







ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆಗೆ ವಾಟರ್ ಪ್ಯೂರಿಫೈಯರ್ ಕೊಡುಗೆ


ನೆಲ್ಯಾಡಿ: ಜೆಸಿಐ ಘಟಕಕ್ಕೆ ಜೆಸಿಐ ವಲಯ 15ರ ಅಧ್ಯಕ್ಷ ಸಂತೋಷ್ ಶೆಟ್ಟಿ ಅವರ ಅಧಿಕೃತ ಭೇಟಿ ಹಾಗೂ ಘಟಕದ ವತಿಯಿಂದ ನೀಡಲಾದ ಶಾಶ್ವತ ಕೊಡುಗೆಯ ಉದ್ಘಾಟನಾ ಕಾರ್ಯಕ್ರಮ ಸೆ.27ರಂದು ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆಯಲ್ಲಿ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ನೆಲ್ಯಾಡಿ ಜೆಸಿಐ ಘಟಕದ ಅಧ್ಯಕ್ಷೆ ಪ್ರವೀಣಿ ಸುಧಾಕರ್ ಶೆಟ್ಟಿ ಅವರು ಸ್ವಾಗತಿಸಿದರು. ಘಟಕದ ವತಿಯಿಂದ ಸುಮಾರು 32 ಸಾವಿರ ರೂ.ಮೌಲ್ಯದ ವಾಟರ್ ಪ್ಯೂರಿಫೈಯರ್ನ್ನು ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆಗೆ ಶಾಶ್ವತ ಕೊಡುಗೆಯಾಗಿ ನೀಡಲಾಗಿದ್ದು, ಇದನ್ನು ವಲಯಾಧ್ಯಕ್ಷ ಸಂತೋಷ್ ಶೆಟ್ಟಿ ಅವರು ಉದ್ಘಾಟಿಸಿದರು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಸಂತೋಷ್ ಶೆಟ್ಟಿ ಮಾತನಾಡಿ, ನೆಲ್ಯಾಡಿ ಘಟಕದ ಪ್ರಸಕ್ತ ಸಾಲಿನ ಅಧ್ಯಕ್ಷೆ ಪ್ರವೀಣಿ ಶೆಟ್ಟಿ ಅವರು ಸಮಾಜಕ್ಕೆ ಉತ್ತಮ ಸಂದೇಶ ಸಾರುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಘಟಕಕ್ಕೆ ಈ ವರ್ಷ 17 ಮಂದಿ ನೂತನ ಸದಸ್ಯರನ್ನು ಸೇರ್ಪಡೆಗೊಳಿಸಿರುವುದು ಶ್ಲಾಘನೀಯ ಎಂದರು. ವಲಯ ಉಪಾಧ್ಯಕ್ಷ ಜಿತೇಶ್ ಪಿರೇರಾ ಮಾತನಾಡಿ, 42 ವರ್ಷಗಳ ಇತಿಹಾಸ ಹೊಂದಿರುವ ನೆಲ್ಯಾಡಿ ಜೆಸಿಐ ಘಟಕ ಅನೇಕ ಪೂರ್ವಾಧ್ಯಕ್ಷರನ್ನು ಹೊಂದಿದ್ದು, ವಲಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ಘಟಕವಾಗಿ ಗುರುತಿಸಿಕೊಂಡಿದೆ ಎಂದರು.
ನೆಲ್ಯಾಡಿ ಜೆಸಿಐನ ನಿಕಟಪೂರ್ವಾಧ್ಯಕ್ಷ ಡಾ.ಸುಧಾಕರ ಶೆಟ್ಟಿ, ಮಹಿಳಾ ಜೆಸಿ ಅಧ್ಯಕ್ಷೆ ನವ್ಯ ಪ್ರಸಾದ್, ಕಾರ್ಯದರ್ಶಿ ಶ್ರೇಯಸ್ ಶೆಟ್ಟಿ ಹಾಗೂ ಯೋಜನಾ ನಿರ್ದೇಶಕರಾದ ಪ್ರಶಾಂತ್, ಹರೀಶ್ ರೈ ಉಪಸ್ಥಿತರಿದ್ದರು. ದೀಪಿಕಾ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು.ರೇಷ್ಮಾ ಜೆಸಿ ವಾಣಿ ವಾಚಿಸಿದರು. ಕಾರ್ಯದರ್ಶಿ ಶ್ರೇಯಸ್ ಶೆಟ್ಟಿ ವರದಿ ವಾಚಿಸಿ ವಂದಿಸಿದರು. ಘಟಕದ ಪೂರ್ವಾಧ್ಯಕ್ಷರು, ಸದಸ್ಯರು ಹಾಗೂ ಜೆಸಿ ಹಿತೈಷಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.



ಐವರು ಸದಸ್ಯರ ಸೇರ್ಪಡೆ:
ಘಟಕಕ್ಕೆ ನೂತನವಾಗಿ ಸೇರ್ಪಡೆಗೊಂಡ ಐವರು ಸದಸ್ಯರಿಗೆ ಪ್ರಮಾಣವಚನ ಬೋಧಿಸಿದರು. ನೆಲ್ಯಾಡಿ ಜೆಸಿಐ ಘಟಕದ ವತಿಯಿಂದ ವಲಯಾಧ್ಯಕ್ಷ ಸಂತೋಷ್ ಶೆಟ್ಟಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.










