







ಪುತ್ತೂರು: ಬ್ರಹ್ಮಶ್ರೀ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ಟ ಸಂಪ್ರತಿಷ್ಠಾನ (ರಿ.) ಇದರ 33ನೇ ವಾರ್ಷಿಕೋತ್ಸವ, ಸಂಸ್ಕೃತ ಪ್ರತಿಭಾ ಪುರಸ್ಕಾರ, ಪ್ರಶಸ್ತಿ ಪ್ರದಾನ ಮತ್ತು ನೂತನ ಗ್ರಂಥ ಅನಾವರಣ ಸಮಾರಂಭ ಕಬಕ ಸಮೀಪದ ವಿದ್ಯಾಕುಟೀರದಲ್ಲಿ ಸಂಪ್ರತಿಷ್ಠಾನದ ಅಧ್ಯಕ್ಷ ರಮೇಶ್ ಭಟ್ ಬಿ. ಅವರ ಅಧ್ಯಕ್ಷತೆಯಲ್ಲಿ ಜರುಗಿತು.


ಸಮಾರಂಭದಲ್ಲಿ ಪುರೋಹಿತ ಕೃಷ್ಣ ಭಟ್ಟ ಸಂಸ್ಮರಣ ವೈದಿಕ ಪ್ರಶಸ್ತಿಯನ್ನು ವೇ.ಬ್ರ.ಶ್ರೀ ರವಿಶಂಕರ ಭಾರದ್ವಾಜ, ಸುಳ್ಯ ಇವರಿಗೆ, ಪುರೋಹಿತ ಶಂಕರನಾರಾಯಣ ಭಟ್ಟ ಸಂಸ್ಮರಣ ಶಾಸ್ತ್ರವಿದ್ವತ್ ಪ್ರಶಸ್ತಿಯನ್ನು ವಿದ್ವಾನ್ ಚಂದ್ರಶೇಖರ ಸಣ್ಣ ಭಟ್ಟ, ಗಾಳಿಮನೆ ಇವರಿಗೆ, ಪ್ರೊ. ಮರಿಯಪ್ಪ ಭಟ್ಟ ನಿಘಂಟು ಪ್ರಶಸ್ತಿಯನ್ನು ಪ್ರೊ. ಎ.ವಿ. ನಾವಡ ಇವರಿಗೆ, ಉಗ್ಗಪ್ಪ ಕೋಡಿ ಪಂ. ಈಶ್ವರ ಭಟ್ಟ ವೈದ್ಯ ಪ್ರಶಸ್ತಿಯನ್ನು ಪಾಪಂಕಡವು ಶಂಕರನಾರಾಯಣ ಭಟ್ಟ, ಪೆರ್ಲ ಇವರಿಗೆ ಮತ್ತು ಎಚ್.ಎಂ. ನಾರಾಯಣ ಭಟ್ಟ ಹಾಗೂ ಶ್ರೀಮತಿ ರುಕ್ಮಿಣಿ ಅಮ್ಮ ಸಂಸ್ಮರಣ ಸಂಗೀತ ಕಲಾ ಪ್ರತಿಭಾ ಪುರಸ್ಕಾರವನ್ನು ಕು. ತನ್ಮಯಿ ಉಪ್ಪಂಗಳ ಇವರಿಗೆ ಪ್ರದಾನ ಮಾಡಲಾಯಿತು. ಸನ್ಮಾನಿತರು ತಮ್ಮನ್ನು ಗೌರವಿಸಿದ ಬಗ್ಗೆ ಮಾತನಾಡಿದರು.




ಈ ಸಂದರ್ಭದಲ್ಲಿ ಪುತ್ತೂರು ಪರಿಸರದ 27 ವಿದ್ಯಾರ್ಥಿಗಳಿಗೆ ಸಂಸ್ಕೃತ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸುಳ್ಯದ ಶ್ರೀ ಕಾಂಚೀಕಾಮಕೋಟಿ ವೇದಪಾಠಶಾಲೆಗೆ ಸಾಂಗವೇದ ಪೋಷಣ ನಿಧಿ ನೀಡಿ ಗೌರವಿಸಲಾಯಿತು. ಇದೇ ಸುಸಂದರ್ಭದಲ್ಲಿ ‘ಅಂಬಿಕಾವಿಜಯ’ ಮತ್ತು ‘ಶ್ರೀವಿಷ್ಣುಸಹಸ್ರನಾಮ’ ಎಂಬ ಎರಡು ಗ್ರಂಥಗಳು ಅನಾವರಣಗೊಂಡವು.

ಮುಖ್ಯ ಅಭ್ಯಾಗತರಾಗಿ ಹಾರಕೆರೆ ನಾರಾಯಣ ಭಟ್ಟರು ಭಾಗವಹಿಸಿ, ಸಂಪ್ರತಿಷ್ಠಾನವು ಹಬ್ಬ-ಹರಿದಿನಗಳ ಬಗ್ಗೆ ಸಮಾಜಕ್ಕೆ ತಿಳಿವಳಿಕೆ ನೀಡಲು ಗ್ರಂಥವೊಂದನ್ನು ಸಿದ್ಧಪಡಿಸಿದರೆ ಉತ್ತಮ ಎಂದರು. ಡಾ. ಪಾದೇಕಲ್ಲು ವಿಷ್ಣು ಭಟ್ಟರು ಪ್ರಸ್ತಾವಿಕ ಮಾತನಾಡಿದರು. ಸಂಪ್ರತಿಷ್ಠಾನದ ಅಧ್ಯಕ್ಷರು ಅಧ್ಯಕ್ಷೀಯ ನುಡಿಗಳನ್ನಾಡಿದರು.

ವೈದಿಕ ಪ್ರಾರ್ಥನೆಯೊಂದಿಗೆ ಆರಂಭವಾದ ಸಭಾ ಕಾರ್ಯಕ್ರಮವನ್ನು ಸಂಪ್ರತಿಷ್ಠಾನದ ಕೋಶಾಧಿಕಾರಿಗಳಾದ ಪಿಲಿಂಜ ತಿರುಮಲೇಶ್ವರ ಭಟ್ ಮತ್ತು ಶ್ರೀಹರಿ ಶರ್ಮಾ ನಿರ್ವಹಿಸಿದರು. ರಮೇಶ್ ಭಟ್ ಎಂ.ಎಚ್. ಧನ್ಯವಾದ ಸಮರ್ಪಿಸಿದರು. ಅಪರಾಹ್ನ ಪ್ರಸಿದ್ಧ ಅರ್ಥಧಾರಿಗಳ ನೇತೃತ್ವದಲ್ಲಿ ‘ಶ್ರೀಕೃಷ್ಣ ಸಂಧಾನ’ ಎಂಬ ಯಕ್ಷಗಾನ ತಾಳಮದ್ದಳೆ ಸಂಪನ್ನಗೊಂಡಿತು.










