಜನಿಕರ ಸುರಕ್ಷತೆಯಾಗಿರುವಾಗ, ಅದೇ ತಪಾಸಣೆಯಿಂದ ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಉಂಟಾಗಬಾರದು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ. ತಪಾಸಣೆ ನಡೆಸುವ ಸ್ಥಳ, ವಾಹನಗಳನ್ನು ನಿಲ್ಲಿಸುವ ವಿಧಾನ ಹಾಗೂ ಸಂಚಾರ ನಿಯಂತ್ರಣಕ್ಕೆ ಅಗತ್ಯ ಸಿಬ್ಬಂದಿ ನಿಯೋಜನೆ ಕುರಿತು ಸಂಬಂಧಪಟ್ಟ ಇಲಾಖೆ ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕಾಗಿದೆ ಎಂದು ಆಗ್ರಹ ಕೇಳಿಬಂದಿದೆ.
ಸಾರ್ವಜನಿಕರಿಗೆ ಸಮಯ ನಷ್ಟ; ತುರ್ತು ವಾಹನಗಳಿಗೂ ಅಡ್ಡಿ ಆತಂಕ:
ಸಂಚಾರ ದಟ್ಟಣೆಯಿಂದ ಸಾರ್ವಜನಿಕರು ತಮ್ಮ ನಿಗದಿತ ಕೆಲಸಗಳಿಗೆ ಸಮಯಕ್ಕೆ ತಲುಪಲು ತೊಂದರೆ ಅನುಭವಿಸುವಂತಾಗುತ್ತಿದೆ. ತುರ್ತು ಸಂದರ್ಭದಲ್ಲಿ ಆಂಬ್ಯುಲೆನ್ಸ್, ಅಗ್ನಿಶಾಮಕ ವಾಹನ ಸೇರಿದಂತೆ ತುರ್ತು ಸೇವಾ ವಾಹನಗಳು ಇದೇ ಮಾರ್ಗದಲ್ಲಿ ಸಂಚರಿಸಬೇಕಾದರೆ, ಸಂಚಾರ ದಟ್ಟಣೆ ಮತ್ತಷ್ಟು ಸಮಸ್ಯೆ ಉಂಟುಮಾಡುವ ಸಾಧ್ಯತೆ ಇದೆ. ಆದ್ದರಿಂದ ವಾಹನ ತಪಾಸಣೆಗೆ ಬರುವ ವಾಹನಗಳಿಂದ ಸುಗಮ ಸಂಚಾರಕ್ಕೂ ಸಮಾನ ಆದ್ಯತೆ ನೀಡಬೇಕಾಗಿದೆ ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಶಾಶ್ವತ ಪರಿಹಾರ ಕಲ್ಪಿಸಲಿ;
ಆರ್.ಟಿ.ಒ ರಸ್ತೆಯಲ್ಲಿ ಉಂಟಾಗುತ್ತಿರುವ ಸಮಸ್ಯೆಯನ್ನು ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. ಯಾವ ಸಮಯದಲ್ಲಿ ಹೆಚ್ಚಿನ ಸಂಚಾರ ದಟ್ಟಣೆ ಉಂಟಾಗುತ್ತದೆ, ತಪಾಸಣೆಗೆ ಬರುವ ವಾಹನಗಳನ್ನು ಎಲ್ಲಿ ನಿಲ್ಲಿಸಬಹುದು ಹಾಗೂ ಸಂಚಾರವನ್ನು ಹೇಗೆ ನಿಯಂತ್ರಿಸಬಹುದು ಎಂಬುದರ ಕುರಿತು ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ಕ್ರಮ ಕೈಗೊಳ್ಳಬೇಕಾಗಿದೆ. ನಿತ್ಯ ಸಂಚಾರಕ್ಕೆ ಅಡ್ಡಿಯಾಗದಂತೆ ಶಾಶ್ವತ ಪರಿಹಾರ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.










