ನಮ್ಮ ಪರಿವರ್ತನೆಗೆ ಧಾರ್ಮಿಕ ಕೇಂದ್ರಗಳು ಪೂರಕ: ಕಣಿಯೂರು ಶ್ರೀ
ವಿಟ್ಲ: ಭಗವಂತನ ರಕ್ಷೆ ಇದ್ದರೆ ಏನನ್ನೂ ಸಾಧಿಸಲು ಸಾಧ್ಯ. ನಮ್ಮ ಪರಿವರ್ತನೆಗೆ ಧಾರ್ಮಿಕ ಕೇಂದ್ರಗಳು ಪೂರಕ. ಶಿಸ್ತು, ನಿಯಮ, ಬದ್ಧತೆಯನ್ನು ನಾವು ಮೈಗೂಡಿಸಬೇಕು. ನಮ್ಮ ಅಂತರಂಗ, ಬಹಿರಂಗ ಶುದ್ಧವಾಗಿರಬೇಕು ಎಂದು ಕಣಿಯೂರು ಶ್ರೀ ಚಾಮುಂಡೇಶ್ವರೀ ದೇವೀ ಕ್ಷೇತ್ರದ ಶ್ರೀ ಮಾಹಾಬಲೇಶ್ವರ ಸ್ವಾಮೀಜಿ ಹೇಳಿದರು.
ಅವರು ಡಿ.೩೦ರಂದು ವಿಟ್ಲದ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ನಡೆದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ವಾರ್ಷಿಕ ಜಾತ್ರೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ದೇವಸ್ಥಾನದ ಏಳು ಬೀಳಿನ ವಿಚಾರ ಅದನ್ನು ನಡೆಸುತ್ತಿರುವವರಿಗೆ ಗೊತ್ತು. ಗುರು ಸ್ವಾಮಿಯವರು ನಡೆದು ಬಂದ ಪಥ ಅದು ಬಹಳ ಕಠಿಣವಾಗಿದೆ. ಜೀವನದ ಗುರಿ ಮುಟ್ಟಲು ಗುರು ಅಗತ್ಯ. ಸಾಮಾಜದ ಏಳಿಗೆಗೆ ಎಲ್ಲರ ಸಹಕಾರ ಅಗತ್ಯ. ಹಿಂದೂ ಧರ್ಮದ ರಕ್ಷಣೆಯಾಗಲಿ. ನಾವು ಯೋಚಿಸಿದ ಕಾರ್ಯಕ್ರಮ ಸಾಂಗವಾಗಿ ನಡೆಯುವಂತಾಗಲಿ ಎಂದು ಹೇಳಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಶ್ರೀಕ್ಷೇತ್ರ ಕಟೀಲಿನ ಅನುವಂಶಿಕ ಪ್ರಧಾನ ಅರ್ಚಕರಾದ ಶ್ರೀ ಕಮಲಾದೇವಿ ಅಸ್ರಣ್ಣರವರು ಆಶೀರ್ವಚನ ನೀಡಿ ಅಯ್ಯಪ್ಪ ವೈಶಿಷ್ಠ್ಯ ಪೂರ್ಣ ದೇವರು. ಧರ್ಮ ನಡೆಸಲು ಸ್ವಾಮೀಜಿಗಳು ಅಗತ್ಯ. ಧಾರ್ಮಿಕ ನಂಬಿಕೆಗಳಿಂದ ನಮಗೆ ರಕ್ಷಣೆ ಸಿಗಲು ಸಾಧ್ಯ. ನಮ್ಮ ಆಚರಣೆಗಳು ಕಿರಿಯರಿಗೆ ದಾರಿದೀಪವಾಗಬೇಕು. ಭಾರತೀಯ ಧರ್ಮದಲ್ಲಿ ವೈಶಿಷ್ಟ್ಯ ಪೂರ್ಣ ಆದರ್ಶಗಳಿವೆ. ಸಾನಿಧ್ಯಗಳ ವೃದ್ಧಿ ದೇಶದ ಬದ್ಧತೆಗೆ ಪೂರಕ. ಇಂತಹ ಬ್ರಹ್ಮಕಲಶಗಳು ಒಡೆದ ಮನಸ್ಸುಗಳ ಒಗ್ಗೂಡುವಿಕೆಗೆ ಬಹಳಷ್ಟು ಪೂರಕ ಎಂದರು.
ಒಡಿಯೂರು ಶ್ರೀ ವಿವಿದೋದ್ಧೇಶ ಸೌಹಾರ್ದ ಸಹಕಾರಿಯ ಅಧ್ಯಕ್ಷ ಸುರೇಶ್ ರೈರವರು ಮಾತನಾಡಿ ಸ್ವಾಮಿಯ ವೃತಾಚರಣೆ ಮಾಡುವುದು ಪುಣ್ಯದ ಕೆಲಸವಾಗಿದೆ. ಆಧ್ಯಾತ್ಮಿಕವಾಗಿ ನಡೆದಾಗ ನೆಮ್ಮದಿ ಜಾಸ್ತಿ. ಧಾರ್ಮಿಕ ಕಾರ್ಯಕ್ರಮಗಳಿಂದಾಗಿ ನಮ್ಮ ಸಂಸ್ಕಾರಗಳು ಉಳಿದಿವೆ ಎಂದರು.
ಕೋಡಿಂಬಾಡಿ ರೈ ಎಸ್ಟೇಟ್ ನ ಮಾಲಕರಾದ ಅಶೋಕ್ ಕುಮಾರ್ ರೈ ಕೋಡಿಂಬಾಡಿ ರವರು ಮಾತನಾಡಿ, ಬ್ರಹ್ಮಕಲಶವೆಂಬುದು ಬಹಳ ದೊಡ್ಡ ಕೆಲಸ. ಮಹಿಳೆಯರು ಜಾಗೃತಿಯಾಗುವುದರ ಜೊತೆಗೆ ಪುರುಷರು ಜಾಗೃತರಾಗಬೇಕು. ಧರ್ಮ ಸಂಸ್ಕೃತಿಯನ್ನು ಉಳಿಸಲು ಎಲ್ಲರು ಒಂದಾಗಬೇಕು. ನಮ್ಮ ತಂದೆ ತಾಯಿಯ ಆಶೀರ್ವಾದ ನಮಗಿದ್ದರೆ ದೇವರ ಆಶೀರ್ವಾದ ಪ್ರಾಪ್ರಿಯಾಗುತ್ತದೆ. ನಮ್ಮ ಆಚಾರ ವಿಚಾರ ಬದಲಾಗಬೇಕು. ನಮ್ಮ ಮನಸ್ಸುಗಳನ್ನು ವೃದ್ದಿಸಬೇಕು. ದೇಶ ಉಳಿದರೆ ನಮ್ಮ ಕನಸು ಉಳಿಯಲು ಸಾಧ್ಯ ಎಂದು ಹೇಳಿದರು.
ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಎಲ್.ಎನ್.ಕುಡೂರು, ಶ್ರೀ ಅಯ್ಯಪ್ಪ ಸ್ಚಾಮಿ ಸೇವಾ ಸಮಿತಿಯ ಅಧ್ಯಕ್ಷರಾದ ನಾರಾಯಣ ಯಾನೆ ಬಟ್ಟು ಸ್ವಾಮಿ, ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಮಿತಿಯ ಕೋಶಾಧಿಕಾರಿ ಸುರೇಶ್ ಬನಾರಿ, ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯಾಧ್ಯಕ್ಷ ಅಶೋಕ್ ಕುಮಾರ್ ರೈ ಅರ್ಪಿಣಿಗುತ್ತು, ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ರೈ ಕಲ್ಲಂಗಳಗುತ್ತು, ಪುಷ್ಪಕ್ ಕ್ಲಿನಿಕ್ ನ ವೈದ್ಯರಾದ ಡಾ| ವಿ.ಕೆ.ಹೆಗ್ಡೆ, ದಿವ್ಯಪ್ರಭಾ ಗೌಡ ಚಿಲ್ತಡ್ಕ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಶ್ರೀ ಅಯ್ಯಪ್ಪ ಸ್ಚಾಮಿ ಸೇವಾ ಸಮಿತಿಯ ಅಧ್ಯಕ್ಷರಾದ ನಾರಾಯಣ ಯಾನೆ ಬಟ್ಟು ಸ್ವಾಮಿರವರನ್ನು ಸನ್ಮಾನಿಸಲಾಯಿತು. ಕಮಲ, ಮಾಲತಿ, ಐತ್ತಪ್ಪ, ವಿಠಲ ಶೆಟ್ಟಿ ಚಂದಳಿಕೆ ಸಹಿತ ಕ್ಷೇತ್ರದ ಕೆಲಸಗಳಲ್ಲಿ ಸಹಕಾರ ನೀಡಿದ ಹಲವರನ್ನು ಗೌರವಿಸಲಾಯಿತು.
ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ರಾಧಾಕೃಷ್ಣ ಶೆಟ್ಟಿ ದಡ್ಡಂಗಡಿ ಚೆಲ್ಲಡ್ಕ ಸ್ವಾಗತಿಸಿದರು. ಡಾ. ಕೆ.ಟಿ.ರೈ ಕೆದಂಬಾಡಿ ಹಾಗೂ ಸುರೇಶ್ ಶೆಟ್ಟಿ ಪಡಿಬಾಗಿಲು ಕಾರ್ಯಕ್ರಮ ನಿರೂಪಿಸಿದರು. ದೇವಿಪ್ರಸಾದ್ ಶೆಟ್ಟಿ ಬೆಂಜಂತಿಮಾರ್ ವಂದಿಸಿದರು.
ವೈದ್ಧಿಕ ಕಾರ್ಯಕ್ರಮ:
ಬೆಳಗ್ಗೆ ೭ರಿಂದ ಮಹಾಗಣಪತಿ ಹವನ, ಬೆಳಗ್ಗಿನ ಪೂಜೆ, ದೇವರಿಗೆ ಪಂಚಾಮೃತ ಅಭಿಷೇಕ ಸಹಿತ ವೈದಿಕ ಕಾರ್ಯಕ್ರಮಗಳು ನಡೆಯಿತು. ಬಳಿಕ ಮಹಾಮಂಗಳಾರತಿ ನಡೆದು ಮಧ್ಯಾಹ್ನ ಮಹಾಪೂಜೆ ನಡೆದು ಅನ್ನ ಸಂತರ್ಪಣೆ ನಡೆಯಿತು. ಅಪರಾಹ್ನ ೫ ಗಂಟೆಯಿಂದ ರಂಗಪೂಜೆ, ದುರ್ಗಾಪೂಜೆ, ಉತ್ಸವಬಲಿ ನಡೆಯಿತು.
ಇಂದು ಕ್ಷೇತ್ರದಲ್ಲಿ ಶ್ರೀ ಭೂತಬಲಿ, ದರ್ಶನಬಲಿ
ಜ.೧ರಂದು ಬೆಳಗ್ಗೆ ಶ್ರೀ ಭೂತಬಲಿ, ದರ್ಶನಬಲಿ, ರಾಜಾಂಗಣ ಪ್ರಸಾದ, ಬೆಳಗ್ಗೆ ಪೂಜೆ, ಮಧ್ಯಾಹ್ನ ಪೂಜೆ ನಡೆದು ಪ್ರಸಾದ ವಿತರಣೆ ನಡೆದು ಅನ್ನಸಂತರ್ಪಣೆ ನಡೆಯಲಿದೆ. ಸಾಯಂಕಾಲ ಕಲಶ ಪೂರಣೆ, ಪೇಟೆಸವಾರಿ, ಶುದ್ಧ ಕಲಶಾಭಿಷೇಕ ನಡೆದು ರಾತ್ರಿ ಪೂಜೆಯ ಬಳಿಕ ಪ್ರಸಾದ ವಿತರಣೆ ನಡೆದು ಅನ್ನಸಂತರ್ಪಣೆ ನಡೆಯಲಿದೆ.