ಮಂಗಳೂರು ಸಿಸಿಬಿ ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್ ನೇತೃತ್ವದ ಪೊಲೀಸರ ಕಾರ್ಯಾಚರಣೆ: ಜ್ಯುವೆಲ್ಲರಿ ದರೋಡೆಗೆ ಯತ್ನಿಸಿದ್ದ ಕುಖ್ಯಾತ ಅಂತಾರಾಜ್ಯ ಸಾಹೀಬ್ ಗಂಜ್ ದರೋಡೆ ಗ್ಯಾಂಗ್ ನ 9 ಮಂದಿಯ ಸೆರೆ

0

ಪುತ್ತೂರು: ಮಂಗಳೂರು ನಗರದ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಜ್ಯುವೆಲ್ಲರಿಯೊಂದನ್ನು ಕನ್ನ ಕೊರೆದು ದರೋಡೆಗೆ ಸಂಚು ರೂಪಿಸಿದ್ದ ಕುಖ್ಯಾತ ಆಂತಾರಾಜ್ಯ ಜ್ಯುವೆಲ್ಲರಿ, ಬ್ಯಾಂಕ್ ದರೋಡೆ ಗ್ಯಾಂಗ್ ನ 9 ಮಂದಿಯನ್ನು ದಸ್ತಗಿರಿ ಮಾಡಿ ದರೋಡೆಗಾಗಿ ಸಂಗ್ರಹಿಸಿಟ್ಟಿದ್ದ ವಿವಿಧ ಸಾಮಾಗ್ರಿಗಳನ್ನು ವಶಪಡಿಸಿಕೊಂಡು ಪ್ರಕರಣವನ್ನು ಭೇದಿಸುವಲ್ಲಿ ಮಂಗಳೂರು ಸಿಸಿಬಿ ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್ ನೇತೃತ್ವದ ಪೊಲೀಸರು ಯಶಸ್ವಿಯಾಗಿದ್ದಾರೆ.

ನ.29ರಂದು ರಾತ್ರಿ ವೇಳೆಯಲ್ಲಿ ಮಂಗಳೂರು ನಗರದ ತೊಕ್ಕೊಟ್ಟು ಮಂಚಿಲ ಪರಿಸರದ ಮನೆಯೊಂದರಲ್ಲಿ ಉತ್ತರ ಭಾರತದ ಕುಖ್ಯಾತ ಸಾಹೇಬ್ ಗಂಜ್ ದರೋಡೆ ಗ್ಯಾಂಗ್ ನ ವ್ಯಕ್ತಿಗಳು ತೊಕ್ಕೊಟ್ಟಿನ ಜ್ಯುವೆಲ್ಲರಿ ಅಂಗಡಿಯೊಂದನ್ನು ಕನ್ನ ಕೊರೆದು ದರೋಡೆಗೆ ಸಂಚು ರೂಪಿಸಿದ್ದಾರೆ ಎಂಬ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಘಟಕದ ಪೊಲೀಸ್ ಇನ್ಸ್‌ಪೆಕ್ಟರ್ ಮಹೇಶ್ ಪ್ರಸಾದ್ ರವರ ನೇತೃತ್ವದಲ್ಲಿನ ಮಂಗಳೂರು ಸಿಸಿಬಿ ಪೊಲೀಸರು ಭಾಸ್ಕರ ಬೆಳ್ಚಪಾಡ(65), (ವಾಸ: ಚೆನ್ನಯ ಮೂಲೆ, ಕನ್ಯಾನ ನದಿಯ ಹತ್ತಿರ, ಬಂಟ್ವಾಳ, ಕನ್ಯಾನ, ದಕ್ಷಿಣ ಕನ್ನಡ. ಹಾಲಿ ವಿಳಾಸ- ಉಮ್ಮರ್ ಗಾಂವ್, ಗಾಂಧಿ ಆಸ್ಪತ್ರೆ ಎದುರು, ಗಾಂಧಿವಾಡಿ, ಗುಜರಾತ್), ದಿನೇಶ್ ರಾವಲ್ @ ಸಾಗರ್ @ ದಿಲ್ಲಿ(38), (ವಾಸ: ರೂಮ್ ನಂ-5, ಶಾಂತೀಸ್ ಬಾಯಿ, ಕೆ ಎಲ್ ಚಾಲ್, ಶ್ರೀನಾಥಜಿ ವಾಪಿ ಚಾಲ್, ವಲ್ಸಾದ್, ಗುಜರಾತ್. ಖಾಯಂ ವಿಳಾಸ: ಬೋಜಾನ ಜಿಲ್ಲೆ, ಚನ್ನಾ ಗ್ರಾಮ,ಜೈನಪುರ ತಾಲೂಕು, ಕೈಲಾಲಿ ರಾಜ್ಯ, ನೇಪಾಳ), ಮೊಹಮ್ಮದ್ ಜಾಮೀಲ್ ಶೇಖ್(29),(ವಾಸ: ಮದ್ಯ ನಾರಾಯಣಪುರ ಕಚ್ವಾಕೋಲ, ನಾರಾಯಣಪುರ, ರಾಜಮಹಲ್ ತಾಲೂಕು, ಸಾಹೇಬ್ ಗಂಜ್ ಜಿಲ್ಲೆ, ಜಾರ್ಖಂಡ್ ರಾಜ್ಯ), ಇಂಜಮಾಮ್ ಉಲ್ ಹಕ್(27) (ವಾಸ: ಮಾಣಿಕ ಪಾರಾ ಗ್ರಾಮ, ವಾರ್ಡ್ ನಂ-02, ಪಂಚಾಯತ್ –ಮಾಣಿಕ ಪಾರಾ. ಪಾಕೂರ್,ಮಾಣಿಕಪಾರಾ,ಪಾಕೂರ್ ಜಿಲ್ಲೆ,ಜಾರ್ಖಂಡ್ ರಾಜ್ಯ), ಬಿಸ್ತ ರೂಪ್ ಸಿಂಗ್ (34), (ವಾಸ: 7 ವಿಶ್ವಕರ್ಮ ಸೊಸೈಟಿ, ಲಿಂಬಾಯತ್, ಸೂರತ್, ಗುಜರಾತ್ -ಖಾಯಂ ವಿಳಾಸ:ಸುಖಾಡ್ ಸಾಡೆಪಾನಿ ಗ್ರಾಮ, ಕೈಲಾಲಿ ಜಿಲ್ಲೆ, ಅಂಚಲ್ ರಾಜ್ಯ,ನೇಪಾಳ), ಕೃಷ್ಣ ಬಹದ್ದೂರ್ ಬೋಗಟಿ, ಪ್ರಾಯ(41), (ವಾಸ: ಡೋರ್ ನಂಬ್ರ:8-4-549/258, ಇರಗದ್ದ, ನೇತಾಜಿ ನಗರ, ರಂಗರೆಡ್ಡಿ, ಹೈದರಾಬಾದ್, ಆಂಧ್ರಪ್ರದೇಶ. ಖಾಯಂ ವಿಳಾಸ: ಅಚ್ಚಾಂ ಜಿಲ್ಲಾ, ಡಾಕು-7, ನೇಪಾಳ), ಇಮ್ದದುಲ್ ರಝಾಕ್ ಶೇಖ್, ಪ್ರಾಯ(32), (ವಾಸ: ಅಜಮತ್ತುಲ್ಲಾ ಮನೆ, ಪರಂಗ್ ಪುರ ಅಂಚೆ, ರಾಧಾನಗರ ಪೊಲೀಸ್ ಠಾಣಾ ವ್ಯಾಪ್ತಿ, ಸಾಹೇಬ್ ಗಂಝ್ ಜಿಲ್ಲೆ, ಜಾರ್ಖಂಡ್ ರಾಜ್ಯ), ಬಿವುಲ್ ಶೇಖ್, ಪ್ರಾಯ(31), (ವಾಸ: ವಾರ್ಡ್ ನಂಬ್ರ: 3, ಉತ್ತರ ಪಿಯಾರ್ಪುರ್, ಸಾಹೇಜ್ ಗಂಜ್ ಜಿಲ್ಲಾ, ಜಾರ್ಖಂಡ್ ರಾಜ್ಯ), ಇಮ್ರಾನ್ ಶೇಖ್, ಪ್ರಾಯ(30), (ವಾಸ: ಅಜುಲ್ ತೋಲಾ, ಉತ್ತರ ಪ್ಲಾಝ್ಲಾಚಿ, ಸಾಹೇಜ್ ಗಂಜ್, ಜಾರ್ಖಂಡ್ ರಾಜ್ಯ) ಎಂಬವರನ್ನು ವಶಕ್ಕೆ ಪಡೆದುಕೊಂಡು ಜ್ಯುವೆಲ್ಲರಿ ದರೋಡೆಯನ್ನು ವಿಫಲಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳೆಲ್ಲರೂ ಉತ್ತರ ಭಾರತ ಮೂಲದ ಕುಖ್ಯಾತ ಸಾಹೇಬ್ ಗಂಜ್ ದರೋಡೆ ಗ್ಯಾಂಗ್ ಸದಸ್ಯರಾಗಿದ್ದು, ಮಂಗಳೂರು ತೊಕ್ಕೊಟ್ಟಿನ ಸೂಪರ್ ಜ್ಯುವೆಲ್ಲರಿ ಅಂಗಡಿಯನ್ನು ದರೋಡೆ ಮಾಡುವ ಉದ್ದೇಶದಿಂದ ಸುಮಾರು 15 ದಿನಗಳ ಹಿಂದೆ ಮಂಗಳೂರಿಗೆ ರೈಲಿನಲ್ಲಿ ಬಂದು ನಂತರ ತೊಕ್ಕೊಟ್ಟು ಬಳಿಯ ಲಾಡ್ಜ್ ವೊಂದರಲ್ಲಿ ಹಾಗೂ ತೊಕ್ಕೊಟ್ಟು ಮಂಚಿಲ ಬಳಿಯ ವ್ಯಕ್ತಿಯೊಬ್ಬರ ಮನೆಯೊಂದನ್ನು ಬಾಡಿಗೆಗೆ ಪಡೆದುಕೊಂಡು ನಂತರ ದರೋಡೆಗೆ ಸಂಚು ರೂಪಿಸಿದ್ದರು. ಸೂಪರ್ ಗೋಲ್ಡ್ & ಡೈಮಂಡ್ಸ್ ಜ್ಯುವೆಲ್ಲರಿಯನ್ನು ಗುರುತಿಸಿಕೊಂಡು ದರೋಡೆಗೆ ಬೇಕಾದ ಗ್ಯಾಸ್ ಕಟ್ಟರ್, ಅಕ್ಸಿಜನ್ ಸಿಲಿಂಡರ್, ಗ್ಯಾಸ್ ಸಿಲಿಂಡರ್, ಗ್ಯಾಸ್ ಕಟ್ಟಿಂಗ್ ನೋಝಲ್, ಕಟ್ಟಿಂಗ್ ಹೋಸ್ ಪೈಪ್, ಲೆದರ್ ಹ್ಯಾಂಡ್ ಗ್ಲೌಸ್, ಕಬ್ಬಿಣದ ರಾಡ್, ತಲವಾರು, ಅಕ್ಸೋ ಬ್ಲೇಡ್, ಹ್ಯಾಮರ್, ಸ್ಕ್ರೂಡ್ರೈವರ್, ಮೆಣಸಿನ ಹುಡಿ, ನೈಲಾನ್ ಹಗ್ಗ ಹಾಗೂ ಇತರ ಹಲವಾರು ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳಿಂದ ಸ್ವಾಧೀನಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ ರೂ. 2,90,000/- ಆಗಿರುತ್ತದೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚೆಗೆ ಮಂಗಳೂರು ನಗರದ ಕೊಣಾಜೆ ಠಾಣಾ ವ್ಯಾಪ್ತಿಯ ನಾಟೆಕಲ್, ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಆಂಬಿಕಾ ರೋಡ್, ಉಚ್ಚಿಲ ಬಳಿಯಿಂದ ರಾತ್ರಿ ವೇಳೆಯಲ್ಲಿ ಮೂರು ದ್ವಿಚಕ್ರ ವಾಹನದ ಸವಾರರನ್ನು ಅಡ್ಡಗಟ್ಟಿ ಹಿಂದಿ ಭಾಷೆಯಲ್ಲಿ ಬೈದು ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಿ ಅವರಿಂದ ಸ್ಕೂಟರ್ ಗಳನ್ನು ಬಲವಂತವಾಗಿ ಸುಲಿಗೆ ಮಾಡಿದ್ದರು. ಈ ಸ್ಕೂಟರ್ ನ ಪತ್ತೆಯ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದ ಸಮಯ ಇದೇ ಸಾಹೇಜ್ ಗಂಜ್ ದರೋಡೆ ಗ್ಯಾಂಗ್ ಆರೋಪಿಗಳು ಜ್ಯುವೆಲ್ಲರಿ ದರೋಡೆ ನಡೆಸಲು ಸಂಚು ರೂಪಿಸುವ ಸಮಯ ಸ್ಥಳೀಯವಾಗಿ ಓಡಾಟದ ಸಲುವಾಗಿ ಈ ಸ್ಕೂಟರ್ ಗಳ ಸವಾರರಿಗೆ ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಿ ಸುಲಿಗೆ ಮಾಡಿ ಉಪಯೋಗಿಸುತ್ತಿದ್ದರು. ಮೂರು ಸ್ಕೂಟರ್ ಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

ಆರೋಪಿಗಳ ಪೈಕಿ ಭಾಸ್ಕರ ಬೆಳ್ಚಡ, ದಿನೇಶ್ ರಾವಲ್ @ ಸಾಗರ್ @ ದಿಲ್ಲಿ, ಇಂಜಮಾಮ್ ಉಲ್ ಹಕ್, ಬಿಸ್ತ ರೂಪ್ ಸಿಂಗ್, ಕೃಷ್ಣ ಬಹದ್ದೂರ್ ಬೋಗಟಿ ಎಂಬವರ ವಿರುದ್ಧ ಮುಂಬೈ,ಪುಣಿ, ಸೂರತ್, ಮಧ್ಯಪ್ರದೇಶದ ಮಾಧವ ನಗರ, ಕೇರಳದ ತ್ರಿಶೂರ್, ಪಂಜಾಬ್ ರಾಜ್ಯಗಳಲ್ಲಿನ ವಿವಿಧ ಪೊಲೀಸ್ ಠಾಣೆಗಳಲ್ಲಿ ಬ್ಯಾಂಕ್ ದರೋಡೆ, ಜ್ಯುವೆಲ್ಲರಿ ದರೋಡೆ ಪ್ರಕರಣಗಳು ದಾಖಲಾಗಿದೆ.
ಈ ಕುಖ್ಯಾತ ಸಾಹೇಬ್ ಗಂಜ್ ದರೋಡೆ ಗ್ಯಾಂಗ್ ನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ಪೊಲೀಸ್ ನಿರೀಕ್ಷಕರಾದ ಪುತ್ತೂರು ಮೂಲದವರೇ ಆಗಿದ್ದು ಈ ಹಿಂದೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ವೃತ್ತ ನಿರೀಕ್ಷಕರಾಗಿದ್ದ ಮಹೇಶ್ ಪ್ರಸಾದ್, ಪಿಎಸ್ಐ ರಾಜೇಂದ್ರ ಬಿ, ಪ್ರದೀಪ ಟಿ ಆರ್, ಎಎಸ್ಐಯವರಾದ ಶಶಿಧರ ಶೆಟ್ಟಿ, ಮೋಹನ್ ಕೆ ವಿ, ಹರೀಶ ಪಿ ಹಾಗೂ ಸಿಸಿಬಿ ಸಿಬ್ಬಂದಿಯವರು ಪಾಲ್ಗೊಂಡಿದ್ದರು.

“ಸಾಹೇಜ್ ಗಂಜ್ ಗ್ಯಾಂಗ್”

ಸಾಹೇಬ್ ಗಂಜ್ ಗ್ಯಾಂಗ್ ಎಂಬುವುದು ಉತ್ತರ ಭಾರತದ ಜಾರ್ಖಂಡ್ ರಾಜ್ಯದ ಕುಖ್ಯಾತ ದರೋಡೆ ಗ್ಯಾಂಗ್ ಆಗಿದ್ದು, ಈ ಗ್ಯಾಂಗ್ ನಲ್ಲಿ ನೇಪಾಳ ದೇಶದ ಪ್ರಜೆಗಳು ಕೂಡಾ ಇದ್ದು, ಇವರು ಪ್ರಮುಖವಾಗಿ ದೊಡ್ಡ ದೊಡ್ಡ ನಗರಗಳಲ್ಲಿನ ಬ್ಯಾಂಕ್, ಜ್ಯುವೆಲ್ಲರಿ ಅಂಗಡಿಗಳನ್ನು ಗುರುತಿಸಿ ಅಲ್ಲಿಯ ಪರಿಸರದಲ್ಲಿ ಬಾಡಿಗೆಗೆ ಮನೆ/ಲಾಡ್ಜ್ ಗಳನ್ನು ಮಾಡಿಕೊಂಡು ಸ್ಥಳೀಯವಾಗಿ ದರೋಡೆ ಮಾಡಲು ಬೇಕಾದ ಸಲಕರಣೆಗಳನ್ನು ಖರೀದಿಸಿಕೊಂಡು ನಂತರ ಜ್ಯುವೆಲ್ಲರಿ ಅಂಗಡಿ, ಬ್ಯಾಂಕ್ ಗಳ ಗೋಡೆ ಕನ್ನ ಕೊರೆದು, ಗ್ಲಾಸ್ ಕಟ್ಟರ್ ಮೂಲಕ ತಿಜೋರಿಯನ್ನು ಒಡೆದು ಕೋಟ್ಯಾಂತರ ಮೌಲ್ಯದ ಸೊತ್ತುಗಳನ್ನು ದರೋಡೆ ಮಾಡುವ ಕುಖ್ಯಾತ ಗ್ಯಾಂಗ್ ಆಗಿದ್ದು, ಈ ಗ್ಯಾಂಗ್ ನಲ್ಲಿದ್ದವರು ದೇಶದ ವಿವಿಧೆಡೆಗಳಲ್ಲಿ ಈ ಹಿಂದೆ ನಡೆದ ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಈ ಗ್ಯಾಂಗ್ ನಲ್ಲಿ ನೇಪಾಳ ದೇಶದ ಹಲವಾರು ಮಂದಿ ಆರೋಪಿಗಳಿದ್ದು ಇವರು ಕೃತ್ಯ ನಡೆಸಿದ ನಂತರ ಸೊತ್ತಿನೊಂದಿಗೆ ನೇಪಾಳಕ್ಕೆ ಪರಾರಿಯಾಗುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿದೆ.

LEAVE A REPLY

Please enter your comment!
Please enter your name here