




ಸರಕಾರಿ ಶಾಲೆಯ ಮಕ್ಕಳು ಯಾವುದೇ ಸೌಲಭ್ಯದಿಂದ ವಂಚಿತರಾಗಬಾರದು: ಮಠಂದೂರು



ಪುತ್ತೂರು: ಸರಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯ ಸೇರಿದಂತೆ ಕಲಿಕೆಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಸರಕಾರ ಮಾಡುತ್ತಿದ್ದು ಖಾಸಗಿ ಶಾಲೆಗಳನ್ನು ಮೀರಿಸುವಂತೆ ಸರಕಾರಿ ಶಾಲೆಗಳು ಕಲಿಕೆಯಲ್ಲಿ ಸಾಮರ್ಥ್ಯವನ್ನು ಹೆಚ್ಚಿಸಲಿದೆ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದರು.






ಅವರು ಕುಂಬ್ರ ಕರ್ನಾಟಕ ಪಬ್ಲಿಕ್ ಸ್ಕೂಲ್ನಲ್ಲಿ ನಡೆದ ಕುಂಬ್ರ ಕ್ಲಸ್ಟರ್ ಮಟ್ಟದ ಮಕ್ಕಳ ಕಲಿಕಾ ಹಬ್ಬದಲ್ಲಿ ಸ್ಮಾರ್ಟ್ ಕ್ಲಾಸ್ ಉದ್ಘಾಟಿಸಿ ಮಾತನಾಡಿದರು.
ಕೆಪಿಎಸ್ ಮೂಲಕ ಎಲ್ಕೆಜಿಯಿಂದ ಪಿಯುಸಿ ತನಕ ಒಂದೇ ಕಡೆಯಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸ ಮಾಡುವ ಅವಕಾಶವನ್ನು ಕಲ್ಪಿಸಲಾಗಿದೆ. ಸ್ಮಾರ್ಟ್ ಕ್ಲಾಸ್ ಮೂಲಕ ವಿದ್ಯಾರ್ಥಿಗಳು ಇನ್ನಷ್ಟು ಸ್ಮಾರ್ಟ್ ಆಗಬಹುದಾಗಿದೆ. ಕಲಿಯುವ ಆಸಕ್ತಿಯನ್ನು ಹೆಚ್ಚಿಸುವ ಉದ್ದೇಶದಿಂದ ಮತ್ತು ಮಕ್ಕಳಿಗೆ ನೆರವಾಗುವ ನಿಟ್ಟಿನಲ್ಲಿ ತಾಲೂಕಿನ ಎಲ್ಲಾ ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್ ಮತ್ತು ಶುದ್ದ ಕುಡಿಯುವ ನೀರಿನ ಘಟಕವನ್ನು ನೀಡಲಾಗಿದೆ. ವಿದ್ಯೆಯ ಜೊತೆಗೆ ಆರೋಗ್ಯವನ್ನು ಕೂಡಾ ಕಾಪಾಡಬೇಕಿದೆ ಎಂದು ಹೇಳಿದರು. ಸರಕಾರಿ ಶಾಲೆಗಳಲ್ಲಿ ಕೊಠಡಿಗಳ ಕೊರತೆ ಮತ್ತು ಬೆಂಚು, ಡೆಸ್ಕ್ಗಳ ಕೊರತೆ ಇರುವಲ್ಲಿ ಅವುಗಳನ್ನು ಹಂತ ಹಂತವಾಗಿ ಪರಿಹರಿಸಲಾಗಿದೆ. ಕಲಿಯುವ ಮುಗ್ದ ಮನಸ್ಸಿಗೆ ಬೇಕಾದ ಎಲ್ಲಾ ನೆರವು ನೀಡಲು ಸರಕಾರ ಸಿದ್ದವಾಗಿದೆ ಎಂದ ಅವರು ಪೋಷಕರು ಮಕ್ಕಳನ್ನು ಸರಕಾರಿ ಶಾಲೆಗೆ ದಾಖಲಿಸುವ ಮೂಲಕ ಶಾಲೆಯನ್ನು ಉಳಿಸಿ ಬೆಳೆಸುವ ಕಾರ್ಯ ಮಾಡಬೇಕೆಂದು ಹೇಳಿದರು.
ಮಕ್ಕಳ ಪ್ರತಿಭೆಗಳ ಪ್ರದರ್ಶಿಸುವ ಹಬ್ಬ: ನಿತೀಶ್ ಕುಮಾರ್
ಸರಕಾರ ಪ್ರತೀ ಸರಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಕಲಿಕಾ ಹಬ್ಬ ಕಾರ್ಯಕ್ರಮವನ್ನು ಆಯೋಜನೆ ಮಾಡಿರುವುದು ಉತ್ತಮ ಕಾರ್ಯವಾಗಿದೆ. ಮಕ್ಕಳು ತಮ್ಮಲ್ಲಿರುವ ಪ್ರತಿಭೆಗಳನ್ನು ಅನಾವರಣಗೊಳಿಸುವ ಮೂಲಕ ಪರಸ್ಪರ ಅರಿತುಕೊಳ್ಳಲು, ಜ್ಞಾನ ವೃದ್ದಿಸಲು ಈ ಹಬ್ಬ ಪ್ರಯೋಜನಕಾರಿಯಾಗಲಿದೆ. ಕುಂಬ್ರ ಶಾಲೆಯಲ್ಲಿ 11 ಶಾಲೆಗಳ ವಿದ್ಯಾರ್ಥಿಗಳಿಗೆ ಹಬ್ಬದಲ್ಲಿ ಭಾಗವಹಿಸಲು ಅವಕಾಶವನ್ನು ಒದಗಿಸಲಾಗಿದೆ. ಪ್ರತೀಯೊಬ್ಬ ವಿದ್ಯಾರ್ಥಿಯಲ್ಲೂ ಪ್ರತಿಭೆ ಇದೆ. ಅವುಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಶಿಕ್ಷಕ ಮತ್ತು ಪೋಷಕರಿಂದ ಆದಾಗ ಮಾತ್ರ ನಮ್ಮ ಮಕ್ಕಳು ಪ್ರತಿಭಾನ್ವಿತರಾಗಲು ಸಾಧ್ಯ ಎಂಬುದನ್ನು ನಾವು ಅರಿತುಕೊಳ್ಳಬೇಕು ಎಂದು ಹೇಳಿದ ಅವರು ಕೇವಲ ಅಂಕಗಳಿಸುವುದು ಮಾತ್ರ ಪ್ರತಿಭೆಯಲ್ಲ. ಪ್ರತಿಭೆಗಳು ನಾನಾ ರೂಪದಲ್ಲಿದ್ದು ಅದಕ್ಕೆ ತಕ್ಕ ವೇದಿಕೆ ಸಿಕ್ಕಿದರೆ ಮಾತ್ರ ಅದು ಅನಾವರಣಗೊಳ್ಳುತ್ತದೆ. ಸರಕಾರ ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇರಿಸಿದೆ ಎಂದು ಹೇಳಿದರು.
11 ಶಾಲೆ 120 ವಿದ್ಯಾರ್ಥಿಗಳು
ಕುಂಬ್ರ ಕ್ಲಸ್ಟರ್ ಸಿಆರ್ಪಿ ಶಶಿಕಲಾರವರು ಮಾತನಾಡಿ ಕುಂಬ್ರದಲ್ಲಿ ಒಳಮೊಗ್ರು ಮತ್ತು ಬಡಗನ್ನೂರು ಗ್ರಾಮಗಳ ಕ್ಲಸ್ಟರ್ ಮಟ್ಟದ ಮಕ್ಕಳ ಹಬ್ಬ ಕಾರ್ಯಕ್ರಮ ನಡೆಯುತ್ತಿದೆ. ಒಟ್ಟು 11 ಶಾಲೆಯ 120 ವಿದ್ಯಾರ್ಥಿಗಳು ಹಬ್ಬದಲ್ಲಿ ಭಾಗಿಯಾಗುತ್ತಿದ್ದಾರೆ. ಈ ಹಬ್ಬವು ಮಕ್ಕಳಲ್ಲಿ ಪರಸ್ಪರ ಭಾವೈಕ್ಯತೆ, ಸಹೋದರ್ಯತೆಯನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ. ವಿವಿಧ ಶಾಲೆಯ ಮಕ್ಕಳು ಒಂದೇ ವೇದಿಕೆಯಲ್ಲಿ ಒಟ್ಟಾದಾಗ ಅವರಲ್ಲಿನ ಭಿನ್ನ ಪ್ರತಿಭೆಗಳು ಒಟ್ಟು ಸೇರುತ್ತದೆ. ಇದರಿಂದ ಮಕ್ಕಳ ಕಲಿಕಾ ವೃದ್ದಿಗೂ ನೆರವಾಗುತ್ತದೆ ಎಂದು ಹೇಳಿದರು. ಎರಡು ದಿನಗಳ ಕಾಲ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ದೆಗಳು, ಮಕ್ಕಳ ಕಲಿಕಾ ಸಾಮರ್ಥವ್ಯವನ್ನು ಹೆಚ್ಚಿಸುವ ಕೌಶಲ್ಯಗಳು ನಡೆಯಲಿದೆ ಎಂದು ಹೇಳಿದರು.

ಒಳಮೊಗ್ರು ಗ್ರಾ.ಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಚಂದ್ರಕಾಂತ ಶಾಂತಿವನ, ನಿವೃತ್ತ ಶಿಕ್ಷಕ ಸುಧಾಕರ ರೈ ಕುಂಬ್ರ, ಬಡಗನ್ನೂರು ಗ್ರಾಪಂ ಅಧ್ಯಕ್ಷೆ ಶ್ರೀಮತಿ, ವರ್ತಕರ ಸಂಘದ ಅಧ್ಯಕ್ಷ ರಫೀಕ್ ಅಲ್ರಾಯ, ಕೆಪಿಎಸ್ ಅಭಿವೃದ್ದಿ ಸಮಿತಿ ಉಪಾಧ್ಯಕ್ಷೆ ಕಸ್ತೂರಿ, ತಾಪಂ ಮಾಜಿ ಸದಸ್ಯ ಸಾಜ ರಾಧಾಕೃಷ್ಣ ಆಳ್ವ, ಸುರೇಶ್ ಆಳ್ವ, ಕೆಪಿಎಸ್ ಸ್ಕೂಲ್ ಸಮಿತಿ ಸದಸ್ಯ ಮಾಧವ ರೈ ಕುಂಬ್ರ, ಪರ್ಪುಂಜ ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜೇಶ್ ರೈ ಪರ್ಪುಂಜ, ಕುಂಬ್ರ ವರ್ತಕರ ಸಂಘದ ಮಾಜಿ ಅಧ್ಯಕ್ಷ ದಿವಾಕರ ಶೆಟ್ಟಿ ಕುಂಬ್ರ ಮತ್ತಿತರು ಉಪಸ್ಥಿತರಿದ್ದರು.
ಕೆಪಿಎಸ್ ಸ್ಕೂಲ್ ಮುಖ್ಯ ಶಿಕ್ಷಕಿ ಮಮತಾ ಸ್ವಾಗತಿಸಿದರು. ಶಿಕ್ಷಕಿ ಜೂಲಿಯಾನ ಮೊರಾಸ್ ಕಾರ್ಯಕ್ರಮ ನಿರೂಪಿಸಿದರು. ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ನೀನಾಕುವೆಲ್ಲೋ ವಂದಿಸಿದರು.






