







ಮತಗಟ್ಟೆಗಳ ಸಂಖ್ಯೆ 221ರಿಂದ 245ಕ್ಕೆ ಏರಿಕೆ
ದೂರದ ಮತಗಟ್ಟೆಗಳಿಗೆ ತೆರಳುವ ಅನಿವಾರ್ಯತೆ ತಪ್ಪಲಿದೆ


ಪುತ್ತೂರು:ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯ ಒಂದು ಹಂತ ಮುಕ್ತಾಯಗೊಂಡಿದ್ದು, ಕರಡು ಮತದಾರರ ಪಟ್ಟಿಯೂ ಬಿಡುಗಡೆಯಾಗಿದೆ.ಮತದಾರರ ಸಂಖ್ಯೆಯ ಆಧಾರದ ಮೇಲೆ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ 24 ಹೊಸ ಮತಗಟ್ಟೆಗಳನ್ನು ಗುರುತಿಸಲಾಗಿದೆ.ಇದರೊಂದಿಗೆ ಕ್ಷೇತ್ರದಲ್ಲಿನ ಒಟ್ಟು ಮತಗಟ್ಟೆಗಳ ಸಂಖ್ಯೆ 221ರಿಂದ 245ಕ್ಕೆ ಏರಿಕೆಯಾಗಿದೆ.



ಚುನಾವಣಾ ಆಯೋಗದ ನಿರ್ದೇಶನದಂತೆ, 1,200ಕ್ಕಿಂತ ಹೆಚ್ಚು ಮತದಾರರಿರುವ ಮತಗಟ್ಟೆಗಳನ್ನು ವಿಭಜಿಸಿ ಹೆಚ್ಚುವರಿ ಮತಗಟ್ಟೆಗಳನ್ನು ರಚಿಸಲಾಗಿದೆ.ಅದರಂತೆ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ 24 ಹೊಸ ಮತಗಟ್ಟೆಗಳು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 143 ಹೊಸ ಮತಗಟ್ಟೆಗಳನ್ನು ರಚಿಸಲಾಗಿದೆ.ಕಳೆದ ಚುನಾವಣೆಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ 221 ಮತಗಟ್ಟೆಗಳಿದ್ದವು.ಎಸ್ಐಆರ್ ಬಳಿಕ ಇದೀಗ 24 ಹೆಚ್ಚುವರಿ ಮತಗಟ್ಟೆಗಳು ಸೇರ್ಪಡೆಯಾಗಿದ್ದು, ಮುಂದಿನ ಚುನಾವಣೆಯಲ್ಲಿ ಕ್ಷೇತ್ರದ 245 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ.
ದೂರದ ಮತಗಟ್ಟೆಗೆ ತೆರಳುವ ಅನಿವಾರ್ಯತೆ ತಪ್ಪಲಿದೆ:
ಹೊಸ ಮತಗಟ್ಟೆಗಳ ರಚನೆಯಿಂದಾಗಿ ಗ್ರಾಮೀಣ ಪ್ರದೇಶಗಳ ಕೆಲವು ಪ್ರದೇಶಗಳಲ್ಲಿ ಮತದಾರರಿಗೆ ಈ ಹಿಂದೆ ಇದ್ದ ದೂರದ ಮತಗಟ್ಟೆಗಳಿಗೆ ತೆರಳಿ ಮತ ಚಲಾಯಿಸಬೇಕಾದ ಅನಿವಾರ್ಯತೆ ತಪ್ಪಲಿದೆ.ಉದಾಹರಣೆಗೆ ಒಳಮೊಗ್ರು ಭಾಗದಲ್ಲಿ ಹೊಸ ಮತಗಟ್ಟೆಗಳ ರಚನೆಯಿಂದ ಮತದಾರರಿಗೆ ಹೆಚ್ಚಿನ ಅನುಕೂಲವಾಗಲಿದೆ.ಒಳಮೊಗ್ರು ಗ್ರಾಮದ ಅಜ್ಜಿಕಲ್ಲು ಏಕತ್ತಡ್ಕ ಶಾಲೆಯಲ್ಲಿ ಹೊಸ ಮತಗಟ್ಟೆ ರಚಿಸಲಾಗಿದೆ.ಅಜ್ಜಿಕಲ್ಲು ಭಾಗದ ಮತದಾರರು ಈ ಹಿಂದೆ ಸುತ್ತು ಬಳಸಿ ಕೈಕಾರ ಹಿ.ಪ್ರಾ. ಶಾಲೆಯ ಮತಗಟ್ಟೆಗೆ ತೆರಳಬೇಕಾಗಿತ್ತು.ಈ ಪರಿಸ್ಥಿತಿ ಇನ್ನಿಲ್ಲವಾಗಲಿದೆ. ಅದೇ ರೀತಿ ಒಳಮೊಗ್ರು ಅಜಲಡ್ಕ ಅಂಗನವಾಡಿ ಕೇಂದ್ರದಲ್ಲೂ ಹೊಸ ಮತಗಟ್ಟೆ ರಚನೆಯಾಗಿದೆ.ಇದರಿಂದ ಆ ಭಾಗದ ಮತದಾರರು ಕೈಕಾರ ಶಾಲೆಯ ಮತಗಟ್ಟೆಗೆ ತೆರಳಿ ಮತ ಚಲಾಯಿಸಬೇಕಾಗಿದ್ದ ಅನಿವಾರ್ಯತೆ ನಿವಾರಣೆಯಾಗಲಿದೆ.ಹೊಸ ಮತಗಟ್ಟೆಗಳ ಸೇರ್ಪಡೆಯಿಂದ ಮತದಾನ ಪ್ರಕ್ರಿಯೆ ಮತದಾರರಿಗೆ ಇನ್ನಷ್ಟು ಹತ್ತಿರವಾಗಲಿದ್ದು,ವಿಶೇಷವಾಗಿ ದೂರದ ಹಾಗೂ ಗ್ರಾಮೀಣ ಪ್ರದೇಶಗಳ ಮತದಾರರಿಗೆ ಅನುಕೂಲವಾಗಲಿದೆ.ಇದೇ ರೀತಿ ಇನ್ನೂ ಹಲವು ಮತಗಟ್ಟೆಗಳಲ್ಲಿ ಈ ರೀತಿಯ ಬದಲಾವಣೆಗಳು ಇವೆ.
ಎಲ್ಲೆಲ್ಲಿ ಹೊಸ ಮತಗಟ್ಟೆಗಳು…?:
ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಹೊಸದಾಗಿ ಗುರುತಿಸಲಾಗಿರುವ 24 ಮತಗಟ್ಟೆಗಳ ವಿವರ ಹೀಗಿದೆ: ವಿಟ್ಲ ಕಸಬಾ:ಬೊಳಂತಿಮುಗೇರು ಹಿ.ಪ್ರಾ. ಶಾಲೆಯ ದಕ್ಷಿಣ ಭಾಗದಿಂದ ವಿಭಜಿಸಿ ಅದೇ ಶಾಲೆಯ ಉತ್ತರ ಭಾಗದಲ್ಲಿ ಹೊಸ ಮತಗಟ್ಟೆ.ಕೆದಿಲ:ಅನುದಾನಿತ ಶಾಲೆಯ ಮತಗಟ್ಟೆಯಿಂದ ವಿಭಜಿಸಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹೊಸ ಮತಗಟ್ಟೆ.ಪೆರ್ನೆ:ಬಿಳಿಯೂರು ಹಿ.ಪ್ರಾ.ಶಾಲೆಯ ಮತಗಟ್ಟೆಯಿಂದ ಪ್ರತ್ಯೇಕಿಸಿ ಅದೇ ಶಾಲೆಯ ಕೊಠಡಿ ಸಂಖ್ಯೆ 2ರಲ್ಲಿ ಹೊಸ ಮತಗಟ್ಟೆ.,ಉಪ್ಪಿನಂಗಡಿ:ಹಿ.ಪ್ರಾ. ಶಾಲೆಯ ಮತಗಟ್ಟೆಯಿಂದ ವಿಭಜಿಸಿ ಬಜತ್ತೂರು ಹಿ.ಪ್ರಾ.ಶಾಲೆಯ ಉತ್ತರ ಭಾಗದಲ್ಲಿ ಹೊಸ ಮತಗಟ್ಟೆ.ಬಜತ್ತೂರು:ಪೆರಿಯಡ್ಕ ಹೊಸಗದ್ದೆ ಹಿ.ಪ್ರಾ. ಶಾಲೆಯಿಂದ ವಿಭಜಿಸಿ ಆಯೋಧ್ಯಾನಗರ ಹಿ.ಪ್ರಾ. ಶಾಲೆಯಲ್ಲಿ ಹೊಸ ಮತಗಟ್ಟೆ.ಹಿರೇಬಂಡಾಡಿ:ಹಿ.ಪ್ರಾ. ಶಾಲೆಯ ದಕ್ಷಿಣ ಭಾಗದಿಂದ ವಿಭಜಿಸಿ ಅಂಬೇಡ್ಕರ್ ಭವನದಲ್ಲಿ ಹೊಸ ಮತಗಟ್ಟೆ.ಕೊಡಿಪ್ಪಾಡಿ: ಅರ್ಕ ಹಿ.ಪ್ರಾ. ಶಾಲೆಯ ಹೊಸ ಕಟ್ಟಡದಿಂದ ವಿಭಜಿಸಿ ಅದೇ ಶಾಲಾ ಕಟ್ಟಡದಲ್ಲಿ ಹೊಸ ಮತಗಟ್ಟೆ.ಇಡ್ಕಿದು:ಗ್ರಾಮ ಪಂಚಾಯಿತಿಯ ಸುವರ್ಣ ಸೌಧ ಸಮುದಾಯ ಭವನದಿಂದ ವಿಭಜಿಸಿ ಹಳೆಯ ಗ್ರಂಥಾಲಯ ಕಟ್ಟಡದಲ್ಲಿ ಹೊಸ ಮತಗಟ್ಟೆ.ಅಳಿಕೆ:ದಂಬೆ ಅಂಗನವಾಡಿ ಕೇಂದ್ರ, ಮುಳಿಯದಿಂದ ವಿಭಜಿಸಿ ಎರುಂಬು ಅಂಗನವಾಡಿ ಕೇಂದ್ರದಲ್ಲಿ ಹೊಸ ಮತಗಟ್ಟೆ.ಕೇಪು:ಕುದ್ದುಪದವು ವಾಲ್ಮೀಕಿ ಆಶ್ರಮ ಶಾಲೆಯಿಂದ ವಿಭಜಿಸಿ ಮಹರ್ಷಿ ವಾಲ್ಮೀಕಿ ಆದಿವಾಸಿ ಜನಾಂಗದ ವಸತಿಯುತ ಶಾಲಾ ಕಟ್ಟಡದ ದಕ್ಷಿಣ ಭಾಗದಲ್ಲಿ ಹೊಸ ಮತಗಟ್ಟೆ.ಬಲ್ನಾಡು:ಉನ್ನತ ಹಿ.ಪ್ರಾ. ಶಾಲೆಯ ಪೂರ್ವ ಭಾಗದಿಂದ ವಿಭಜಿಸಿ ಮೊರಾರ್ಜಿ ದೇಸಾಯಿ ವಸತಿಯುತ ಶಾಲೆಯಲ್ಲಿ ಹೊಸ ಮತಗಟ್ಟೆ.ಆರ್ಯಾಪು-ಮಚ್ಚಿಮಲೆ: ಹಿ.ಪ್ರಾ. ಶಾಲೆಯಿಂದ ವಿಭಜಿಸಿ ಮಚ್ಚಿಮಲೆ ಅಂಗನವಾಡಿ ಕೇಂದ್ರದಲ್ಲಿ ಹೊಸ ಮತಗಟ್ಟೆ.ಆರ್ಯಾಪು-ಹಂಟ್ಯಾರು: ಹಿ.ಪ್ರಾ. ಶಾಲೆಯ ಪ್ರಥಮ ಕಟ್ಟಡದಿಂದ ವಿಭಜಿಸಿ ಅದೇ ಶಾಲಾ ಕಟ್ಟಡದ ಪೂರ್ವ ಭಾಗದಲ್ಲಿ ಹೊಸ ಮತಗಟ್ಟೆ.ಶಾಂತಿಗೋಡು: ಹಿ.ಪ್ರಾ. ಶಾಲೆಯಿಂದ ವಿಭಜಿಸಿ ಅದೇ ಶಾಲಾ ಕಟ್ಟಡದ ಪೂರ್ವ ಭಾಗದಲ್ಲಿ ಹೊಸ ಮತಗಟ್ಟೆ.ನರಿಮೊಗರು: ಮುಕ್ವೆ ಹಿ.ಪ್ರಾ. ಶಾಲೆಯ ಪಶ್ಚಿಮ ಭಾಗದಿಂದ ವಿಭಜಿಸಿ ಅದೇ ಶಾಲೆಯ ಮೊದಲ ಕಟ್ಟಡದ ದಕ್ಷಿಣ ಭಾಗದಲ್ಲಿ ಹೊಸ ಮತಗಟ್ಟೆ.ಕುರಿಯ: ಇಡಬೆಟ್ಟು ಹಿ.ಪ್ರಾ. ಶಾಲೆಯಿಂದ ವಿಭಜಿಸಿ ಅದೇ ಶಾಲಾ ಕಟ್ಟಡದ ಎರಡನೇ ಕೊಠಡಿಯಲ್ಲಿ ಹೊಸ ಮತಗಟ್ಟೆ.ಒಳಮೊಗ್ರು-ಕೈಕಾರ: ಕೈಕಾರ ಹಿ.ಪ್ರಾ. ಶಾಲೆಯ ಪೂರ್ವ ಭಾಗದಿಂದ ವಿಭಜಿಸಿ ಅಜಲಡ್ಕ ಅಂಗನವಾಡಿ ಕೇಂದ್ರದಲ್ಲಿ ಹೊಸ ಮತಗಟ್ಟೆ.ಒಳಮೊಗ್ರು-ಕೈಕಾರ: ಕೈಕಾರ ಶಾಲೆಯ ಪಶ್ಚಿಮ ಭಾಗದಿಂದ ವಿಭಜಿಸಿ ಅಜ್ಜಿಕಲ್ಲು ಏಕತ್ತಡ್ಕ ಶಾಲೆಯಲ್ಲಿ ಹೊಸ ಮತಗಟ್ಟೆ.ಇರ್ದೆ-ಉಪ್ಪಳಿಗೆ: ಹಿ.ಪ್ರಾ. ಶಾಲೆಯಿಂದ ವಿಭಜಿಸಿ ಅದೇ ಶಾಲೆಯ ಇನ್ನೊಂದು ಕೊಠಡಿಯಲ್ಲಿ ಹೊಸ ಮತಗಟ್ಟೆ.ಇರ್ದೆ-ದೂಮಡ್ಕ: ಹಿ.ಪ್ರಾ. ಶಾಲೆಯಿಂದ ವಿಭಜಿಸಿ ಪೇರಲ್ತಡ್ಕ ಹಿ.ಪ್ರಾ. ಶಾಲೆಯಲ್ಲಿ ಹೊಸ ಮತಗಟ್ಟೆ.ಮಾಡ್ನೂರು: ನನ್ಯ ಹಿ.ಪ್ರಾ. ಶಾಲೆಯ ಪೂರ್ವ ಭಾಗದಿಂದ ವಿಭಜಿಸಿ ಅದೇ ಶಾಲೆಯ ಪಶ್ಚಿಮ ಭಾಗದಲ್ಲಿ ಹೊಸ ಮತಗಟ್ಟೆ.ಈಶ್ವರಮಂಗಲ-ಪಾಲ್ಯತ್ತಡ್ಕ:ಪಂಚಲಿಂಗೇಶ್ವರ ಪ್ರೌಢಶಾಲೆಯ ಕಟ್ಟಡದಿಂದ ವಿಭಜಿಸಿ ಅದೇ ಶಾಲೆಯ ಪಶ್ಚಿಮ ಭಾಗದಲ್ಲಿ ಹೊಸ ಮತಗಟ್ಟೆ.ನೆಟ್ಟಣಿಗೆ-ಮುಡ್ನೂರು:ಮೇನಾಲ ಹಿ.ಪ್ರಾ. ಶಾಲೆಯ ಕಟ್ಟಡದಿಂದ ವಿಭಜಿಸಿ ಅದೇ ಶಾಲೆಯ ಹೊಸ ಕಟ್ಟಡದಲ್ಲಿ ಹೊಸ ಮತಗಟ್ಟೆ.ಆಲಂತ್ತಡ್ಕ: ಹಿ.ಪ್ರಾ. ಶಾಲೆಯ ಕಟ್ಟಡದಿಂದ ವಿಭಜಿಸಿ ಅದೇ ಶಾಲೆಯ ಪಶ್ಚಿಮ ಭಾಗದಲ್ಲಿ ಹೊಸ ಮತಗಟ್ಟೆ.
ಭಾಗ ಸಂಖ್ಯೆ ಬದಲಾವಣೆ ಗಮನಿಸಿ
ಮತಗಟ್ಟೆಗಳ ಸಂಖ್ಯೆ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಈ ಹಿಂದೆ ಇದ್ದ ಭಾಗ ಸಂಖ್ಯೆ (ಪಾರ್ಟ್ ನಂಬರ್)ಗಳಲ್ಲೂ ಬದಲಾವಣೆ ಮಾಡಲಾಗಿದೆ.ಹೀಗಾಗಿ ಮತದಾರರು ಕರಡು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಹುಡುಕುವಾಗ ಹೊಸ ಭಾಗ ಸಂಖ್ಯೆ ಹಾಗೂ ಮತಗಟ್ಟೆಯ ವಿವರಗಳನ್ನು ಗಮನಿಸುವುದು ಅಗತ್ಯವಾಗಿದೆ.ಎಸ್ಐಆರ್ನ ಬಳಿಕ ಮತಗಟ್ಟೆಗಳ ಮರುಹಂಚಿಕೆಯಿಂದಾಗಿ ಮತದಾನ ವ್ಯವಸ್ಥೆ ಮತ್ತಷ್ಟು ಸುಗಮವಾಗುವ ನಿರೀಕ್ಷೆಯಿದ್ದು,ಮತದಾರರು ತಮ್ಮ ಹೊಸ ಮತಗಟ್ಟೆ ಮತ್ತು ಭಾಗ ಸಂಖ್ಯೆಯ ವಿವರಗಳನ್ನು ಮುಂಚಿತವಾಗಿಯೇ ಪರಿಶೀಲಿಸಿಕೊಳ್ಳುವುದು ಸೂಕ್ತ.










