







ನೆಲ್ಯಾಡಿ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆ ಹಾಗೂ ಜ್ಞಾನೋದಯ ಬೆಥನಿ ವಿದ್ಯಾಸಂಸ್ಥೆ ನಡುವೆ ಯು-ಟರ್ನ್ ಕಲ್ಪಿಸುವಂತೆ ಆಗ್ರಹಿಸಿ ಸೆ.೯ರಂದು ಬೆಳಗ್ಗೆ ನೆಲ್ಯಾಡಿಯಲ್ಲಿ ಹೋರಾಟ ಸಮಿತಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಮಧ್ಯಾಹ್ನ ಸ್ಥಳಕ್ಕೆ ಆಗಮಿಸಿದ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಅಬ್ದುಲ್ಲಾ ಜಾವೇದ್ ಅಜ್ಮಿ ಅವರು, ಹೆದ್ದಾರಿ ಸುರಕ್ಷತಾ ಎಂಜಿನಿಯರ್ಗಳ ತಂಡದಿಂದ ಸ್ಥಳ ಪರಿಶೀಲನೆ ನಡೆಸಿ ಅವರು ನೀಡುವ ತಾಂತ್ರಿಕ ನಿರ್ದೇಶನದಂತೆ ಒಂದು ತಿಂಗಳೊಳಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು.


ಬೆಳಗ್ಗೆ 9.30ರ ವೇಳೆಗೆ ರಾಷ್ಟ್ರೀಯ ಹೆದ್ದಾರಿ ಪಕ್ಕದ ನ್ಯೂ ರಾಜಸ್ಥಾನ ಗ್ರಾನೈಟ್ ಬಳಿ ಜಮಾಯಿಸಿದ ಪ್ರತಿಭಟನಾಕಾರರು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ನಿಂತು ಪ್ರತಿಭಟನೆಗೆ ಮುಂದಾದರು. ಇದಕ್ಕೆ ಅವಕಾಶ ನೀಡದ ಉಪ್ಪಿನಂಗಡಿ ಠಾಣೆ ಪಿಎಸ್ಐ ಸುತೇಶ್ ಕೆ.ಪಿ.ಅವರು ಗಾಂಧಿ ಮೈದಾನದಲ್ಲಿ ಪ್ರತಿಭಟನೆಗೆ ಅನುಮತಿ ನೀಡಲಾಗಿದೆ. ನೀವು ಅಲ್ಲಿಗೆ ತೆರಳಬೇಕೆಂದು ಸೂಚನೆ ನೀಡಿದರು. ಇದಕ್ಕೆ ಪ್ರತಿಭಟನಾಕಾರರು ಒಪ್ಪದಿದ್ದರೂ ಬಳಿಕ ಅಲ್ಲಿಂದ ಬ್ಯಾನರ್, ನಾಮಫಲಕಗಳನ್ನು ಹಿಡಿದುಕೊಂಡು ಮೆರವಣಿಗೆ ಮೂಲಕ ತೆರಳಿದರು. ಆದರೆ ಪ್ರತಿಭಟನಾಕಾರರು ಗಾಂಧಿಮೈದಾನಕ್ಕೆ ತೆರಳದೇ ಸಂತಜಾರ್ಜ್ ವಿದ್ಯಾಸಂಸ್ಥೆ ಪಕ್ಕ, ರಾಷ್ಟ್ರೀಯ ಹೆದ್ದಾರಿಗೆ ಮಾದೇರಿ ರಸ್ತೆ ಸಂಪರ್ಕ ಕಲ್ಪಿಸುವಲ್ಲಿ ನಿಂತು ಪ್ರತಿಭಟನೆ ಆರಂಭಿಸಿದರು. ಈ ವೇಳೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ನೆಲ್ಯಾಡಿ ಸಂತ ಅಲ್ಫೋನ್ಸಾ ಚರ್ಚ್ನ ಧರ್ಮಗುರು ಶಾಜಿ ಮ್ಯಾಥ್ಯು, ಜಿ.ಪಂ.ಮಾಜಿ ಸದಸ್ಯರಾದ ಪಿ.ಪಿ.ವರ್ಗೀಸ್, ಸರ್ವೋತ್ತಮ ಗೌಡ, ನ್ಯಾಯವಾದಿ ಇಸ್ಮಾಯಿಲ್ ನೆಲ್ಯಾಡಿ, ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ರವಿಚಂದ್ರ ಹೊಸವಕ್ಲು, ನೆಲ್ಯಾಡಿ ರಿಕ್ಷಾ ಚಾಲಕ-ಮಾಲಕರ ಸಂಘದ ಮಾಜಿ ಅಧ್ಯಕ್ಷ ರವಿಪ್ರಸಾದ್ ಗುತ್ತಿನಮನೆ, ಕೆಎಂಜೆ ನೆಲ್ಯಾಡಿ ಸರ್ಕಲ್ ಅಧ್ಯಕ್ಷ ಕೆ.ಇ.ಅಬೂಬಕ್ಕರ್ ಹೊಸಮಜಲು, ನೆಲ್ಯಾಡಿ-ಕೌಕ್ರಾಡಿ ವರ್ತಕ ಸಂಘದ ಅಧ್ಯಕ್ಷ ಸತೀಶ್ ಕೆ.ಎಸ್.ದುರ್ಗಾಶ್ರೀ, ಕಿರಣ್ ಮಹಿಳಾ ತಾಲೂಕು ಒಕ್ಕೂಟದ ಅಧ್ಯಕ್ಷೆ ಉಷಾ ಜೋಯಿ, ಮಾಜಿ ಸೈನಿಕರ ಸಂಘದ ಕಡಬ ತಾಲೂಕು ಅಧ್ಯಕ್ಷ ಸೆಬಾಸ್ಟಿಯನ್ ಉದನೆ, ಉದ್ಯಮಿ ಶಾಜಿ ವರ್ಗೀಸ್, ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಭಿಲಾಷ್, ಕೌಕ್ರಾಡಿ ಗ್ರಾ.ಪಂ.ಮಾಜಿ ಅಧ್ಯಕ್ಷ ಎಂ.ಕೆ.ಇಬ್ರಾಹಿಂ, ಮಾಹಿನಿ ಮಹಿಳಾ ಒಕ್ಕೂಟದ ರಾಜ್ಯಾಧ್ಯಕ್ಷೆ ಮಂಜುಳ, ಕೆಆರ್ಎಸ್ ಪಕ್ಷದ ದ.ಕ.ಜಿಲ್ಲಾಧ್ಯಕ್ಷ ಸುದರ್ಶನ್ ಮತ್ತಿತರರು ಮಾತನಾಡಿ ನೆಲ್ಯಾಡಿ ಸಂತಜಾರ್ಜ್ ಹಾಗೂ ಜ್ಞಾನೋದಯ ಬೆಥನಿ ವಿದ್ಯಾಸಂಸ್ಥೆ ನಡುವೆ ಯು-ಟರ್ನ್ ಬೇಡಿಕೆಯ ಅಗತ್ಯತೆ ಬಗ್ಗೆ ತಿಳಿಸಿದರು. ಇಸ್ಮಾಯಿಲ್ ಆಶಿಕ್ ಹೊಸಮಜಲು ನಿರೂಪಿಸಿದರು.



ಹೆದ್ದಾರಿ ತಡೆಗೆ ಮುಂದಾದ ಪ್ರತಿಭಟನಾಕಾರರು:
ಪ್ರತಿಭಟನೆ ಆರಂಭವಾಗಿ ಸುಮಾರು ಒಂದೂವರೇ ತಾಸು ಕಳೆದರೂ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರು ಹಾಗೂ ಇತರೇ ಅಧಿಕಾರಿಗಳು ಸ್ಥಳಕ್ಕೆ ಆಗಮಿಸದೇ ಇರುವುದಕ್ಕೆ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಒಂದು ಹಂತದಲ್ಲಿ ಪ್ರತಿಭಟನಾಕಾರರ ಒಂದು ಗುಂಪು ರಾಷ್ಟ್ರೀಯ ಹೆದ್ದಾರಿಗೆ ನುಗ್ಗಿ ಹೆದ್ದಾರಿ ತಡೆ ನಡೆಸಲು ಮುಂದಾದರು. ಆದರೆ ಸಾಕಷ್ಟು ಸಂಖ್ಯೆಯಲ್ಲಿದ್ದ ಪೊಲೀಸರು ಪ್ರತಿಭಟನಾಕಾರರು ಹೆದ್ದಾರಿಗೆ ಬರದಂತೆ ತಡೆದರು. ಅಲ್ಲದೇ ಕಾನೂನು ಕ್ರಮದ ಎಚ್ಚರಿಕೆಯನ್ನೂ ನೀಡಿದರು. ಈ ವೇಳೆ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ವಾಗ್ವಾದವೂ ನಡೆಯಿತು. ಗಾಂಧಿ ಮೈದಾನದಲ್ಲಿ ಪ್ರತಿಭಟನೆ ನಡೆಸಲು ಅನುಮತಿ ನೀಡಲಾಗಿದ್ದು ಅಲ್ಲಿಯೇ ಪ್ರತಿಭಟನೆ ನಡೆಸುವಂತೆ ಪೊಲೀಸರು ಹೋರಾಟ ಸಮಿತಿ ಪದಾಧಿಕಾರಿಗಳಿಗೆ ಸೂಚನೆ ನೀಡಿದರು. ಗಾಂಧಿ ಮೈದಾನಕ್ಕೆ ತೆರಳಿದಲ್ಲಿ ತಮ್ಮ ಬೇಡಿಕೆಯಂತೆ ಯೋಜನಾ ನಿರ್ದೇಶಕರು ಅಲ್ಲಿಗೆ ಬಂದು ಮನವಿ ಸ್ವೀಕರಿಸಲಿದ್ದಾರೆ ಎಂದು ತಿಳಿಸಿದರು. ಕೊನೆಗೂ ಹೋರಾಟ ಸಮಿತಿಯವರ ಮನವಿ ಮೇರೆಗೆ ಪ್ರತಿಭಟನಾಕಾರರು ಗಾಂಧಿ ಮೈದಾನಕ್ಕೆ ತೆರಳಿದರು.

ಯು-ಟರ್ನ್ ಸಾಧ್ಯವಿಲ್ಲ; ಪಿ.ಡಿ.
ಮಧ್ಯಾಹ್ನ 1 ಗಂಟೆ ವೇಳೆಗೆ ಪ್ರತಿಭಟನಾಕಾರರು ಸೇರಿದ್ದ ಗಾಂಧಿ ಮೈದಾನಕ್ಕೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮಂಗಳೂರು ವಿಭಾಗದ ಯೋಜನಾ ನಿರ್ದೇಶಕ (ಪಿ.ಡಿ.) ಅಬ್ದುಲ್ಲಾ ಜಾವೇದ್ ಅಜ್ಮಿ ಆಗಮಿಸಿದರು. ಈ ವೇಳೆ ಮಾತನಾಡಿದ ಹೋರಾಟ ಸಮಿತಿಯ ಅಧ್ಯಕ್ಷರೂ ಆದ ನೆಲ್ಯಾಡಿ ಜ್ಞಾನೋದಯ ಬೆಥನಿ ವಿದ್ಯಾಸಂಸ್ಥೆ ಪ್ರಾಂಶುಪಾಲ ಡಾ.ವರ್ಗೀಸ್ ಕೈಪನಡ್ಕ ಅವರು, ವಾಹನ ಸಂಚಾರದ ಪ್ರಮಾಣ, ಶಿಕ್ಷಣ ಸಂಸ್ಥೆಗಳ ಸಂಖ್ಯೆ, ಸಾರ್ವಜನಿಕರ ಓಡಾಟ ಹಾಗೂ ಸ್ಥಳೀಯ ಸಂಪರ್ಕ ವ್ಯವಸ್ಥೆಯನ್ನು ಪರಿಗಣಿಸಿ ತಾಂತ್ರಿಕವಾಗಿ ಸಾಧ್ಯವಿರುವ ರೀತಿಯಲ್ಲಿ ಯು-ಟರ್ನ್ ವ್ಯವಸ್ಥೆ ಕಲ್ಪಿಸಬೇಕು. ಸಾರ್ವಜನಿಕರ ಬೇಡಿಕೆಯನ್ನು ಕೇವಲ ತಾಂತ್ರಿಕ ಕಾರಣ ಮುಂದಿಟ್ಟು ತಿರಸ್ಕರಿಸದೆ ಸುರಕ್ಷಿತ ಪರ್ಯಾಯ ವ್ಯವಸ್ಥೆಯೊಂದಿಗೆ ಮಾಡಬೇಕೆಂದು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಯೋಜನಾ ನಿರ್ದೇಶಕ ಅಬ್ದುಲ್ಲಾ ಜಾವೇದ್ ಅಜ್ಮಿ ಅವರು, ಈ ಪ್ರದೇಶದಲ್ಲಿ ಯು-ಟರ್ನ್ ಕಲ್ಪಿಸುವುದು ಸುರಕ್ಷತೆಯ ದೃಷ್ಟಿಯಿಂದ ಸಾಧ್ಯವಿಲ್ಲ. ಇಲ್ಲಿ ಯು-ಟರ್ನ್ ನೀಡಿದರೆ ಅಪಘಾತ ವಲಯ ನಿರ್ಮಾಣವಾಗುವ ಸಾಧ್ಯತೆ ಇದೆ. ಆದ್ದರಿಂದ ವಾಹನಗಳ ಸುಗಮ ಸಂಚಾರಕ್ಕಾಗಿ ಸರ್ವಿಸ್ ರಸ್ತೆ ಹಾಗೂ ಸಾರ್ವಜನಿಕರು ರಸ್ತೆ ದಾಟಲು ಸ್ಕೈವಾಕ್ ವ್ಯವಸ್ಥೆ ಕಲ್ಪಿಸುವುದಾಗಿ ಹೇಳಿದರು. ಆದರೆ ಇದಕ್ಕೆ ತೃಪ್ತರಾಗದ ಪ್ರತಿಭಟನಾಕಾರರು ಯು-ಟರ್ನ್ ಕಲ್ಪಿಸುವ ಕುರಿತು ಸ್ಪಷ್ಟ ಭರವಸೆ ನೀಡಬೇಕೆಂದು ಪಟ್ಟು ಹಿಡಿದರು. ಹೋರಾಟ ಸಮಿತಿಯ ರಫೀಕ್ ಬೈಲು ಅವರು ಮಾತನಾಡಿ, ರಾಷ್ಟ್ರೀಯ ಹೆದ್ದಾರಿಯಲ್ಲಿ ಅಗತ್ಯವಿರುವಲ್ಲಿ ಯು-ಟರ್ನ್ ನೀಡಲಾಗಿದೆ. ಆದರೆ ನೆಲ್ಯಾಡಿಯಲ್ಲಿ ಮಾತ್ರ ಯಾಕೆ ಆಗುತ್ತಿಲ್ಲ. ಇಲ್ಲಿನ ಜನರ ಬೇಡಿಕೆಯನ್ನೂ ಪರಿಗಣಿಸಬೇಕೆಂದು ಒತ್ತಾಯಿಸಿದರು. ಇದಕ್ಕೆ ಉಳಿದ ಪ್ರತಿಭಟನಾಕಾರರೂ ಘೋಷಣೆ ಕೂಗುವ ಮೂಲಕ ಬೆಂಬಲ ಸೂಚಿಸಿದರು. ಕೆಲವು ಕಡೆಗಳಲ್ಲಿ ನಿಯಮ ಮೀರಿ ಯು-ಟರ್ನ್ ಕೊಡಲಾಗಿದೆ. ನೆಲ್ಯಾಡಿಯಲ್ಲೂ ಈಗ ಯು-ಟರ್ನ್ ಕೊಡಿ, ಮುಂದೆ ಅಪಘಾತ ಸಂಭವಿಸಿದಲ್ಲಿ ಬಂದ್ ಮಾಡುವಂತೆಯೂ ಪ್ರತಿಭಟನಾಕಾರರು ಒತ್ತಾಯಿಸಿದರು. ಇದು ಸಾಧ್ಯವಿಲ್ಲ ಎಂದು ಯೋಜನಾ ನಿರ್ದೇಶಕರು ಹೇಳಿದರು.
ಕೊನೆಗೂ ಪರಿಶೀಲನೆ ಭರವಸೆ;
ಹೋರಾಟಗಾರರು ಪಟ್ಟು ಸಡಿಲಿಸದೇ ಇದ್ದ ಹಿನ್ನೆಲೆಯಲ್ಲಿ ಬೇಡಿಕೆಗೆ ಮಣಿದ ಯೋಜನಾ ನಿರ್ದೇಶಕ ಅಬ್ದುಲ್ಲಾ ಜಾವೇದ್ ಅಜ್ಮಿ ಅವರು, ಹೆದ್ದಾರಿ ಸುರಕ್ಷತಾ ಎಂಜಿನಿಯರ್ಗಳ ತಂಡದಿಂದ ಸ್ಥಳ ಪರಿಶೀಲನೆ ನಡೆಸಿ, ಅವರು ನೀಡುವ ತಾಂತ್ರಿಕ ನಿರ್ದೇಶನದ ಆಧಾರದ ಮೇಲೆ ಒಂದು ತಿಂಗಳೊಳಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದಾಗಿ ಭರವಸೆ ನೀಡಿದರು. ಈ ಭರವಸೆಗೆ ಒಪ್ಪಿದ ಪ್ರತಿಭಟನಾಕಾರರು ಪ್ರತಿಭಟನೆ ವಾಪಸ್ ತೆಗೆದುಕೊಂಡರು. ಆದರೆ ತಿಂಗಳ ಗಡುವಿನ ನಂತರ ಯು ಟರ್ನ್ ಕಲ್ಪಿಸದಿದ್ದಲ್ಲಿ ಮತ್ತೆ ಹೋರಾಟ ನಡೆಸುವುದಾಗಿಯೂ ಪ್ರತಿಭಟನಾಕಾರರು ಹೆದ್ದಾರಿ ಪ್ರಾಧಿಕಾರಕ್ಕೆ ಎಚ್ಚರಿಕೆ ನೀಡಿದರು. ಕಡಬ ತಹಶೀಲ್ದಾರ್ ಗಣೇಶ್ ಸವಣೂರ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹೋರಾಟ ಸಮಿತಿ ಸಂಚಾಲಕ ಮೊಹಮ್ಮದ್ ಇಕ್ಬಾಲ್, ಉಪಾಧ್ಯಕ್ಷ ರವಿಚಂದ್ರ ಅತ್ರಿಜಾಲು, ಕಾರ್ಯದರ್ಶಿ ರಫೀಕ್, ಕೋಶಾಧಿಕಾರಿ ಸೈಜು, ಸದಸ್ಯರಾದ ಸಂತೋಷ್, ಸಂಪಾವತಿ, ಉಷಾಜೋಯಿ, ಜೆಸಿಂತಾ, ಮನೋಜ್ ಇಂಜಿನಿಯರ್, ಗಣೇಶ್ ಪೂಜಾರಿ ಪೊಸೊಳಿಗೆ, ಪೌಲ್ ಡಿ.ಸೋಜ, ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆ ಕಾರ್ಯದರ್ಶಿ ಅಬ್ರಹಾಂ ವರ್ಗೀಸ್, ಸಂಚಾಲಕ ನೋಮಿಸ್ ಕುರಿಯಾಕೋಸ್, ಪ್ರಾಂಶುಪಾಲ ಎಲಿಯಾಸ್ ಎಂ.ಕೆ., ಪ್ರೌಢಶಾಲಾ ಮುಖ್ಯಶಿಕ್ಷಕ ತೋಮಸ್ ಎಂ.ಐ., ಐಟಿಐ ಪ್ರಾಂಶುಪಾಲ ಸಜಿ ಕೆ.ತೋಮಸ್, ಜಿ.ಪಂ.ಮಾಜಿ ಸದಸ್ಯ ಬಾಲಕೃಷ್ಣ ಬಾಣಜಾಲು, ತಾ.ಪಂ.ಮಾಜಿ ಅಧ್ಯಕ್ಷೆ ಕೆ.ಟಿ.ವಲ್ಸಮ್ಮ, ಮಾಜಿ ಸದಸ್ಯೆ ಉಷಾ ಅಂಚನ್, ಕೌಕ್ರಾಡಿ ಗ್ರಾ.ಪಂ.ಮಾಜಿ ಅಧ್ಯಕ್ಷ ಉದಯ ಕುಮಾರ್, ಮಾಜಿ ಸದಸ್ಯ ಮಹಮ್ಮದ್ ಹನೀಫ್, ನೆಲ್ಯಾಡಿ ಗ್ರಾ.ಪಂ.ಮಾಜಿ ಅಧ್ಯಕ್ಷರಾದ ಗಂಗಾಧರ ಶೆಟ್ಟಿ ಹೊಸಮನೆ, ಸಲಾಂ ಬಿಲಾಲ್, ಮಾಜಿ ಉಪಾಧ್ಯಕ್ಷ ಅಬ್ದುಲ್ ಜಬ್ಬಾರ್, ಮಾಜಿ ಸದಸ್ಯ ರವಿಪ್ರಸಾದ್ ಶೆಟ್ಟಿ, ಗೋಳಿತ್ತೊಟ್ಟು ಗ್ರಾ.ಪಂ.ಮಾಜಿ ಅಧ್ಯಕ್ಷ ಪೂವಪ್ಪ ಕರ್ಕೇರ, ಶಿರಾಡಿ ಗ್ರಾ.ಪಂ.ಮಾಜಿ ಅಧ್ಯಕ್ಷ ಕಾರ್ತಿಕೇಯನ್, ಕೆಪಿಸಿಸಿ ಮಾಜಿ ಸದಸ್ಯ ಕೆ.ಪಿ.ತೋಮಸ್, ನೆಲ್ಯಾಡಿ ಅಲ್ಬದ್ರಿಯಾ ಆಂಗ್ಲಮಾಧ್ಯಮ ಶಾಲೆಯ ಅಧ್ಯಕ್ಷ ನಾಝಿಂ ಸಾಹೇಬ್, ನೆಲ್ಯಾಡಿ ವರ್ತಕರ ಸಂಘದ ಮಾಜಿ ಅಧ್ಯಕ್ಷ ರಫೀಕ್ ಸೀಗಲ್, ನೆಲ್ಯಾಡಿ ಜೆಸಿಐ ಅಧ್ಯಕ್ಷೆ ಪ್ರವೀಣಿ ಶೆಟ್ಟಿ, ಜೊತೆ ಕಾರ್ಯದರ್ಶಿ ಸುಪ್ರೀತಾ ರವಿಚಂದ್ರ, ಭೂ ನ್ಯಾಯಮಂಡಳಿ ಸದಸ್ಯ ಕೆ.ಪಿ.ಅಬ್ರಹಾಂ, ಪ್ರಮುಖರಾದ ಸುಂದರ ಗೌಡ ಅತ್ರಿಜಾಲು, ರೆ.ಫಾ.ಹನಿ ಜೇಕಬ್, ರೆ.ಫಾ.ಜಿಜನ್, ರೆ.ಫಾ.ಗ್ರೇಸಸ್, ಪ್ರಮೋದ್ ಮೈಕಲ್, ಎಂ.ಎಸ್.ಥಾಮಸ್, ಇಸ್ಮಾಯಿಲ್ ಕೋಲ್ಪೆ, ವಿ.ಜೆ.ಜೋಸೆಫ್, ಜಾನ್ ಪಿ.ಎಸ್., ಪ್ರಕಾಶ್ ಕೆ.ವೈ., ಕೆ.ಜೆ.ಜೋಸ್ ಮಾತಾ, ಜುನೈಜಾರ್ಜ್, ಸಿದ್ದೀಕ್ ಮಣ್ಣಗುಂಡಿ, ಸಿದ್ದೀಕ್ ಹೊಸಮಜಲು, ಖಲೀಲ್ ಇಬ್ರಾಹಿಂ ಹೊಸಮಜಲು, ಎಂ.ಅಬ್ದುಲ್ಲಾ ಮೊರಂಕಳ, ಸುದರ್ಶನ್, ಶಿವಣ್ಣ ಪಿ. ಹೆಗ್ಡೆ, ಪ್ರಶಾಂತ್ ಚಾಕೋ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಬಿಗಿ ಪೊಲೀಸ್ ಬಂದೋಬಸ್ತ್;
ಪ್ರತಿಭಟನೆಯ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಡಿವೈಎಸ್ಪಿ ಸಿ.ಕೆ. ರೋಹಿಣಿ ಅವರ ನೇತೃತ್ವದಲ್ಲಿ ಇನ್ಸ್ಪೆಕ್ಟರ್ಗಳಾದ ತಿಮ್ಮಪ್ಪ ನಾಯ್ಕ್, ಸುನಿಲ್ ಕುಮಾರ್, ಸಬ್ ಇನ್ಸ್ಪೆಕ್ಟರ್ಗಳಾದ ಸುತೇಶ್ ಕೆ.ಪಿ., ಜಂಬೂರಾಜ್ ಮಹಾಜನ್, ಸುಷ್ಮಾ ಭಂಡಾರಿ, ಕೌಶಿಕ್, ಸಿ.ಟಿ. ಸುರೇಶ್ ಸೇರಿದಂತೆ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಬಂದೋಬಸ್ತ್ನಲ್ಲಿ ಕರ್ತವ್ಯ ನಿರ್ವಹಿಸಿದರು. ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ೪ ತಂಡಗಳು, ೧ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ ತಂಡ, ಸ್ಟ್ರೈಕ್ ಪ್ರೊಟೆಕ್ಷನ್ ಫೋರ್ಸ್ ತಂಡ ಹಾಗೂ ಪುತ್ತೂರು ಮತ್ತು ಬೆಳ್ತಂಗಡಿ ಉಪವಿಭಾಗ ವ್ಯಾಪ್ತಿಯ ಪೊಲೀಸರು ಬಂದೋಬಸ್ತ್ನಲ್ಲಿ ಪಾಲ್ಗೊಂಡಿದ್ದರು.
ಅಂಗಡಿ-ಮುಂಗಟ್ಟು ಬಂದ್;
ಪ್ರತಿಭಟನೆಗೆ ಬೆಂಬಲ ಸೂಚಿಸಿ ನೆಲ್ಯಾಡಿಯ ಬಹುತೇಕ ವರ್ತಕರು ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿ ಬೆಂಬಲ ಸೂಚಿಸಿದ್ದರು. ನೆಲ್ಯಾಡಿ, ಕೌಕ್ರಾಡಿ ಗ್ರಾಮದ ಸುಮಾರು ೫೧ಕ್ಕೂ ಹೆಚ್ಚು ವಿವಿಧ ಸಂಘ ಸಂಸ್ಥೆಯವರು ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಬೆಳಗ್ಗೆ ೯.೩೦ರಿಂದ ಮಧ್ಯಾಹ್ನ ೨.೩೦ರ ತನಕ ಪ್ರತಿಭಟನೆ ನಡೆಯಿತು. ಮಧ್ಯಾಹ್ನ ಎಲ್ಲರಿಗೂ ಗಂಜಿ ಊಟ ನೀಡಲಾಯಿತು.










