ಶ್ರೀ ಕ್ಷೇತ್ರ ಪೆರುವೋಡಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ

0

ಪುತ್ತೂರು: ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಜ್ಯೋತಿ ಯುವಕ ಮಂಡಲ ಮುಕ್ಕೂರು ಪೆರುವಾಜೆ ಮತ್ತು ಶ್ರೀ ವೈಷ್ಣವಿ ಮಹಿಳಾ ಮಂಡಲದ ಜಂಟಿ ಆಶ್ರಯದಲ್ಲಿ ಮೊಸರು ಕುಡಿಕೆ ಉತ್ಸವ ಸೆ.6 ರಂದು ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ ವಿಜೃಂಭಣೆಯಿಂದ ನಡೆಯಿತು.

ಕಾರ್ಯಕ್ರಮಕ್ಕೆ ಪೆರುವೋಡಿ ಶ್ರೀ ಕ್ಷೇತ್ರದ ಅರ್ಚಕರಾದ ಸುರೇಶ ಉಪಾಧ್ಯಾಯ ಅವರು ದೀಪ ಬೆಳಗಿಸಿ ಚಾಲನೆ ನೀಡಿದರು. ಬಳಿಕ ಭಜನಾ ಕಾರ್ಯಕ್ರಮ ಹಾಗೂ ವಿವಿಧ ವಿಭಾಗಗಳಲ್ಲಿ ಆಟೋಟ ಸ್ಪರ್ಧೆಗಳು ನಡೆದವು. ಮಧ್ಯಾಹ್ನ ಮಹಾಪೂಜೆಯ ಬಳಿಕ ಸಿಹಿ ಭೋಜನ, ಸಂಜೆ ಹಗ್ಗಜಗ್ಗಾಟ ಸ್ಪರ್ಧೆ ನಡೆಯಿತು.

ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಜ್ಯೋತಿ ಯುವಕ ಮಂಡಲದ ಅಧ್ಯಕ್ಷ ದಿನೇಶ್ ಕಾನಾವು ವಹಿಸಿದ್ದರು.

ವೇದಿಕೆಯಲ್ಲಿ ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಮೊಕ್ತೇಸರ ಕುಂಬ್ರ ದಯಾಕರ ಆಳ್ವ, ಪ್ರಗತಿಪರ ಕೃಷಿಕ ಸತ್ಯಪ್ರಸಾದ್ ಕಂಡಿಪ್ಪಾಡಿ, ಮುಕ್ಕೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ರಘುನಾಥ ಶೆಟ್ಟಿ ಬರೆಮೇಲು, ಜ್ಯೋತಿ ಯುವಕ ಮಂಡಲದ ಕಾರ್ಯದರ್ಶಿ ಧನಂಜಯ ನೀರ್ಕಜೆ, ಶ್ರೀ ವೈಷ್ಣವಿ ಮಹಿಳಾ ಮಂಡಲದ ಅಧ್ಯಕ್ಷೆ ಸುಮಿತ್ರಾ ಬೀರುಸಾಗು, ಸಾಮಾಜಿಕ ಮುಖಂಡ ಹೊನ್ನಪ್ಪ ಗೌಡ ಚಾಮುಂಡಿಮೂಲೆ, ಶ್ರೀ ಕ್ಷೇತ್ರದ ಅರ್ಚಕ ಸುರೇಶ ಉಪಾಧ್ಯಾಯ, ನಮ್ಮೂರ ನಮ್ಮ ಕನಸು ಜನಸೇವಾ ಟ್ರಸ್ಟ್ ಕೊಡಿಯಾಲ ಇದರ ಅಧ್ಯಕ್ಷ ಸುಬ್ರಹ್ಮಣ್ಯ ಕೆ.ಎಂ, ಉಪಾಧ್ಯಕ್ಷ ಅಶ್ವಿನ್ ಕುಮಾರ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಶೇ.80ಕ್ಕಿಂತ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಜ್ಯೋತಿ ಯುವಕ ಮಂಡಲದ ಸದಸ್ಯ ಶರತ್ ನೀರ್ಕಜೆ ಸ್ವಾಗತಿಸಿದರು, ದೀಕ್ಷಾ ನೀರ್ಕಜೆ ಕಾರ್ಯಕ್ರಮ ನಿರೂಪಿಸಿದರು, ದೀಕ್ಷಾ ಪೂವಾಜೆ ವಂದಿಸಿದರು.

LEAVE A REPLY

Please enter your comment!
Please enter your name here