







ವಿದ್ಯಾರ್ಥಿ ಜೀವನದಲ್ಲಿ ಶಿಸ್ತು ಇರಲಿ: ಸೈಮನ್ ಸಿ. ಎ.


ಪುತ್ತೂರು: ವಿವೇಕಾನಂದ ಕಾನೂನು ಮಹಾವಿದ್ಯಾಲಯದ 2026-27ರ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನೆ ಕಾರ್ಯಕ್ರಮ ಅ.15ರಂದು ನಡೆಯಿತು. ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಪಶ್ಚಿಮ ವಲಯದ ಪೊಲೀಸ್ ವರಿಷ್ಠಾಧಿಕಾರಿ ಸೈಮನ್ ಸಿ. ಎ. ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿ ಜೀವನದ ಯಶಸ್ಸಿಗೆ ದೂರದೃಷ್ಟಿತ್ವ ಮತ್ತು ಸಕಾರಾತ್ಮಕ ಮನೋಭಾವ ಅತ್ಯಂತ ಮುಖ್ಯವಾಗಿದೆ. ಪಠ್ಯವನ್ನು ಕೇವಲ ಪರೀಕ್ಷೆಗಳಿಗಲ್ಲದೆ, ಅದರ ಅರ್ಥವನ್ನು ಗ್ರಹಿಸಿ ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನ ಮಾಡಬೇಕು. ನಿರಂತರ ಪರಿಶ್ರಮ, ಅಭ್ಯಾಸ, ಶಿಸ್ತು ಮತ್ತು ಏಕತೆಯ ಮನೋಭಾವ ನಮ್ಮನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತವೆ. ಸಮಾಜವು ವಿದ್ಯಾವಂತರಿಂದ ಕೇವಲ ಪದವಿ ಅಲ್ಲ, ಉತ್ತಮ ಮೌಲ್ಯಗಳು, ಸೇವಾ ಮನೋಭಾವ ಮತ್ತು ಸಕಾರಾತ್ಮಕ ಬದಲಾವಣೆಯನ್ನು ನಿರೀಕ್ಷಿಸುತ್ತದೆ. ಪ್ರತಿಯೊಂದು ಚಟುವಟಿಕೆಯಲ್ಲೂ ಸಕ್ರಿಯವಾಗಿ ಭಾಗವಹಿಸಿ, ತಂಡದೊಂದಿಗೆ ಕೆಲಸ ಮಾಡುವ ಗುಣವನ್ನು ಬೆಳೆಸಿಕೊಳ್ಳಿ. ಇಂತಹ ಅನುಭವಗಳು ನಿಮ್ಮ ವ್ಯಕ್ತಿತ್ವ ವಿಕಸನಕ್ಕೆ ಭದ್ರ ಅಡಿಪಾಯವಾಗುತ್ತವೆ. ವಿದ್ಯಾರ್ಥಿ ಸಂಘವು ನಾಯಕತ್ವ ಮತ್ತು ವೈಜ್ಞಾನಿಕ ಮನೋಭಾವವನ್ನು ಬೆಳೆಸುವ ವೇದಿಕೆಯಾಗಲಿ. ವಿದ್ಯಾರ್ಥಿ ಜೀವನದಲ್ಲಿ ಶಿಸ್ತು ರೂಪಿಸಿಕೊಂಡರೆ ಭವಿಷ್ಯದ ಬದುಕು ಉತ್ತಮವಾಗಿರುತ್ತದೆ ಎಂದು ಹೇಳಿ, ನೂತನವಾಗಿ ರಚನೆಯಾದ ವಿದ್ಯಾರ್ಥಿ ಸಂಘಕ್ಕೆ ಶುಭ ಹಾರೈಸಿದರು.




ಮುಖ್ಯ ಅತಿಥಿ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಹಿರಿಯ ವಿದ್ಯಾರ್ಥಿ ಹಾಗೂ ಮಂಗಳೂರು ವಕೀಲರ ಸಂಘದ ಅಧ್ಯಕ್ಷರಾದ ಜಗದೀಶ್ ಕೆ. ಶೇಣವ ಮಾತನಾಡಿ, ಮಾನವ ಜೀವನದ ಬೇರೆ ಬೇರೆ ಕಾಲಘಟ್ಟವನ್ನು ಗಮನಿಸಿದರೆ, ಮಾನವನ ಜೀವಿತಾವಧಿಯಲ್ಲಿ ವಿದ್ಯಾರ್ಥಿ ಜೀವನವೇ ಸುವರ್ಣ ಯುಗವಾಗಿರುತ್ತದೆ. ಆ ಅವಧಿಯಲ್ಲಿ ನಿಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸಲು ಅತ್ಯುತ್ತಮ ಸಮಯವಾಗಿದೆ. ಯಾವುದೇ ಕೆಟ್ಟ ಚಟಗಳಿಗೆ ಬಲಿಯಾಗದೇ ಉತ್ತಮ ರೀತಿಯಲ್ಲಿ ಜೀವನ ರೂಪಿಸಿಕೊಳ್ಳಿ. ವಿದ್ಯಾರ್ಥಿ ಸಂಘ ಸೇರಿದಂತೆ ಕಾಲೇಜಿನ ವಿವಿಧ ವೇದಿಕೆಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಂಡು ಎಲ್ಲಾ ರೀತಿಯ ಕೌಶಲ್ಯಗಳನ್ನು ಬೆಳೆಸಿಕೊಂಡು ವಕೀಲ ವೃತ್ತಿಗೆ ಬರಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷರಾದ ಸುರೇಂದ್ರ ಕಿಣಿ ಜಿ. ಮಾತನಾಡಿ, ವಿದ್ಯಾರ್ಥಿ ದೆಸೆಯಲ್ಲಿ ನಾಯಕತ್ವ ಗುಣಗಳನ್ನು ಅರಿತುಕೊಂಡಾಗ ಭವಿಷ್ಯದಲ್ಲಿ ಸಮಾಜದಲ್ಲಿ ಗುರುತಿಸುವ ವ್ಯಕ್ತಿಯಾಗಿ ಬೆಳೆಯಲು ಸಾಧ್ಯ. ವಿದ್ಯಾರ್ಥಿ ದಿಸೆಯಲ್ಲಿಯೇ ಇಂತಹ ವಿದ್ಯಾರ್ಥಿ ಸಂಘದ ಮೂಲಕ ನಾಯಕತ್ವ ಬೆಳೆಯಲಿ. ಅಂತಹ ಅವಕಾಶವನ್ನು ಈ ವಿದ್ಯಾರ್ಥಿ ಸಂಘದ ಮೂಲಕ ನೀವೆಲ್ಲ ಪಡೆದು ಅತ್ಯುತ್ತಮ ನಾಯಕರುಗಳಾಗಿ ರೂಪುಗೊಳ್ಳಿ ಎಂದು ಕರೆ ನೀಡಿದರು. ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಅಕ್ಷತಾ ಎ. ಪಿ. ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.

ವೇದಿಕೆಯಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಕಾನೂನು ಅಧ್ಯಯನ ವಿಭಾಗದ ನಿರ್ದೇಶಕರಾದ ಡಾ. ಬಿ.ಕೆ. ರವೀಂದ್ರ, ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಲಕ್ಷ್ಮೀಕಾಂತ ರೈ ಅನಿಕೂಟೇಲ್, ವಿದ್ಯಾರ್ಥಿ ಸಂಘದ ಜೊತೆ ಕಾರ್ಯದರ್ಶಿ ಶ್ರದ್ದಾ ಪಂಡಿತ್ ಉಪಸ್ಥಿತರಿದ್ದರು. ವಿದ್ಯಾರ್ಥಿ ಸಂಘದ ಅಧ್ಯಕ್ಷ ಮೋಕ್ಷಿತ್ ಸ್ವಾಗತಿಸಿ, ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಆಕಾಶ್ ಕೆ. ಯು. ವಂದಿಸಿದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿ ವೈಷ್ಣವಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಸದಸ್ಯರು, ವಕೀಲರು, ಶಿಕ್ಷಕ-ರಕ್ಷಕ ಸಂಘದ ಸದಸ್ಯರು, ಹಿರಿಯ ವಿದ್ಯಾರ್ಥಿ ಸಂಘದ ಸದಸ್ಯರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.










