







ಪುತ್ತೂರು: ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತದಾನ ದಿನದ ಅಂಗವಾಗಿ ನಗರದ ವಿವೇಕಾನಂದ ಪಾಲಿಟೆಕ್ನಿಕ್ನ ಯೂತ್ ರೆಡ್ ಕ್ರಾಸ್ ಘಟಕ,ರೋಟರಿ ಕ್ಲಬ್ ಪುತ್ತೂರು ಸಿಟಿ, ರೋಟರಿ ಕ್ಲಬ್ ಎಲೈಟ್ ಹಾಗೂ ರೋಟರಿ ಕ್ಯಾಂಪ್ಕೋ ರಕ್ತನಿಧಿ ಕೇಂದ್ರ ಪುತ್ತೂರು ಇವುಗಳ ಜಂಟಿ ಆಶ್ರಯದಲ್ಲಿ ಕಾಲೇಜಿನ ಉರಿಮಜಲು ಕೆ.ರಾಮ ಭಟ್ ಸಭಾಂಗಣದಲ್ಲಿ ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತದಾನ ದಿನಾಚರಣೆ, ಸಭಾ ಕಾರ್ಯಕ್ರಮ ಹಾಗು ಬೃಹತ್ ರಕ್ತದಾನ ಶಿಬಿರವು ಯಶಸ್ವಿಯಾಗಿ ನಡೆಯಿತು.


ಮುಖ್ಯ ಅತಿಥಿ,ರೋಟರಿ-ಕ್ಯಾಂಪ್ಕೋ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ.ರಾಮಕೃಷ್ಣ ರಾವ್ ಮಾತನಾಡಿ,ರಕ್ತದಾನದ ಮಹತ್ವ,ಆರೋಗ್ಯದ ಲಾಭಗಳು ಹಾಗೂ ಸಂಗ್ರಹಿಸಿದ ರಕ್ತದ ವೈಜ್ಞಾನಿಕ ಸಂಸ್ಕರಣೆ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕರಾದ ಮಹಾದೇವ ಶಾಸ್ತ್ರಿ ಮಣಿಲ ಅವರು ತಾವು ಹಿಂದೆ ಪಾಲ್ಗೊಂಡ ರಕ್ತದಾನ ಶಿಬಿರಗಳ ನೆನಪುಗಳನ್ನು ಮೆಲುಕು ಹಾಕುತ್ತಾ, ಇಂತಹ ಸಾಮಾಜಿಕ ಸೇವಾ ಕಾರ್ಯಕ್ರಮಗಳಿಂದ ಸಮಾಜಕ್ಕೆ ಸಿಗುವ ಉಪಯುಕ್ತತೆಗಳ ಬಗ್ಗೆ ಸಂದೇಶ ನೀಡಿದರು.




ಈ ಶಿಬಿರದಲ್ಲಿ ಸುಮಾರು 70ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿ ಸ್ವಯಂಪ್ರೇರಿತ ರಕ್ತದಾನ ಮಾಡಿದರು. ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಪುತ್ತೂರು ಸಿಟಿಯ ಅಧ್ಯಕ್ಷರಾದ ಉಮೇಶ ಚಂದ್ರ, ರೋಟರಿ ಕ್ಲಬ್ ಎಲೈಟ್ ಅಧ್ಯಕ್ಷರಾದ ಮೊಹಮ್ಮದ್ ಶಾಕೀರ್,ವಿವಿಧ ರೋಟರಿ ಕ್ಲಬ್ಗಳ ಪದಾಧಿಕಾರಿಗಳು ಹಾಗೂ ವಿವೇಕಾನಂದ ಪಾಲಿಟೆಕ್ನಿಕ್ ಆಡಳಿತ ಮಂಡಳಿಯ ಸದಸ್ಯರಾದ ಅಚ್ಯುತ ಪ್ರಭು ,ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ಮುರಳೀಧರ್ ಎಸ್ ಆಗಮಸಿದ ಅತಿಥಿಗಳನ್ನು ಸ್ವಾಗತಿಸಿದರು ,ಅರ್ಚನಾ ಮತ್ತು ತಂಡ ಪ್ರಾರ್ಥಿಸಿದರು, ನಿರೂಪಣೆಯನ್ನು ಚೈತ್ರ ಬಿ ನಡೆಸಿ ಕೊಟ್ಟರು ಹಾಗೂ ನಿಕ್ಷೇಪ್ ಧನ್ಯವಾದ ಸಲ್ಲಿಸಿದರು.










