







ನಾಳೆ ಅ.17ಕ್ಕೆ 150 ಜೊತೆ ಕೋಣಗಳ ಮೆರವಣಿಗೆಗೆ ಪುತ್ತೂರಿನಿಂದ ಚಾಲನೆ


ಪುತ್ತೂರು: ಮೈಸೂರು ದಸರಾದಲ್ಲಿ ನಡೆಯಲಿರುವ ಕಂಬಳಕ್ಕೆ ಪುತ್ತೂರಿನಿಂದ 150 ಜೊತೆ ಕೋಣಗಳು ತೆರಳಲಿದ್ದು, ಅ.17ರಂದು ಬೆಳಿಗ್ಗೆ 8 ಗಂಟೆಗೆ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಿಂದ ಕೋಣಗಳ ಯಜಮಾನರೊಂದಿಗೆ ಬ್ಯಾಂಡ್ ವಾದ್ಯಗಳ ವಾಹನಗಳ ಮೂಲಕ ಪ್ರಯಾಣ ಆರಂಭವಾಗಲಿದೆ. ಕೋಣಗಳ ಪ್ರಯಾಣಕ್ಕೆ ಅಗತ್ಯವಿರುವ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದರು.
ಪುತ್ತೂರಿನಲ್ಲಿ ಪತ್ರಿಕಾ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೋಣಗಳ ಯಜಮಾನರು ತಮ್ಮ ಕೋಣಗಳೊಂದಿಗೆ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗಕ್ಕೆ ಆಗಮಿಸುವಂತೆ ತಿಳಿಸಲಾಗಿದೆ. ಅಲ್ಲಿ ಉಪಾಹಾರದ ವ್ಯವಸ್ಥೆ ಮಾಡಲಾಗಿದ್ದು, ಬೆಳಿಗ್ಗೆ 8.30ರಿಂದ 9 ಗಂಟೆಯೊಳಗೆ ಪ್ರಯಾಣ ಆರಂಭಿಸಲಾಗುವುದು. ಮಧ್ಯಾಹ್ನ 1 ಗಂಟೆಗೆ ಕುಶಾಲನಗರ ತಲುಪಿ, ಕೋಣಗಳಿಗೆ ಆಹಾರ ನೀಡಿ ವಿಶ್ರಾಂತಿಗೆ ವ್ಯವಸ್ಥೆ ಮಾಡಲಾಗುತ್ತದೆ. ಬಳಿಕ ಮಧ್ಯಾಹ್ನ 2.30ರ ವೇಳೆಗೆ ಅಲ್ಲಿಂದ ಮುಂದಿನ ಪ್ರಯಾಣ ಆರಂಭಿಸಲಾಗುವುದು ಎಂದರು. ಕಾವೇರಿ ಜಾತ್ರೆ ಸೇರಿದಂತೆ ಸ್ಥಳೀಯ ಧಾರ್ಮಿಕ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಹಾಗೂ ಸುಗಮ ಸಂಚಾರಕ್ಕೆ ಅವಕಾಶವಾಗುವಂತೆ ಕೋಣಗಳ ಪ್ರಯಾಣವನ್ನು ಯೋಜಿಸಲಾಗಿದೆ ಎಂದು ಹೇಳಿದರು.
ಕುಶಾಲನಗರದಲ್ಲಿ ಪಿಲಿನಲಿಕೆ ಸಂಭ್ರಮ:
ಕುಶಾಲನಗರದಲ್ಲಿ ಕೋಣಗಳ ವಿಶ್ರಾಂತಿಗಾಗಿ ಸುಮಾರು 20 ಸಾವಿರ ಚದರ ಅಡಿ ವಿಸ್ತೀರ್ಣದ ಬೃಹತ್ ಪೆಂಡಾಲ್ ನಿರ್ಮಿಸಲಾಗಿದೆ. ಒಂದೇ ಬಾರಿಗೆ 50 ಕೋಣಗಳನ್ನು ವಾಹನಗಳಿಂದ ಇಳಿಸಲು ಅನುಕೂಲವಾಗುವಂತೆ ರ್ಯಾಂಪ್ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಕುಶಾಲನಗರದ ಜನರ ಬೇಡಿಕೆಯಂತೆ ಪುತ್ತೂರಿನ ಹುಲಿವೇಷ ತಂಡದಿಂದ ಪಿಲಿನಲಿಕೆ ಪ್ರದರ್ಶನ ಆಯೋಜಿಸಲು ಯೋಜಿಸಲಾಗಿದೆ. ಬೆಳಿಗ್ಗೆ 9.30ರಿಂದ 10 ಗಂಟೆಯ ವೇಳೆಗೆ ಕಾರ್ಯಕ್ರಮ ಆರಂಭವಾಗುವ ನಿರೀಕ್ಷೆಯಿದೆ. ಬ್ಯಾಂಡ್ ವಾದ್ಯಗಳೊಂದಿಗೆ ಮಡಿಕೇರಿ ಹಾಗೂ ಕುಶಾಲನಗರ ಭಾಗದ ವಿವಿಧ ಸಂಘಟನೆಗಳು ಪಾಲ್ಗೊಳ್ಳಲಿದ್ದು, ಸುಮಾರು 7ರಿಂದ 8 ಸಾವಿರ ಜನರು ಸೇರಿ ಕೋಣಗಳನ್ನು ಹಬ್ಬದ ವಾತಾವರಣದಲ್ಲಿ ಸ್ವಾಗತಿಸುವ ನಿರೀಕ್ಷೆಯಿದೆ. ಕೊಡಗಿನ ಜನರು ಕಂಬಳವನ್ನು ಆತ್ಮೀಯವಾಗಿ ಸ್ವಾಗತಿಸಲು ಸಿದ್ಧತೆ ನಡೆಸಿದ್ದಾರೆ ಎಂದು ಅಶೋಕ್ ಕುಮಾರ್ ರೈ ತಿಳಿಸಿದರು.
ವ್ಯವಸ್ಥಿತ ಪ್ರಯಾಣಕ್ಕೆ ಪೊಲೀಸ್ ಬೆಂಗಾವಲು:
ಕೋಣಗಳ ಪ್ರಯಾಣದ ವೇಳೆ ಯಾವುದೇ ಅಡಚಣೆಯಾಗದಂತೆ ಪೊಲೀಸ್ ಇಲಾಖೆಗೆ ಅಗತ್ಯ ಪ್ರೋಟೋಕಾಲ್ ಹಾಗೂ ವ್ಯವಸ್ಥೆಗಳನ್ನು ಕಲ್ಪಿಸಲು ಸೂಚಿಸಲಾಗಿದೆ. ಪ್ರಯಾಣದ ಸಂದರ್ಭದಲ್ಲಿ ಎರಡು-ಮೂರು ಯುವಕರ ತಂಡಗಳು ಜತೆಯಲ್ಲಿರಲಿದ್ದು, ವಾಹನಗಳಲ್ಲಿ ತಾಂತ್ರಿಕ ಸಮಸ್ಯೆ ಎದುರಾದರೆ ಪರ್ಯಾಯ ವಾಹನಗಳ ವ್ಯವಸ್ಥೆಯನ್ನೂ ಮಾಡಲಾಗಿದೆ. ಪಶುವೈದ್ಯರು ಹಾಗೂ ಪೊಲೀಸ್ ಬೆಂಗಾವಲು ವಾಹನಗಳು ಜತೆಯಲ್ಲಿರಲಿವೆ. ಸಂಚಾರ ದಟ್ಟಣೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ, ಕೋಣಗಳ ಸುರಕ್ಷಿತ ಪ್ರಯಾಣಕ್ಕೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.
ಐದು ಲೋಡು ಬೈಹುಲ್ಲು; ಸಾವಿರಾರು ಮಂದಿಗೆ ಊಟ
ಕೋಣಗಳಿಗೆ ಅಗತ್ಯವಿರುವ ಆಹಾರ ಹಾಗೂ ಕುಡಿಯುವ ನೀರನ್ನು ಅವುಗಳ ಯಜಮಾನರೇ ತರಲಿದ್ದಾರೆ. ಕುಶಾಲನಗರದಲ್ಲಿ ಕೋಣಗಳ ಮೈಗೆ ನೀರು ಹಾಕಲು ಹಾಗೂ ಅವುಗಳಿಗೆ ಹೆಚ್ಚುವರಿ ನೀರಿನ ವ್ಯವಸ್ಥೆ ಮಾಡಲಾಗಿದೆ. ಕೋಣಗಳ ಆರೈಕೆಗೆ ಐದು ಲೋಡು ಬೈಹುಲ್ಲು ತರಿಸಲಾಗಿದ್ದು, ಆಹಾರ ತಯಾರಿಸಲು ಗ್ಯಾಸ್ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.
ಕುಶಾಲನಗರದಲ್ಲಿ ಸುಮಾರು ಐದರಿಂದ ಆರು ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಸ್ಥಳೀಯ ಸಂಘಟನೆಗಳು ಒಗ್ಗೂಡಿ ಈ ಕಾರ್ಯಕ್ರಮವನ್ನು ಹಬ್ಬದ ರೀತಿಯಲ್ಲಿ ಆಚರಿಸಲು ಸಿದ್ಧತೆ ನಡೆಸಿವೆ. ಕಂಬಳದ ಕೋಣಗಳಿಗೆ ಕೊಡಗಿನ ಜನರು ನೀಡುತ್ತಿರುವ ಆತ್ಮೀಯ ಸ್ವಾಗತಕ್ಕೆ ಅಭಿನಂದನೆ ಸಲ್ಲಿಸುತ್ತೇವೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.












