ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘದ ವತಿಯಿಂದ ನಡೆಸಲ್ಪಡುವ ಬ್ಲಡ್ ಬ್ಯಾಂಕ್ ಬಳಿಯಿರುವ ವಿವೇಕಾನಂದ ಶಿಶು ಮಂದಿರದ `ಶಿಶು ಸಂಭ್ರಮ’ ವಾರ್ಷಿಕ ಹಬ್ಬವು ಜ.28ರಂದು ಸಂಸ್ಥೆಯ ಆವರಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಮಾತನಾಡಿ, ಮಕ್ಕಳನ್ನು ಒತ್ತಡವಿಲ್ಲದೆ ಬೆಳೆಸಬೇಕು. ಸದಾ ಚಟುವಟಿಕೆಯ ಮೂಲಕ ಗ್ರಹಿಕೆಯ ಶಕ್ತಿಯನ್ನು ವೃದ್ಧಿಸಬೇಕು. ಪಂಚಕೋಶ ಶಿಕ್ಷಣ ನೀಡುವುದರಿಂದ ಮಕ್ಕಳ ಬೌಧಿಕ, ಏಕಾಗ್ರತೆ, ನೆನಪಿನ ಶಕ್ತಿ ವೃದ್ಧಿಯಾಗವುದರ ಜೊತೆಗೆ ನಾಯಕತ್ವದ ಗುಣಗಳು ಬೆಳವಣಿಗೆಯಾಗುತ್ತದೆ. ಮಕ್ಕಳ ಜೊತೆಗೆ ಪಾಲಕರಲ್ಲಿಯೂ ಸಂಸ್ಕೃತಿಯನ್ನು ಬೆಳೆಸುವುದು ಶಿಶು ಮಂದಿರದ ಉದ್ದೇಶವಾಗಿದೆ ಎಂದರು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಉಪೇಂದ್ರ ಬಲ್ಯಾಯ ದೇವಸ್ಯ ಮಾತನಾಡಿ, ಮಕ್ಕಳಿಗೆ ಸಣ್ಣದರಲ್ಲೇ ಸಂಸ್ಕೃತಿ, ಆಚಾರ, ವಿಚಾರಗಳನ್ನು ಮನನ ಮಾಡಿದಾಗ ಮಗು ಸತ್ಪ್ರಜೆಯಾಗಿ ಬೆಳೆಯಲು ಸಾಧ್ಯ ಎಂದರು. ಮುಖ್ಯ ಅತಿಥಿಯಾಗಿದ್ದ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಆಡಳಿತ ಮಂಡಳಿ ಸದಸ್ಯ ತಿರುಮಲೇಶ್ ಭಟ್ ಭಾರತ ಸಂಸ್ಕೃತಿಯನ್ನು ಸಾಕಾರಗೊಳಿಸಲು ಮಕ್ಕಳಿಗೆ ಕನ್ನಡಕ್ಕ ಆದ್ಯತೆ ನೀಡುಬೇಕು ಎಂದು ಹೇಳಿದರು.
ಸಂಸ್ಥೆಯ ಹಿರಿಯ ವಿದ್ಯಾರ್ಥಿ ಸುದರ್ಶನ್ ಹಾರಕರೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಾರ್ಷಿಕೋತ್ಸವದ ಅಂಗವಾಗಿ ನಡೆಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಕಾರ್ಯಕ್ರಮದಲ್ಲಿ ಬಹುಮಾನವನ್ನು ವಿತರಿಸಲಾಯಿತು.
ಶಿಶು ಮಂದಿರ ಪುಟಾಣಿ ಶೌರಿಕೃಷ್ಣ ಸ್ವಾಗತಿಸಿದರು. ಆಡಳಿತ ಮಂಡಳಿ ಅಧ್ಯಕ್ಷ ರಾಜ್ಗೋಪಾಲ್ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಶಿಕ್ಷಕಿ ರೇಖಾ ಕುಮಾರಿ ವರದಿ ವಾಚಿಸಿದರು. ರಾಜ್ ಗಣೇಶ್ ಅತಿಥಿಗಳನ್ನು ಪರಿಚಯಿಸಿದರು. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸಹಶಿಕ್ಷಕಿ ರೇಖಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಹರ್ಷಿತಾ ಹಾಗೂ ದಿವ್ಯಾ ಬಹುಮಾನ ವಿಜೇತರ ಪಟ್ಟಿ ಓದಿದರು. ಆಡಳಿತ ಮಂಡಳಿ ಸದಸ್ಯ ಅಶೋಕ್ ಬಲ್ನಾಡು ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಶಿಶು ಮಂದಿರದ ಮಕ್ಕಳು ಹಾಗೂ ಪಾಲಕರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.