ಉಪ್ಪಿನಂಗಡಿ:ದ್ಚಿಚಕ್ರ ವಾಹನ ಹಾಗೂ ಓಮ್ನಿ ಕಾರು ಡಿಕ್ಕಿಯಾಗಿ ದ್ವಿಚಕ್ರ ಸವಾರ ಗಂಭೀರ ಗಾಯಗೊಂಡ ಘಟನೆ ಪುಳಿತ್ತಡಿ ಸಮೀಪದ ನೆಡ್ಚಿಲ್ ಎಂಬಲ್ಲಿ ಡಿ.20ರ ರಾತ್ರಿ ನಡೆದಿದೆ.
ಕಂಚಿಬೆಟ್ಟುವಿನ ಹಣ್ಣು- ಹಂಪಲು ಮಾರಾಟ ಮಾಡುತ್ತಿದ್ದ ಕೊಯಿಲ ನಿವಾಸಿ ನಝೀರ್ ಎಂಬವರ ಪುತ್ರ ಉಬ್ಬಿ ಗಾಯಗೊಂಡ ದ್ವಿಚಕ್ರ ಸವಾರ ಎಂದು ತಿಳಿದು ಬಂದಿದೆ. ಉಪ್ಪಿನಂಗಡಿ ಕಡೆಯಿಂದ ಕೆಮ್ಮಾರ ಕಡೆಗೆ ಬರುತ್ತಿದ್ದ ಇವರ ದ್ವಿಚಕ್ರ ವಾಹನ ಹಾಗೂ ಕೆಮ್ಮಾರ ಕಡೆಯಿಂದ ಉಪ್ಪಿನಂಗಡಿ ಕಡೆಗೆ ಬರುತ್ತಿದ್ದ ಓಮ್ನಿ ನಡುವೆ ನೆಡ್ಚಿಲ್ ತಿರುವಿನಲ್ಲಿ ಡಿಕ್ಕಿ ಸಂಭವಿಸಿದೆ. ಕಾಲಿಗೆ ಗಂಭೀರ ಗಾಯಗೊಂಡ ದ್ವಿಚಕ್ರ ಸವಾರನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ರಭಸಕ್ಕೆ ಒಮ್ನಿ ರಸ್ತೆಯ ವಿರುದ್ಧ ದಿಕ್ಕಿನ ಚರಂಡಿಗೆ ಇಳಿದಿದೆ.ಒಮ್ನಿಯಲ್ಲಿದ್ದವರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.
ರಸ್ತೆ ಗುಂಡಿಯೇ ಕಾರಣ:
ರಾಜ್ಯದಲ್ಲಿ ಸಿದ್ಧರಾಮಯ್ಯ ಸರಕಾರವಿದ್ದಾಗ ಹಳೆಗೇಟು-ಮರ್ದಾಳ ರಾಜ್ಯ ಹೆದ್ದಾರಿಗೆ ಅನುದಾನ ಬಂದಿತ್ತು. ಶಕುಂತಳಾ ಶೆಟ್ಟಿಯವರ ಶಾಸಕತ್ವದ ಕೊನೆಯ ಅವಧಿಯಲ್ಲಿ ಈ ಕಾಮಗಾರಿ ಆರಂಭವಾಗಿತ್ತು. ಈ ಕಾಮಗಾರಿಯನ್ನು ಹಳೆಗೇಟಿನಿಂದ ಕೊಯಿಲದವರೆಗೆ ವಹಿಸಿಕೊಂಡಿದ್ದ ಗುತ್ತಿಗೆದಾರ ಇಲ್ಲಿ ಸರಿಯಾಗಿ ಡಾಮರು ಕಾಮಗಾರಿ ಮಾಡಿರಲಿಲ್ಲ. ಬಳಿಕ ಲೋಕೋಪಯೋಗಿ ಇಲಾಖೆ ಆತನನ್ನು ಬ್ಲಾಕ್ ಲಿಸ್ಟಿಗೆ ಸೇರಿಸಿತ್ತು. ಆದ್ದರಿಂದ ಇಲ್ಲಿ ಪೂರ್ಣ ಕಾಮಗಾರಿ ಆಗಲೇ ಇಲ್ಲ. ಬ್ಲಾಕ್ ಲಿಸ್ಟ್ನಲ್ಲಿ ಸೇರಿ ಹೋದ ಗುತ್ತಿಗೆದಾರ ಮತ್ತೊಂದು ಕಡೆ ಬೇರೆಯವರ ಹೆಸರಲ್ಲಿ ಗುತ್ತಿಗೆ ಪಡೆದುಕೊಂಡು ಕಾಮಗಾರಿ ನಡೆಸುತ್ತಿರುವುದಾಗಿ ಹೇಳಲಾಗುತ್ತಿದೆ. ದೇವರು ಕೊಟ್ಟರೂ ಪೂಜಾರಿ ಬಿಡ ಎಂಬ ಗಾದೆ ಮಾತಿನಂತೆ ದಿನಾ ಹೊಂಡ-ಗುಂಡಿಗಳಿಂದ ಕೂಡಿದ ರಸ್ತೆಯಲ್ಲೇ ಸಂಚರಿಸುವ ದುರ್ಗತಿ ಇಲ್ಲಿನ ಸಾರ್ವಜನಿಕರದ್ದು. ಇಲ್ಲಿನ ರಸ್ತೆಯ ಅವ್ಯವಸ್ಥೆಯೇ ಈ ಅಪಘಾತಕ್ಕೆ ಕಾರಣ ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.