ಉಪ್ಪಿನಂಗಡಿ ಆರೋಗ್ಯಕೇಂದ್ರದಲ್ಲಿ ಮೂಲಭೂತ ಸೌಕರ್ಯ ಕೊರತೆ – ಎಸ್‌ಡಿಪಿಐಯಿಂದ ಪ್ರತಿಭಟನೆಯ ಎಚ್ಚರಿಕೆ

0

ಉಪ್ಪಿನಂಗಡಿ: ಸಾರ್ವಜನಿಕರಿಗೆ ಸಮರ್ಪಕ ಆರೋಗ್ಯ ಸೇವೆ ಒದಗಿಸುವಲ್ಲಿ ನಿರ್ಲಕ್ಷ್ಯದ ಆರೋಪದ ಹಿನ್ನೆಲೆಯಲ್ಲಿ ಎಸ್‌ಡಿಪಿಐ ಉಪ್ಪಿನಂಗಡಿ ಗ್ರಾಮ ಸಮಿತಿಯ ನಿಯೋಗವು ಉಪ್ಪಿನಂಗಡಿಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ವಾಸ್ತವ ಸ್ಥಿತಿಯನ್ನು ಪರಿಶೀಲಿಸಿದರು.


ಬಳಿಕ ಈ ಬಗ್ಗೆ ಮಾಧ್ಯಮ ಹೇಳಿಕೆ ನೀಡಿದ ಎಸ್‌ಡಿಪಿಐ ನಿಯೋಗವು, ಹಿಂದೆ ಆರೋಗ್ಯ ಸಚಿವರಾಗಿದ್ದ ದಿನೇಶ್ ಗುಂಡೂರಾವ್‌ರವರು ಆಸ್ಪತ್ರೆಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಮನವಿ ಸ್ವೀಕರಿಸಿ, ಒಂದು ತಿಂಗಳೊಳಗೆ ಸಮಸ್ಯೆಗಳನ್ನು ಪರಿಹರಿಸುವುದಾಗಿ ಆಶ್ವಾಸನೆ ನೀಡಿದ್ದರು. ಆದರೆ ಆ ಆಶ್ವಾಸನೆ ನೀಡಿ ವರ್ಷ ಕಳೆದರೂ ಪರಿಸ್ಥಿತಿಯಲ್ಲಿ ನಿರೀಕ್ಷಿತ ಬದಲಾವಣೆ ಕಂಡುಬಂದಿಲ್ಲ. ಇದೀಗ ಆರೋಗ್ಯ ಸಚಿವ ಯು.ಟಿ. ಖಾದರ್ ಅವರೂ ಭರವಸೆ ನೀಡಿದ್ದಾರೆ. ಆದರೆ ಈವರೆಗೆ ಯಾವುದೇ ಪರಿಣಾಮಕಾರಿ ಸ್ಪಂದನೆ ದೊರೆತಿಲ್ಲ ಎಂದು ಆರೋಪಿಸಿದೆ.
ಇಲ್ಲಿ ವೈದ್ಯರು ಹಾಗೂ ಅಗತ್ಯ ಸಂಖ್ಯೆಯ ನರ್ಸ್‌ಗಳು ಲಭ್ಯವಿರದಿರುವುದು ಕಂಡುಬಂದಿದ್ದು, ಇದು ಇಲ್ಲಿನ ಆರೋಗ್ಯ ವ್ಯವಸ್ಥೆಯ ಗಂಭೀರ ಸ್ಥಿತಿಯನ್ನು ತೋರಿಸುತ್ತದೆ. ಐದು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಕೇವಲ ಒಬ್ಬ ನರ್ಸ್ ಇರುವುದು. ಇಂತಹ ಪರಿಸ್ಥಿತಿಯಲ್ಲಿ ವಿಶೇಷವಾಗಿ ಗರ್ಭಿಣಿಯರು ಹಾಗೂ ಗ್ರಾಮೀಣ ಭಾಗದ ರೋಗಿಗಳು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಪ್ರತಿಯೊಂದು ಗ್ರಾಮದಲ್ಲೂ ಆರೋಗ್ಯ ಕ್ಷೇಮ ಕೇಂದ್ರಗಳಿದ್ದರೂ, ಅಲ್ಲಿ ಅಗತ್ಯ ನರ್ಸಿಂಗ್ ಸಿಬ್ಬಂದಿ ಇಲ್ಲದ ಕಾರಣ ಅವುಗಳ ಉದ್ದೇಶವೇ ಪ್ರಶ್ನಾರ್ಹವಾಗಿದೆ. ಪರಿಣಾಮವಾಗಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬರುವ ರೋಗಿಗಳು ಸಮರ್ಪಕ ಸೇವೆ ದೊರೆಯದೆ ಹಿಂದಿರುಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಎಸ್‌ಡಿಪಿಐ ನಿಯೋಗ ತಿಳಿಸಿದೆ.
ಪ್ರತಿಭಟನೆಯ ಎಚ್ಚರಿಕೆ: ಆಶ್ವಾಸನೆಗಳ ರಾಜಕೀಯ ಸಾಕಾಗಿದೆ. ಜನರಿಗೆ ಫಲಿತಾಂಶ ಬೇಕಾಗಿದೆ. ಉಪ್ಪಿನಂಗಡಿ ಸರಕಾರಿ ಆಸ್ಪತ್ರೆಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವವರೆಗೆ ಎಸ್‌ಡಿಪಿಐ ಹೋರಾಟ ಮುಂದುವರಿಸಲಿದೆ. ಇದು ಕೇವಲ ಮನವಿ ಸಲ್ಲಿಸುವ ಕಾರ್ಯಕ್ರಮವಲ್ಲ. ಮುಂದಿನ ಹಂತದಲ್ಲಿ ಜನರನ್ನು ಒಗ್ಗೂಡಿಸಿ ಹೋರಾಟ ಹಾಗೂ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಿದೆ ಎಂದು ಎಸ್‌ಡಿಪಿಐ ನಿಯೋಗ ಎಚ್ಚರಿಕೆ ನೀಡಿದೆ.


ಎಸ್‌ಡಿಪಿಐ ಉಪ್ಪಿನಂಗಡಿ ಗ್ರಾಮ ಸಮಿತಿ ಅಧ್ಯಕ್ಷ ಮುಸ್ತಫ ನಿರ್ಮಾ ಅವರ ನೇತೃತ್ವದ ನಿಯೋಗದಲ್ಲಿ ಉಪ್ಪಿನಂಗಡಿ ಗ್ರಾ.ಪಂ. ಮಾಜಿ ಸದಸ್ಯ ರಶೀದ್ ಮಠ, ಎಸ್‌ಡಿಪಿಐ ಉಪ್ಪಿನಂಗಡಿ- ಕಡಬ ಬ್ಲಾಕ್ ಸಮಿತಿ ಉಪಾಧ್ಯಕ್ಷ ಮುಸ್ತಾಫ ಲತೀಫಿ, ಬ್ಲಾಕ್ ಸಮಿತಿ ಸದಸ್ಯ ಝಕರಿಯಾ ಕೊಡಿಪ್ಪಾಡಿ, ಗ್ರಾಮ ಸಮಿತಿ ಸದಸ್ಯ ಮುಸ್ತಾಫ, ಸಿದ್ದೀಕ್ ಪರಾರಿ ಹಾಗೂ ರಝಾಕ್ ಅಡೆಕಲ್ಲ್, ಮಠ ಬ್ರಾಂಚ್ ಸಮಿತಿ ಸದಸ್ಯ ಬದ್ರುದ್ದೀನ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here