







ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಹಯೋಗದೊಂದಿಗೆ ಧಾರ್ಮಿಕತೆ, ಸಂಸ್ಕೃತಿ ಮತ್ತು ಸಾಮಾಜಿಕ ಸಾಮರಸ್ಯವನ್ನು ಸಾರುವ ನಿಟ್ಟಿನಲ್ಲಿ ಪುತ್ತೂರು ದೀಪೋತ್ಸವ-2026 ಅನ್ನು ಡಿ.8ಕ್ಕೆ ಆಯೋಜಿಸಲಾಗುತ್ತಿದ್ದು, ಇದಕ್ಕೆ ಪೂರ್ವಭಾವಿಯಾಗಿ ದೇವರ ಅಪ್ಪಣೆ ಪಡೆಯಲು ವಿಶೇಷ ಪ್ರಾರ್ಥನೆಯನ್ನು ಸೆ.9ರಂದು ದೇವಳದಲ್ಲಿ ಮಾಡಲಾಯಿತು.



ದೀಪೋತ್ಸವ ಸಮಿತಿ ಅಧ್ಯಕ್ಷ ರವೀಂದ್ರ ಶೆಟ್ಟಿ ನುಳಿಯಾಲು ಅವರ ನೇತೃತ್ವದಲ್ಲಿ ಸಮಿತಿ ಪದಾಧಿಕಾರಿಗಳು ಜೊತೆಯಾಗಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರ ಉಪಸ್ಥಿತಿಯಲ್ಲಿ ಶ್ರೀ ದೇವರ ಸತ್ಯಧರ್ಮ ನಡೆಯಲ್ಲಿ ಕಾರ್ಯಕ್ರಮಕ್ಕೆ ಅಪ್ಪಣೆ ಪಡೆದು ಯಶಸ್ಸಿಗಾಗಿ ಪ್ರಾರ್ಥನೆ ನೆರವೇರಿಸಲಾಯಿತು. ಈ ಸಂದರ್ಭ ಸಮಿತಿ ಡಾ.ರವೀಶ ಪಡುಮಲೆ, ಉದ್ಯಮಿ ಕರುಣಾಕ ರೈ ದೇರ್ಲ, ಗೋಪಾಲಕೃಷ್ಣ ಎಂ, ದಾಮೋದರ್ ಪಾಟಾಳಿ, ಸಂತೋಷ್ ಕುಮಾರ್, ಹರಿಣಾಕ್ಷಿ ಜೆ ಶೆಟ್ಟಿ, ನಯನಾ ರೈ, ರೇಣುಕಾ ಮುರಳಿಧರ ರೈ, ಅಮಿತಾ ಶೆಟ್ಟಿ ನುಳಿಯಾಲು, ರತ್ನಾಕರ್ ನಾಕ್, ಸುಜೀರ್ ಶೆಟ್ಟಿ, ಸಂತೋಷ್ ಕುಮಾರ್ ರೈ ಕೈಕಾರ, ಪ್ರವೀಣ್ ಕುಮಾರ್ ರೈ ಸಹಿತ ಹಲಾವರು ಮಂದಿ ಉಪಸ್ಥಿತರಿದ್ದರು. ದೇವಳದ ಪ್ರಧಾನ ಅರ್ಚಕ ವೇ ಮೂ ವಿ.ಎಸ್ ಭಟ್ ಪ್ರಾರ್ಥನೆ ನೆರವೇರಿಸಿದರು.



ಪ್ರಥಮ ಬಾರಿಗೆ ತೆಂಕು, ಬಡಗು ತಿಟ್ಟುಗಳ ಕಲಾ ವೈಭವ:
ದೀಪೋತ್ಸವದ ಅಂಗವಾಗಿ ಬೆಳಿಗ್ಗೆ 9 ಗಂಟೆಗೆ ಭಜನಾ ಕಾರ್ಯಕ್ರಮ ಆರಂಭಗೊಳ್ಳಲಿದೆ. 10 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ, 11 ಗಂಟೆ ವಿವಿಧ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಮಧ್ಯಾಹ್ನ 12.30ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ 2 ಗಂಟೆಯಿಂದ ತೆಂಕು ಮತ್ತು ಬಡಗು ತಿಟ್ಟುಗಳ ಕಾಲಾ ವೈಭವವನ್ನು ಒಟ್ಟುಗೂಡಿಸುವ ವಿಶೇಷ ಕಾರ್ಯಕ್ರಮ ಪುತ್ತೂರಿನಲ್ಲಿ ಪ್ರಥಮ ಬಾರಿಗೆ ನಡೆಯಲಿದೆ. ದ್ರೌಪದಿ ಪ್ರತಾಪ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಕಾರ್ಯಕ್ರಮದಲ್ಲಿ ಸತೀಶ್ ಶೆಟ್ಟಿ ಪಟ್ಲ ಮತ್ತು ಜನ್ಸಾಲೆ ರಾಘವೇಂದ್ರ ಆಚಾರ್ಯ ಅವರ ಭಾಗವತಿಕೆ ಪ್ರಮುಖ ಆಕರ್ಷಣೆಯಾಗಲಿದೆ. ಸಂಜೆ ಗಂಟೆ 6 ಕ್ಕೆ ಧರ್ಮಸಭೆ ನಡೆಯಲಿದ್ದು, ರಾತ್ರಿ ಗಂಟೆ 8 ರಿಂದ ಖ್ಯಾತ ಸಂಗೀತ ಕಲಾವಿದ ಡಾ. ವಿದ್ಯಾಭೂಷಣ್ ಮತ್ತು ಅವರ ಪುತ್ರಿಯಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ಡಾ. ರವೀಶ ಪಡುಮಲೆ ಅವರು ತಿಳಿಸಿದ್ದಾರೆ.
ಯುವಶಕ್ತಿಯೊಂದಿಗೆ ಹೊಸ ಹೆಜ್ಜೆ
ಪುತ್ತೂರು ದೀಪೋತ್ಸವದ ವಿಶೇಷತೆಯೆಂದರೆ ಯುವಶಕ್ತಿಯನ್ನು ಕೇಂದ್ರವಾಗಿರಿಸಿಕೊಂಡು ರೂಪುಗೊಂಡಿರುವ ಹೊಸ ಸಮಿತಿ. ಪುತ್ತೂರಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ವೈಭವವನ್ನು ಉಳಿಸಿ ಬೆಳೆಸುವಲ್ಲಿ ಯುವಜನತೆಯ ಪಾತ್ರ ಮಹತ್ವದ್ದಾಗಿದೆ ಎಂಬ ಆಶಯದೊಂದಿಗೆ ಯುವಕರನ್ನು ಕಾರ್ಯ ಕ್ರಮದ ವಿವಿಧ ಜವಾಬ್ದಾರಿಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲಾಗಿದೆ. “ಒಂದು ದೀಪ ಭಕ್ತಿಯ ಸಂಕೇ ತವಾಗಲಿ, ಒಂದು ದೀಪ ಸಂಸ್ಕೃತಿಯ ಸಂಕೇತವಾಗಲಿ, ಒಂದು ದೀಪ ಸಾಮರಸ್ಯದ ಸಂಕೇತವಾಗಲಿ” ಎಂಬ ಆಶಯದೊಂದಿಗೆ ನಡೆಯಲಿರುವ ಪುತ್ತೂರು ದೀಪೋತ್ಸವವು ಮುಂದಿನ ವರ್ಷ ಗಳಲ್ಲಿಯೂ ಪುತ್ತೂರಿನ ಧಾರ್ಮಿಕ – ಸಾಂಸ್ಕೃತಿಕ ಬದುಕಿನಲ್ಲಿ ಒಂದು ಅರ್ಥ ಪೂರ್ಣ ಪರಂಪರೆಯಾಗಿ ಬೆಳೆಯಬೇಕು ಎಂಬುದು ಸಮಿತಿಯ ಸಂಕಲ್ಪವಾಗಿದೆ. ಪುತ್ತೂರಿನ ಸಮಸ್ತನಾಗರಿಕರು, ಭಕ್ತರು, ಯುವಜನತೆ, ಕಲಾಭಿಮಾನಿಗಳು ಹಾಗೂ ಜಿಲ್ಲೆಯ ವಿವಿಧ ಭಾಗಗಳ ಸಾರ್ವಜನಿಕರು ಹೆಚ್ಚಿನ ಸಂಖ್ಯೆ ಯಲ್ಲಿ ಭಾಗವಹಿಸಿ ಪುತ್ತೂರು ದೀಪೋತ್ಸವ-2026ನ್ನು ಯಶಸ್ವಿಗೊಳಿಸಬೇಕೆಂದು ಸಂಘಟಕರು ವಿನಂತಿಸಿದ್ದಾರೆ.
ಕಾರ್ಯಕ್ರಮದ ಯಶಸ್ಸಿಗಾಗಿ ಪ್ರಾರ್ಥನೆ:
ಲಕ್ಷದೀಪೋತ್ಸವದ ಸಂದರ್ಭ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಉತ್ಸವಾದಿಗಳು ನಡೆಯುತ್ತವೆ. ಈ ನಡುವೆ ದೇವಳದ ಗದ್ದೆಯಲ್ಲೂ ಲಕ್ಷದೀಪೋತ್ಸವದ ಸಂಭ್ರಮ ಇರಬೇಕೆನ್ನುವ ಮತ್ತು ಪುತ್ತೂರಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು, ಯುವಜನತೆಯನ್ನು ನಮ್ಮ ಸಂಸ್ಕೃತಿಯೊಂದಿಗೆ ಬೆಸೆಯುವ ನಿಟ್ಟಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬೆಳಗ್ಗಿನಿಂದ ಸಂಜೆಯ ತನಕ ವಿವಿಧ ಕಾರ್ಯಕ್ರಮ ನಡೆಯಲಿದ್ದು, ಈ ಎಲ್ಲಾ ಕಾರ್ಯಕ್ರಮದ ಯಶಸ್ಸಿಗಾಗಿ ಪ್ರಾರ್ಥನೆ ಮಾಡಿದ್ದೇವೆ.
ರವೀಂದ್ರ ಶೆಟ್ಟಿ ನುಳಿಯಾಲು ಅಧ್ಯಕ್ಷರು, ಪುತ್ತೂರು ದೀಪೋತ್ಸವ -2026










