






ಪುತ್ತೂರು: ದಕ್ಷಿಣ ಕನ್ನಡ ಮ್ಯೂಚುಯಲ್ ಬೆನಿಫಿಟ್ ನಿಧಿ ಲಿಮಿಟೆಡ್‌ನ ಪುತ್ತೂರು ಶಾಖೆಯ ವತಿಯಿಂದ ಶಿಕ್ಷಕರ ದಿನಾಚರಣೆಯ ಅಂಗವಾಗಿ ನಿವೃತ್ತ ಶಿಕ್ಷಕರಿಗೆ ಗೌರವ ಸನ್ಮಾನ ಕಾರ್ಯಕ್ರಮವನ್ನು ಶಾಖಾ ಕಚೇರಿಯಲ್ಲಿ ಅರ್ಥಪೂರ್ಣವಾಗಿ ಆಯೋಜಿಸಲಾಯಿತು.



ಕಾರ್ಯಕ್ರಮದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಮನ್ಮಥ ಜೆ. ಶೆಟ್ಟಿ ಮಾತನಾಡಿ, “ವಿದ್ಯೆಯನ್ನು ಬೋಧಿಸುವವರು ಮಾತ್ರ ಶಿಕ್ಷಕರಲ್ಲ; ಬದುಕನ್ನು ಕಟ್ಟಿಕೊಳ್ಳಲು ದಾರಿದೀಪ ತೋರಿಸುವವರೇ ನಿಜವಾದ ಶಿಕ್ಷಕರು” ಎಂದು ಶಿಕ್ಷಕರ ಮಹತ್ವವನ್ನು ಸಾರಿದರು.



ಕೊಂಬೆಟ್ಟು ಕಾಲೇಜಿನ ನಿವೃತ್ತ ಮುಖ್ಯೋಪಾಧ್ಯಾಯರಾದ ವಸಂತ ಮೂಲ್ಯ ಮಾತನಾಡಿ, ಒಬ್ಬ ಶಿಕ್ಷಕರ ಸೇವೆಯನ್ನು ಇಂತಹ ಸಂಘ-ಸಂಸ್ಥೆಗಳು ಗುರುತಿಸಿ ಗೌರವಿಸುತ್ತಿರುವುದು ಸಂತಸದ ವಿಚಾರವಾಗಿದೆ. ದಕ್ಷಿಣ ಕನ್ನಡ ಮ್ಯೂಚುಯಲ್ ಬೆನಿಫಿಟ್ ನಿಧಿ ಸಂಸ್ಥೆಯು ಇನ್ನಷ್ಟು ಅಭಿವೃದ್ಧಿ ಹೊಂದಲಿ ಎಂದು ಶುಭ ಹಾರೈಸಿದರು.

ಸರ್ವೆ ಎಸ್.ಜಿ.ಎಂ. ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀನಿವಾಸ ಹೆಚ್.ಬಿ. ಹಾಗೂ ಕಾಣಿಯೂರು ಶಾಲೆಯ ನಿವೃತ್ತ ಶಿಕ್ಷಕರಾದ ಶಿವರಾಮ ಗೌಡ ಅವರು ಮಾತನಾಡಿ, ಸಂಸ್ಥೆಯು ಉತ್ತಮ ಸೇವೆಯೊಂದಿಗೆ ಉನ್ನತ ಮಟ್ಟಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಾದ ವಸಂತ ಮೂಲ್ಯ, ಶ್ರೀನಿವಾಸ ಹೆಚ್.ಬಿ., ಶಿವರಾಮ ಗೌಡ ಹಾಗೂ ತಾರಾನಾಥ ಶೆಟ್ಟಿ. ಹೆಚ್. ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಶಾಖೆಯ ಎರಡನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ವಿಶೇಷ ಕೊಡುಗೆ ಯೋಜನೆಯಡಿ ನಿಶ್ಚಿತ ಠೇವಣಿ ಗ್ರಾಹಕರಿಗೆ ಚಿನ್ನದ ನಾಣ್ಯಗಳನ್ನು ವಿತರಿಸಲಾಯಿತು.
ಶಾಖಾ ಅಧ್ಯಕ್ಷ ಪುನೀತ್ ವಿ.ಜೆ. ಅವರು ವಂದಿಸಿದರು. ಸಿಬ್ಬಂದಿ ಬಿಂದ್ಯಾ ಕಾರ್ಯಕ್ರಮವನ್ನು ನಿರೂಪಿಸಿದರು. ಕವಿತಾ.ಜಿ. ಪ್ರಾರ್ಥನೆ ನೆರವೇರಿಸಿದರೆ, ಪೂಜಾ.ಜಿ. ಸ್ವಾಗತಿಸಿದರು. ಅರ್ಪಿತಾ, ವೀಕ್ಷಿತಾ ಹಾಗೂ ರಕ್ಷಿತಾ ಅವರು ಕಾರ್ಯಕ್ರಮದ ಯಶಸ್ಸಿಗೆ ವಿವಿಧ ರೀತಿಯಲ್ಲಿ ಸಹಕರಿಸಿದರು. ಶಿಕ್ಷಕರ ಸೇವೆಯನ್ನು ಸ್ಮರಿಸಿ ಗೌರವಿಸುವ ಮೂಲಕ ಕಾರ್ಯಕ್ರಮವು ಅರ್ಥಪೂರ್ಣವಾಗಿ ನೆರವೇರಿತು










