ನಿವೃತ್ತ ಮುಖ್ಯಗುರು ಶ್ರೀನಿವಾಸ್ ಹೆಚ್.ಬಿ ಹುಟ್ಟುಹಬ್ಬ ಪ್ರಯುಕ್ತ ಬ್ರಹ್ಮಾವರ ಬೋಟ್ ಹೌಸ್‌ನಲ್ಲಿ ಗುರು-ಶಿಷ್ಯರ ಸಮ್ಮಿಲನ

0

ಇಬ್ಬರು ಸಾಧಕ ಹಿರಿಯ ವಿದ್ಯಾರ್ಥಿಗಳಿಗೆ ಸನ್ಮಾನ

ಶ್ರೀನಿವಾಸ್ ಎಚ್.ಬಿ ಶಿಷ್ಯಂದಿರು ಮತ್ತು ಅಭಿಮಾನಿಗಳಿಂದ ದಿನಪೂರ್ತಿ ಸಂಭ್ರಮ, ವಿವಿಧ ಕಾರ್ಯಕ್ರಮ

ಪುತ್ತೂರು: ಸರ್ವೆ ಎಸ್‌ಜಿಎಂ ಪ್ರೌಢ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಶ್ರೀನಿವಾಸ್ ಎಚ್.ಬಿ ಅವರ 66ನೇ ಹುಟ್ಟು ಹಬ್ಬದ ಪ್ರಯುಕ್ತ ಹಿರಿಯ ವಿದ್ಯಾರ್ಥಿ ದಿನಾಚರಣೆ ಮತ್ತು ಸಾಧಕ ಹಿರಿಯ ವಿದ್ಯಾರ್ಥಿಗಳಿಗೆ ಗೌರವ ಪುರಸ್ಕಾರ `ಗುರು ಶಿಷ್ಯರ ಸಮ್ಮಿಲನ’ ಅ.18ರಂದು ಉಡುಪಿ ಜಿಲ್ಲೆಯ ಬ್ರಹ್ಮಾವರ ಸಿತಾರಾ ಬೋಟ್ ಹೌಸ್‌ನಲ್ಲಿ ನಡೆಯಿತು.ಮುಂಜಾನೆ ಭಕ್ತಕೋಡಿ ಜಂಕ್ಷನ್‌ನಲ್ಲಿ ಸುರೇಶ್ ಎಸ್.ಡಿ ಅವರು ತೆಂಗಿನಕಾಯಿ ಒಡೆಯುವ ಮೂಲಕ ಪ್ರವಾಸಕ್ಕೆ ಚಾಲನೆ ನೀಡಿದರು.

ಹೆದ್ದಾರಿ ಬದಿಯಲ್ಲಿ ಶಿಷ್ಯನಿಂದ ಅಪರೂಪದ ಹುಟ್ಟುಹಬ್ಬ!
ಶ್ರೀನಿವಾಸ್ ಹೆಚ್.ಬಿ ಮತ್ತು ಶಿಷ್ಯ ಬಳಗ ಬಸ್ ಮೂಲಕ ಬ್ರಹ್ಮಾವರಕ್ಕೆ ತೆರಳುತ್ತಿರುವ ವಿಷಯ ತಿಳಿದ ಶ್ರೀನಿವಾಸ್ ಹೆಚ್.ಬಿ ಅವರ ಶಿಷ್ಯ ಮೋಹನ್ ಕುಮಾರ್ ಎಂಬವರು ಮಂಗಳೂರು-ಉಡುಪಿ ರಾಷ್ಟ್ರೀಯ ಹೆದ್ದಾರಿಯ ಮುಕ್ಕ ಎಂಬಲ್ಲಿ ಹೆದ್ದಾರಿ ಬದಿಯಲ್ಲೇ ಹುಟ್ಟುಹಬ್ಬದ ಶುಭ ಕೋರಲು ವ್ಯವಸ್ಥೆ ಮಾಡಿದ್ದರು. ಶ್ರೀನಿವಾಸ್ ಹೆಚ್.ಬಿ ಅವರನ್ನು ಶಾಲು ಹೊದಿಸಿ, ಪೇಟ ತೊಡಿಸಿ ಸನ್ಮಾನಿಸಿದ ಅವರು ಅಲ್ಲೇ ಕೇಕ್ ಕಟ್ ಮಾಡುವ ಮೂಲಕ ತನ್ನ ನೆಚ್ಚಿನ ಗುರುವಿನ ಹುಟ್ಟುಹಬ್ಬವನ್ನು ಸ್ಮರಣೀಯವಾಗಿಸುವ ರೀತಿಯಲ್ಲಿ ಆಚರಿಸಿಕೊಂಡರು. ನಮಗೆ ಒಳ್ಳೆಯ ಶಿಕ್ಷಣ, ಸಂಸ್ಕಾರ ನೀಡಿ ಈ ಮಟ್ಟಕ್ಕೆ ಬೆಳೆಸಿದ ಗುರುವಿಗೆ ಇಷ್ಟಾದರೂ ಗೌರವ ಕೊಡಲು ಸಾಧ್ಯವಾಗಿರುವುದಕ್ಕೆ ಅಪಾರ ಖುಷಿಯಿದೆ ಎಂದು ಮೋಹನ್ ಕುಮಾರ್ ಹೇಳಿದರು.

ನದಿಗೆ ಮೀನು ಬಿಡುವ ಮೂಲಕ ಚಾಲನೆ:
ಶ್ರೀನಿವಾಸ್ ಹೆಚ್.ಬಿ ಅವರು ಬ್ರಹ್ಮಾವರ ಸೀತಾ ನದಿಗೆ ಮೀನುಗಳನ್ನು ಬಿಡುವ ಮೂಲಕ ಜಲವಿಹಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಸಿತಾರ ಬೋಟ್‌ನಲ್ಲಿ ಜೆರ್ಸಿಯನ್ನು ಬಿಡುಗಡೆ ಮಾಡಲಾಯಿತು. ನಿವೃತ್ತ ಸೈನಿಕ ಜಯಕುಮಾರ್ ಹಾಗೂ ಚಲನಚಿತ್ರ ನಟ ರವಿಸ್ನೇಹಿತ್ ಪ್ರವಾಸದ ಆತಿಥ್ಯವನ್ನು ವಹಿಸಿದ್ದರು.



ಪ್ರತಿ ವರ್ಷದಂತೆ ಈ ಬಾರಿಯೂ ಹಿರಿಯ ವಿದ್ಯಾರ್ಥಿಗಳೆಲ್ಲರೂ ಒಂದೆಡೆ ಸೇರಿ ಆಯೋಜಿಸಿದ್ದ ಈ ಕಾರ್ಯಕ್ರಮವು ಕೇವಲ ಹುಟ್ಟುಹಬ್ಬದ ಆಚರಣೆಯಷ್ಟೇ ಅಲ್ಲದೆ, ಗುರು ಮತ್ತು ಶಿಷ್ಯರ ನಡುವಿನ ಪವಿತ್ರ ಬಾಂಧವ್ಯಕ್ಕೆ ಸಾಕ್ಷಿಯಾಯಿತು. ಸಿತಾರಾ ಬೋಟ್ ಹೌಸ್‌ನಲ್ಲಿ ಶ್ರೀನಿವಾಸ್ ಹೆಚ್.ಬಿ ಹುಟ್ಟು ಹಬ್ಬ ಸಮಾರಂಭದ ಅಧ್ಯಕ್ಷತೆಯನ್ನು ಕಲ್ಲಮ ಶ್ರೀ ಗುರು ರಾಘವೇಂದ್ರ ಮಠದ ವ್ಯವಸ್ಥಾಪಕರಾದ ಡಾ.ಸೀತರಾಮ ಭಟ್ ಕಲ್ಲಮ ವಹಿಸಿದ್ದರು. ಜಯರಾಜ್ ಸುವರ್ಣ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.



ನಿವೃತ್ತ ಸೈನಿಕರಾದ ಲೋಕೇಶ್ ಸುವರ್ಣ ಹಾಗೂ ಜಯಕುಮಾರ್, ಭಕ್ತಕೋಡಿ ಎಸ್‌ಜಿಎಂ ಪ್ರೌಢಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುರೇಶ್ ಎಸ್.ಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಿಷ್ಯವರ್ಗ ಹಾಗೂ ಅಭಿಮಾನಿ ಬಳಗದಿಂದ ಗೌರವ ಸ್ವೀಕರಿಸಿದ ನಿವೃತ್ತ ಮುಖ್ಯಗುರು ಶ್ರೀನಿವಾಸ್ ಹೆಚ್.ಬಿ ಮಾತನಾಡಿ ಇರುವಷ್ಟು ದಿನ ನಾವೆಲ್ಲಾ ಸುಖ, ಸಂತೋಷದಿಂದ ಕಾಲ ಕಳೆಯಬೇಕು, ನನ್ನ ಪ್ರೀತಿಯ ಶಿಷ್ಯಂದಿರು ಹಾಗೂ ಹಿತೈಷಿಗಳು ಸೇರಿಕೊಂಡು ಪ್ರತೀ ವರ್ಷ ನನ್ನ ಹುಟ್ಟುಹಬ್ಬ ಆಚರಿಸುತ್ತಿದ್ದು ಇದಕ್ಕಿಂತ ಮಿಗಿಲಾದ ಖುಷಿ, ಗೌರವ ಇನ್ನೊಂದಿಲ್ಲ ಎಂದು ಹೇಳಿದರು. ನನ್ನ ಹುಟ್ಟಿದ ದಿನವನ್ನು ಹಿರಿಯ ವಿದ್ಯಾರ್ಥಿಗಳ ಗೌರವ ದಿನವನ್ನಾಗಿ ಈ ಹಿಂದೆಯೇ ಘೋಷಣೆ ಮಾಡಲಾಗಿದ್ದು ಅದರಂತೆ ಪ್ರತೀ ವರ್ಷ ಹಿರಿಯ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಿ ಸನ್ಮಾನಿಸಲಾಗುತ್ತಿದೆ, ಈ ರೀತಿ ಗುರುವಿನ ಹುಟ್ಟುಹಬ್ಬವನ್ನು ಶಿಷ್ಯಂದಿರುವ ಸೇರಿ ಪ್ರತೀ ವರ್ಷ ಪ್ರವಾಸ ಆಯೋಜನೆ ಮಾಡಿಕೊಂಡು ಆಚರಿಸುತ್ತಾ ಬರುತ್ತಿರುವುದು ದೇಶದಲ್ಲೇ ಪ್ರಥಮ ಎಂದು ಮಾಧ್ಯಮಗಳಲ್ಲೂ ವರದಿಯಾಗಿದೆ, ಇದು ನನ್ನ ಪಾಲಿಗೆ ಅತ್ಯಂತ ಸಂತೋಷ ತಂದ ವಿಚಾರ ಎಂದು ಅವರು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಡಾ.ಸೀತರಾಮ ಭಟ್ ಕಲ್ಲಮ ಮಾತನಾಡಿ ಶ್ರೀನಿವಾಸ್ ಹೆಚ್.ಬಿ ಅವರ ಮೇಲೆ ಅವರ ಶಿಷ್ಯಂದಿರು ಇಟ್ಟಿರುವ ಪ್ರೀತಿ, ಅಭಿಮಾನ ನೋಡುವಾಗ ಆಶ್ಚರ್ಯವಾಗುತ್ತಿದೆ, ಇಂತಹ ಗುರು-ಶಿಷ್ಯ ಪರಂಪರೆ ಬಲು ಅಪರೂಪ, ಇದು ಮುಂದಕ್ಕೂ ಯಶಸ್ವಿಯಾಗಿ ನಡೆಯಬೇಕಾಗಿದೆ ಎಂದು ಹೇಳಿದರು.

ಹಿರಿಯ ವಿದ್ಯಾರ್ಥಿಗಳು ಹಾಗೂ ಅಭಿಮಾನಿ ಬಳಗದವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಶ್ರೀನಿವಾಸ್ ಎಚ್.ಬಿ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದರು. ಇಂತಹ ಶಿಕ್ಷಕನನ್ನು ಪಡೆದ ನಾವು ನಿಜವಾಗಿಯೂ ಭಾಗ್ಯವಂತರು ಎಂದು ಹಲವರು ಬಣ್ಣಿಸಿದರು. ಸರ್ವೆ ಷಣ್ಮುಖ ಯುವಕ ಮಂಡಲದ ಅಧ್ಯಕ್ಷ ಗೌತಮ್‌ರಾಜ್ ಕರುಂಬಾರು ಹಾಗೂ ಮುಂಡೂರು ಗ್ರಾ.ಪಂ ಮಾಜಿ ಸದಸ್ಯ ಕಮಲೇಶ್ ಎಸ್.ವಿ ಕಾರ್ಯಕ್ರಮ ನಿರೂಪಿಸಿದರು.

ಹಿರಿಯ ವಿದ್ಯಾರ್ಥಿಗಳಿಗೆ ಸನ್ಮಾನ:
ಹಿರಿಯ ವಿದ್ಯಾರ್ಥಿಗಳಾದ ಉದ್ಯಮಿ ಸುಧೀರ್ ನೋಂಡ ಹಾಗೂ ಬೆಂಗಳೂರಿನ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿರುವ ಜೀವನ್ ಎಸ್.ಡಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿದ ಸುಧೀರ್ ನೋಂಡ ಹಾಗೂ ಜೀವನ್ ಎಸ್.ಡಿ ಮಾತನಾಡಿ ಈ ಸನ್ಮಾನವನ್ನು ಯಾವತ್ತೂ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು.



ಚಲನಚಿತ್ರ ನಟ ದೀಕ್ಷಿತ್ ಸೊರಕೆ ಅವರನ್ನು ಇದೇ ಸಂದರ್ಭದಲ್ಲಿ ಶಾಲು ಹೊದಿಸಿ ಗೌರವಿಸಲಾಯಿತು.

ದಿನಪೂರ್ತಿ ಸಂಭ್ರಮ:
ಸಿತಾರಾ ಬೋಟ್ ಹೌಸ್’ನಲ್ಲಿ ಬೋಟಿಂಗ್ (ಜಲವಿಹಾರ) ಮಾಡುವ ಮೂಲಕ ಹಿರಿಯ ವಿದ್ಯಾರ್ಥಿಗಳು ಮತ್ತು ಗುರುಗಳು ದಿನಪೂರ್ತಿ ಖುಷಿಯಿಂದ ಕಾಲ ಕಳೆದರು. ವಿವಿಧ ಮನರಂಜನಾ ಚಟುವಟಿಕೆಗಳು, ನೃತ್ಯ ಮತ್ತು ಹಾಡುಗಳ ಮೂಲಕ ಹುಟ್ಟುಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಿದರು. ತಮ್ಮ ನೆಚ್ಚಿನ ಗುರುವಿನ ಹುಟ್ಟುಹಬ್ಬವನ್ನು ವಿಭಿನ್ನ ರೀತಿಯಲ್ಲಿ ಆಚರಿಸಿದ ಶಿಷ್ಯ ಬಳಗದವರು ಬೋಟ್ ಒಳಗಡೆ ಹಾಗೂ ಬಸ್ ಪ್ರಯಾಣದ ವೇಳೆ ಕುಣಿದು ಕುಪ್ಪಳಿಸಿದರು. ಖುದ್ದು ಶ್ರೀನಿವಾಸ್ ಹೆಚ್.ಬಿ ಅವರೂ ಸ್ಟೆಪ್ ಹಾಕುವ ಮೂಲಕ ಗಮನ ಸೆಳೆದರು.

ಗುರು-ಶಿಷ್ಯರ ಬಾಂಧವ್ಯ ಸಾಮಾನ್ಯವಾಗಿ ನಿವೃತ್ತಿಯ ನಂತರ ಗುರು-ಶಿಷ್ಯರ ಸಂಪರ್ಕ ಸೀಮಿತವಾಗುವುದುಂಟು. ಆದರೆ, ನಿವೃತ್ತಿಯ ಬಳಿಕವೂ ಕಳೆದ ಆರು ವರ್ಷಗಳಿಂದ ನಿರಂತರವಾಗಿ ಇಂತಹ ಸಮ್ಮಿಲನಗಳನ್ನು ಆಯೋಜಿಸುತ್ತಾ, ವಿವಿಧ ಜಿಲ್ಲೆಗಳಿಗೆ ಪ್ರವಾಸಗಳನ್ನು ಕೈಗೊಳ್ಳುತ್ತಿರುವುದು ಇಂದಿನ ಸಮಾಜದಲ್ಲಿ ಒಂದು ಅಪರೂಪದ ಹಾಗೂ ಇತಿಹಾಸಪೂರ್ವಕ ಹೆಜ್ಜೆಯಾಗಿದೆ. ಎಲ್ಲೂ ಕಾಣಸಿಗದಂತಹ ಈ ವಿನೂತನ ಗುರು-ಶಿಷ್ಯರ ಸಮ್ಮಿಲನವು ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.

ಡಾ.ಸೀತರಾಮ ಭಟ್ ಕಲ್ಲಮ, ಹಿರಿಯ ವಿದ್ಯಾರ್ಥಿಗಳಾದ ಸುರೇಶ್ ಎಸ್.ಡಿ, ಸುಬ್ರಹ್ಮಣ್ಯ ಕರುಂಬಾರು, ಗೌತಮ್‌ರಾಜ್ ಕರುಂಬಾರು ಹಾಗೂ ಮನೋಜ್ ಸುವರ್ಣ ಸೊರಕೆ ಗುರು ಶಿಷ್ಯ ಸಮ್ಮಿಲನ ಕಾರ್ಯಕ್ರಮದ ಮುಖ್ಯ ಜವಾಬ್ದಾರಿ ವಹಿಸಿದ್ದರು. ಷಣ್ಮುಖ ಯುವಕ ಮಂಡಲದ ಪದಾಧಿಕಾರಿಗಳು, ಸದಸ್ಯರು, ಹಿರಿಯ ವಿದ್ಯಾರ್ಥಿಗಳು, ಶ್ರೀನಿವಾಸ್ ಎಚ್.ಬಿ ಅವರ ಅಭಿಮಾನಿಗಳು ವಿವಿಧ ಸಹಕಾರ ನೀಡಿದರು.

LEAVE A REPLY

Please enter your comment!
Please enter your name here