ಪುತ್ತೂರು: ಶಿಕ್ಷಕರಲ್ಲಿ ಸೃಜನಶೀಲತೆ, ಭಾಷಾ ಬೆಳವಣಿಗೆ ವೃದ್ಧಿಸಿ, ಪರಿಣಾಮಕಾರಿ ಬೋಧನಾ ಶೈಲಿ ಹೆಚ್ಚಿಸುವ ಸಲುವಾಗಿ, ವಿವೇಕಾನಂದ ಸಿ.ಬಿ.ಎಸ್. ಇ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿಯಿಂದ ಆಯೋಜಿಸಲಾದ, ಆಂಗ್ಲ ಭಾಷಾ ಬಲವರ್ಧನಾ ಕಾರ್ಯಾಗಾರವನ್ನು ಅ. 13 ರಂದು ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷರಾಗಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ| ಕೃಷ್ಣಭಟ್ ಮಾತನಾಡಿ “ಶಿಕ್ಷಕರಾದವರು ತಮ್ಮ ಸುತ್ತಲೂ ಒಂದು ಚೌಕಟ್ಟನ್ನು ಸೃಷ್ಟಿಸದೆ, ಅದಕ್ಕೂ ಮೀರಿ ಜ್ಞಾನವನ್ನು ಸಂಪಾದಿಸಿ, ತನ್ಮೂಲಕ ಪ್ರತಿಯೊಬ್ಬರೂ ಸಂಪನ್ಮೂಲ ವ್ಯಕ್ತಿಗಳಾಗಿ ಬೆಳೆಯಬೇಕು” ಎಂದು ಶುಭ ಹಾರೈಸಿದರು.
ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀಮತಿ ವಸಂತಿ ಕೆ. ಅವರು, ಮೂರು ದಿನಗಳ ಕಾಲ ನಡೆಯಲಿರುವ ಈ ಕಾರ್ಯಾಗಾರವನ್ನು ಅತ್ಯಂತ ಉತ್ಕೃಷ್ಟ ರೀತಿಯಲ್ಲಿ ಬಳಸಿಕೊಂಡು ಸದುಪಯೋಗಪಡಿಸಬೇಕಾಗಿ ಶಿಕ್ಷಕರಿಗೆ ಉತ್ತೇಜನ ನೀಡಿದರು.
ರೀಜನಲ್ ಇನ್ಸ್ಟಿಟ್ಯೂಟ್ ಆಫ್ ಇಂಗ್ಲಿಷ್ ಇದರ ವತಿಯಿಂದ, ಶ್ರುತಿ ಎಸ್. ಹಾಗೂ ಅಶೋಕ ತೆಕ್ಕಟ್ಟೆ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು.
ಮೂರು ದಿನಗಳ ಕಾಲ ನಡೆದ ಈ ಕಾರ್ಯಾಗಾರದಲ್ಲಿ, ಶ್ರುತಿ ; ವ್ಯಾಕರಣ, ಭಾಷಾ ನಿರಂತರತೆ, ಭಾಷೆ-ಸಂಸ್ಕೃತಿ, ಸಂವಹನ ಕೌಶಲ್ಯ, ಬರಹ ಕೌಶಲ್ಯ, ಪಾಠಯೋಜನೆ, ಬೋಧನಾಶೈಲಿಯ ಕುರಿತು ತರಬೇತಿ ನೀಡಿದರು ಹಾಗೂ ಅಶೋಕ ತೆಕ್ಕಟ್ಟೆ ಆಂಗ್ಲ ಅಕ್ಷರಗಳ ಧ್ವನಿ, ಸ್ಪಷ್ಟ ಉಚ್ಛಾರ, ಪದಾಂಶ, ವಾಕ್ಯದಲ್ಲಿ ಸ್ವರಗಳ ಏರಿಳಿತ, ತರಗತಿ ಕಲಿಕೆಯಲ್ಲಿ ಚಟುವಟಿಕೆಗಳ ಸತ್ಪರಿಣಾಮ, ಕ್ರಿಯಾತ್ಮಕ ಭಾಷಾ ಸಂವಹನ ಶೈಲಿ ಮುಂತಾದ ವಿಷಯಗಳ ಕುರಿತು ತರಬೇತಿ ನೀಡಿದರು.
ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸಿಂಧೂ ವಿ. ಜಿಪ್ರಾಸ್ತಾವಿಕ ನುಡಿಗಳನ್ನಾಡಿ, ತರಬೇತಿಯ ಮಹತ್ವವನ್ನು ತಿಳಿಸಿದರು. ಶಾಲಾ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದರು.