ಕಾವು ಪರಿಸರದ ಹಲವೆಡೆ ಕಾಡಾನೆ ಲಗ್ಗೆ-ಕೃಷಿಗೆ ಅಪಾರ ಹಾನಿ

0

ಕ್ರಮಕ್ಕೆ ಕೃಷಿಕರ ಆಗ್ರಹ-ಅರಣ್ಯ ಇಲಾಖೆಯಿಂದ ಶೋಧ ಕಾರ್ಯ

ಕಾವು: ಕಳೆದ ಹಲವು ತಿಂಗಳುಗಳಿಂದ ಕಾಡಾನೆ ಲಗ್ಗೆಯಿಂದ ತತ್ತರಿಸುತ್ತಿರುವ ಮಾಡ್ನೂರು ಗ್ರಾಮದಲ್ಲಿ ಕಾವು ಪರಿಸರದ ಹಲವೆಡೆ ಮತ್ತೆ ಒಂಟಿ ಸಲಗವು ಲಗ್ಗೆಯಿಟ್ಟು, ಹಲವು ಕೃಷಿಕರ ತೋಟಕ್ಕೆ ಹಾನಿ ಮಾಡಿದ್ದು, ಮಾಹಿತಿ ಪಡೆದ ಅರಣ್ಯ ಇಲಾಖೆಯು ಬೆಳಗ್ಗಿನಿಂದಲೇ ಶೋಧಕಾರ್ಯ ಆರಂಭಿಸಿ ಕಾರ್ಯಾಚರಣೆಯಲ್ಲಿ ತೊಡಗಿರುವ ಘಟನೆ ಅ.2ರಂದು ಬೆಳಿಗ್ಗೆ ವರದಿಯಾಗಿದೆ.

ಪ್ರಮುಖವಾಗಿ ಮಾಡ್ನೂರು ಗ್ರಾಮದ ಮಳಿ, ಕೊಚ್ಚಿ, ಪೂವಂದೂರು, ಚಾಕೋಟೆ, ಮದ್ಲ, ಆಚಾರಿಮೂಲೆ ಪ್ರದೇಶದಲ್ಲಿ ಕಾಣಿಸಿಕೊಳ್ಳುತ್ತಿದ್ದ ಕಾಡಾನೆಯು, ಅ.1ರಂದು ರಾತ್ರಿ ಹೆದ್ದಾರಿಯ ಎಡಭಾಗದ ಹಲವು ಭಾಗಗಳಿಗೆ ಲಗ್ಗೆಯಿಟ್ಟು ಹಾನಿ ಮಾಡಿದ ಘಟನೆ ನಡೆದಿದೆ. ರಾತ್ರಿ ಗಂಟೆ 11ರ ಸುಮಾರಿಗೆ ಚಾಕೋಟೆ ಭಾಗದಲ್ಲಿದ್ದ ಒಂಟಿ ಸಲಗವು ಬಳಿಕ ಅಲ್ಲಿಂದ ತಿರುಗಿ ನನ್ಯ, ಬಜಕುಡೇಲು, ಬದಿನಾರು, ನಿಧಿಮುಂಡ, ಪಿಲಿಪಂಜರ, ಪಾದೆ, ಭಾಗದ ಹಲವು ತೋಟಗಳಲ್ಲಿ ಕೃಷಿಗೆ ಹಾನಿ ಮಾಡಿದೆ.



ರಾಧಾಕೃಷ್ಣ ಬೋರ್ಕರ್ ನನ್ಯ, ವಾಸುದೇವ ಮೂಡೆತ್ತಾಯ ನನ್ಯ, ಬಾಲಕೃಷ್ಣ ಪಾಟಾಳಿ ನನ್ಯ, ಡಾ. ಸೂರ್ಯನಾರಾಯಣ ಭಟ್ ನನ್ಯ, ರಾಧಾಕೃಷ್ಣ ಮೂಡೆತ್ತಾಯ ನನ್ಯ, ನನ್ಯ ಅಚ್ಚುತ ಮೂಡೆತ್ತಾಯ, ಚಂದ್ರಶೇಖರ ರಾವ್ ನಿಧಿಮುಂಡ, ಹೊನ್ನಪ್ಪ ಪೂಜಾರಿ ಪಿಲಿಪಂಜರ, ಅಣ್ಣು ಪೂಜಾರಿ ಪಿಲಿಪಂಜರರವರ ಜಾಗದಲ್ಲಿ ಕಾಡಾನೆ ಸಂಚರಿಸಿ ಕೃಷಿ ಹಾನಿ ಮಾಡಿದೆ. ಕಾಡಾನೆ ಲಗ್ಗೆಯ ಬಗ್ಗೆ ನನ್ಯ ಅಚ್ಚುತ ಮೂಡೆತ್ತಾಯರವರು ಅರಣ್ಯ ಇಲಾಖಾಧಿಕಾರಿಗಳಿಗೆ ಮಾಹಿತಿ ನೀಡಿ, ಕಾಡಾನೆ ದಾಳಿಯಿಂದ ಕೃಷಿ ಹಾನಿ ಮಾತ್ರವಲ್ಲದೇ, ಸಾರ್ವಜನಿಕರು ಆತಂಕದಲ್ಲಿ ಬದುಕುವ ಪರಿಸ್ಥಿತಿ ಎದುರಾಗಿದ್ದು, ಈ ಬಗ್ಗೆ ತಕ್ಷಣವೇ ಅಗತ್ಯ ಕ್ರಮ ವಹಿಸುವಂತೆ ಮನವಿ ಮಾಡಿದ್ದಾರೆ.



ಮನೆ ಗೇಟಿಗೆ ಹಾನಿ:
ನನ್ಯ ನಿವಾಸಿ ಡಾ. ಸೂರ್ಯನಾರಾಯಣ ಭಟ್‌ರವರ ಮನೆಯ ಮುಂಭಾಗದಲ್ಲಿ ರಾತ್ರಿ ಗಂಟೆ 1.30ರ ಸುಮಾರಿಗೆ ಕಾಡಾನೆ ಸಂಚರಿಸಿ ಮನೆಯ ಕಂಪೌಂಡ್‌ನ ಕಬ್ಬಣದ ಗೇಟನ್ನು ಮೆಟ್ಟಿ ಜಖಂಗೊಳಿಸಿದೆ, ಅದೇ ಸಮಯಕ್ಕೆ ಎಚ್ಚರಗೊಂಡ ಡಾ. ಸೂರ್ಯನಾರಾಯಣ ಭಟ್‌ರವರು ಕಾಡಾನೆಯು ಮನೆಯ ಗೇಟನ್ನು ಹಾನಿ ಮಾಡಿ ಪಕ್ಕದ ಜಾಗಕ್ಕೆ ತೆರಳುವುದನ್ನು ನೋಡಿ ತಡರಾತ್ರಿಯೇ ಪಕ್ಕದ ನಿವಾಸಿಗಳಿಗೆ ಮಾಹಿತಿ ನೀಡಿದ್ದಾರೆ, ಮತ್ತು ಅರಣ್ಯ ಇಲಾಖೆಯವರಿಗೂ ಮಾಹಿತಿ ನೀಡಿದ್ದಾರೆ.



ಬೆಳಗ್ಗಿನಿಂದಲೇ ಶೋಧ ಕಾರ್ಯ:

ಕಾಡಾನೆ ಲಗ್ಗೆಯ ಬಗ್ಗೆ ಮಾಹಿತಿ ತಿಳಿದ ಅರಣ್ಯ ಇಲಾಖಾ ಅಧಿಕಾರಿಗಳು ಮತ್ತ ಸಿಬ್ಬಂದಿಗಳು ಬೆಳಗ್ಗಿನ ವೇಳೆಯೇ ಸ್ಥಳಕ್ಕಾಗಮಿಸಿ ಶೋಧಕಾರ್ಯ ಆರಂಭಿಸಿದ್ದಾರೆ. ಅ.1ರ ರಾತ್ರಿ ಕಾಡಾನೆ ಲಗ್ಗೆಯಿಟ್ಟ ಎಲ್ಲಾ ಪ್ರದೇಶಗಳಿಗೆ ತೆರಳಿ ಮಾಹಿತಿ ಪಡೆದು ಬಳಿಕ ಕಾಡಾನೆ ಸಂಚರಿಸಿದ ಜಾಗವನ್ನು ಹುಡುಕುತ್ತಾ ಶೋಧ ಕಾರ್ಯ ನಡೆಸಿದಾಗ ಮುಂಡಕೊಚ್ಚಿ ಭಾಗದಲ್ಲಿ ಆನೆ ನೆಲೆಸಿರುವ ಶಂಕೆ ವ್ಯಕ್ತವಾಗಿದೆ, ದಿನಪೂರ್ತಿ ಸ್ಥಳದಲ್ಲೇ ಬೀಡು ಬಿಟ್ಟಿರುವ ಅರಣ್ಯ ಇಲಾಖೆಯ ಸುಮಾರು 20ಕ್ಕೂ ಅಧಿಕ ಕರ್ತವ್ಯ ನಿರತ ಸಿಬ್ಬಂದಿಗಳು ಇಲಾಖಾಧಿಕಾರಿಗಳ ಮಾಹಿತಿಯಂತೆ ಅ.2ರ ರಾತ್ರಿಯ ವೇಳೆಗೆ ಕಾಡಾನೆಯ ಸ್ಥಳಾಂತರ ನಡೆಸುವ ಬಗ್ಗೆ ಕಾರ್ಯಾಚರಣೆ ನಡೆಸಲಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.



ಸಾರ್ವಜನಿಕರು ಎಚ್ಚರ ವಹಿಸಿ:

ಅ.2 ರಾತ್ರಿವೇಳೆಗೆ ಕಾಡಾನೆ ಸ್ಥಳಾಂತರದ ಬಗ್ಗೆ ಅರಣ್ಯ ಇಲಾಖೆಯವರು ಕಾರ್ಯಾಚರಣೆ ಮಾಡಲಿರುವುದರಿಂದ ಸ್ಥಳೀಯ ನಿವಾಸಿಗಳು, ಸಾರ್ವಜನಿಕರು, ಸ್ಥಳೀಯ ರಸ್ತೆಯಲ್ಲಿ ಸಂಚರಿಸುವವರು ಎಚ್ಚರಿಕೆ ವಹಿಸುವಂತೆ ಅರಣ್ಯ ಇಲಾಖೆಯವರು ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here