







ಉಪ್ಪಿನಂಗಡಿ: ಶುಕ್ರವಾರ ಸಂಜೆ ಉಪ್ಪಿನಂಗಡಿ ಪರಿಸರದಲ್ಲಿ ಭಾರೀ ಗಾಳಿ- ಮಳೆಯಾಗಿದ್ದು, ನಾಲ್ಕೈದು ವಿದ್ಯುತ್ ಕಂಬಗಳು, ಹಲವು ಅಡಿಕೆ ಮರಗಳು ಧರೆಗುರುಳಿದ್ದು, ಜಾಹೀರಾತು ಫಲಕಗಳು ಗಾಳಿ ಹೊಡೆತಕ್ಕೆ ಸಿಲುಕಿ ಹಾನಿಗೊಂಡಿವೆ. ಹೆದ್ದಾರಿ ಕಾಮಗಾರಿಯ ಎಡವಟ್ಟಿನಿಂದಾಗಿ ಮಳೆ ನೀರು ಇಲ್ಲಿನ ಶೆಣೈ ಆಸ್ಪತ್ರೆ ರಸ್ತೆ ಬಳಿ ಭಾರೀ ಪ್ರಮಾಣದಲ್ಲಿ ಸಂಗ್ರಹಗೊಂಡು ಸಮಸ್ಯೆಯುಂಟಾದ ಘಟನೆಯೂ ನಡೆದಿದೆ.
ಈ ಮಧ್ಯೆ ಉಪ್ಪಿನಂಗಡಿಯ ಹೆದ್ದಾರಿ ಬದಿಯ ಸರ್ವೀಸ್ ರಸ್ತೆಯ ಇಕ್ಕೆಲಗಳಲ್ಲಿ ನಿರ್ಮಿಸಲಾದ ಚರಂಡಿಯ ಅಂಚು ರಸ್ತೆಯಿಂದ ಎತ್ತರವಾಗಿದ್ದು, ರಸ್ತೆಗೆ ಬಿದ್ದ ಮಳೆ ನೀರು ಸರಾಗವಾಗಿ ಚರಂಡಿಯನ್ನು ಸೇರಲಾಗದೆ ತಗ್ಗು ಪ್ರದೇಶಕ್ಕೆ ರಸ್ತೆಯಿಂದಲೇ ಹರಿದು ಬಂದು ಉಪ್ಪಿನಂಗಡಿ ಪೇಟೆಯ ಶೆಣೈ ಆಸ್ಪತ್ರೆ ರಸ್ತೆಯಲ್ಲಿ ಸಂಗ್ರಹಣೆಯಾಗಿತ್ತು.


ಇದರಿಂದಾಗಿ ಈ ಭಾಗದ ವ್ಯಾಪಾರ ಮಳಿಗೆಗಳಿಗೆ ತೀವ್ರತರಹದ ಸಮಸ್ಯೆಗಳು ಉಂಟಾಯಿತು. ರಸ್ತೆಯಲ್ಲಿ ನಡೆದಾಡಲೂ ಆಗದಷ್ಟು ದೊಡ್ಡ ಪ್ರಮಾಣದಲ್ಲಿ ಮಳೆ ನೀರು ಹೆದ್ದಾರಿ ಭಾಗದಿಂದ ಹರಿದು ಬಂದು ಸಂಗ್ರಹಣೆಗೊಳ್ಳುತ್ತಿದ್ದರಿಂದ ಈ ಪ್ರದೇಶ ಜಲಾವೃತ ಪ್ರದೇಶವಾಗಿ ಮಾರ್ಪಾಡಾಯಿತು. ಬಗ್ಗೆ ಸ್ಥಳೀಯ ಆಡಳಿತಕ್ಕೆ ದೂರು ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲವೆಂದು ವರ್ತಕರು ದೂರಿದ್ದಾರೆ. ಹೆದ್ದಾರಿ ವಿಸ್ತರಣಾ ಕಾಮಗಾರಿಯ ವೇಳೆ ನಡೆಸಲಾದ ಕೆಲವೊಂದು ಸಣ್ಣಪುಟ್ಟ ಅವಾಂತರಗಳಿಂದಾಗಿ ರಸ್ತೆಗೆ ಬಿದ್ದ ಮಳೆ ನೀರು ಚರಂಡಿ ಸೇರಂತಾಗಿದ್ದು, ಅಲ್ಲಲ್ಲಿ ಚರಂಡಿ ಸೇರುವಂತೆ ಕಾಮಗಾರಿ ನಡೆಸಿದ್ದಲ್ಲಿ ಈ ಸಮಸ್ಯೆಯನ್ನು ನಿವಾರಿಸಬಹುದಾಗಿದೆ. ಇಲ್ಲದಿದ್ದಲ್ಲಿ ಮುಂದೆ ಮಳೆ ಬಂದಾಗ ಇದೇ ಸಮಸ್ಯೆ ಪುನರಾವರ್ತನೆಯಾಗಲಿದೆ.













