







ಪುತ್ತೂರು: ಪುತ್ತೂರಿನ ರೈಲು ನಿಲ್ದಾಣದ ಸಮೀಪದಲ್ಲಿರುವ ಪುರಾತನ ಕಾರಣಿಕ ಕ್ಷೇತ್ರವಾದ ಲಕ್ಷ್ಮೀದೇವಿ ಬೆಟ್ಟದ ಶ್ರೀಮಹಾಲಕ್ಷ್ಮೀ ದೇವಸ್ಥಾನದಲ್ಲಿ ವೈಭವದಿಂದ ನಡೆಯುತ್ತಿರುವ ನವರಾತ್ರಿ ಉತ್ಸವದ ಎಂಟನೇ ದಿನವಾದ ಅ.18ರಂದು ಸಾಮೂಹಿಕ ಚಂಡಿಕಾಯಾಗ ಶ್ರದ್ಧಾಭಕ್ತಿಯಿಂದ ನೆರವೇರಿತು.
ವೇ.ಮೂ. ಶ್ರೀಕೃಷ್ಣ ಉಪಾಧ್ಯಾಯ ಅವರ ನೇತೃತ್ವದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವು ಬೆಳಿಗ್ಗೆ ಗಣಪತಿ ಹೋಮದೊಂದಿಗೆ ಆರಂಭಗೊಂಡಿತು. ಬಳಿಕ ಸಾಮೂಹಿಕ ಚಂಡಿಕಾಯಾಗ ನೆರವೇರಿತು. ಈ ಸಂದರ್ಭದಲ್ಲಿ ಚಂದ್ರಶೇಖರ ಮೂಡಾಯೂರು ಬಳಗದವರಿಂದ ಸ್ಯಾಕ್ಸೋಫೋನ್ ವಾದನ ಕಾರ್ಯಕ್ರಮ ನಡೆಯಿತು.ಪ್ರಸಿದ್ಧ ಸ್ತೋತ್ರ ಗಾಯಕ ಹಾಗೂ ಧಾರ್ಮಿಕ ಉಪಾಸಕ ಉಡುಪಿಯ ಸುಬ್ರಹ್ಮಣ್ಯ ಕಾರಂತ ಅವರ ವಿಶಿಷ್ಟ ಕಂಠಸಿರಿಯಲ್ಲಿ ಮೂಡಿಬಂದ ದೇವಿ ಪಾರಾಯಣ ಮತ್ತು ಚಂಡಿಕಾ ಪಾರಾಯಣವು ಯಾಗದಲ್ಲಿ ಪಾಲ್ಗೊಂಡಿದ್ದ ಭಕ್ತರನ್ನು ಭಕ್ತಿಭಾವದಲ್ಲಿ ಮಿಂದೇಳುವಂತೆ ಮಾಡಿತು.
ಮಧ್ಯಾಹ್ನ ಚಂಡಿಕಾಯಾಗದ ಪೂರ್ಣಾಹುತಿ, ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು. ಅಪರಾಹ್ನ ವಿಶ್ವಕಲಾನಿಕೇತನ ಇನ್ಸ್ಟಿಟ್ಯೂಟ್ ಆಫ್ ಆರ್ಟ್ ಆ್ಯಂಡ್ ಕಲ್ಚರ್ನ ವಿದುಷಿ ನಯನಾ ರೈ ಮತ್ತು ವಿದುಷಿ ಸ್ವಸ್ತಿಕ ಆರ್. ಶೆಟ್ಟಿ ಅವರ ಶಿಷ್ಯೆಯರಿಂದ ಭರತನಾಟ್ಯ ಪ್ರದರ್ಶನ ನಡೆಯಿತು. ನವರಾತ್ರಿ ಉತ್ಸವದ ಅಂಗವಾಗಿ ನಡೆದ ಚಂಡಿಕಾಯಾಗದಲ್ಲಿ ಸಾವಿರಾರು ಭಕ್ತಾದಿಗಳು ಭಾಗವಹಿಸಿ, ವಿವಿಧ ಸೇವೆಗಳನ್ನು ಸಲ್ಲಿಸಿ ದೇವಿಯ ಕೃಪೆಗೆ ಪಾತ್ರರಾದರು.
ಅ.20 ತುಲಾಭಾರ ಸೇವೆ, ನವರಾತ್ರಿ ಸಂಪನ್ನ:
ನವರಾತ್ರಿ ಉತ್ಸವದ ಒಂಬತ್ತನೇ ದಿನವಾದ ಅ. 19ರಂದು ಸಂಜೆ ಆಯುಧ ಪೂಜೆ ನಡೆಯಲಿದೆ. ಉತ್ಸವದ ಕೊನೆಯ ದಿನವಾದ ಅ. 20ರಂದು ಮಧ್ಯಾಹ್ನ ತುಲಾಭಾರ ಸೇವೆ ಹಾಗೂ ಮಹಾಪೂಜೆ, ಸಂಜೆ ಭಜನಾ ಕಾರ್ಯಕ್ರಮ ಮತ್ತು ರಾತ್ರಿ ಮಹಾಪೂಜೆ ನಡೆಯಲಿದ್ದು, ಬಳಿಕ ಪ್ರಸಾದ ವಿತರಣೆಯೊಂದಿಗೆ ನವರಾತ್ರಿ ಉತ್ಸವ ಸಂಪನ್ನಗೊಳ್ಳಲಿದೆ ಎಂದು ಕ್ಷೇತ್ರದ ಧರ್ಮದರ್ಶಿ ಐತ್ತಪ್ಪ ಸಪಲ್ಯ ತಿಳಿಸಿದ್ದಾರೆ.












