ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯಲ್ಲಿ ಪ್ರತಿಭಾ ತರಂಗಿಣಿ ಕಾರ್ಯಕ್ರಮ

0

ಪ್ರತಿಯೊಬ್ಬರೂ ಸ್ವಂತ ಸಾಮರ್ಥ್ಯವನ್ನು ಅರಿಯಬೇಕು: ಡಾ.ಎಂ.ನರಸಿಂಹ ಮೂರ್ತಿ


ಪುತ್ತೂರು: ನಾವಿಂದು ಕೃತಕ ಬುದ್ಧಿಮತ್ತೆಯ ಕಾಲದಲ್ಲಿದ್ದೇವೆ. ಎಐ ಎಂಬುದು ನಾವು ಮಾಹಿತಿಯನ್ನು ತುಂಬಿದ ವ್ಯವಸ್ಥೆಯೇ ಹೊರತು ಅದಾಗಿಯೇ ಹುಟ್ಟಿದಂತಹದ್ದಲ್ಲ. ಆದರೆ ನಾವಿಂದು ತುಂಬಿದ ಮಾಹಿತಿಯನ್ನು ನೋಡಿ ಬೆರಗಾಗುತ್ತಿದ್ದೇವೆಯೇ ವಿನಃ ನಮ್ಮೊಳಗಿನ ಶಕ್ತಿಯನ್ನು ಗುರುತಿಸುತ್ತಿಲ್ಲ. ಹಾಗಾಗಿ ಭಗವಂತ ನಮಗೆ ಕೊಟ್ಟಿರುವ ಸಾಮರ್ಥ್ಯವನ್ನು ವಿಮರ್ಶಿಸಬೇಕಲ್ಲದೆ, ನಮ್ಮ ಮುಂಡದ ಶಕ್ತಿಯ ಅಗಾಧತೆಯನ್ನು ಅರಿಯಬೇಕು ಎಂದು ದೆಹಲಿಯ ಜವಾಹರಲಾಲ್ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ.ಎಂ.ನರಸಿಂಹ ಮೂರ್ತಿ ಹೇಳಿದರು.ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವಿರ್ತಿತ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ಪ್ರತಿಭಾ ತರಂಗಿಣಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಗುರುವಾರ ಮಾತನಾಡಿದರು.

ಭಾರತೀಯ ಶಿಕ್ಷಣದಲ್ಲಿ ಪ್ರಶ್ನೋತ್ತರ ರೂಪದಲ್ಲಿ ಗುರು ಶಿಷ್ಯರಿಬ್ಬರೂ ಕಲಿಯುವಂತಹ ಸಂದರ್ಭವಿತ್ತು. ಆದರೆ ಆಧುನಿಕ ಶಿಕ್ಷಣ ಅಂತಹ ಅತ್ಯಪೂರ್ವ ವ್ಯವಸ್ಥೆಯನ್ನು ತೊಡೆದು ಹಾಕಿದೆ. ಹಾಗಾಗಿ ನಾವಿಂದು ಯಾವುದನ್ನೂ ವಿಶ್ಲೇಷಿಸದೆ ಸ್ವೀಕರಿಸುತ್ತಿದ್ದೇವೆ. ವಿಷಯವೊಂದಕ್ಕೆ ಇರಬಹುದಾದ ವಿವಿಧ ಸಾಧ್ಯತೆಗಳ ಕುರಿತಾಗಿ ಯೋಚಿಸದೆ ಇರುವುದನ್ನು ಇದ್ದ ಹಾಗೆ ಮಾತ್ರ ಸ್ವೀಕರಿಸುವ ಮನೋಧರ್ಮ ಬೆಳೆಸಿಕೊಳ್ಳುತ್ತಾ ಯಾಂತ್ರೀಕೃತ ಬದುಕನ್ನು ಸಾಗಿಸುತ್ತಿದ್ದೇವೆ ಎಂದರು.ಇಂದು ಪಾಶ್ಚಿಮಾತ್ಯ ವಿಚಾರಧಾರೆಗಳೆಡೆಗೆ ನಾವು ಕುರುಡಾಗಿ ಶರಣಾಗುತ್ತಿದ್ದೇವೆ. ಹಾಗಾಗಿ ಪಾಶ್ಚಿಮಾತ್ಯರು ನಮ್ಮನ್ನು ಮೂರ್ಖರನ್ನಾಗಿಸುತ್ತಲೇ ಇದ್ದಾರೆ. ಎಲ್ಲಿಯವರೆಗೆ ನಾವು ನಮ್ಮ ಬೌದ್ಧಿಕ ಸಾಮರ್ಥ್ಯವನ್ನು ವಿಕಾಸ ಮಾಡಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ನಾವು ದಾಸ್ಯದಲ್ಲೇ ಇರುತ್ತೇವೆ. ಹಾಗಾಗಿ ಜ್ಞಾನವನ್ನು ವಿಜ್ಞಾನ ಸಮೇತವಾಗಿ ವಿಮರ್ಶಿಸುವ ಗುಣವನ್ನು ನಾವೆಲ್ಲ ಬೆಳೆಸಿಕೊಳ್ಳಬೇಕಾಗಿದೆ ಎಂದರು.


ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಂಸ್ಥೆಯ ಹಿರಿಯ ವಿದ್ಯಾರ್ಥಿನಿ ಶ್ರೀಲಕ್ಷ್ಮಿ ಎಸ್.ಸಿ. ಅವರು ಮಾತನಾಡಿ ರಾಷ್ಟಭಕ್ತಿ, ಸಂಸ್ಕಾರ ಮೂಡಿಸುವಲ್ಲಿ ಅಂಬಿಕಾ ಸಂಸ್ಥೆಯ ಪಾತ್ರ ದೊಡ್ಡದು. ಸಂಸ್ಕೃತಿಯನ್ನು ಅರಿಯುವಲ್ಲಿ, ದೇಶಕ್ಕಾಗಿ, ಸಮಾಜಕ್ಕಾಗಿ ಬದುಕಬೇಕೆನ್ನುವ ಭಾವನೆಯನ್ನು ಬೆಳೆಸಿಕೊಳ್ಳುವಲ್ಲಿ ಅಂಬಿಕಾ ಅತ್ಯುತ್ತಮ ಅಡಿಪಾಯವನ್ನು ಹಾಕಿಕೊಡುತ್ತದೆ ಎಂದು ಹೇಳಿದರು. ಮತ್ತೋರ್ವ ಅತಿಥಿ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಸ್ವಾತಿ ಜೆ ರೈ ಮಾತನಾಡಿ ಸಮಾಜಕ್ಕೆ ಅತ್ಯುತ್ತಮ ನಾಗರಿಕರನ್ನು ಒದಗಿಸಿಕೊಡುವ ಜವಾಬ್ದಾರಿ ಹೆತ್ತವರಿಗಿದೆ. ಹಾಗಾಗಿ ನಾವು ಮಕ್ಕಳನ್ನು ಹೇಗೆ ಬೆಳೆಸುತ್ತೇವೆಂಬುದು ಮುಖ್ಯ. ಮಕ್ಕಳು ನಮ್ಮನ್ನು ನೋಡುತ್ತಾ ಕಲಿಯುತ್ತಾರೆಂಬುದನ್ನು ನಾವು ತಿಳಿದಿರಬೇಕು. ಹಾಗಾಗಿ ಮಕ್ಕಳು ಬೆಳೆಯುವ ಕಾಲದಲ್ಲಿ ದೇಶಭಕ್ತಿ, ಜವಾಬ್ದಾರಿ, ಅನುಭವದ ಆಧಾರದಲ್ಲಿ ಮಕ್ಕಳು ಬೆಳೆಯುವಂತಾಗಬೇಕು. ಈ ಹಿನ್ನೆಲೆಯಲ್ಲಿ ಅಂಬಿಕಾ ಸಂಸ್ಥೆ ದೊಡ್ಡ ಕೆಲಸ ಮಾಡುತ್ತಿದೆ ಎಂದರು.

LEAVE A REPLY

Please enter your comment!
Please enter your name here