







ಪುತ್ತೂರು: ಪುತ್ತೂರು ವಕೀಲರ ಸಂಘದ ವತಿಯಿಂದ ಬನ್ನೂರು ಆನೆಮಜಲು ಕೋರ್ಟ್ ಸಂಪರ್ಕ ರಸ್ತೆಯಲ್ಲಿ ಅಳವಡಿಸಲಾದ ಕೆಎಸ್ಆರ್ಟಿಸಿ ಬಸ್ ನಿಲುಗಡೆ ಫಲಕ ಉದ್ಘಾಟನೆ ಸೆ.8ರಂದು ನಡೆಯಿತು.


ಪುತ್ತೂರು ಪುತ್ತೂರು 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸದಾನಂದ ನಾಗಪ್ಪ ನಾಯ್ಕ್ ಫಲಕ ಅನಾವರಣಗೊಳಿಸಿ ಮಾತನಾಡಿ ಆನೆಮಜಲುನಲ್ಲಿ ಬಸ್ ನಿಲುಗಡೆ ಇಲ್ಲದೆ ಕೋರ್ಟ್ಗೆ ಬರಲು ವಿಳಂಬವಾಗುತ್ತಿತ್ತು. ವಕೀಲರಿಗೆ, ಸಿಬ್ಬಂದಿಗಳಿಗೆ ಹಾಗೂ ಕಕ್ಷಿದಾರರಿಗೆ ತ್ವರಿತಗತಿಯಲ್ಲಿ ಬರಲು ಅನಾನುಕೂಲವಾಗುತ್ತಿತ್ತು. ಬಸ್ ನಿಲುಗಡೆ ಮಾಡುವುದರಿಂದ ಎಲ್ಲರಿಗೂ ಸಹಾಯವಾಗಲಿ ಎಂದರು.



ಕೆಎಸ್ಆರ್ಟಿಸಿ ಮುಕ್ರಂಪಾಡಿ ಘಟಕ ವ್ಯವಸ್ಥಾಪಕ ಸುಬ್ರಹ್ಮಣ್ಯ ಪ್ರಕಾಶ್ ಮಾತನಾಡಿ ನ್ಯಾಯಾಲಯ ಉದ್ಘಾಟನೆಗೊಂಡ ಮರುದಿನದಿಂದಲೇ ಇಲ್ಲಿ ಬಸ್ ನಿಲುಗಡೆಗೆ ಆದೇಶವಾಗಿತ್ತು. ಆದರೆ ಕೆಲವು ಸಲ ನಿಲುಗಡೆ ಆಗುತ್ತಿರಲಿಲ್ಲ. ಅಧಿಕೃತವಾಗಿ ಫಲಕ ಇದ್ದರೆ ನಿಲುಗಡೆ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ನ್ಯಾಯಾಧೀಶರಿಗೆ ಹಾಗೂ ವಕೀಲರ ಸಂಘದ ಅಧ್ಯಕ್ಷರಿಗೆ ತಿಳಿಸಿದ್ದೆ ಎಂದು ಹೇಳಿದ ಅವರು ವಕೀಲರ ಸಂಘದ ಮನವಿ ಮೇರೆಗೆ ಶೀಘ್ರದಲ್ಲಿ ನ್ಯಾಯಾಲಯದ ಆವರಣದೊಳಗೆ ದಿನಕ್ಕೆ ಎರಡು ಬಾರಿ ಬಸ್ ಸಂಚಾರ ಮಾಡುವಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ಆಶ್ವಾಸನೆ ನೀಡಿದರು.
ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಎಂ. ಮಾತನಾಡಿ ಬಸ್ ನಿಲುಗಡೆ ಬೇಡಿಕೆಯನ್ನು ಮನಗಂಡು ಈಡೇರಿಸಿದ ಕೆಎಸ್ಆರ್ಟಿಸಿ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿ ಮುಂದಿನ ದಿನಗಳಲ್ಲಿ ಆನೆಮಜಲು ಜಂಕ್ಷನ್ನಲ್ಲಿ ಬ್ಯಾರಿಕೇಡ್ ಅಳವಡಿಕೆ ಹಾಗೂ ಬಸ್ ತಂಗುದಾಣದ ನಿರ್ಮಾಣವಾಗಬೇಕಾಗಿದೆ. ಬಸ್ ತಂಗುದಾಣ ನಿರ್ಮಾಣಕ್ಕೆ ಈಗಾಗಲೇ ನಗರಸಭೆ ಹಾಗೂ ಲೋಕೋಪಯೋಗಿ ಇಲಾಖೆಯ ಅನುಮತಿ ದೊರೆತಿದೆ. ಸಂಘ ಸಂಸ್ಥೆಗಳ ಪ್ರಾಯೋಜಕತ್ವದಲ್ಲಿ ತಂಗುದಾಣ ನಿರ್ಮಾಣ ಮಾಡಲಾಗುವುದು ಎಂದರು.
ಪುತ್ತೂರು 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧಿಶರಾದ ಸುಮಂಗಲ ಚಕಲಬ್ಬಿ, ಪುತ್ತೂರು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಪ್ರಕೃತಿ ಕಲ್ಯಾಣಪುರ, ಪುತ್ತೂರು 1ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ವೈ ಹರಿಹರನ್, ಪುತ್ತೂರು 2ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಆರ್. ರಮ್ಯಾ, ಪುತ್ತೂರು ವಕೀಲರ ಸಂಘದ ಉಪಾಧ್ಯಕ್ಷ ಮಹಾಬಲ ಶೆಟ್ಟಿ ಕೊಮ್ಮಂಡ, ಪ್ರಧಾನ ಕಾರ್ಯದರ್ಶಿ ಸ್ವಾತಿ ಜೆ. ರೈ, ಕೋಶಾಧಿಕಾರಿ ಭಾರತಿ, ಜತೆ ಕಾರ್ಯದರ್ಶಿ ಉದಯಚಂದ್ರ ಕೆ. ಹಾಗೂ ಹಿರಿಯ, ಕಿರಿಯ ವಕೀಲರುಗಳು ಉಪಸ್ಥಿತರಿದ್ದರು. ವಕೀಲರಾದ, ಕಜೆ ಲಾ ಛೇಂಬರ್ಸ್ನ ಮಹೇಶ್ ಕಜೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.










