ಪುತ್ತೂರಿನಲ್ಲಿ ʼನಿಮಿಷ ನ್ಯೂಸ್ʼ ಚಾನೆಲ್ ಲೋಕಾರ್ಪಣೆ

0

ಸಮಾಜದಲ್ಲಿ ಮಾಧ್ಯಮದ ಕರ್ತವ್ಯ ದೊಡ್ಡದಿದೆ- ಪಿ.ಎಸ್. ಪ್ರಕಾಶ್


ಪುತ್ತೂರು: ಬಪ್ಪಳಿಗೆ ಟವರ‍್ಸ್‌ನಲ್ಲಿ ನಿಮಿಷ ನ್ಯೂಸ್ ಚಾನೆಲ್‌ನ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಹೊಸದಿಗಂತ ಪತ್ರಿಕೆಯ ಪ್ರಧಾನ ಸಂಪಾದಕರಾದ ಪಿ.ಎಸ್. ಪ್ರಕಾಶ್ ದೀಪ ಬೆಳಗಿಸಿ ಸಭಾ ಕಾರ್ಯಕ್ರಮ ಉದ್ಘಾಟಿಸಿ, ಬಳಿಕ ನಿಮಿಷ ನ್ಯೂಸ್ ಲೋಗೋ ಅನಾವರಣಗೊಳಿಸಿ ಮಾತನಾಡಿ ಪ್ರಜಾಪ್ರಭುತ್ವದ ಪ್ರಮುಖವಾದ ನಾಲ್ಕನೆಯ ಭಾಗ ಮಾಧ್ಯಮ ರಂಗ. ಇಂದು ಅನೇಕ ವೆಬ್ ಚಾನೆಲ್‌ನಲ್ಲಿ ಫ್ಲಾಶ್ ನ್ಯೂಸ್ ಬಂದು ಬಳಿಕ ಮಾಯವಾಗುತ್ತದೆ. ಬ್ರೇಕಿಂಗ್ ಎಂದು ಹೇಳಿ ಟಿಆರ್‌ಪಿ ರೇಟ್ ಹೆಚ್ಚಾಗುವಂತೆ ಮಾಡುತ್ತದೆ. ನೈತಿಕತೆ ತೋರಿಸದೆ ಪ್ರಸಾರ ಮಾಡುತ್ತಿದೆ. ನೀವು ಪ್ರಾರಂಭ ಮಾಡಿದ ನಿಮಿಷ ನ್ಯೂಸ್ ಸತ್ಯವಾದ ಸಮಾಜಕ್ಕೆ ಬೇಕಾದ, ಜನರಿಗೆ ಮುಟ್ಟಬೇಕಾದ ನೂಸ್ ಕೊಡಬೇಕಾದ ಉದ್ಧೇಶ ಈಡೇರಲಿ. ಪುತ್ತೂರು ಎಲ್ಲ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದೆ. ಇಲ್ಲಿ ಆರಂಭ ಮಾಡಿದ ನಿಮ್ಮ ಮಾಧ್ಯಮಕ್ಕೆ ಒಳ್ಳೆಯದಾಗಲಿ ಎಂದು ಹೇಳಿ ಶುಭಹಾರೈಸಿದರು.


ಮಾಧ್ಯಮವನ್ನು ದುರುಪಯೋಗ ಮಾಡಬಾರದು:
ನಿಮಿಷ ನ್ಯೂಸ್‌ನ ವೆಬ್‌ಸೈಟ್ ನ್ಯೂಸ್ ಉದ್ಘಾಟಿಸಿದ ಯು.ಆರ್.ಪ್ರಾಪರ್ಟಿಸ್ ಮಾಲಕ ಉಜ್ವಲ್ ಪ್ರಭು ಮಾತನಾಡಿ ಸಂಸ್ಥೆ ಆರಂಭಿಸುವಾಗ ಉದ್ದೇಶ ಸ್ಪಷ್ಟವಾಗಿರಬೇಕು. ಮಾಧ್ಯಮ ಕ್ಷೇತ್ರ ಕಷ್ಟದ ಕ್ಷೇತ್ರ. ಪುತ್ತೂರಿನಲ್ಲಿ ಎಷ್ಟೋ ಮಾಧ್ಯಮಗಳಿವೆ. ಅದರಲ್ಲಿ ಕೆಲವೊಂದು ಮಾಧ್ಯಮಗಳು ಬ್ಲಾಕ್‌ಮೇಲ್ ದಂಧೆಗೆ ಹೋಗುತ್ತಿರುವುದನ್ನು ಕಂಡಿದ್ದೇನೆ. ಯಾರೊಬ್ಬರ ಪರವಾಗಿಯೂ ಕೆಲಸ ಮಾಡಬಾರದು. ಮಾಧ್ಯಮವನ್ನು ದುರುಪಯೋಗ ಮಾಡಬಾರದು. ನಿಮ್ಮ ಉದ್ಧೇಶ, ಗುರಿ ಸ್ಪಷ್ಟವಾಗಿರಲಿ, ಯಶಸ್ಸು ಕಾಣಲಿ ಎಂದರು.‌


ಸವಾಲು ಎದುರಿಸಲು ಸಿದ್ಧವಾಗಿರಬೇಕು:
ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಅಧ್ಯಕ್ಷ ರಾಮದಾಸ್ ಶೆಟ್ಟಿ ವಿಟ್ಲ ಮಾತನಾಡಿ ಬೆಳೆಯುತ್ತಿರುವ ಪುತ್ತೂರಿಗೆ ಇನ್ನೊಂದು ಗರಿಮೆಯಾಗಿದೆ. ಸವಾಲುಗಳನ್ನು ಎದುರಿಸಲು ಮಾದ್ಯಮ ಕ್ಷೇತ್ರ ಸಿದ್ಧವಾಗಿರಬೇಕು. ನಮ್ಮ ತಪ್ಪುಗಳನ್ನು ಹುಡುಕಲು ಹಿತಶತ್ರುಗಳು ಕಾಯುತ್ತಿರುತ್ತಾರೆ. ನೇರ, ದಿಟ್ಟತನದಿಂದ ನಮ್ಮ ಕಾರ್ಯವೈಖರಿ ಮಾಡಬೇಕು ಎಂದು ಅವರು ಚಾನೆಲ್ ಸೆಟಲೈಟ್ ಚಾನೆಲ್ ಆಗಿ ಮೂಡಿಬರಲಿ ಎಂದು ಹೇಳಿ ಶುಭಹಾರೈಸಿದರು.


ನೇರ, ದಿಟ್ಟತನ ಅನುಷ್ಠಾನ ಮಾಡಬೇಕು:
ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ಮಾತನಾಡಿ ಸ್ಪಷ್ಟ, ನೇರ, ದಿಟ್ಟತನ ಅನುಷ್ಠಾನ ಮಾಡಬೇಕು. ಮಾಧ್ಯಮ ಕ್ಷೇತ್ರಕ್ಕೆ ಮೆರುಗು ನೀಡಿ ಬೆಳೆಯುತ್ತಿರುವ ಪುತ್ತೂರಿಗೆ ಶೋಭೆ ತರಲಿ. ನಿಮ್ಮ ಪ್ರಯತ್ನಕ್ಕೆ ದೇವರು ಅನುಗ್ರಹಿಸಲಿ. ಜಾಗೃತ ಸಮಾಜಕ್ಕೆ ಅವಶ್ಯಕತೆ ಇರುವ ನ್ಯೂಸ್ ಚಾನೆಲ್ ಒಳ್ಳೆಯ ರೀತಿಯಲ್ಲಿ ಮೂಡಿಬರಲಿ ಎಂದು ಹೇಳಿ ಶುಭಹಾರೈಸಿದರು.


ಎಲ್ಲರೂ ನೋಡುವಂತೆ ಚಾನೆಲ್ ಪ್ರಜ್ವಲಿಸಲಿ:
ಪುತ್ತೂರು ನಗರಸಭಾ ಮಾಜಿ ಅಧ್ಯಕ್ಷ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ ಮಾತನಾಡಿ ತುಂಬಾ ನ್ಯೂಸ್ ಚಾನೆಲ್ ನೋಡುತ್ತಿದ್ದೇವೆ. ತುಂಬಾ ಬಾವಿಗಳ ನೀರನ್ನು ಕುಡಿದು ಅನುಭವ ಉಳ್ಳವರು ಚಾನೆಲ್ ಆರಂಭ ಮಾಡಿದ್ದಾರೆ. ನಿಮಿಷ ನ್ಯೂಸ್ ಬೆಳಿಗ್ಗೆ ಎಲ್ಲರೂ ನೋಡುವಂತೆ ಚಾನೆಲ್ ಪ್ರಜ್ವಲಿಸುವಂತೆ ಪುತ್ತೂರು ಮಹಾಲಿಂಗೇಶ್ವರ ಅಶೀರ್ವಾದಿಸಲಿ ಎಂದರು.


ನಿಮಿಷ ನ್ಯೂಸ್ ರಾಜ್ಯ, ರಾಷ್ಟ್ರಮಟ್ಟಕ್ಕೆ ಪಸರಿಸಲಿ:
ಪುತ್ತೂರು ಶಾರದಾ ಭಜನಾ ಮಂದಿರದ ಅಧ್ಯಕ್ಷ ಸೀತಾರಾಮ ರೈ ಕೆದಂಬಾಡಿಗುತ್ತು ಮಾತನಾಡಿ ಪುತ್ತೂರಿನ ಪರಿಸರದಲ್ಲಿ ಶುಭಾರಂಭಗೊಂಡಿದೆ. ಮನ್ಮಥ ಶೆಟ್ಟಿ ಹಾಗೂ ನವೀನ್ ಕುಲಾಲ್‌ರವರಿಗೆ ಬೆನ್ನೆಲುಬಾಗಿ ಸಹಕಾರ ನೀಡಿದವರು ಉಜ್ವಲ್ ಪ್ರಭುರವರು. ನಿಮಗೆ ದೇವರ ಆಶೀರ್ವಾದ ಇರಲಿ. ನಿಮಿಷ ನ್ಯೂಸ್ ರಾಜ್ಯ, ರಾಷ್ಟ್ರಮಟ್ಟಕ್ಕೆ ಪಸರಿಸಲಿ ಎಂದರು.

ಸಮಯ ಸಾಧಕವಾಗದೆ ಸಮಯೋಚಿತ ವರದಿ ನೀಡಿ:
ವಿಶ್ವಹಿಂದೂ ಪರಿಷತ್ ಪುತ್ತೂರು ಜಿಲ್ಲಾಧ್ಯಕ್ಷ ಡಾ|ಕೃಷ್ಣಪ್ರಸನ್ನ ಮಾತನಾಡಿ ಮಾಧ್ಯಮ ಸಮಯ ಸಾಧಕವಾಗದೆ ಸಮಯೋಚಿತ ವರದಿ ನೀಡುವ ಮಾಧ್ಯಮವಾಗಲಿ. ಉತ್ತಮ ಪ್ರಯತ್ನವನ್ನು ನಾವೆಲ್ಲರೂ ಬೆಂಬಲಿಸೋಣ ಎಂದು ಹೇಳಿ ಶುಭಹಾರೈಸಿದರು.

ವೇಗಕ್ಕಿಂತ ಸತ್ಯವಾದ ನ್ಯೂಸ್ ಸಿಗಬೇಕು:
ಬಪ್ಪಳಿಗೆ ಟವರ‍್ಸ್ ಮಾಲಕ ಅಮರನಾಥ ಗೌಡ ಬಪ್ಪಳಿಗೆ ಮಾತನಾಡಿ ಉಜ್ವಲ್ ಪ್ರಭು ಮತ್ತು ನಾನು ಝೀರೋದಿಂದ ಬಂದವರು. ಉಜ್ವಲ್ ಪ್ರಭುರವರು ವ್ಯಕ್ತಿತ್ವ ಉಳಿಸಿಕೊಂಡಿದ್ದಾರೆ. ಹಿಂದೆ ಒಂದು ವಿಷಯ ತಿಳಿಯಲು ಕೆಲವು ದಿನಗಳು ಬೇಕಿತ್ತು. ಆದರೆ ಇಂದು ಕ್ಷಣ ಮಾತ್ರದಲ್ಲಿ ಸಿಗುತ್ತದೆ. ವೇಗಕ್ಕಿಂತ ಸತ್ಯವಾದ ನ್ಯೂಸ್ ಸಿಗಬೇಕು. ಸರಳವಾಗಿ ಜನರನ್ನು ತಲುಪಬೇಕು. ನಿಮ್ಮ ಚಾನೆಲ್ ಜನರ ವಿಶ್ವಾಸ ಗಳಿಸಲಿ ಎಂದರು.


ನಂಬಿಕೆಯ ಚಾನೆಲ್ ಆಗಿ ಮೂಡಿಬರಲಿ:
ರಿಬ್ಬನ್ ಕಟ್ ಮಾಡಿ ಬಳಿಕ ದೀಪ ಬೆಳಗಿಸಿ ಕಛೇರಿ ಹಾಗೂ ಸ್ಟುಡಿಯೋ ಉದ್ಘಾಟಿಸಿದ ಆದರ್ಶ ಆಸ್ಪತ್ರೆಯ ಹಿರಿಯ ವೈದ್ಯ ಡಾ.ಎಂ.ಕೆ ಪ್ರಸಾದ್ ಅಧ್ಯಕ್ಷತೆ ವಹಿಸಿ ಮಾತನಾಡಿ ನಮ್ಮ ಕಾಲದಲ್ಲಿ ಏನಾದರೂ ತಿಳಿಯಬೇಕಾದರೆ ಪತ್ರಿಕೆ ಓದಬೇಕಾಗಿತ್ತು. ಚಾನೆಲ್‌ನಲ್ಲಿ ನಮಗೆ ಬೇಕಾದ ಹಾಗೆ ಮಾಧ್ಯಮ ಇದೆ ಎಂದು ಗೊತ್ತಾದದ್ದು ಕಳೆದ ವಿಧಾನಸಭೆ ಚುನಾವಣೆಯಲ್ಲಿ. ನಮ್ಮ ಕೆಲವು ಚಾನೆಲ್‌ಗಳು ಸಂಪೂರ್ಣ ಮಾನನಷ್ಟ ಮಾಡಿ ಹೊಂಡಕ್ಕೆ ಹಾಕುವ ಕೆಲಸ ಮಾಡುತ್ತಿದೆ. ಸುಳ್ಳು ಸುದ್ದಿ ನೀಡಿ ಕೆಲವು ಚಾನೆಲ್‌ಗಳು ಮಂಡೆ ಹಾಳು ಮಾಡುತ್ತಿದೆ. ಇದಕ್ಕೆ ತಕ್ಕ ಉತ್ತರ ನಿಮಿಷ ನ್ಯೂಸ್ ಆರಂಭವಾಗಿದೆ. ಜನರು ಇದನ್ನು ನೋಡುವ ಹಾಗೆ ಮಾಡಬೇಕು. ಒಳ್ಳೆಯ ನ್ಯೂಸ್ ಚಾನೆಲ್ ಮಾಡಿ. ನಂಬಿಕೆಯ ಚಾನೆಲ್ ಆಗಬೇಕು. ಪುತ್ತೂರು ಕ್ರಾಂತಿಕಾರಿ ಜಾಗ. ಹಿಂದೆ ಕ್ರಾಂತಿ ನಡೆಸಿ ದುರಾಡಳಿತ ಎದುರಿಸಿದವರು. ನಮ್ಮ ಚರಿತ್ರೆಯನ್ನು ಇಂದಿನ ಪೀಳಿಗೆಗೆ ತಿಳಿಸಬೇಕು ನಿಮಗೆ ಉಜ್ವಲ್ ಪ್ರಭು ಬೆನ್ನೆಲುಬು ಆಗಿರುತ್ತಾರೆ ಎಂದು ಹೇಳಿ ಶುಭಹಾರೈಸಿದರು.

ನಿಮಿಷ ನ್ಯೂಸ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಲಾಲ್ ಪ್ರಾಸ್ತಾವಿಕವಾಗಿ ಮಾತನಾಡಿ 5-6 ವರ್ಷಗಳ ಕನಸು ನನಸಾದ ಸಂದರ್ಭದಲ್ಲಿ ನಾವಿದ್ದೇವೆ. ಸಮಯ ಕೂಡಿ ಬಂದು ಕನಸಿಗೆ ರೂಪ ಬಂದು ಜವಾಬ್ದಾರಿ ಬಂದಿದೆ. ದೂರದೃಷ್ಟಿಯ ಕನಸಿಗೆ ರೆಕ್ಕೆಪುಕ್ಕ ಸಿಕ್ಕಿದೆ. ನಿಮಿಷ ನ್ಯೂಸ್ ಜನರ ನೋವು ನಲಿವಿಗೆ ಕೆಲಸ ಮಾಡುತ್ತದೆ. ಸಮಸ್ಯೆ ಮಾತ್ರ ತೋರಿಸದೆ ಅದಕ್ಕೆ ಪರಿಹಾರ ದೊರಕಿಸಿಕೊಡುವ ಧ್ಯೇಯ ಇಟ್ಟುಕೊಂಡಿದೆ ಎಂದ ಅವರು ನಮ್ಮ ಕನಸಿಗೆ ಶಕ್ತಿ ಕೊಟ್ಟವರು, ಉದ್ಯಮ ಕ್ಷೇತ್ರದಲ್ಲಿ ಯಶಸ್ಸು ಪಡೆದ ಉಜ್ವಲ್ ಪ್ರಭುರವರು. ಅಲ್ಲದೆ ನಿಮ್ಮ ಸಹಕಾರದಿಂದ ಕೂಡ ಸಾಧ್ಯವಾಗಿದೆ ಎಂದು ಹೇಳಿದರು. ನಿಮಿಷ ನ್ಯೂಸ್‌ನ ವ್ಯವಸ್ಥಾಪಕ ನಿರ್ದೇಶಕ ಮನ್ಮಥ ಶೆಟ್ಟಿ ಸ್ವಾಗತಿಸಿ ವಂದಿಸಿದರು. ಕುಮಾರಿ ರಿಷಿಕಾ ಪ್ರಾರ್ಥಿಸಿದರು. ಶಿಶಿರ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here