ಪುತ್ತೂರು: ಈಶ್ವರಮಂಗಲದಲ್ಲಿ ಪ್ರಯಾಣಿಕನಿಗೆ ಹಲ್ಲೆ ನಡೆಸಿ ಕಾಲಿನಿಂದ ಎದೆಗೆ ಒದ್ದು ರಸ್ತೆಗೆ ದೂಡಿ ಹಾಕಿದ ಅಮಾನವೀಯ ಕೃತ್ಯ ನಡೆದಿರುವುದನ್ನು ಗಂಭೀರವಾಗಿ ಪರಿಗಣಿಸಿದರುವ ಅಧಿಕಾರಿಗಳು ಕೆ.ಎಸ್.ಆರ್.ಟಿ.ಸಿ ಪುತ್ತೂರು ಘಟಕದ ಬಸ್ ನಿರ್ವಾಹಕ ತುಕಾರಾಜ್ ರೈ ಎಂಬವರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಕೆಎ 21 ಎ- 0002 ನಂಬರ್ನ ಬಸ್ ನಿರ್ವಾಹಕ ಪ್ರಯಾಣಿಕನಿಗೆ ಹಲ್ಲೆ ನಡೆಸಿ ಒದ್ದು ಹೊರಹಾಕಿರುವ ದೃಶ್ಯವಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಪ್ರಯಾಣಿಕ ಪಾನಮತ್ತನಂತೆ ಕಂಡು ಬರುತ್ತಿದ್ದು ಬಸ್ ಹತ್ತುವಾಗಲೇ ನಿರ್ವಾಹಕ ಪ್ರಯಾಣಿಕನನ್ನು ತಡೆದು ಆತನ ಕೊಡೆಯನ್ನು ರಸ್ತೆಗೆ ಎಸೆದಿದ್ದರು. ಬಸ್ಸಿನಿಂದ ಕೆಳಗಿಳಿಸಲು ನಿರ್ವಾಹಕ ಪ್ರಯಾಣಿಕನಿಗೆ ಕೈಯಿಂದ ಹಲ್ಲೆ ನಡೆಸುವುದಲ್ಲದೆ ಕೊನೆಗೆ ಪ್ರಯಾಣಿಕನ ಎದೆಗೆ ತುಳಿದು ರಸ್ತೆಗೆ ದೂಡಿ ಹಾಕಿ, ಆತನಿಗೆ ಜೋರು ಮಾಡಿದ್ದರು.. ರಸ್ತೆಗೆ ಬಿದ್ದ ಪ್ರಯಾಣಿಕನನ್ನು ಅಲ್ಲಿಯೇ ಬಿಟ್ಟು ನೇರವಾಗಿ ಬಸ್ ಚಲಾಯಿಸಿಕೊಂಡು ಹೋಗುವ ವಿಡಿಯೋ ವೈರಲ್ ಅಗಿತ್ತು.
ಪ್ರಯಾಣಿಕ ಪಾನಮತ್ತನಾಗಿದ್ದು ಈಶ್ವರಮಂಗಲದಲ್ಲಿ ಈತನ ಉಪಟಳ ನಿರಂತರವಾಗಿದ್ದರೂ ಹಲ್ಲೆ ನಡೆಸಿ ಒದ್ದು ಬಸ್ಸಿನಿಂದ ಹೊರಹಾಕಿರುವ ಬಸ್ ನಿರ್ವಾಹಕನ ವರ್ತನೆ ಅಮಾನವೀಯವಾಗಿದ್ದು ತಪ್ಪಿತಸ್ಥ ನಿರ್ವಾಹಕನ ವಿರುದ್ಧ ಕಾನೂನು ಕ್ರಮಕೈಗೊಳ್ಳಲೇಬೇಕು ಎಂದು ಸ್ಥಳೀಯ ನಾಗರಿಕರಿಂದ ಆಗ್ರಹ ವ್ಯಕ್ತವಾಗಿತ್ತು. ಇದೀಗ ನಿರ್ವಾಹಕ ಸುಳ್ಯ ತಾಲೂಕಿನ ಬೀದಿಗುಡ್ಡೆ ನಿವಾಸಿ ತುಕಾರಾಜ್ ರೈ ಅವರನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ ಎಂದು ಕೆ.ಎಸ್.ಆರ್.ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿ ಜಯಕರ ಶೆಟ್ಟಿ ತಿಳಿಸಿದ್ದಾರೆ. ಈ ಮಧ್ಯೆ ಬಸ್ ನಿರ್ವಾಹಕ ಪ್ರಯಾಣಿಕನನ್ನು ಒದ್ದು ಹೊರ ಹಾಕಿ ಅಮಾನವೀಯವಾಗಿ ವರ್ತಿಸಿರುವ ಘಟನೆ ಕುರಿತು ವೈರಲ್ ಆಗಿರುವ ವಿಡಿಯೋವನ್ನು ಈಗಾಗಲೇ ಪೊಲೀಸ್ ಅಧಿಕಾರಿಗಳು ಗಮನಿಸಿದ್ದು ಈ ಕುರಿತು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಲು ಸಿದ್ಧತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.