ಪುತ್ತೂರು: ಗ್ರಾಮ ಪಂಚಾಯತ್ ಕಬಕ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇದರ ಜಂಟಿ ಆಶ್ರಯದಲ್ಲಿ ಮೂರು ದಿನಗಳ ಕಾಲ ಗ್ರಾ.ಪಂ ಸಭಾಂಗಣದಲ್ಲಿ ನಡೆಯಲಿರುವ ಉಚಿತ ಆರೋಗ್ಯ ಭಾರತ ಹೆಲ್ತ್ ಕಾರ್ಡ್ ಹಾಗೂ ಕಾರ್ಮಿಕರ ಕಾರ್ಡ್ ನೋಂದಣಿ ಅಭಿಯಾನ ಶಿಬಿರವು ಸೆ.೧೫ರಂದು ಉದ್ಘಾಟನೆಗೊಂಡಿತು.
ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಚಾಲನೆ ನೀಡದ ಕಬಕ ಗ್ರಾ.ಪಂ ಅಧ್ಯಕ್ಷ ವಿನಯ ಕುಮಾರ್ ಕಲ್ಲೇಗ ಮಾತನಾಡಿ, ಗ್ರಾಮಸ್ಥರು ಉಚಿತ ಆರೋಗ್ಯ ಭಾರತ ಹೆಲ್ತ್ ಕಾರ್ಡ್ ಹಾಗೂ ಕಾರ್ಮಿಕರ ಕಾರ್ಡ್ ನೋಂದಣಿ ಅಭಿಯಾನದ ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಿದರು.
ಗ್ರಾ.ಪಂ ಉಪಾಧ್ಯಕ್ಷ ರುಕ್ಮಯ್ಯ ಗೌಡ ಪೋಳ್ಯ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಲ್ನಾಡು ವಲಯ ಮೇಲ್ವೀಚಾರಕ ಹರೀಶ್, ಸಿಎಸ್ಸಿ ಕೇಂದ್ರದ ನೋಡೆಲ್ ಅಧಿಕಾರಿ ಜಯಪ್ರಸಾದ್, ಒಕ್ಕೂಟದ ಅಧ್ಯಕ್ಷರಾದ ಜಯಲಕ್ಷ್ಮೀ, ಸೌಮ್ಯ, ದಿನೇಶ್ ಕೊಡಿಪ್ಪಾಡಿ, ಸಿಎಸ್ಸಿ ಕೇಂದ್ರದ ರಮ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಿಬಂದಿ ಅನುರಾದ ಸ್ವಾಗತಿಸಿದರು. ಅಣ್ಣು ವಂದಿಸಿದರು.
ನೋಂದಣಿ ಅಭಿಯಾನವು ಸೆ.೧೭ರ ತನಕ ನಡೆಯಲಿದ್ದು ನೋಂದಾಯಿಸುವವರು ಆಧಾರ್ ಕಾರ್ಡ್, ರೇಷನ್ ಕಾರ್ಡ್, ಆಧಾರ್ ಕಾರ್ಡ್ ಲಿಂಕ್ ಆಗಿರುವ ಮೊಬೈಲ್ ನ್ನು ಕಡ್ಡಾಯವಾಗಿ ತರಬೇಕು. ಆಯುಷ್ಮಾನ್ ಕಾರ್ಡ್ ಹೊಂದಿದವರೂ ಆರೋಗ್ಯ ಭಾರತ ಹೆಲ್ತ್ ಕಾರ್ಡ್ ನ್ನು ಮಾಡಿಸುವುದು ಕಡ್ಡಾಯವಾಗಿದೆ. ಒಂದು ಮನೆಯ ಎಲ್ಲಾ ಸದಸ್ಯರ ಆರೋಗ್ಯ ಭಾರತ ಹೆಲ್ತ್ ಕಾರ್ಡನ್ನು ಒಬ್ಬನೇ ಸದಸ್ಯ ಮಾಡಬಹುದಾಗಿದ್ದು ಎಲ್ಲಾ ಸದಸ್ಯರ ಆಧಾರ್ ಕಾರ್ಡ್ ನ ಪ್ರತಿ ಹಾಗೂ ಆಧಾರ್ ಕಾರ್ಡ್ ಗೆ ಜೋಡಣೆಯಾಗಿರುವ ಮೊಬೈಲ್ ಗೆ ಬರುವ ಒಟಿಪಿಯನ್ನು ತಿಳಿಸಬೇಕಾಗುತ್ತದೆ. ಈ ಯೋಜನೆಯಿಂದ ಬಿಪಿಎಲ್ ಕಾರ್ಡುದಾರರಿಗೆ ರೂ.೫ಲಕ್ಷದ ವರೆಗೆ ಉಚಿತ ಚಿಕಿತ್ಸೆ, ಎಪಿಎಲ್ ಕಾರ್ಡುದಾರರಿಗೆ ಚಿಕಿತ್ಸಾ ವೆಚ್ಚದಲ್ಲಿ, ರೂ.೧.೫ ಲಕ್ಷ ರಿಯಾಯಿತಿ ದೊರೆಯಲಿದೆ ಎಂದು ಪಂಚಾಯತ್ನ ಪ್ರಕಟಣೆ ತಿಳಿಸಿದೆ