






ಪುತ್ತೂರು : ಪುತ್ತೂರಿನ ಕೆ.ಎಸ್ . ಆರ್.ಟಿ. ಸಿ ಬಸ್ ಸ್ಟ್ಯಾಂಡ್ ನ ಸಮೀಪದ ನೆಲ್ಲಿಕಟ್ಟೆಯಲ್ಲಿರುವ ಮೇಧಾ ಕಾಲೇಜಿನಲ್ಲಿ ‘ಆತ್ಮ ಚಿತ್ರ ಕಲಾ’ ನೂತನ ಡ್ರಾಯಿಂಗ್ ತರಗತಿಯನ್ನು ಸೆಪ್ಟೆಂಬರ್ 5 ರಂದು ಉದ್ಘಾಟಿಸಲಾಯಿತು.
ಕಾರ್ಯಕ್ರಮವನ್ನು ಮೇಧಾ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಪ್ರಫುಲ್ಲರವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಚಿತ್ರಕಲೆ ಮಕ್ಕಳಲ್ಲಿರುವ ಸೃಜನಶೀಲತೆ, ಕಲ್ಪನಾಶಕ್ತಿ ಮತ್ತು ಕಲಾತ್ಮಕ ಪ್ರತಿಭೆಯನ್ನು ಬೆಳೆಸಲು ಸಹಕಾರಿಯಾಗಿದೆ ಎಂದು ಹೇಳಿ ಇಲ್ಲಿ ತರಬೇತಿ ಹೊಂದಿದ ವಿದ್ಯಾರ್ಥಿಗಳು ರಾಜಾ ರವಿವರ್ಮನಂತೆ ಪ್ರಸಿದ್ಧಿ ಹೊಂದಲಿ ಎಂದು ಆಶಿಸಿದರು.
ಹಾಗೆಯೇ ಕಾಲೇಜಿನ ಪ್ರಾಂಶುಪಾಲೆ ಸುಚಿತ್ರಾ ಮಾತನಾಡಿ ಕಲೆಯೆಂಬುದು ಕಲ್ಪನೆಯನ್ನು ಕಾರ್ಯಗತಗೊಳಿಸುವ ಒಂದು ವಿದ್ಯೆ. ಇದರಲ್ಲಿ ಪರಿಣತಿ ಹೊಂದಿದವರು ಭವಿಷ್ಯದಲ್ಲಿ ಯಶಸ್ಸನ್ನು ಹೊಂದುವರು ಎಂಬ ಆಶಯವನ್ನು ವ್ಯಕ್ತಪಡಿಸಿದರು. ಜ್ಞಾನದೀಪ ಶಿಕ್ಷಣ ತರಬೇತಿ ಮತ್ತು ಅಭಿವೃದ್ಧಿ ಸಂಸ್ಥೆ ಬೆಳ್ಳಾರೆ ಇಲ್ಲಿನ ನಿರ್ದೇಶಕರಾದ ಉಮೇಶ್ ಮಣಿಕ್ಕಾರರವರು ಮಾತನಾಡಿ ವಿದ್ಯಾರ್ಥಿಗಳು ಚಿತ್ರಕಲೆಯ ಮೂಲಕ ತಮ್ಮ ಪ್ರತಿಭೆಯನ್ನು ಅಭಿವ್ಯಕ್ತಿಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿ ಶುಭಹಾರೈಸಿದರು.
ವಿದ್ಯಾರ್ಥಿಗಳ ಕಲಾತ್ಮಕ ಪ್ರತಿಭೆಯನ್ನು ಬೆಳೆಸುವ ಉದ್ದೇಶದಿಂದ ಈ ಡ್ರಾಯಿಂಗ್ ತರಗತಿಯನ್ನು ಆರಂಭಿಸಲಾಗಿದೆ ಎಂದು ಚಿತ್ರಕಲಾ ತರಗತಿಯ ಮಾರ್ಗದರ್ಶಕರಾದ ರಮೇಶ್ ರವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.ಕಾರ್ಯಕ್ರಮದ ನಿರೂಪಣೆ ಹಾಗೂ ವಂದನಾರ್ಪಣೆಯನ್ನು ಚಿತ್ರಕಲಾ ತರಗತಿಯ ಮಾರ್ಗದರ್ಶಕರಾದ ರಮೇಶ್ ರವರು ನೆರವೇರಿಸಿದರು. ಹೀಗೆ ಕಾರ್ಯಕ್ರಮವು ಸಂಪನ್ನಗೊಂಡಿತು.















