ಕ್ಯಾಂಪ್ಕೋ ಸುವರ್ಣ ಮಹೋತ್ಸವ ಉದ್ಘಾಟನೆ:
ಕ್ಯಾಂಪ್ಕೋದಿಂದ ದೇಶದ ಸಹಕಾರ ರಂಗಕ್ಕೆ ದೊಡ್ಡ ಕೊಡುಗೆ-ಅಮಿತ್ ಶಾ

0

2 ಲಕ್ಷ ಚದರ ಅಡಿಯ ಜರ್ಮನ್ ಪೆಂಡಾಲ್

30 ಅಡಿ ಎತ್ತರದ ವೇದಿಕೆ ನಿರ್ಮಾಣ

ಸುಮಾರು ೧ಲಕ್ಷ ಜನರಿಗೆ ಮೈದಾನದಲ್ಲಿ ವ್ಯವಸ್ಥೆ
ಮೈದಾನ ಹೊರತು ಪಡಿಸಿಯೂ ಅಲ್ಲಲ್ಲಿ ಎಲ್‌ಇಡಿ ಪರದೆ

ವೇದಿಕೆಯ ಮೇಲೂ ಬೃಹತ್ ಎಲ್‌ಇಡಿ ಪರದೆ ಸಮಾವೇಶಕ್ಕೆ ಹರಿದು ಬಂದ ಜನಸಾಗರ

  • ಕುಮ್ಕಿ ಜಮೀನಿಗೆ ಶೀಘ್ರ ನಮ್ಮಿಂದಲೇ ಪರಿಹಾರ:ಜಗತ್ತಿನ ಯಾವುದೇ ಶಕ್ತಿ
    ಮೋದಿ, ಶಾ ಪರಿಶ್ರಮಕ್ಕೆ ಸಾಟಿಯಿಲ್ಲ-ಯಡಿಯೂರಪ್ಪ:
    ಕೇಂದ್ರ, ರಾಜ್ಯ ಸರಕಾರದ ಸಹಕಾರದ ನಿರೀಕ್ಷೆ-ಕೊಡ್ಗಿ:

    ನೂರಕ್ಕೆ ನೂರು ರೈತರ ಸಾಲ ಮನ್ನಾ ಯಶಸ್ವಿಯಾಗಲಿದೆ -ಸೋಮಶೇಖರ್:
    ಕ್ಯಾಂಪ್ಕೋ ಯಾವತ್ತೂ ರೈತರ ಪರ -ಹೆಚ್.ಎಂ.ಕೃಷ್ಣಕುಮಾರ್:

ಸಭೆಗೆ ಚಾಕಲೇಟ್, ಮಜ್ಜಿಗೆ, ನೀರು
ಸಭೆಯಲ್ಲಿ ಆಸೀನರಾಗಿರುವ ಸಾರ್ವಜನಿಕರಿಗೆ ಆಗಾಗ ಚಾಕಲೇಟು, ಮಜ್ಜಿಗೆ ನೀರು, ನೀರಿನ ಬಾಟಲ್‌ಗಳನ್ನು ಸರಬರಾಜು ಮಾಡಲಾಗುತ್ತಿತ್ತು.ವಿವೇಕಾನಂದ ಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಈ ವ್ಯವಸ್ಥೆ ಮಾಡುತ್ತಿದ್ದರು.ಅದೇ ರೀತಿ ಸ್ವಚ್ಛತೆಗೂ ಆದ್ಯತೆ ನೀಡುತ್ತಿದ್ದರು.ಚಾಕಲೇಟು ತಿಂದ ರ್‍ಯಾಪರ್ ಅನ್ನು ಕಸದ ಬುಟ್ಟಿ ಜೊತೆ ಸಂಗ್ರಹ ಮಾಡುತ್ತಿದ್ದರು.


2 ಲಕ್ಷ ಚದರ ಅಡಿ ವಿಸ್ತೀರ್ಣದ ಜರ್ಮನ್ ಪೆಂಡಾಲ್
ಸಮಾವೇಶಕ್ಕೆ ಬೃಹತ್ ವೇದಿಕೆ ಮತ್ತು ಜನರಿಗೆ ಬಿಸಿಲಿನ ತಾಪವನ್ನು ತಡೆಯಲೆಂದು ಜರ್ಮನ್ ತಂತ್ರಜ್ಞಾನದ ಮಾದರಿಯಲ್ಲಿ ಬೃಹತ್ ಪೆಂಡಾಲ್ ನಿರ್ಮಿಸಲಾಗಿತ್ತು.ತೆಂಕಿಲ ವಿವೇಕಾನಂದ ಶಾಲೆಯ ಸುಮಾರು ಏಳು ಎಕರೆ ಜಾಗದಲ್ಲಿ ಸುಮಾರು ೨ ಲಕ್ಷ ಚದರ ಅಡಿಯ ಜರ್ಮನ್ ತಂತ್ರಜ್ಞಾನದ ಪೆಂಡಾಲ್ ಅಳವಡಿಸಿದ್ದು, ವೇದಿಕೆ ಮತ್ತು ಸಭಾಂಗಣ ಪ್ರತ್ಯೇಕ ಮಾಡಲಾಗಿತ್ತು. ವೇದಿಕೆಯ ಮುಂದೆ ಮೂರು ಸಭಾಂಗಣ ನಿರ್ಮಾಣ ಮಾಡಲಾಗಿತ್ತು.ಇದರಲ್ಲಿ ವೇದಿಕೆ ಸುಮಾರು ೩೦ ಅಡಿ ಎತ್ತರದಲ್ಲಿತ್ತು.ಅಲ್ಲಿಂದ ಡಿ ಜೋನ್, ಪತ್ರಿಕಾ ಮಾಧ್ಯಮ, ಗಣ್ಯರ ಆಸನ, ಸಾರ್ವಜನಿಕರ ಆಸನಗಳನ್ನು ವ್ಯವಸ್ಥೆ ಮಾಡಲಾಗಿತ್ತು.ಸುಮಾರು ೧ ಲಕ್ಷ ಮಂದಿಗೆ ಅಮಿತ್ ಶಾ ಕಾರ್ಯಕ್ರಮ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು.ಸಭಾಂಗಣದಲ್ಲಿ ೬ ಎಲ್‌ಇಡಿ ಪರದೆ ಅಳವಡಿಸಲಾಗಿತ್ತು.ವಿವೇಕಾನಂದ ಅಂಗ್ಲಮಾಧ್ಯಮ ಶಾಲೆಯ ಸಭಾಂಗಣದಲ್ಲೂ ಎಲ್‌ಇಡಿ ಪರದೆ ಅಳವಡಿಸಲಾಗಿತ್ತು.ಸಭಾಂಗಣದ ಒಳಗೆ ಮಾತ್ರವಲ್ಲದೆ ಹೊರಗಡೆಯೂ ಜನರಿಂದ ತುಂಬಿ ತುಳುಕುತ್ತಿತ್ತು.


ಪ್ರತ್ಯೇಕ ದಾರಿ
ಸಮಾವೇಶ ಮೈದಾನಕ್ಕೆ ಪ್ರತ್ಯೇಕ ದಾರಿ ನಿರ್ಮಿಸಲಾಗಿತ್ತು.ಅಮಿತ್ ಶಾ ಸಹಿತ ಗಣ್ಯರು ಬರಲು ಪ್ರತ್ಯೇಕ ಭದ್ರತಾ ವ್ಯವಸ್ಥೆಯ ಹೊಸದಾದ ಡಾಮರೀಕರಣ ರಸ್ತೆ ಮಾಡಲಾಗಿತ್ತು.ಆ ರಸ್ತೆಯಿಂದ ನೇರವಾಗಿ ವೇದಿಕೆಗೆ ಸಂಪರ್ಕ ಮಾಡಲಾಗಿತ್ತು.ಸಾರ್ವಜನಿಕರಿಗೆ ಮತ್ತು ಗಣ್ಯರಿಗೆ, ಪತ್ರಿಕಾ ಮಾಧ್ಯಮದವರಿಗೆ ಸಮಾವೇಶದ ಸ್ಥಳಕ್ಕೆ ತೆರಳಲು ಪ್ರತ್ಯೇಕ ದಾರಿಯ ವ್ಯವಸ್ಥೆ ಮಾಡಲಾಗಿತ್ತು.ಸಮಾವೇಶ ಮುಗಿಸಿ ಅಮಿತ್ ಶಾ ಅವರು ಹೊರಟು ಹೋದ ಬಳಿಕವೇ, ಸಮಾವೇಶದಲ್ಲಿ ಸೇರಿದ್ದವರಿಗೆ ಹೊರಗೆ ಹೋಗಲು ಅವಕಾಶ ನೀಡಲಾಗಿತ್ತು.


ಪುತ್ತೂರು:ಈ ಬಾರಿ ಬಜೆಟ್‌ನಲ್ಲಿ ಪ್ರತೀ ಗ್ರಾ.ಪಂ.ಗಳಲ್ಲಿ ಬಹುಮುಖಿ ಕೃಷಿ ಪತ್ತಿನ ಸಹಕಾರಿ ಸಂಘಗಳ ರಚನೆಯನ್ನು ಘೋಷಿಸಲಾಗಿದೆ.೩ ವರ್ಷಗಳಲ್ಲಿ ಇಂಥ ೨ ಲಕ್ಷ ಸಂಘಗಳ ಸ್ಥಾಪನೆಯಾಗಲಿದೆ ಎಂದು ಕೇಂದ್ರ ಗೃಹ ಸಚಿವರು ಮತ್ತು ದೇಶದ ಪ್ರಥಮ ಸಹಕಾರ ಸಚಿವರಾಗಿರುವ ಅಮಿತ್ ಶಾ ಹೇಳಿದರು.


ಪ್ರತಿಷ್ಟಿತ ಅಂತರ್ರಾಜ್ಯ ಸಹಕಾರಿ ಸಂಸ್ಥೆಯಾಗಿರುವ `ಕ್ಯಾಂಪ್ಕೋ’ಸುವರ್ಣ ಮಹೋತ್ಸವ ಸಂಭ್ರಮದಲ್ಲಿ ಫೆ.೧೧ರಂದು ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಮೈದಾನದಲ್ಲಿ ನಡೆದ ಅಡಿಕೆ ಬೆಳೆಗಾರರ ಮತ್ತು ಸಹಕಾರಿಗಳ ಸಮಾವೇಶವನ್ನು ಅಮಿತ್ ಶಾ ಅವರು ಉದ್ಘಾಟಿಸಿ ಮಾತನಾಡಿದರು.ಅಡಕೆ,ತೆಂಗು, ಕಾಳುಮೆಣಸು, ರಬ್ಬರ್ ಮುಂತಾದ ಬೆಳೆಗಳನ್ನು ನೀವಿಲ್ಲಿ ಬೆವರು ಸುರಿಸಿ ಬೆಳೆಸುತ್ತೀರಿ.ನೀವು ಬೆಳೆಸಿದ ಅಡಕೆಯನ್ನು ನಾವು ಗುಜರಾತಿನಲ್ಲಿ ತಿಂದು ಬೆವರು ಸುರಿಸುತ್ತೇವೆ.ಅಡಕೆ ತಿನ್ನುವಾಗಲೆಲ್ಲ ಗುಜರಾತಿಗಳಿಗೆ ಮಂಗಳೂರು ನೆನಪಾಗುತ್ತದೆ ಎಂದು ಹೇಳಿದ ಅಮಿತ್ ಶಾ,ಕ್ಯಾಂಪ್ಕೋ ಪ್ರಗತಿ ನೋಡಿ ಹೆಮ್ಮೆಯಾಗುತ್ತಿದೆ.ದೇಶದ ಸಹಕಾರ ರಂಗಕ್ಕೆ ಬಹುದೊಡ್ಡ ಕೊಡುಗೆ ನೀಡಿದ ಸಂಸ್ಥೆ ೫೦ ವರ್ಷ ಪೂರೈಸಿದೆ ಎಂದರೆ ಇದು ಈ ಸಂಸ್ಥೆಯ ಪ್ರಾಮಾಣಿಕತೆಗೆ ಪ್ರಾಪ್ತಿಯಾಗಿರುವ ಸರ್ಟಿಫಿಕೇಟ್.ವಾರಣಾಸಿ ಸುಬ್ರಾಯ ಭಟ್ ಎಂಬ ಸಹಕಾರಿ ಧುರೀಣ ಕೆಲವೇ ಕೆಲವು ಸದಸ್ಯರ ಮೂಲಕ ಆರಂಭಿಸಿದ ಕ್ಯಾಂಪ್ಕೋ ಸಂಸ್ಥೆ ಇಂದು ೧,೩೯,೦೦೦ ಸದಸ್ಯರ ವಟವೃಕ್ಷವಾಗಿ ಬೆಳೆದಿದೆ.೩ ಸಾವಿರ ಕೋಟಿ ರೂ.ವಾರ್ಷಿಕ ವ್ಯವಹಾರ ಮಾಡುತ್ತಿದೆ.ಇವತ್ತು ಮೋದಿ ಸರಕಾರ ಕೇಂದ್ರದಲ್ಲಿ ಸಹಕಾರಿ ಖಾತೆ ರಚಿಸುವ ಮೂಲಕ ದೇಶದ ರೈತರ ಸೇವೆಗೆ ಹೊಸ ರಹದಾರಿ ನಿರ್ಮಿಸಿದೆ.ಮುಂದೆ ದೇಶದ ಸಹಕಾರಿ ಕ್ಷೇತ್ರಕ್ಕೆ ಹೊಸ ದಿಕ್ಕು ನೀಡಲು ಕೇಂದ್ರ ಸರಕಾರ ಬದ್ಧವಾಗಿದೆ.೩ ವರ್ಷಗಳ ಅವಧಿಯಲ್ಲಿ ಹೊಸದಾಗಿ ೨ ಲಕ್ಷ ಕೃಷಿ ಪತ್ತಿನ ಸಹಕಾರಿ ಸಂಘಗಳನ್ನು ಸ್ಥಾಪಿಸಲಾಗುವುದು ಎಂದರು.


ದೀನ್ ದಯಾಳ್ ಅವರಿಗೆ ಪ್ರಣಾಮಪೂರ್ಣ ಶ್ರದ್ದಾಂಜಲಿ:

ಅಂತ್ಯೋದಯ ಪರಿಕಲ್ಪನೆ ಹುಟ್ಟುಹಾಕಿದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರನ್ನು ಸ್ಮರಿಸಿದ ಅಮಿತ್ ಶಾ, ಬಿಜೆಪಿ ಚಿಂತನೆಯ ಜನಕ ಅವರು.ಇವತ್ತು ಅವರ ಪುಣ್ಯ ತಿಥಿ. ಅವರ ಚಿಂತನೆಯಲ್ಲಿ ಮೋದಿ ಸರಕಾರ ನಡೆಯುತ್ತಿದೆ.ಆರೋಗ್ಯ, ಶಿಕ್ಷಣ, ಹಸಿವುಮುಕ್ತ ದೇಶ, ಉದ್ಯೋಗ, ಸ್ವಾವಲಂಬನೆ ಎಲ್ಲವೂ ಅವರ ಕಲ್ಪನೆ.ಸುರಕ್ಷತೆ, ಸಮೃದ್ಧಿ ಮತ್ತು ಬಡವರ ಕಲ್ಯಾಣ ಸರಕಾರದ ಆದ್ಯತೆಯಾಗಿದೆ.ಇದಕ್ಕೆ ದೀನ್ ದಯಾಳರು ಪ್ರೇರಣೆ.ಅಂಥ ನಾಯಕನ ಅಂತ್ಯ ಈ ದಿನವಾಯಿತು.ಅವರಿಗೆ ನಾನು ಪ್ರಣಾಮಪೂರ್ಣ ಶ್ರದ್ಧಾಂಜಲಿ ಸಲ್ಲಿಸುತ್ತಿzನೆ ಎಂದರು.


ಟಿಪ್ಪು ಬೆಂಬಲಿಸುವ ಜೆಡಿಎಸ್-ಕಾಂಗ್ರೆಸ್‌ಗೆ ಮತ ನೀಡುತ್ತೀರಾ ರಾಣಿ ಅಬ್ಬಕ್ಕನನ್ನು ಗೌರವಿಸುವ ಬಿಜೆಪಿಗೆ ಮತ ನೀಡುತ್ತೀರಾ?: ಟಿಪ್ಪುವನ್ನು ಬೆಂಬಲಿಸುವ ಕಾಂಗ್ರೆಸ್-ಜೆಡಿಎಸ್‌ಗೆ ಮತ ನೀಡುತ್ತಿರಾ ಅಥವಾ ರಾಣಿ ಅಬ್ಬಕ್ಕನನ್ನು ಗೌರವಿಸುವ ಬಿಜೆಪಿಗೆ ಮತ ನೀಡುತ್ತೀರಾ?ಎಂದು ಸಮಾವೇಶದಲ್ಲಿ ಕಿಕ್ಕಿರಿದು ಸಂಖ್ಯೆಯಲ್ಲಿ ಸೇರಿದ್ದ ರೈತಾಪಿ ವರ್ಗ, ಸಹಕಾರಿ ಬಂಧುಗಳನ್ನು ಪ್ರಶ್ನಿಸಿದ ಅಮಿತ್ ಶಾ ಅವರು,ಕರ್ನಾಟಕವನ್ನು ಎಟಿಎಂ ಮಾಡಿಕೊಂಡಿರುವ ಭ್ರಷ್ಟ ಕಾಂಗ್ರೆಸ್ ಪಕ್ಷ ನಿಮಗೆ ಬೇಕೇ ಎಂದು ಪ್ರಶ್ನಿಸಿದರು. ಬಿ.ಎಸ್.ಯಡಿಯೂರಪ್ಪ ರಾಜ್ಯದ ರೈತರಿಗಾಗಿ ಕೆಲಸ ಮಾಡಿದ್ದನ್ನು ಜನ ಸ್ಮರಿಸಿಕೊಳ್ಳುತ್ತಾರೆ ಎಂದೂ ಅಮಿತ್ ಶಾ ಹೇಳಿದರು.


ಕಾಂಗ್ರೆಸ್, ಜೆಡಿಎಸ್ ದೇಶ ವಿರೋಧಿಗಳಿಗೆ ಬೆಂಬಲ ನೀಡುತ್ತದೆ: ಪಿಎಫ್‌ಐ ಸಂಘಟನೆಯನ್ನು ಮೋದಿ ಸರಕಾರ ಬ್ಯಾನ್ ಮಾಡುವ ಮೂಲಕ ಆ ಶಕ್ತಿಗಳ ಚಟುವಟಿಕೆಗಳನ್ನೇ ಬಂದ್ ಮಾಡಿzವೆ.ಕಾಂಗ್ರೆಸ್,ಜೆಡಿಎಸ್ ಪಕ್ಷಗಳು ದೇಶವಿರೋಧಿ ಶಕ್ತಿಗಳಿಗೆ ಬೆಂಬಲ ನೀಡುತ್ತವೆ.ಕರ್ನಾಟಕ ಮತ್ತು ದೇಶದ ಸುರಕ್ಷತೆ ಕೇವಲ ಬಿಜೆಪಿಯಿಂದ ಮಾತ್ರ ಸಾಧ್ಯ.ಸುಭದ್ರ ದೇಶ ನಿರ್ಮಾಣಕ್ಕೆ ಮೋದಿ ಬದ್ಧರಾಗಿದ್ದಾರೆ.ಕಾಶ್ಮೀರದಲ್ಲಿ ರಕ್ತದ ನದಿಯೇ ಹರಿಯುತ್ತಿತ್ತು.೩೭೦ನೇ ವಿಧಿಯನ್ನು ರದ್ದುಪಡಿಸಲು ಮುಂದಾದಾಗ ಕಾಂಗ್ರೆಸ್ ವಿರೋಧಿಸಿತು.ಆದರೆ ನಾವು ಆ ವಿಧಿಯನ್ನು ರದ್ದು ಮಾಡುವ ಮೂಲಕ ಭಾರತದ ಮುಕುಟದಂತಿರುವ ಕಾಶ್ಮೀರವನ್ನು ಉಳಿಸಿಕೊಂಡೆವು ಎಂದು ಶಾ ಹೇಳಿದರು.ಜೆಡಿಎಸ್ ಮತ್ತು ಕಾಂಗ್ರೆಸ್‌ಗೆ ಮತ ನೀಡಿದರೆ ಅದು ಆ ಪಕ್ಷಗಳಿಗೆ ಮತ ನೀಡಿದಂತೆ.ಬಿಜೆಪಿಗೆ ಮತ ನೀಡಿದರೆ ಅದು ನವ ಕರ್ನಾಟಕ, ನವಭಾರತ ನಿರ್ಮಾಣಕ್ಕೆ ಮತ ನೀಡಿದಂತೆ ಎಂದು ವ್ಯಾಖ್ಯಾನಿಸಿದ ಅಮಿತ್ ಶಾ ಅವರು, ಬೊಮ್ಮಾಯಿ ಕೈ ಬಲಪಡಿಸಿ ಎಂದು ಮನವಿ ಮಾಡಿದರು.


ಬಿಜೆಪಿ ಕೊಡುಗೆ ಹಲವು:

ಮಂಗಳೂರು ವಿಮಾನ ನಿಲ್ದಾಣದ ವಿಸ್ತರಣೆ, ಎಂಆರ್‌ಪಿಎಲ್ ವಿಸ್ತರಣೆ, ಆದಿವಾಸಿಗಳಿಗೆ ಭೂಮಿ, ಗಂಜಿ ಮಠದಲ್ಲಿ ಪ್ಲಾಸ್ಟಿಕ್ ಪಾರ್ಕ್ ಯೋಜನೆ, ಮೀನುಗಾರರಿಗೆ ಪ್ರಧಾನ ಮಂತ್ರಿ ಮತ್ಸ್ಯಾಶ್ರಯ ಯೋಜನೆ, ಮೀನುಗಾರಿಕೆಗೆ, ಸಹಕಾರಿ ರಂಗಕ್ಕೆ ಪ್ರತ್ಯೇಕ ಸಚಿವಾಲಯ ಬಿಜೆಪಿಯ ಕೊಡುಗೆ ಎಂದು ಅಮಿತ್ ಶಾ ಹೇಳಿದರು.
ಅಡಿಕೆ ರೋಗಕ್ಕೆ ಔಷಧ ಸಂಶೋಧನೆಗೆ ವಿಶೇಷ ಅನುದಾನ:ಬೊಮ್ಮಾಯಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ, ಕ್ಯಾಂಪ್ಕೋ ಯಶೋಗಾಥೆಯ ಒಂದು ಕತೆಯಾಗಿ ಜನರಿಂದ ಜನರಿಗೋಸ್ಕರ ಒಂದು ಸಂಸ್ಥೆ ಹುಟ್ಟಿ ೫೦ ವರ್ಷ ಅತ್ಯಂತ ಯಶಸ್ವಿಯಾಗಿ ಆರ್ಥಿಕ ರಂಗದಲ್ಲಿ ಪ್ರಗತಿಯಾಗುತ್ತಿದೆ ಎಂದಾದರೆ ಇದು ನಿಜವಾದ ಮಾದರಿ ಸಂಸ್ಥೆ.ಕ್ಯಾಂಪ್ಕೋದ ಅಧ್ಯಕ್ಷ ಮತ್ತು ಆಡಳಿತ ಮಂಡಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಕ್ಯಾಪಿಟಲಿಸಮ್ ಮತ್ತ ಕಮ್ಯುನಿಸಮ್ ಇದೆರಡಕ್ಕೂ ಉತ್ತರ ಕೊಡಬೇಕಾದರೆ ಕೋ ಓಪರೇಟಿಸಮ್ ಬರಬೇಕು.ಆ ಕೋಓಪರೇಟಿಸಿಮ್ ಹೇಗೆ ಇರಬೇಕೆಂದು ಕ್ಯಾಂಪ್ಕೋ ಉತ್ತರ ಕೊಟ್ಟಿದೆ.ಈ ಪ್ರದೇಶದ ಪ್ರಮುಖ ಬೆಳೆ ಅಡಿಕೆ.ಇಂತಹ ಅಡಿಕೆ ಬೆಳೆಗಾರರ ಪರವಾಗಿ ನಿಂತು ಇವತ್ತು ಅಡಿಕೆಗೆ ಉತ್ತಮ ಬೆಲೆ ದೊರೆಯಲು ಕಾರಣವಾಗುವ ಜೊತೆಗೆ ೨೬ ಸಾವಿರ ಮೆಟ್ರಿಕ್ ಟನ್ ಚಾಕಲೇಟ್ ಉತ್ಪಾದನೆ ಮಾಡುವ ಸಂಸ್ಥೆ ಕೋ ಓಪರೇಟಿವ್ ವಲಯದಲ್ಲಿ ಯಾವುದಾದರೂ ಇದ್ದರೆ ಇಡೀ ಭಾರತ ದೇಶದಲ್ಲಿ ಕ್ಯಾಂಪ್ಕೋ ಎಂದು ಅತ್ಯಂತ ಹೆಮ್ಮೆಯಿಂದ ಹೇಳುತ್ತೇನೆ ಎಂದರು.ಅಡಿಕೆ, ಕಾಳು ಮೆಣಸಿನ ಸಂಸ್ಕರಣೆ, ರಬ್ಬರ್, ಕೋಕೊ ಸಹಿತ ಈ ಭಾಗದಲ್ಲಿ ಏನೆಲ್ಲಾ ಕೃಷಿ ಉತ್ಪಾದನೆ ಆಗುತ್ತದೆಯೋ ಅದಕ್ಕೆಲ್ಲಾ ಆರ್ಥಿಕ ಮೌಲ್ಯನೀಡುವ ಕೆಲಸ ಕ್ಯಾಂಪ್ಕೋ ಮಾಡುತ್ತಿದೆ.ಬೆಳೆಗಳನ್ನು ಹೇಗೆ ಮಾಡಬೇಕು.ಸಂಕಷ್ಟ ಬಂದಾಗ ಏನು ಔಷಧಿ ಸಿಂಪಡಿಸಬೇಕೆಂದು ಎಲ್ಲಾ ರೀತಿಯಾಗಿ ಕ್ಯಾಂಪ್ಕೋ ರೈತರಿಗೆ ತಾಯಿಯಾಗಿ ಮಾರ್ಗದರ್ಶನ ಮಾಡುತ್ತಿದೆ ಎಂದು ಹೇಳಿದ ಮುಖ್ಯಮಂತ್ರಿ ಬೊಮ್ಮಾಯಿ,ಇವತ್ತು ಅಡಿಕೆಗೆ ಬರುವ ಹಳದಿ ರೋಗದ ಪರಿಣಾಮ ಬಹಳ ಸವಾಲು ಇದೆ.ಈಗಾಗಲೇ ಈ ಬಗ್ಗೆ ೧೦ ಕೋಟಿ ರೂ.ನೀಡಿzನೆ. ಈ ರೋಗಕ್ಕೆ ಔಷಧಿ ಸಂಶೋಧನೆ ಮಾಡಲು ಮತ್ತು ಅಲ್ಲಿ ಪರಿಣತರನ್ನು ಇಡಲು ಈ ವರ್ಷದ ಬಜೆಟ್‌ನಲ್ಲಿ ವಿಶೇಷವಾದ ಅನುದಾನ ನೀಡುತ್ತೇನೆ ಎಂದು ಭರವಸೆ ನೀಡಿದರು.


ಕುಮ್ಕಿ ಜಮೀನಿಗೆ ಶೀಘ್ರ ನಮ್ಮಿಂದಲೇ ಪರಿಹಾರ:

ಕುಮ್ಕಿ, ಕಾನ, ಬಾಣೆ, ಸೊಪ್ಪಿನಬೆಟ್ಟದಲ್ಲಿ ಕೃಷಿ ಮಾಡುತ್ತಿರುವ ರೈತರಿಗೆ ಹಕ್ಕು ನೀಡುವ ನಿರ್ಧಾರ ಸರಕಾರ ಕೈಗೊಳ್ಳಲಿದೆ.ಡೀಮ್ಡ್ ಫಾರೆಸ್ಟ್‌ಗೆ ಪರಿಹಾರ ಕಂಡುಕೊಂಡಿರುವಂತೆ ಕುಮ್ಕಿ,ಕಾನ ಬಾಣೆ ಸೊಪ್ಪಿನಬೆಟ್ಟ ಜಮೀನಿಗೂ ಶೀಘ್ರ ಒಂದು ಪರಿಹಾರ ಕಂಡುಕೊಳ್ಳಲಾಗುವುದು.ಇದನ್ನು ನಾವೇ ಮಾಡಬೇಕಾಗಿದೆ.ಏಕೆಂದರೆ ಆ ಬದ್ಧತೆ ನಮಗೆ ಮಾತ್ರ ಇರುವುದು.ಬೇರೆ ಯಾರಿಂದಲೂ ಇದನ್ನು ಮಾಡಲು ಸಾಧ್ಯವಿಲ್ಲ ಎಂದು ಹೇಳಿದ ಬೊಮ್ಮಾಯಿಯವರು,ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್‌ನಲ್ಲಿ ರಾಜ್ಯದ ರೈಲ್ವೇ ಯೋಜನೆಗಳಿಗೆ ರೂ.೭೫೦೦ ಕೋಟಿ ಅನುದಾನ ನೀಡಿರುವುದಕ್ಕೆ ಅಮಿತ್ ಶಾ ಅವರಿಗೆ ಅಭಿನಂದಿಸಿದರು.


ಜಗತ್ತಿನ ಯಾವುದೇ ಶಕ್ತಿ ಮೋದಿ, ಶಾ ಪರಿಶ್ರಮಕ್ಕೆ ಸಾಟಿಯಿಲ್ಲ-ಯಡಿಯೂರಪ್ಪ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ದೇಶದ ಅನೇಕ ಜ್ವಲಂತ ಸಮಸ್ಯೆಗೆ ಪರಿಹಾರ ಹುಡುಕಿ ಇಡಿ ಜಗತ್ತೇ ಮೆಚ್ಚುವ ರೀತಿಯಲ್ಲಿ ದೇಶದ ಆಡಳಿತ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ನಾವೆಲ್ಲ ಅಭಿನಂದನೆ ಸಲ್ಲಿಸಬೇಕು.ಯಾಕೆಂದರೆ ಜಗತ್ತಿನ ಯಾವುದೇ ಶಕ್ತಿ ಇವರಿಬ್ಬರ ಪರಿಶ್ರಮಕ್ಕೆ ಸಾಟಿಯಿಲ್ಲ. ದೇಶವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವಲ್ಲಿ ನರೇಂದ್ರ ಮೋದಿಯವರು ಅಮಿತ್ ಶಾ ಅವರ ಕೊಡುಗೆ ಅಪಾರವಾದದ್ದು ಎಂದರು.೫೦ ವರ್ಷಗಳ ಹಿಂದೆ ಸಹಕಾರ ಸಂಘವನ್ನು ಆರಂಭಿಸಿರುವುದು ಕಷ್ಟದ ಕೆಲಸ.ಇಂತಹ ಸಂದರ್ಭದಲ್ಲಿ ಅಡಿಕೆ ಬೆಳೆಗಾರರಿಗೆ ಅವರ ಸಂಕಷ್ಟ ಕಾಲದಲ್ಲಿ ಅಂದು ಸುಬ್ರಾಯ ಭಟ್ ಅವರು ಆರಂಭಿಸಿದ ಕ್ಯಾಂಪ್ಕೋ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದಿದೆ ಎಂದಾದರೆ ಅದರ ಹಿಂದಿನ ನೈಜ ಸಾಮಾನ್ಯ ಕಳಕಳಿಯೇ ಕಾರಣ.ಅಡಿಕೆ ಬೆಳೆಗಾರರಿಗೆ ನೆರವು ನೀಡಿದ ಸಂಸ್ಥೆ ಬಹುರಾಷ್ಟ್ರೀಯ ಕಂಪೆನಿಗಳಿಗೆ ಸಾಟಿಯಾಗಿ ಬೆಳೆದು ಬಂದಿದ್ದು ಮುಂದೆ ಜಾಗತಿಕವಾಗಿ ಬೆಳೆಯಲಿ ಎಂದು ಯಡಿಯೂರಪ್ಪ ಶುಭ ಹಾರೈಸಿದರು.
ಕೇಂದ್ರ, ರಾಜ್ಯ ಸರಕಾರದ ಸಹಕಾರದ ನಿರೀಕ್ಷೆ-ಕೊಡ್ಗಿ: ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೂಡ್ಗಿ ಅವರು ಮಾತನಾಡಿ, ಸುವರ್ಣ ಸಂಭ್ರಮದ ಕ್ಯಾಂಪ್ಕೋದ ಮೂರು ಹೊಸ ಯೋಜನೆಗಳಿಗೆ ಕೇಂದ್ರ ಗೃಹ ಸಚಿವರಾಗಿರುವ ಅಮಿತ್ ಶಾ ಅವರ ಚಾಲನೆ ನೀಡಿದ್ದಾರೆ.ಭಾರತ ಮತ್ತು ರಾಜ್ಯ ಸರಕಾರದ ಸಹಕಾರವನ್ನು ನಿರೀಕ್ಷಿಸುತ್ತಾ, ಯಶಸ್ವಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರಲ್ಲದೆ, ಅಮಿತ್ ಶಾ ಅವರಿಗೆ ಸಮಯದ ಅಭಾವ ಇರುವುದರಿಂದ ನಾನು ಹೆಚ್ಚು ಮಾತನಾಡುವುದಿಲ್ಲ ಎಂದು ತಮ್ಮ ಭಾಷಣಕ್ಕೆ ವಿರಾಮ ಹಾಕಿದರು.


ನೂರಕ್ಕೆ ನೂರು ರೈತರ ಸಾಲ ಮನ್ನಾ ಯಶಸ್ವಿಯಾಗಲಿದೆ-ಸೋಮಶೇಖರ್:

ರಾಜ್ಯ ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಮಾತನಾಡಿ ೯೭೫ ಕೋಟಿ ರೂ. ಹಣವನ್ನು ಕರ್ನಾಟಕದ ಸ್ವಸಹಾಯ ಗುಂಪುಗಳಿಗೆ ನೀಡುವ ತೀರ್ಮಾನ ಮಾಡಿದ್ದೇವೆ.ಇಷ್ಟು ಸುಧೀರ್ಘ ಕಾಲದಲ್ಲಿ ಯಾವತ್ತೂ ಕೂಡಾ ೨೪ ಸಾವಿರ ಕೋಟಿ ರೂ ಸಾಲವನ್ನು ರೈತರಿಗೆ ಕೊಡುವಂತಹದ್ದು ಮಾಡಿರಲಿಲ್ಲ.ಯಶಸ್ವಿನಿ ಯೋಜನೆಯನ್ನು ಮರು ಜಾರಿ ಮಾಡಿದ್ದೇವೆ.ಡಿಸೆಂಬರ್ ೩೧ರ ಒಳಗಡೆ ೩೦ ಲಕ್ಷ ಸದಸ್ಯರ ಸೇರ್ಪಡೆ ಗುರಿ ನಿಗದಿ ಮಾಡಿದ್ದೆವು.ಆದರೆ ಒತ್ತಡ ಜಾಸ್ತಿಯಾಗಿದ್ದರಿಂದ ಫೆ.೮ರ ತನಕ ಸದಸ್ಯರ ಸೇರ್ಪಡೆಗೆ ಅವಕಾಶ ಕಲ್ಪಿಸಿದ್ದು ೩೩ ಲಕ್ಷ ರೈತರು ನೋಂದಾವಣೆ ಮಾಡಿದ್ದಾರೆ.ಕರ್ನಾಟಕದ ಡಾಕ್ಟರ್‍ಸ್ ಅಸೋಸಿಯೇಶನ್‌ರವರ ಬೇಡಿಕೆಯಂತೆ ಚಿಕಿತ್ಸಾ ದರ ಪರಿಷ್ಕರಣೆಯನ್ನು ಮಾಡಲಾಗಿದೆ.ಇಷ್ಟೆಲ್ಲ ಅನುಕೂಲ ಮಾಡಿದರೂ ಕೆಲವೊಂದು ಆಸ್ಪತ್ರೆಗಳಲ್ಲಿ ಯಶಸ್ವಿನಿ ಕಾರ್ಡ್ ತಂದವರಿಗೆ ಚಿಕಿತ್ಸೆಯನ್ನು ಕೊಡಲು ಹಿಂದೆ ಮುಂದೆ ನೋಡುವ ಕುರಿತು ಸರಕಾರದ ಗಮನಕ್ಕೆ ಬಂದಿದೆ.ಯಾವ ರೈತರು ಯಶಸ್ವಿನಿ ಯೋಜನೆಯ ಕಾರ್ಡ್ ಪಡೆದಿದಾ ಅವರಿಗೆ ಸಮಸ್ಯೆಯಾಗದಂತೆ ಆಸ್ಪತ್ರೆಗಳವರನ್ನು ಕರೆಸಿ ಮಾತನಾಡಿ ಸಮಸ್ಯೆ ಬಗೆಹರಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.ಆಗಲೂ ಸಮಸ್ಯೆ ಬಗೆ ಹರಿಯದಿದ್ದಲ್ಲಿ ರಾಜ್ಯ ಸರಕಾರ ಆಸ್ಪತ್ರೆಯ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಸಮಯ ಬರಲಿದೆ ಎಂದರು.


ಕ್ಯಾಂಪ್ಕೋ ಯಾವತ್ತೂ ರೈತರ ಪರ-ಹೆಚ್.ಎಂ.ಕೃಷ್ಣಕುಮಾರ್: ಕ್ಯಾಂಪ್ಕೊ ವ್ಯವಸ್ಥಾಪಕ ನಿರ್ದೇಶಕ ಹೆಚ್.ಎಮ್.ಕೃಷ್ಣಕುಮಾರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ಜಗತ್ತು ಯಾವ ರೀತಿ ಮುಂದಕ್ಕೆ ಹೋಗುತ್ತಾ ಇದೆಯೋ ಅದಕ್ಕೆ ತಕ್ಕಂತೆ ತಂತ್ರಜ್ಞಾನ ಬದಲಾಗಿದೆ.ಇದಕ್ಕೆ ಪೂರಕವಾಗಿ ಕೇಂದ್ರ ಸರಕಾರ ಕೂಡಾ ಹತ್ತು ಹಲವು ಯೋಜನೆ ಜಾರಿ ಮಾಡಿದೆ.ಈ ನಿಟ್ಟಿನಲ್ಲಿ ಕ್ಯಾಂಪ್ಕೋ ಯಾವತ್ತಿದ್ದರೂ ರೈತರ ಪರವಾಗಿದೆ ಎಂದರು.


ದ.ಕ.ಸಂಸದ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಗೃಹ ಸಚಿವ ಆರಗ ಜ್ಞಾನೇಂದ್ರ, ದ.ಕ.ಜಿಲ್ಲಾ ಉಸ್ತುವಾರಿ ಸುನಿಲ್ ಕುಮಾರ್, ಬಂದರು ಮತ್ತು ಮೀನುಗಾರಿಕೆ ಸಚಿವ ಎಸ್.ಅಂಗಾರ, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ,ಶಾಸಕರಾದ ಸಂಜೀವ ಮಠಂದೂರು, ರಾಜೇಶ್ ನಾಯ್ಕ್, ಹರೀಶ್ ಪೂಂಜಾ, ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ, ಕ್ಯಾಂಪ್ಕೋ ಉಪಾಧ್ಯಕ್ಷ ಶಂಕರನಾರಾಯಣ ಭಟ್ ಖಂಡಿಗೆ, ನಿರ್ದೇಶಕರಾದ ಎಸ್.ಆರ್ ಸತೀಶ್ಚಂದ್ರ, ದಯಾನಂದ ಹೆಗ್ಡೆ, ಕೃಷ್ಣಪ್ರಸಾದ್ ಮಡ್ತಿಲ, ಶಂಬುಲಿಂಗ ಹೆಗ್ಡೆ, ಕೆ.ಬಾಲಕೃಷ್ಣ ರೈ, ಜಯರಾಮ ಸರಳಾಯ, ಪದ್ಮರಾಜ್ ಪಟ್ಟಾಜೆ, ಎಂ.ಮಹೇಶ್ ಚೌಟ, ರಾಘವೇಂದ್ರ ಭಟ್, ಜಯಪ್ರಕಾಶ್ ನಾರಾಯಣ ಟಿ.ಕೆ,,ರಾಧಾಕೃಷ್ಣ ಕೆ, ಸತ್ಯನಾರಾಯಣ ಪ್ರಸಾದ್, ಸುರೇಶ್ ಕುಮಾರ್ ಶೆಟ್ಟಿ ಪಿ, ರಾಘವೇಂದ್ರ ಎಚ್.ಎಂ., ಕೃಷ್ಣಪ್ರಸಾದ್ ಮಡ್ತಿಲ, ದಯಾನಂದ ಹೆಗ್ಡೆ, ರಾಘವೇಂದ್ರ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ವಿದ್ಯಾರ್ಥಿನಿ ಪ್ರಿಯಾ ಭಟ್ ವಂದೇ ಮಾತರಂ ಹಾಡಿದರು.ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕರಾದ ಹರಿಪ್ರಸಾದ್ ಮತ್ತು ಮಾಧವಿ ಆರ್ ಪೈ ಕಾರ್ಯಕ್ರಮ ನಿರೂಪಿಸಿದರು.ಸಭಾ ಕಾರ್ಯಕ್ರಮದ ಆರಂಭದಲ್ಲಿ ಗಣ್ಯರು ವೇದಿಕೆಗೆ ಬರುವ ಮೊದಲು ವಿವೇಕಾನಂದ ಪದವಿ ಕಾಲೇಜಿನ ಅಧ್ಯಕ್ಷ ರವೀಂದ್ರ ಪಿ ಅವರು ವಿವೇಕಾನಂದ ಕಾಲೇಜಿಗೆ ೨೦೧೮ರಲ್ಲಿ ಅಮಿತ್ ಶಾ ಅವರು ಬಂದಿರುವ ನೆನಪನ್ನು ಮತ್ತು ಕ್ಯಾಂಪ್ಕೋ ನಿರ್ದೇಶಕರಾದ ಎಸ್.ಆರ್.ಸತೀಶ್ಚಂದ್ರ, ರಾಧಾಕೃಷ್ಣ ಅವರು ಕ್ಯಾಂಪ್ರೋ ಬೆಳೆದು ಬಂದ ಹಾದಿ ಮತ್ತು ಸಾಧನೆಗಳ ಕುರಿತು ಮಾತನಾಡಿದರು.ಕಾರ್ಯಕ್ರಮವನ್ನು ಅಮಿತ್ ಶಾ ಅವರು ಉದ್ಘಾಟಿಸಿದ ಬಳಿಕ ವೇದಿಕೆಯ ಬದಿಯಲ್ಲಿದ್ದ ಭಾರತ ಮಾತೆ ಮತ್ತು ಕ್ಯಾಂಪ್ಕೋ ಸ್ಥಾಪಕಾಧ್ಯಕ್ಷ ವಾರಣಾಸಿ ಸುಬ್ರಾಯ ಭಟ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.

ಅಮಿತ್ ಶಾ ಅವರಿಂದ ಡಿಜಿಟಲೈಸ್ ಶಿಲಾನ್ಯಾಸ, ಉದ್ಘಾಟನೆ
ಕ್ಯಾಂಪ್ಕೊ ಸುವರ್ಣ ಮಹೋತ್ಸವದ ಚಾರಿತ್ರಿಕ ಕಾರ್ಯಕ್ರಮದ ಸಂದರ್ಭದಲ್ಲಿ ಪುತ್ತೂರಿನ ಮಹಮ್ಮಾಯ ದೇವಸ್ಥಾನದ ಹತ್ತಿರ ಒಂದು ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸಲು ಉzಶಿಸಿರುವ ಅಗ್ರಿಮಾಲ್‌ಗೆ ಶಿಲಾನ್ಯಾಸ, ಪುತ್ತೂರಿನ ಕ್ಯಾಂಪ್ಕೋ ಚಾಕಲೇಟ್ ಕಾರ್ಖಾನೆ ಆವರಣದಲ್ಲಿ ತೆಂಗಿನ ಎಣ್ಣೆ ಕಲ್ಪ' ಮಾರುಕಟ್ಟೆಗೆ ಬಿಡುಗಡೆ ಮತ್ತು ಭದ್ರಾವತಿಯಲ್ಲಿ ಸುಸಜ್ಜಿತವಾಗಿ ನಿರ್ಮಿಸಲ್ಪಟ್ಟ ಬಹು ಉzಶಿತ ಗೋದಾಮು ಉದ್ಘಾಟನೆಯನ್ನು ಕೇಂದ್ರ ಗೃಹ, ಸಹಕಾರ ಸಚಿವ ಅಮಿತ್ ಶಾ ಅವರು ಡಿಜಿಟಲೈಸ್ ತಂತ್ರಜ್ಞಾನದ ಮೂಲಕ ನೆರವೇರಿಸಿದರು. ತ್ರಿಪುರಾದಲ್ಲಿರುವ ಮೋದಿಗೆ ಜೈಕಾರ ಕೇಳಬೇಕು ಅಮಿತ್ ಶಾ ಅವರು ಭಾಷಣದ ವೇದಿಕೆಗೆ ಬಂದು ಆರಂಭದಲ್ಲಿ ಭಾರತ್ ಮಾತಾ ಕಿ ಜೈ ಎಂದು ಘೋಷಣೆ ಕೂಗಿದರು.ಸಭಿಕರು ಇದನ್ನೇ ಪುನರಾವರ್ತಿಸಿದರು.ಪುತ್ತೂರಿನ ಜನರಲ್ಲಿ ಇಷ್ಟೇ ಶಕ್ತಿ ಇರುವುದೇ? ಎಂದು ಪ್ರಶ್ನಿಸಿದ ಅಮಿತ್ ಶಾ, ನೆರೆದವರನ್ನು ಉzಶಿಸಿ, ಮೋದಿಯವರು ತ್ರಿಪುರಾದಲ್ಲಿ ಇದ್ದಾರೆ ನಿಮ್ಮ ಜೈಕಾರ ಅಲ್ಲಿಗೆ ಕೇಳಬೇಕು ಎಂದು ಹೇಳಿ, ಎರಡು ಕೈಗಳನ್ನು ಮೇಲೆ ಎತ್ತಿ, ಕರ್ನಾಟಕದಲ್ಲಿ ಬಿಜೆಪಿ ಸರಕಾರ ಮಾಡುವ ಸಂಕಲ್ಪದ ಮುಷ್ಟಿ ಹಿಡಿದು ಪ್ರಚಂಡವಾದದಲ್ಲಿ ಹೇಳಿ ಎಂದು ಮತ್ತೆ ಮೂರು ಬಾರಿ ಜೈ ಕಾರ ಕೂಗಿದರು.ಬಳಿಕ ವೇದಿಕೆಯ ಗಣ್ಯರನ್ನು ಸಂಬೋಧಿಸಿದರು. ಪುಣ್ಯಭೂಮಿಗೆ ಪ್ರಣಾಮ ಸಲ್ಲಿಸುತ್ತೇನೆ... ಪುಣ್ಯಭೂಮಿ ಮಂಗಳೂರಿನ ಪುತ್ತೂರಿಗೆ ಬಂದಿzನೆ.ಸಮುದ್ರದ ದಡದಲ್ಲಿ ಪರಶುರಾಮನ ಸೃಷ್ಟಿಯಲ್ಲಿರುವ ಈ ಕ್ಷೇತ್ರ ವಿಶ್ವದಲ್ಲಿ ವಿಖ್ಯಾತ ಪಡೆದಿದೆ.ಧಾರ್ಮಿಕ ಪರಂಪರೆ, ಸಾಂಸ್ಕೃತಿಕ ಪರಂಪರೆ ಇಲ್ಲಿದೆ.ಈಗಾಗಲೇ ನಾನುಕಾಂತಾರ’ ಚಿತ್ರವನ್ನು ನೋಡಿzನೆ. ಇದನ್ನು ನೋಡಿದ ಬಳಿಕ ಈ ಕ್ಷೇತ್ರ ತುಂಬಾ ಪರಂಪರೆಯುಳ್ಳದು ಎಂದು ನನಗೆ ತಿಳಿದು ಬಂದಿದೆ.ಇಲ್ಲಿ ಸಮುದ್ರ, ಏರ್‌ಪೋರ್ಟ್, ರೈಲ್ವೇ, ರಸ್ತೆ ನಾಲ್ಕೂ ಕ್ಷೇತ್ರದಲ್ಲೂ ವ್ಯಾಪಾರ ನಡೆಯುತ್ತಿರುವ ಸಮೃದ್ಧ ಪರಿಸರವಾದ ಮಂಗಳೂರಿನ ಪುಣ್ಯ ಭೂಮಿಗೆ ನಾನು ಪ್ರಣಾಮ ಸಲ್ಲಿಸುತ್ತೇನೆ,ರಾಣಿ ಅಬ್ಬಕ್ಕಾ, ಮಂಗಳೂರಿನ ಮಂಗಳಾದೇವಿ, ಕದ್ರಿ ಮಂಜುನಾಥ್, ಪುತ್ತೂರು ಮಹಾಲಿಂಗೇಶ್ವರ ದೇವರಿಗೂ ಪ್ರಣಾಮ ಸಲ್ಲಿಸುವುದಾಗಿ ಹೇಳಿ ಅಮಿತ್ ಶಾ ಮಾತು ಆರಂಭಿಸಿದರು.ಈ ಸಂದರ್ಭ ಸಭಿಕರಿಂದ ಕರತಾಡನ ಮುಗಿಲು ಮುಟ್ಟಿತು.


ಕ್ಯಾಂಪ್ಕೋಗೆ ಅಭಿನಂದಿಸುತ್ತೇನೆ
ಕ್ಯಾಂಪ್ಕೊ ಅಡಿಕೆ ಬೆಳೆಗಾರರ ಸಂಕಷ್ಟದ ಕಾಲದಲ್ಲಿ ಅವರಿಗೆ ಸಹಾಯ ಮಾಡಿದ ಸಂಸ್ಥೆ, ರಬ್ಬರ್, ಕೋಕೊ ಬೆಳೆಗಾರರು ಮತ್ತು ಈಗ ತೆಂಗಿನ ಬೆಳೆಗಾರರಿಗೆ ನೆರವು ನೀಡಲು ಹೊರಟಿದೆ. ಸಂಸ್ಥೆ 50ನೇ ವರ್ಷಾಚರಣೆ ಮಾಡುತ್ತಿರುವುದೇ ಅದರ ಪ್ರಾಮಾಣಿಕ ಸೇವೆಗೆ ನೀಡಿದ ಪ್ರಮಾಣ ಪತ್ರ.೩೦೦೦ ಕೋಟಿ ರೂಪಾಯಿಗಳ ಆರ್ಥಿಕ ವ್ಯವಹಾರ ಮಾಡುವ ಕ್ಯಾಂಪ್ಕೊ ಒಂದೇ ಸೂರಿನಡಿ ಕೃಷಿ ಉಪಕರಣಗಳು, ಕೀಟ ನಾಶಕ, ರಸಗೊಬ್ಬರ ಸೇರಿದಂತೆ ಕೃಷಿ ಸಲಕರಣೆಗಳ, ಉತ್ಪನ್ನಗಳ ಮಾಲ್ ಆರಂಭಿಸುವ ಯೋಜನೆ, ತೆಂಗಿನಕಾಯಿ ಉತ್ಪನ್ನ ಕಲ್ಪ, ಭದ್ರಾವತಿಯಲ್ಲಿ ಗೋದಾಮು ರಚನೆ, ಸೋಲಾರ್ ಅಳವಡಿಕೆ, ಗಾಳಿಯಂತ್ರದ ಬಳಕೆಯ ಮಾದರಿ ಸಹಕಾರಿ ಸಂಸ್ಥೆ ವಾರಣಾಸಿ ಸುಬ್ರಾಯ ಭಟ್‌ರವರ ಮೂಲಕ ಬೆಳೆದು ಬಂದಿರುವುದಕ್ಕಾಗಿ ತಾನು ಅಭಿನಂದಿಸುವುದಾಗಿ ಅಮಿತ್ ಶಾ ಹೇಳಿದರಲ್ಲದೆ ತನ್ನ ಭಾಷಣದ ಕೊನೆಯಲ್ಲಿ ಕ್ಯಾಂಪ್ರೋ ಅಧ್ಯಕ್ಷರು ಮತ್ತು ಆಡಳಿತ ಮಂಡಳಿಯವರನ್ನು ವೇದಿಕೆಯಲ್ಲಿ ಗುರುತಿಸಿ ಅಭಿನಂದಿಸಿದರು.


ಊಟದ ವ್ಯವಸ್ಥೆ
ಸಮಾವೇಶಕ್ಕೆ ಸುಳ್ಯ ಭಾಗದಿಂದ ಬರುವವರಿಗಾಗಿ ಕಾವು ಕ್ಯಾಂಪ್ಕೋಬಳಿಯಲ್ಲಿ, ಬೆಳ್ಳಾರೆ ಭಾಗದಿಂದ ಬರುವವರಿಗೆ ಪರ್ಪುಂಜ ಶಿವಕೃಪಾ ಹಾಲ್ ಬಳಿ,ಸವಣೂರು ಮತ್ತು ಸುಬ್ರಹ್ಮಣ್ಯ ಭಾಗದಿಂದ ಬರುವವರಿಗೆ ನರಿಮೊಗರು ಮುಕ್ವೆ ಉಮಾಮಹೇಶ್ವರಿ ದೇವಸ್ಥಾನ ಬಳಿ, ಬೆಳ್ತಂಗಡಿ ಹಾಗೂ ನೆಲ್ಯಾಡಿ ಭಾಗದಿಂದ ಬರುವವರಿಗೆ ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನ,ಬಂಟಾಳ ಭಾಗದಿಂದ ಬರುವವರಿಗೆ ಮಾಣಿ-ಕಬಕ ರಸ್ತೆಯ ಮಿತ್ತೂರು ಪೆಟ್ರೋಲ್ ಪಂಪ್ ಬಳಿ,ವಿಟ್ಲ ಕನ್ಯಾನ ಭಾಗದಿಂದ ಬರುವವರಿಗೆ ಕಬಕ-ವಿಟ್ಟ ರಸ್ತೆಯ ಅಳಕೆಮಜಲು ಭಜನಾ ಮಂದಿರ ಬಳಿ,ಪಾಣಾಜೆ ಭಾಗದಿಂದ ಬರುವವರಿಗೆ ಉಪ್ಪಳಿಗೆ ಶಾಲಾ ವಠಾರದಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಪತ್ರಕರ್ತರಿಗೆ ಚಂದ್ರಶೇಖರ್ ರಾವ್ ಬಪ್ಪಳಿಗೆ ಅವರು ಉಟದ ವ್ಯವಸ್ಥೆ ಜವಾಬ್ದಾರಿ ನಿರ್ವಹಿಸಿದರು.


ಪಾರ್ಕಿಂಗ್:
ವಿವೆಕಾನಂದ ತೆಂಕಿಲ ಶಾಲಾ ಮೈದಾನದಲ್ಲಿ ಕ್ಯಾಂಪ್ಕೋ ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ ಆಗಮಿಸುವ ವಾಹನಗಳು ಸ್ವಯಂ ಸೇವಕರು ಸೂಚಿಸಿದ ಸ್ಥಳದಲ್ಲೇ ಪಾರ್ಕ್ ಮಾಡುವಂತೆ ವಾಹನ ಪಾರ್ಕಿಂಗ್ ವ್ಯವಸ್ಥೆಯ ಸಂಚಾಲಕ ಭಾಮಿ ಅಶೋಕ್ ಶೆಣೈ ಮತ್ತು ಮುರಳಿಕೃಷ್ಣ ಹಸಂತಡ್ಕ ಅವರು ವಿನಂತಿಸಿದಂತೆ. ವಾಹನ ಪಾರ್ಕಿಂಗ್ ವವಸ್ಥೆ ಮಾಡಲಾಗಿತ್ತು.ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಎದುರಿನ ಗದ್ದೆ, ಪುತ್ತೂರು ನಗರದ ಕಿಲ್ಲೆ ಮೈದಾನ, ಪುತ್ತೂರು ನಗರದ ಎಪಿಎಂಸಿ, ಮುಕ್ರಂಪಾಡಿ ಸುಭದ್ರ ಬಳಿ, ಫಿಲೋಮಿನಾ ಹೈಸ್ಕೂಲ್ ಬಳಿ, ಬೈಪಾಸ್ ಅಭಯ ಮಾರ್ಬಲ್ ಎದುರು , ತೆಂಕಿಲ ಬೈಪಾಸ್ ಸುರೇಶ್ ಟವರ್‍ಸ್ ಬಳಿ ತೆಂಕಿಲ ಗೌಡ ಸಮುದಾಯದ ಬಳಿ, ತೆಂಕಿಲ ಸ್ವಾಮಿ ಕಲಾಮಂದಿರ, ತೆಂಕಿಲ ಮಂಗಳಾ ಹಾರ್ಡ್‌ವೇರ್ ಕಟ್ಟಡದ ಬಳಿ, ತೆಂಕಿಲ ದರ್ಶನ್ ಹಾಲ್‌ನ ಹಿಂಭಾಗ, ಜೈನಭವನ, ತೆಂಕಿಲ ಪಾದೆ, ಬೈಪಾಸ್ ರಸ್ತೆಯ ಅಶ್ಮಿ ಕಂಫರ್ಟ್ಸ್ ಬಳಿ, ಸುಶ್ರುತ ಆಸ್ಪತ್ರೆಯ ಬಳಿ, ಮಹಾಲಿಂಗೇಶ್ವರ ಗದ್ದೆ, ಬೈಪಾಸ್ ಭಾರತ್ ಗ್ಯಾಸ್ ಎದುರುಗಡೆ, ಪಂಚವಟಿ ಬಳಿ ಪಾಕಿಂಗ್ ವ್ಯವಸ್ಥೆ ಮಾಡಲಾಗಿತ್ತು.

ಬಿಗಿ ಭದ್ರತೆ..ಎಲ್ಲಿ ನೋಡಿದರೂ ಪೊಲೀಸ್:
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಭೇಟಿ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಭದ್ರತಾ ವ್ಯವಸ್ಥೆ ಕಲ್ಪಿಸಿದ್ದರು.ರಾಜ್ಯದ ವಿವಿಧ ಠಾಣೆಗಳಿಂದ ಸಾವಿರಾರು ಸಂಖ್ಯೆಯ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು.ಅಮಿತ್ ಶಾ ಅವರು ಕಾರ್ಯಕ್ರಮ ಮುಗಿಸಿ ವೇದಿಕೆಯಿಂದ ಹೊರಗೆ ಹೋದ ಬಳಿಕವೇ ಸಮಾರಂಭದಲ್ಲಿದ್ದ ಸಾರ್ವಜನಿಕರಿಗೆ ಹೊರಗೆ ಹೋಗಲು ಅವಕಾಶ ಕಲ್ಪಿಸಲಾಗಿತ್ತು.ಹನುಮಗಿರಿಯಿಂದ ಹೆಲಿಕಾಪ್ಟರ್‌ನಲ್ಲಿ ಬಂದು ಮೊಟ್ಟೆತ್ತಡ್ಕ ಹೆಲಿಪ್ಯಾಡ್‌ನಲ್ಲಿ ಇಳಿದ ಅಮಿತ್ ಶಾ ಅವರಿಗಾಗಿ ಮೊಟ್ಟೆತ್ತಡ್ಕ ಮುಕ್ರಂಪಾಡಿ-ದರ್ಬೆ ಬೈಪಾಸ್ ತೆಂಕಿಲ ರಸ್ತೆಯಲ್ಲಿ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿತ್ತು.ಮುಖ್ಯಮಂತ್ರಿ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರೂ ಜೊತೆಗಿದ್ದರು.

LEAVE A REPLY

Please enter your comment!
Please enter your name here