ಕಾಣಿಯೂರು: ಕಂಬಳಿ ಮಾರುವ ನೆಪದಲ್ಲಿ ಕಾರಿನಲ್ಲಿ ಮನೆಯಂಗಳಕ್ಕೆ ಬಂದು ಮನೆಯೊಡತಿಯ ಸರಕಳ್ಳತನಕ್ಕೆ ಯತ್ನಿಸಿದ ಆರೋಪಿಗಳು ಕಾರಿನಲ್ಲಿ ಪರಾರಿಯಾಗುವ ಯತ್ನದಲ್ಲಿ ಕಾರು ಪಲ್ಟಿಯಾಗಿ ಕಳ್ಳರು ಗಾಯಗೊಂಡ ಘಟನೆ ಅ 20ರಂದು ಕಡಬ ತಾಲೂಕಿನ ಕಾಣಿಯೂರು ಬಳಿ ನಡೆದಿದೆ.
ಆರೋಪಿಗಳನ್ನು ಮಂಗಳೂರು ಪೊಳಲಿ ಅಟ್ಟೂರು ನಿವಾಸಿಗಳಾದ ರಮೀಶುದ್ಧೀನ್(25) ಹಾಗೂ ರಫೀಕ್ (30) ಎಂದು ಗುರುತಿಸಲಾಗಿದೆ.
ಕಂಬಳಿ ಮಾರುವ ನೆಪದಲ್ಲಿ ಕಾರೊಂದರಲ್ಲಿ ದೋಳ್ಪಾಡಿ ಗ್ರಾಮದ ಕಟ್ಟ ನಿವಾಸಿ ಕಿಟ್ಟ ಎಂಬವರ ಮನೆಗೆ ಬಂದು ಕಳ್ಳತನಕ್ಕೆ ಯತ್ನಿಸಿದ್ದಾರೆ. ಮನೆಯಲ್ಲಿ ಮನೆಯ ಒಡತಿ ಮಾತ್ರ ಇರುವುದನ್ನು ಗಮನಿಸಿದ್ದ ಇವರು ಕಂಬಳಿಯನ್ನು ಖರೀದಿಸುವಂತೆ ಆಕೆಯನ್ನು ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಮಹಿಳೆಯ ಕತ್ತಿನಲ್ಲಿದ್ದ ಚಿನ್ನದ ಸರ ಎಗರಿಸಲು ಕೈ ಹಾಕಿದ್ದಾರೆ. ಇದರಿಂದ ತಪ್ಪಿಸಿಕೊಂಡ ಮಹಿಳೆ ಬೊಬ್ಬೆ ಹೊಡೆದಾಗ ಅಕ್ಕಪಕ್ಕದವರು ಆಗಮಿಸಿದಾಗ ಕಳ್ಳರು ಅಲ್ಲಿಂದ ತಪ್ಪಿಸಿಕೊಂಡು ತಾವು ಬಂದ ಕಾರಿನಲ್ಲಿ ತೆರಳಿದ್ದಾರೆ.
ಅಡ್ಡಗಟ್ಟಿದ ಸಾರ್ವಜನಿಕರು:
ಸರಕಳವಿಗೆ ಯತ್ನಿಸಿದ್ದ ಆರೋಪಿಗಳು ಕಾರಿನಲ್ಲಿ ದೋಳ್ಪಾಡಿಯಿಂದ ಪುಣ್ಚತ್ತಾರು ಕಡೆ ಸಾಗುವಾಗ ಸಾರ್ವಜನಿಕರು ಅಡ್ಡಗಟ್ಟಿದ್ದಾರೆ. ಇಲ್ಲಿಂದ ಯೂಟರ್ನ್ ಹೊಡೆದ ಕಳ್ಳರು ನೇರವಾಗಿ ಕಾಣಿಯೂರು ಕೂಡುರಸ್ತೆ ದಾರಿಯಲ್ಲಿ ಸಾಗಿದ್ದಾರೆ. ಅಲ್ಲಿಯೂ ಸಾರ್ವಜನಿಕರು ಸೇರಿದ್ದನ್ನು ಗಮನಿಸಿ ಎರ್ರಾಬರ್ರಿ ಕಾರು ಚಲಾಯಿಸಿಕೊಂಡು ಹೋಗಿದ್ದಾರೆ. ಸಾರ್ವಜನಿಕರು ಬೆನ್ನಟ್ಟುತ್ತಿದ್ದಂತೆ ಕೂಡುರಸ್ತೆಯಲ್ಲಿ ಕಾರು ಪಲ್ಟಿಯಾಗಿದೆ. ಪರಿಣಾಮ ಕಳ್ಳರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ಆಂಬುಲೆನ್ಸ್ನಲ್ಲಿ ಕರೆದೊಯ್ದು ಅವರನ್ನು ಪುತ್ತೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಘಟನೆ ಕುರಿತು ಮಹಿಳೆ ನೀಡಿರುವ ದೂರಿನ ಮೇರೆಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತ ಸ್ಥಳಕ್ಕೆ ಬೆಳ್ಳಾರೆ ಪೊಲೀಸ್ ಠಾಣಾಧಿಕಾರಿ ಸುಹಾಸ್ ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅಪರಿಚಿತರು ಗ್ರಾ.ಪಂ. ಅನುಮತಿ ಪಡೆದೇ ವ್ಯಾಪಾರ ನಡೆಸಬೇಕು:
ಈ ಘಟನೆಯಿಂದಾಗಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಾರ್ವಜನಿಕ ವಲಯದಲ್ಲಿ ಅಕ್ರೋಶ ವ್ಯಕ್ತವಾಗಿದ್ದು, ವಾರದ ಹಿಂದೆ ಕೂಡಾ ಒಂದು ತಂಡ ಕಂಬಳಿ ಮಾರುವ ನೆಪದಲ್ಲಿ ಬಂದಿದ್ದರು. ಅವರು ಕೂಡಾ ಸಂಶಯಾಸ್ಪದವಾಗಿ ಕಾಣುತ್ತಿದ್ದರು. ಇಂತವರಿಗೆ ಕಠಿಣ ಶಿಕ್ಷೆಯಾಗಬೇಕು. ಯಾರೇ ಹೊರಗಿನವರು ಅಪರಿಚಿತರು ಊರಲ್ಲಿ ವ್ಯಾಪಾರ ಮಾಡಬೇಕಾದರೆ ಗ್ರಾಮ ಪಂಚಾಯತ್ನಿಂದ ಅನುಮತಿ ಪಡೆಯಬೇಕು. ಅನುಮತಿ ಇಲ್ಲದವರು ವ್ಯಾಪಾರಕ್ಕೆ ಬಂದರೆ ಅವರ ವಿರುದ್ಧ ಕಾನೂನು ಕ್ರಮ ಜರಗಿಸಬೇಕು ಎಂದು ಸಾರ್ವಜನಿಕರು ಅಗ್ರಹಿಸಿದ್ದಾರೆ.