ಪುತ್ತೂರು: ಇಂದಿನ ಯುವಜನತೆಯಲ್ಲಿ ಕ್ರೀಡಾಮನೋಭಾವ ಬೆಳೆದರೆ ಜೀವನದ ಪ್ರತಿಕೂಲ ಪರಿಸ್ಥಿತಿಯಲ್ಲೂ ಅವರು ಛಲಬಿಡದೆ ಸಾಧನೆ ಮಾಡಿ ಜೀವನವನ್ನು ರೂಪಿಸಿಕೊಳ್ಳುತ್ತಾರೆ. ಇಂತಹ ಸುದೃಢ ಮನಸ್ಸಿನ ನಾಗರಿಕರೇ ಸ್ವಸ್ಥ ಸಮಾಜದ ರೂವಾರಿಗಳು. ಅದಕ್ಕಾಗಿ ಕ್ರೀಡೆಗಳು ಶಿಕ್ಷಣದ ಅವಿಭಾಜ್ಯ ಅಂಗವಾಗಿರಬೇಕು ಎಂದು ಕೊಂಬೆಟ್ಟು ಶ್ರೀ ರಾಮಕೃಷ್ಣ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಸುನೀತಾ ಎಮ್. ಹೇಳಿದರು.
ನರೇಂದ್ರ ಪ.ಪೂ.ಕಾಲೇಜಿನಲ್ಲಿ ನಡೆದ 2022-೨೩23 ನೇ ಸಾಲಿನ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳ ವಿವಿಧ ತಂಡಗಳ ಶಿಸ್ತುಬದ್ಧ ಪಥಸಂಚಲನ ನಡೆಯಿತು.ಅತಿಥಿಗಳು ಗೌರವ ವಂದನೆ ಸ್ವೀಕರಿಸಿದರು. ಕಾರ್ಯಕ್ರಮದ ಮುಖ್ಯಅತಿಥಿ ಪಾಪೆಮಜಲು ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಪ್ರವೀಣ ರೈ ಬಿ. ಮಾತನಾಡಿ, ಕ್ರಮಬದ್ಧವಾದ ರೀತಿಯಲ್ಲಿ ಜೀವನವನ್ನು ಕಾಪಾಡಿಕೊಳ್ಳಲು ನಮ್ಮ ದೇಹವು ಬಹಳ ಮುಖ್ಯವಾದಂತೆಯೇ ನಮ್ಮ ದೇಹದ ಸಂಪೂರ್ಣ ಬೆಳವಣಿಗೆಗೆ ವ್ಯಾಯಾಮವೂ ಬಹಳ ಮುಖ್ಯ. ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ನಮ್ಮ ದೇಹವು ಉತ್ತಮ ವ್ಯಾಯಾಮವನ್ನು ಪಡೆಯುತ್ತದೆ. ಬೌದ್ಧಿಕ ಮತ್ತು ಮಾನಸಿಕ ಬೆಳವಣಿಗೆಯಲ್ಲಿ ಇದು ಬಹಳ ಮುಖ್ಯವಾಗಿದೆ ಎಂದು ಹೇಳಿದರು.
ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರಮಟ್ಟದ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದ ಸುಪ್ರೀತಾ, ಕೃತಜ್ಞಾ, ಪ್ರಥಮ ವಿಜ್ಞಾನ ವಿಭಾಗದ ಮನೀಷಾ, ಸೃಜನ್, ಪ್ರಥಮ ವಾಣಿಜ್ಯ ವಿಭಾಗದ ಯಶಸ್ವಿನಿಯವರು ಕ್ರೀಡಾಜ್ಯೋತಿಯನ್ನು ತರುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳ ಆಕರ್ಷಕ ಬ್ಯಾಂಡ್ ಸೆಟ್ ಪಥಸಂಚಲನ ಕಾರ್ಯಕ್ರಮಕ್ಕೆ ವಿಶೇಷ ಮೆರುಗನ್ನು ನೀಡಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯ ಸೂರ್ಯನಾಥ ಆಳ್ವ ರವರು ಮಾತನಾಡುತ್ತಾ ವಿದ್ಯಾರ್ಥಿಗಳಲ್ಲಿ ಕ್ರೀಡೆಯು ಸ್ನೇಹ ಮತ್ತು ಒಗ್ಗಟ್ಟಿನ ಭಾವನೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಆತ್ಮವಿಶ್ವಾಸದ ಜೊತೆಗೆ ಸುಧಾರಣೆ, ಸಾಧನೆ ಮತ್ತು ವೈಯಕ್ತಿಕ ಪ್ರಗತಿಯ ಭಾವನೆಗಳನ್ನು ಬೆಳೆಯುವುದರಿಂದ ಉತ್ತಮ ಮತ್ತುಉಜ್ವಲ ಭವಿಷ್ಯಕ್ಕೆ ಸಾಕ್ಷಿಯಾಗುತ್ತದೆ ಎಂದು ಹೇಳಿದರು.
ಈ ಕ್ರೀಡಾಕೂಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ದಾಮೋದರ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಭಾಸ್ಕರ್ ಮತ್ತು ಪವನ್ ರವರು ಸಹಕರಿಸಿದರು. ವಿವೇಕಾನಂದ ಪದವಿ ಕಾಲೇಜಿನ ಎನ್ಸಿಸಿ ವಿದ್ಯಾರ್ಥಿಗಳಾದ ಜಿನಪ್ರಕಾಶ್ ಮತ್ತು ನಿಶಾಂತ್ ರವರು ಸಹಕರಿಸಿದರು.
ವೇದಿಕೆಯಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಸಂತೋಷ ಬಿ. ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ಪ್ರಸಾದ್ ಶ್ಯಾನಭಾಗ್ ಸ್ವಾಗತಿಸಿ ಮಾತನಾಡುತ್ತಾ ದೈಹಿಕ ವ್ಯಾಯಾಮವು ಸ್ವಯಂ ಶಿಸ್ತು, ಇತರರಿಗೆ ಗೌರವ ಅಥವಾ ನಾಯಕತ್ವದ ಕೌಶಲ್ಯಗಳಂತಹ ಅಗತ್ಯ ಮೌಲ್ಯಗಳ ಮತ್ತೊಂದು ಸರಣಿಯನ್ನುಉತ್ತೇಜಿಸುತ್ತದೆ. ತಂಡದಲ್ಲಿ ಕೆಲಸ ಮಾಡುವ ಒಂದು ಉತ್ತಮ ಅವಕಾಶವನ್ನು ಕ್ರೀಡೆಯು ಒದಗಿಸುತ್ತದೆ ಎಂದು ಹೇಳಿದರು.
ಕಾಲೇಜಿನ ಕ್ರೀಡಾ ಸಂಯೋಜಕರಾದ ಮಂಜುಗಣೇಶ್ ವಂದಿಸಿದರು. ಉಪನ್ಯಾಸಕರಾದ ಅಕ್ಷತಾ ಮತ್ತು ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯಾದ ಸುಭಾಷಿತ ಕಾರ್ಯಕ್ರಮ ನಿರೂಪಿಸಿದರು.