ಪುತ್ತೂರು: ಇತಿಹಾಸ ಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಉತ್ಸವ ಅ.24 ರಂದು ನರಕ ಚತುರ್ದಶಿಯಂದು ಆರಂಭವಾಗಲಿದೆ. ಪತ್ತನಾಜೆಯಂದು ಒಳಗಾದ ಶ್ರೀ ದೇವರ ಉತ್ಸವ ಮೂರ್ತಿ ಅ. 24ರಂದು ಬಲಿ ಹೊರಡುವ ಮೂಲಕ ಮತ್ತೆ ಉತ್ಸವಗಳಿಗೆ ಚಾಲನೆ ಸಿಗಲಿದೆ.
ಪ್ರತೀವರ್ಷ ದೀಪಾವಳಿ ಅಮಾವಾಸ್ಯೆಯಂದು ಶ್ರೀ ದೇವಾಲಯದಲ್ಲಿ ದೇವರ ವಾರ್ಷಿಕ ಉತ್ಸವ ಆರಂಭವಾಗುತ್ತಿತ್ತು. ಸಂಜೆಯ ವೇಳೆಗೆ ದೇವರ ಬಲಿ ಹೊರಡುವ ಸಂಪ್ರದಾಯ ಶ್ರೀ ದೇವಾಲಯದಲ್ಲಿ ಇದೆ. ನರಕ ಚತುರ್ದಶಿಯಂದು ಸಂಜೆ ಶ್ರೀ ದೇವರ ಉತ್ಸವ ಹೊರಡುವುದು ವಿಶೇಷತೆಯಾಗಿದೆ.
ನಡೆ ತೆರೆಯುವುದು
ಪತ್ತನಾಜೆಯಂದು ಹಾಕಲಾಗಿದ್ದ ಶ್ರೀ ದೇವಾಲಯದ ಗೋಪುರದಲ್ಲಿರುವ ಉಳ್ಳಾಲ್ತಿಯ ನಡೆಯ ಬಾಗಿಲನ್ನು ಅ. 24ರಂದು ಸಂಜೆ ಶ್ರೀ ದೇವರು ಬಲಿ ಹೊರಡುವ ಮೊದಲು ತೆರೆದು ಶ್ರೀ ದೇವರ ಉತ್ಸವ ಆರಂಭವಾಗುವ ಕುರಿತು ದೈವಕ್ಕೆ ಬ್ರಹ್ಮವಾಹಕರು ಸೂಚನೆ ನೀಡುತ್ತಾರೆ. ಬಳಿಕ ಶ್ರೀ ದೇವಾಲಯದ ನಂದಿ ಮಂಟಪದ ಮುಂದೆ ಬಲೀಂದ್ರ ಮರ ನೆಟ್ಟು ಬಲೀಂದ್ರಪೂಜೆ ನಡೆಯುತ್ತದೆ. ಬಲೀಂದ್ರ ಪೂಜೆಯ ಬಳಿಕ ಶ್ರೀ ದೇವರ ಉತ್ಸವ ಹೊರಡುತ್ತದೆ.
ಅವಲಕ್ಕಿ ತೆಂಗಿನ ಕಾಯಿ ಪ್ರಸಾದ ವಿತರಣೆ
ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಶ್ರೀ ದೇವರ ಬಲಿ ಹೊರಟ ದಿನ ಉತ್ಸವದಲ್ಲಿ ಪಾಲ್ಗೊಂಡ ಸೀಮೆಯ ಭಕ್ತಾಧಿಗಳಿಗೆ ಅವಲಕ್ಕಿ, ತೆಂಗಿನಕಾಯಿಯ ಪ್ರಸಾದವನ್ನು ವಿತರಿಸಲಾಗುತ್ತದೆ. ಶ್ರೀ ದೇವಾಲಯದಲ್ಲಿ ಸಂಪ್ರದಾಯದಂತೆ ದೀಪಾವಳಿಯ ಅಮಾವಾಸ್ಯೆಯಂದು ಶ್ರೀ ದೇವರ ಬಲಿ ಉತ್ಸವ ಮುಗಿದ ಬಳಿಕ ಪ್ರಸಾದ ವಿತರಣೆಯ ಕಾರ್ಯಕ್ರಮ ವಸಂತ ಮಂಟಪದಲ್ಲಿ ನಡೆಯುತ್ತದೆ. ದೇವಾಲಯದಲ್ಲಿ ನಡೆಯುವ ಪ್ರಥಮ ಉತ್ಸವದ ಪ್ರಸಾದ ಸ್ವೀಕರಿಸಲು ನೂರಾರು ಭಕ್ತರು ಆಗಮಿಸುತ್ತಾರೆ.
ಅ.26ಕ್ಕೆ ಸಾಮೂಹಿಕ ಗೋಪೂಜೆ
ಅ.26ಕ್ಕೆ ಸಂಜೆ ದೇವಳದ ವಠಾರದಲ್ಲಿ ಸಾಮೂಹಿಕ ಗೋಪೂಜೆ ನಡೆಯಲಿದೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ತಿಳಿಸಿದ್ದಾರೆ.