






ವಿವೇಕಾನಂದ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಜೀವನ್ದಾಸ್ ಎ. ಅವರಿಗೆ ಸನ್ಮಾನ
ವಿದ್ಯೆಯ ಜೊತೆಗೆ ವಿನಯ ಇರಲಿ – ಜೀವನ್ ದಾಸ್
ಕಾಲೇಜು ವಾರ್ಷಿಕೋತ್ಸವದ ಪ್ರಯುಕ್ತ ನಡೆದ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ


ಪುತ್ತೂರು: ವಿವೇಕಾನಂದ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಜೀವನ್ದಾಸ್ ಎ. ಏಕತಾ ವೇದಿಕೆಯಲ್ಲಿ ನಡೆದ ಪ್ರಸಕ್ತ ಶೈಕ್ಷಣಿಕ ವರ್ಷದ ವಾರ್ಷಿಕೋತ್ಸವದ ಮೊದಲನೇ ದಿನ ‘ಸಾಧನಾ ದರ್ಪಣಂʼಸಭಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ“ ವಿದ್ಯಾರ್ಥಿಗಳ ಜೀವನದಲ್ಲಿ ಒಂದು ನಿರ್ದಿಷ್ಟ ಗುರಿ ಇರಬೇಕು. ನಾವು ಏನಾಗಬೇಕು, ನಮ್ಮ ಜೀವನದಲ್ಲಿ ಏನನ್ನು ಸಾಧಿಸಬೇಕು ಎಂಬ ಸ್ಪಷ್ಟತೆ ಇರಬೇಕು. ಗುರಿಯಿಲ್ಲದ ಜೀವನ ದಿಕ್ಕಿಲ್ಲದ ಪ್ರಯಾಣದಂತೆ. ಆದ್ದರಿಂದ ವಿದ್ಯಾರ್ಥಿಗಳು ತಮ್ಮ ಗುರಿಯನ್ನು ನಿರ್ಧರಿಸಿ, ಅದನ್ನು ಸಾಧಿಸಲು ನಿರಂತರ ಪ್ರಯತ್ನ ಮಾಡಬೇಕು. ತಾಯಿಯೇ ಮಗುವಿನ ಮೊದಲ ಗುರು. ಮಗುವಿಗೆ ಮೊದಲ ಮಾತು, ಮೊದಲ ನಡವಳಿಕೆ, ಮೊದಲ ಸಂಸ್ಕಾರ ದೊರೆಯುವುದೇ ತಾಯಿಯಿಂದ. ತಂದೆ-ತಾಯಿ ನೀಡುವ ಪ್ರೀತಿ, ಮಾರ್ಗದರ್ಶನ ಮತ್ತು ಗುರುಗಳು ನೀಡುವ ಶಿಕ್ಷಣ ನಮ್ಮ ಜೀವನದುದ್ದಕ್ಕೂ ನಮಗೆ ದಾರಿದೀಪವಾಗಿರುತ್ತವೆ.” ಎಂದು ಹೇಳಿದರು.




ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಡಾ.ಸುಚೇತಾ ವಿವೇಕಾನಂದ ಪದವಿಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿನಿ ಹಾಗೂ ಸಂಶೋಧನಾ ವಿಜ್ಞಾನಿ, ಅಜೀಂ ಪ್ರೇಮ್ ಜಿ ಫೌಂಡೇಶನ್ ಅನುದಾನಿತ ಕ್ಯಾನ್ಸರ್ ತಪಾಸಣಾ ಯೋಜನೆ ಯೆನೆಪೋಯ (ಪರಿಗಣಿಸಲ್ಪಟ್ಟ) ವಿಶ್ವವಿದ್ಯಾನಿಲಯ ಮಾತನಾಡುತ್ತಾ “ವಿದ್ಯಾರ್ಥಿ ಜೀವನವು ಭವಿಷ್ಯದ ಬದುಕಿಗೆ ಬುನಾದಿಯಿದ್ದಂತೆ. ಈ ಹಂತದಲ್ಲಿ ವಿದ್ಯಾರ್ಥಿಗಳು ಯಾವುದೇ ಗೊಂದಲಗಳಿಗೆ ಒಳಗಾಗದೆ ತಮ್ಮ ಭವಿಷ್ಯದ ಬಗ್ಗೆ ನಿರ್ದಿಷ್ಟ ಉದ್ದೇಶವನ್ನು ಹೊಂದಿರಬೇಕು ಹಾಗೂ ಸಿಗುವ ಎಲ್ಲಾ ಸೂಕ್ತ ಅವಕಾಶಗಳನ್ನು ಸರಿಯಾದ ಮಾರ್ಗದಲ್ಲಿ ಬಳಸಿಕೊಂಡು ತಮ್ಮ ಸ್ವಂತ ನಿರ್ಧಾರಗಳನ್ನು ತಾವೇ ತೆಗೆದುಕೊಳ್ಳುವತ್ತ ಗಮನ ಹರಿಸಬೇಕು. ಕೇವಲ ಅಂಕಗಳನ್ನು ಗಳಿಸುವುದು ಮಾತ್ರ ಶಿಕ್ಷಣದ ಉದ್ದೇಶವಲ್ಲ, ಬದಲಿಗೆ ವಿದ್ಯಾರ್ಥಿಗಳು ಹೊಸ ಹೊಸ ವಿಚಾರಗಳನ್ನು ಸದಾ ಅನ್ವೇಷಿಸುತ್ತಾ, ಸ್ವಾವಲಂಬಿಗಳಾಗಿ ಬೆಳೆಯಲು ತಮ್ಮ ಕೌಶಲ್ಯಗಳನ್ನು ನಿರಂತರವಾಗಿ ಸುಧಾರಿಸಿಕೊಳ್ಳಬೇಕು. ಯಾವುದೇ ರಂಗದಲ್ಲಿ ಯಶಸ್ಸು ಸಿಗಬೇಕಾದರೂ ಅದಕ್ಕೆ ಕೇವಲ ಅದೃಷ್ಟ ಕಾರಣವಲ್ಲ, ಬದಲಿಗೆ ನಿರಂತರವಾದ ಕಠಿಣ ಶ್ರಮ ಮಾತ್ರ ಯಶಸ್ಸನ್ನು ತಂದುಕೊಡುತ್ತದೆ. ” ಎಂದು ಕಿವಿಮಾತನ್ನು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಡಳಿತ ಮಂಡಳಿಯ ಕೋಶಾಧಿಕಾರಿ ಸಚಿನ್ ಶೆಣೈ ಕೆ. ವಹಿಸಿಕೊಂಡು “ಸಂಸ್ಥೆಯು ಉತ್ತುಂಗಕ್ಕೇರಲು ವಿದ್ಯಾರ್ಥಿಗಳು, ಹೆತ್ತವರು ಹಾಗೂ ಶಿಕ್ಷಕರ ಪಾತ್ರ ಮಹತ್ವದ್ದಾಗಿದ್ದು, ಅದರಲ್ಲೂ ವಿದ್ಯಾರ್ಥಿಗಳ ಪಾತ್ರ ಅತ್ಯಂತ ಪ್ರಮುಖವಾಗಿದೆ. ವಿದ್ಯಾರ್ಥಿಗಳ ಸಾಧನೆಯೇ ಸಂಸ್ಥೆಯ ಕೀರ್ತಿ ಮತ್ತು ಗೌರವವನ್ನು ಹೆಚ್ಚಿಸುತ್ತದೆ. ತಮ್ಮ ಸಾಧನೆಗಳ ಮೂಲಕ ಹೆತ್ತವರಿಗೆ, ಶಿಕ್ಷಕರಿಗೆ ಹಾಗೂ ತಾವು ಕಲಿತ ಸಂಸ್ಥೆಗೆ ಹೆಮ್ಮೆ ತರುವ ವ್ಯಕ್ತಿಗಳಾಗಿ ರೂಪುಗೊಳ್ಳಬೇಕು” ಎಂದು ಹೇಳಿದರು.
ಏಕತಾ ವೇದಿಕೆಯಲ್ಲಿ ನಡೆಯಲಿರುವ ಕಾರ್ಯಕ್ರಮಗಳಿಗೆ ದೀಪ ಪ್ರಜ್ವಲನೆಯ ಮೂಲಕ ಚಾಲನೆ ನೀಡಲಾಯಿತು. ಕಾಲೇಜು ವಾರ್ಷಿಕೋತ್ಸವದ ಪ್ರಯುಕ್ತ ನಡೆದ ಸ್ಪರ್ಧೆಗಳ ಹಾಗೂ ಕಾಲೇಜಿನ ವಿವಿಧ ಸಂಘಗಳ ವತಿಯಿಂದ ನಡೆಸಲಾದ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಜತೆಗೆ ಕಾಲೇಜು ವಾರ್ಷಿಕ ಕ್ರೀಡಾಕೂಟದ ವಿವಿಧ ಪಂದ್ಯಾಟಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಶಿಕ್ಷಕ –ರಕ್ಷಕಸಂಘದ ಉಪಾಧ್ಯಕ್ಷರಾದ ಎನ್. ಸತ್ಯನಾರಾಯಣ ಹಾಗೂ ಕಾಲೇಜಿನ ಪ್ರಾಂಶುಪಾಲರಾದ ದೇವಿಚರಣ್ ರೈ ಎಂ ಉಪಸ್ಥಿತರಿದ್ದರು. ಉಪನ್ಯಾಸಕಿಯರಾದ ದಯಾಮಣಿ ಟಿ.ಕೆಸ್ವಾಗತಿಸಿ, ದಿವ್ಯಾ ಕೆ. ವಂದಿಸಿ ಪುಷ್ಪಲತಾ ಕಾರ್ಯಕ್ರಮವನ್ನು ನಿರೂಪಿಸಿದರು. ಕಾಲೇಜಿನ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು










