ತುಳು ರಾಜ್ಯದ ಎರಡನೇ ಅಧಿಕೃತ ಭಾಷೆ ವಿಚಾರ – ಕಾನೂನು ಕಾರ್ಯದರ್ಶಿ ನ್ಯಾ.ಮೂ. ಗೋಪಾಲಕೃಷ್ಣ ಜೊತೆ ಶಾಸಕ ಅಶೋಕ್ ರೈ ಮಾತುಕತೆ

0

ಪುತ್ತೂರು: ಸೆ.18 ರಂದು ಮಂಗಳೂರಿನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತುಳು ಭಾಷೆಯ ವಿಚಾರವಾಗಿ ಕಾನೂನು ಇಲಾಖೆಯ ಕಾರ್ಯದರ್ಶಿ ನ್ಯಾ.ಮೂ. ಗೋಪಾಲಕೃಷ್ಣ ಅವರ ಜೊತೆ ಶಾಸಕ ಅಶೋಕ್ ರೈ ಮಾತುಕತೆ ನಡೆಸಿದ್ದಾರೆ.


ಬುಧವಾರ ಕಾನೂನು ಕಾರ್ಯದರ್ಶಿಯವರನ್ನು ಭೇಟಿಯಾದ ಶಾಸಕರು ತುಳು ಭಾಷೆಯನ್ನು ರಾಜ್ಯದ ಎರಡನೇ ಹೆಚ್ಚುವರಿ ಭಾಷೆಯನ್ನಾಗಿ ಘೋಷಣೆ ಮಾಡುವ ಬಗ್ಗೆ ಈಗಾಗಲೇ ಸರಕಾರ ಭರವಸೆಯನ್ನು ನೀಡಿತ್ತು ಮತ್ತು ಈ ಬಗ್ಗೆ ಅಧ್ಯಯನ ವರದಿ ಕೂಡಾ ಸರಕಾರ ಕೈ ಸೇರಿದೆ. ತುಳುನಾಡಿನಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಇದು ಅನುಮೋದನೆಯಾಗಬೇಕಾದಲ್ಲಿ ಇಲಾಖೆಯ ಸಹಕಾರವನ್ನು ಕೋರಿದ್ದಾರೆ. ಸಚಿವ ಸಂಪುಟ ಸಭೆಯಲ್ಲಿ ಈ ವಿಚಾರ ಚರ್ಚೆಯಾಗಲಿದೆ.


ತುಳುವನ್ನು ರಾಜ್ಯದ ಎರಡನೇ ಹೆಚ್ಚುವರಿ ಭಾಷೆಯನ್ನಾಗಿ ಘೋಷಣೆ ಮಾಡಬೇಕು ಎಂದು ಶಾಸಕ ಅಶೋಕ್ ರೈ ಅವರು ವಿಧಾನಸಭಾ ಅಧಿವೇಶನಗಳಲ್ಲಿ ಸರಕಾರವನ್ನು ಒತ್ತಾಯ ಮಾಡಿದ್ದರು. ಇದರ ಪರಿಣಾಮವಾಗಿ ಅನ್ಯ ರಾಜ್ಯಗಳಲ್ಲಿ ಅಲ್ಲಿನ ಸ್ಥಳೀಯ ಭಾಷೆಯನ್ನು ಯಾವ ಮಾನದಂಡದ ಆಧಾರದಲ್ಲಿ ಹೆಚ್ಚುವರಿ ಭಾಷೆಯನ್ನಾಗಿ ಘೋಷಣೆ ಮಾಡಿದ್ದಾರೆ ಎಂಬ ವಿಚಾರದ ಬಗ್ಗೆ ಅಧ್ಯಯನ ನಡೆಸಲು ಸಮಿತಿಯನ್ನು ರಚನೆ ಮಾಡಿತ್ತು. ಸಮಿತಿ ಅಧ್ಯಯನ ಮಾಡಿ ಅದರ ವರದಿಯನ್ನು ಸರಕಾರಕ್ಕೆ ಸಲ್ಲಿಸಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಸರಕಾರದ ಸಚಿವ ಸಂಪುಟ ಸಭೆಯು ಮಂಗಳೂರಿನಲ್ಲೇ ನಡೆಯಲಿರುವ ಕಾರಣ ಸರಕಾರದ ಮೇಲೆ ಒತ್ತಡ ತರುವ ಮೂಲಕ ಸಂಪುಟ ಸಭೆಯಲ್ಲೇ ಘೋಷಣೆ ಮಾಡಬೇಕೆಂದು ಶಾಸಕ ಅಶೋಕ್ ರೈ ಸರಕಾರಕ್ಕೆ ಮನವಿಯನ್ನು ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here