ಪುತ್ತೂರು: ಸುಮಾರು 18 ವರ್ಷಗಳಿಂದ ಕುಶಲ ಹಾಸ್ಯ ಪ್ರಿಯರ ಸಂಘದ ಎಲ್ಲಾ ಚಟುವಟಿಕೆಗಳಿಗೆ ಅನುರಾಗ ವಠಾರದಲ್ಲಿ ಉಚಿತವಾಗಿ ಸ್ಥಳಾವಕಾಶವನ್ನು ಒದಗಿಸಿಕೊಡುತ್ತಿರುವ ಹಿರಿಯ ವಕೀಲ, ವಿಚಾರವಾದಿ ಪುರಂದರ ಭಟ್ ಕುಶಲ ಹಾಸ್ಯಪ್ರಿಯರ ಸಂಘದ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದರು.
ಪ್ರಸ್ತುತ ಸಮಾಜದಲ್ಲಿ ಧರ್ಮ, ಕರ್ಮಗಳ ನೆವನದಲ್ಲಿ ನಡೆಯುತ್ತಿರುವ ಅನಾಚಾರಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಅವರು, ಜೀವಗಳ ಮೂಲ ಸ್ವರೂಪವಾದ ಅಂಡ, ಬ್ರಹ್ಮಾಂಡ, ಪಿಂಡಾಂಡಗಳ ಉಗಮ, ಅವುಗಳ ಗತಿ, ಸ್ಥಿತಿ, ಕೊನೆ ಹಾಗೂ ಬ್ರಾಹ್ಮಣ್ಯತ್ವದ ಕುರಿತ ತಪ್ಪು ತಿಳುವಳಿಕೆಗಳ ಬೆಳಕು ಚೆಲ್ಲಿದರು. ಇಂದಿನ ಅನಾರೋಗ್ಯಕರ ಆಹಾರ, ವ್ಯವಹಾರಗಳ ಬಗ್ಗೆ ಗಮನ ಸೆಳೆದು, ಇನ್ನಾದರೂ ಆತ್ಮಾವಲೋಕನ ಮಾಡಿಕೊಳ್ಳುತ್ತ ಎಚ್ಚೆತ್ತುಕೊಳ್ಳುವಂತೆ ಕರೆ ನೀಡಿದರು.