ಈ ಮಣ್ಣಿನ ಶ್ರೇಷ್ಠ ಹಬ್ಬಗಳಲ್ಲಿ ಮಹಾ ಶಿವರಾತ್ರಿಹಬ್ಬಕ್ಕೆ ತನ್ನದೇ ಆದ ವೈಶಿಷ್ಟ್ಯವಿದೆ. ಇದು ಮೂಲತ: ರೈತಾಪಿ-ಕೃಷಿಕರ ಹಬ್ಬ.ಈ ಹಬ್ಬವನ್ನು ಮಾಘ ಮಾಸದ ಬಹುಳ ಚತುರ್ದಶಿಯಂದು(ಈ ಬಾರಿ ಫೆ.18,ಶನಿವಾರ)ಆಚರಿಸಲಾಗುತ್ತದೆ.
ಒಂದು ನಂಬಿಕೆಯಂತೆ ಜಗತ್ತಿನಾದ್ಯಂತ ಕೋಟ್ಯಾಂತರ ಭಕ್ತರು ಶಿವರಾತ್ರಿಯಂದು, ದಿನವಿಡೀ ಉಪವಾಸ ಜಾಗರಣೆಗಳನ್ನು ಮಾಡುವುದರ ಮೂಲಕ ಮಹಾಶಿವನ ದೇವಾಲಯಕ್ಕೆ ಹೋಗಿ ದೇವರ ದರುಶನಗೈದು ಪೂಜೆ-ಪುನಸ್ಕಾರ,ನಗರ-ಭಜನೆ ,ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಮಹಾದೇವ ಶಿವ ಆಭರಣಪ್ರಿಯನಲ್ಲ.ಅಲಂಕಾರಪ್ರಿಯನೂ ಅಲ್ಲ..ಭಸ್ಮಲೇಪಿತನಾಗಿ, ಚರ್ಮಾಂಬರಧಾರಿಯಾಗಿ ದರುಶನ ನೀಡುವ ಶಿವ ತ್ರೀನೇತ್ರ.ಶಿವನಿಗೆ ಬಹಳ ಪ್ರಿಯವಾದ ಬಿಲ್ವಪತ್ರೆಯನ್ನು ಅರ್ಪಿಸಿ,ತುಳಸಿ ಮಾಲೆಗಳಿಂದ ಅಲಂಕಾರಮಾಡಿ ಶಿವನನ್ನು ಶ್ರದ್ಧಾಭಕ್ತಿಗಳಿಂದ ರಾತ್ರಿಯಿಡೀ ಆರಾಧಿಸಲಾಗುತ್ತದೆ.ಶಿವ ಮಹಿಮೆ ಅಪಾರವಾದುದು ತ್ರಿಮೂರ್ತಿಗಳಲ್ಲಿ ಲಯಕರ್ತನಾದ ಶಿವ ಯಾರ ಮನಸ್ಸಿಗೂ ಸುಲಭದಲ್ಲಿ ಸಿಗಲಾರ.ಕೈಲಾಸವಾಸಿ ಶಿವ ಮತ್ತು ಹಿಮವಂತನ ಮಗಳು ಭೂದೇವಿ ಪಾರ್ವತಿ ಇವರ ಕಲ್ಯಾಣ ಈ ಪವಿತ್ರದಿನದಂದೇ ಆಯಿತು ಎಂದು ಹೇಳಲಾಗುತ್ತಿದೆ.
ಲಯಕರ್ತನಾದ ಶಿವ ನಮ್ಮ ಅಜ್ಞಾನದ ಕತ್ತಲೆಯನ್ನು ಅಳಿಸಿ, ಸುಜ್ಞಾನದ ಬೆಳಕ ಹರಡುವ ದೇವರ ದೇವ. ದೇವತೆ-ಅಸುರರ ನಡುವೆ ವಿವಾದವಾಗಿ ಸಮುದ್ರಮಥನವಾದಾಗ ವಿಷ ಜಗತ್ತನ್ನು ಆವರಿಸಿದಾಗ ಶಿವ ಆ ಮಹಾ ಕಾರ್ಕೋಟಕ ವಿಷವನ್ನು ಕುಡಿದು ಪ್ರಪಂಚದ ರಕ್ಷಣೆ ಮಾಡಿರುವುದರಿಂದ ನೀಲಕಂಠನಾದ. ಮಹಾಪತಿವ್ರತೆ ಪಾರ್ವತಿದೇವಿ ಶಿವ ಕುಡಿದ ವಿಷ ಗಂಟಲಲ್ಲಿ ಇಳಿಯದಂತೆ ಇಡೀ ರಾತ್ರಿ ಎಚ್ಚರದಿಂದ ಇದ್ದು ಪತಿಯ ರಕ್ಷಣೆಯಲ್ಲಿ ತೊಡಗುತ್ತಾಳೆ. ಈ ಪವಿತ್ರದಿನವು ಶಿವರಾತ್ರಿಎಂಬ ನಂಬಿಕೆ ಭಕ್ತಜನಮನದ್ದು. ಭಗೀರಥನ ತಪಸ್ಸಿಗೆ ಮೆಚ್ಚಿ ಭೂಮಿಗೆ ಇಳಿದು ಬಂದ ಗಂಗಾಮಾತೆಯನ್ನು ಮಹಾದೇವ ಶಿವ ತನ್ನ ಜಡೆಯಲ್ಲಿ ಹಿಡಿದಿಟ್ಟಾಗ,ತನ್ನ ಪೂರ್ವಜರ ಮೋಕ್ಷಕ್ಕಾಗಿ ಗಂಗೆಯನ್ನು ಭೂಮಿಯಲ್ಲಿ ಹರಿದಾಡುವಂತೆ ಮತ್ತೆ ಭಗೀರಥ ತನ್ನ ಪ್ರಯತ್ನ,ಆರಾಧನೆಗಳಿಂದ ಶಿವನನ್ನು ಒಲಿಸಿ ಗಂಗೆ ನದಿಯಾಗಿ ಹರಿದದ್ದೂ ಇದೇ ಶಿವರಾತ್ರಿಯಂದು ಎಂಬ ನಂಬಿಕೆಗಳಿಂದ ಶಿವ ಮಹಾತ್ಮೆ ನಮ್ಮ ಮುಂದೆ ತೆರೆದುಕೊಳ್ಳುತ್ತದೆ.
ಹೀಗೇ ಜಗದ್ರಕ್ಷಕನಾದ ಮಹಾದೇವ ಶಿವನನ್ನು ಆರಾಽಸುವ ಶಿವರಾತ್ರಿ ಸಕಲರ ಮನದ ಹಬ್ಬವಾಗಿ…ಪ್ರಕೃತಿ-ಪರಿಸರದ ಹಬ್ಬವಾಗಿ ಭೂಮಂಡಲಕೆ…ಸರ್ವಜನಾಂಗದ ಭಕ್ತಕೋಟಿಗೆ ಆಯುರಾರೋಗ್ಯ ಭಾಗ್ಯ ಸುಖ ಸಂಪತ್ತು ನೀಡಿ ಹರಸಲೆಂದು ನಾವೆಲ್ಲ ಪ್ರಾರ್ಥಿಸೋಣ.