ಪುತ್ತೂರು:ದೇವಸ್ಥಾನಗಳು ಧಾರ್ಮಿಕ ಕಾರ್ಯಕ್ರಮಗಳಿಗೆ ಜೊತೆಗೆ ಭಕ್ತರ ಆರೋಗ್ಯ ರಕ್ಷಣೆಯಲ್ಲಿಯೂ ಪ್ರಧಾನ್ಯತೆ ನೀಡುವ ನಿಟ್ಟಿನಲ್ಲಿ ಆರ್ಯಾಪು ಗ್ರಾಮದ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ವಿನೂತನ ಯೋಜನೆಯೊಂದಿಗೆ ಪ್ರಾರಂಭಗೊಂಡು, ನಿರಂತರವಾಗಿ ಸೇವೆ ನೀಡುತ್ತಾ ಬಂದಿರುವ ಉಚಿತ ವೈದ್ಯಕೀಯ ಶಿಬಿರವು ವರುಷದ ಸಂಭ್ರಮದಲ್ಲಿದೆ. ಭಕ್ತರ ಅನುಕೂಲಕ್ಕೆ ತಕ್ಕಂತೆ ವಿಶೇಷ ಶಿಬಿರಗಳನ್ನು ಒಂದು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ವರ್ಷದ ವೈದ್ಯಕೀಯ ಶಿಬಿರದ ವಾರ್ಷಿಕೋತ್ಸವ ‘ಸಂಪ್ಯ ಆರೋಗ್ಯ ಮೇಳ’ ಇನ್ನಷ್ಟು ವಿಶಿಷ್ಠ ಶೈಲಿಯಲ್ಲಿ ಮಾ.5ರಂದು ದೇವಸ್ಥಾನದ ವಠಾರದಲ್ಲಿ ನಡೆಯಲಿದೆ.
ದೇಹಕ್ಕೆ ಕಾಯಿಲೆ ಬಂದಾಗ ಮಾತ್ರವೇ ಚಿಕಿತ್ಸೆ ಪಡೆಯುವುದಲ್ಲ ಬದಲಾಗಿ ಮನುಷ್ಯನ ದೇಹಕ್ಕೆ ಬರುವ ಮಧುಮೇಹ, ಅಧಿಕ ರಕ್ತದೊತ್ತಡ ಮೊದಲಾದ ಕಾಯಿಲೆಗಳ ಬಗ್ಗೆ ಆಗಾಗ ತಪಾಸಣೆ ನಡೆಸಿ ಅವುಗಳನ್ನು ಮೂಲದಿಂದಲೇ ನಿವಾರಿಸಿಕೊಳ್ಳಬೇಕು ಎಂಬ ಸದುದ್ದೇಶದಿಂದ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿರುವ ಪುತ್ತೂರು ಮಹಾವೀರ ಮೆಡಿಕಲ್ ಸೆಂಟರ್ನ ಹೆಸರಾಂತ ವೈದ್ಯ ಡಾ.ಸುರೇಶ್ ಪುತ್ತೂರಾಯರ ಪರಿಕಲ್ಪನೆಯಲ್ಲಿ ಈ ಯೋಜನೆ 2022ರ ಎಪ್ರೀಲ್ 3ರಂದು ಪ್ರಾರಂಭಗೊಂಡಿತು.
ನಂತರ ಪ್ರತಿ ತಿಂಗಳ ಪ್ರಥಮ ಆದಿತ್ಯವಾರ ಉಚಿತ ವೈದ್ಯಕೀಯ ಶಿಬಿರದಲ್ಲಿ ಭಕ್ತರ ಅನುಕೂಲಕ್ಕೆ ತಕ್ಕಂತೆ ವಿಶೇಷ ಚಿಕಿತ್ಸಾ ವಿಧಾನಗಳನ್ನು ಶಿಬಿರದಲ್ಲಿ ಅಳವಡಿಸಿಕೊಂಡು ನುರಿತ ತಜ್ಞ ವೈದ್ಯರ ಮೂಲಕ ತಪಾಸಣೆ, ಚಿಕಿತ್ಸೆಗಳನ್ನು ನೀಡುತ್ತಾ ಬಂದಿರುತ್ತದೆ. ದೇವಸ್ಥಾನ, ಆರೋಗ್ಯ ರಕ್ಷಾ ಸಮಿತಿ, ಸಂಪ್ಯ ನವಚೇತನಾ ಯುವಕ ಮಂಡಲ ಹಾಗೂ ಮುಕ್ರಂಪಾಡಿ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯ ಸಹಕಾರದೊಂದಿಗೆ ಶಿಬಿರವು ಯಶಸ್ವಿಯಾಗಿ ಮುನ್ನಡೆಯುತ್ತಾ ಸಾಗುತ್ತಿದೆ. ಪ್ರತಿ ತಿಂಗಳ ಪ್ರಥಮ ಆದಿತ್ಯವಾರ ನಡೆಯುವ ಶಿಬಿರದಲ್ಲಿ ಪುತ್ತೂರು, ಸುಳ್ಯ ಹಾಗೂ ಮಂಗಳೂರಿನ ನುರಿತ ವೈದ್ಯರುಗಳ ತಂಡ ಶಿಬಿರದಲ್ಲಿ ಸಹಕರಿಸಿದ್ದಾರೆ. ಹಲವು ಔಷಧ ಕಂಪನಿಗಳು, ಜನೌಷಧಿ ಕೇಂದ್ರಗಳು, ದಾನಿಗಳು ನೆರವಿನ ಹಸ್ತ ಚಾಚಿದ್ದಾರೆ.
ಇಲ್ಲಿ ಎಲ್ಲವೂ ಉಚಿತ…!
ಶಿಬಿರದಲ್ಲಿ ರೋಗಿಗಳ ಆವಶ್ಯಕತೆಗಣುಗುನವಾಗಿ ನಡೆಯುವ ತಪಾಸಣೆ, ಚಿಕಿತ್ಸೆಗಳ ಮಾತ್ರವಲ್ಲದೆ ಅವರಿಗೆ ಒಂದು ತಿಂಗಳಿಗೆ ಆವಶ್ಯಕವಾದ ಔಷಧಿಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಚಿಕಿತ್ಸೆ, ಔಷಧಿಗಳ ಜೊತೆಗೆ ಶಿಬಿರಾರ್ಥಿಗಳಿಗೆ ಊಟ, ಉಪಾಹಾರವನ್ನು ನೀಡಲಾಗುತ್ತಿರುವುದು ಶಿಬಿರದ ಇನ್ನೊಂದು ವಿಶೇಷತೆಯಾಗಿದೆ.
12 ಪ್ರತ್ಯೇಕ ವಿಭಾಗಗಳಲ್ಲಿ ಉಚಿತ ಚಿಕಿತ್ಸೆ
12ನೇ ತಿಂಗಳ ಶಿಬಿರದಲ್ಲಿ 12 ಪ್ರತ್ಯೇಕ ವಿಭಾಗಗಳಲ್ಲಿ ತಪಾಸಣೆ ನಡೆಸಲಾಗುತ್ತಿದ್ದು ಜನರಲ್ ಮೆಡಿಸಿನ್(ಸಾಮಾನ್ಯ ವೈದ್ಯಕೀಯ ತಪಾಸಣೆ), ಹೃದ್ರೋಗ ಮತ್ತು ಶ್ವಾಸಕೋಶ ಚಿಕಿತ್ಸೆ, ಶಸ್ತ್ರ ಚಿಕಿತ್ಸಾ ವೈದ್ಯರಿಂದ ತಪಾಸಣೆ, ಮಕ್ಕಳ ಚಿಕಿತ್ಸೆ, ಸ್ತ್ರೀರೋಗ ಚಿಕಿತ್ಸೆ, ಎಲುಬು ಮತ್ತು ಕೀಲು ಚಿಕಿತ್ಸೆ, ಚರ್ಮರೋಗ ಚಿಕಿತ್ಸೆ, ಕಿವಿ, ಗಂಟಲು, ಮೂಗು ಚಿಕಿತ್ಸೆ, ಕಣ್ಣಿನ ಚಿಕಿತ್ಸೆ, ದಂತ ಚಿಕಿತ್ಸೆ, ಆಯುರ್ವೇದ ಚಿಕಿತ್ಸೆ ಹಾಗೂ ಹೋಮಿಯೋಪತಿ, ನರರೋಗ ಚಿಕಿತ್ಸೆ ಹಾಗೂ ಮೂತ್ರಜನಕಾಂಗದ ರೋಗ ಚಿಕಿತ್ಸೆಗಳನ್ನು ಉಚಿತವಾಗಿ ನೀಡಲಾಗುವುದು. ಅಲ್ಲದೆ ಇದರ ಜೊತೆಯಲ್ಲಿ ಇಸಿಜಿ, ಮಧುಮೇಹ ರಕ್ತ ಪರೀಕ್ಷೆ, ರಕ್ತದ ಒತ್ತಡ ಪರೀಕ್ಷೆ, ಶ್ವಾಸಕೋಶ ಪರೀಕ್ಷೆ, ಎಲುಬು ಸಾಂದ್ರತೆಯ ಪರೀಕ್ಷೆ ಹಾಗೂ ರೋಗಿಗಳ ಆವಶ್ಯಕತೆಗಳಿಗೆ ಅನುಗುಣವಾಗಿ ಒಂದು ವಾರಗಳ ಅವಧಿಯ ಔಷಧಿಗಳನ್ನು ಉಚಿತವಾಗಿ ವಿತರಿಸಲಾಗುವುದು.
ಒಂದೇ ಸೂರಿನಡಿಯಲ್ಲಿ ಎಲ್ಲಾ ಸೇವೆ….!
ದೇವಸ್ಥಾನದ ವಠಾರದಲ್ಲಿ ನಡೆಯುವ ಶಿಬಿರದಲ್ಲಿ ಆಸ್ಪತ್ರೆಯಲ್ಲಿ ದೊರೆಯುವಂತೆ ಎಲ್ಲಾ ಸೌಲಭ್ಯಗಳು ಕೂಡ ದೊರೆಯುತ್ತಿದೆ. ಚಿಕಿತ್ಸೆ, ತಪಾಸಣೆ ಹಾಗೂ ಔಷಧಿಗಳನ್ನು ಶಿಬಿರದಲ್ಲಿ ಒಂದೇ ಕಡೆ ವಿತರಿಸುವ ಮೂಲಕ ಶಿಬಿರಾರ್ಥಿಗಳಿಗೆ ಎಲ್ಲಾ ಸೌಲಭ್ಯಗಳು ಒಂದೇ ಸೂರಿನಡಿಯಲ್ಲಿ ಉಚಿತವಾಗಿ ದೊರೆಯುತ್ತಿದೆ.
ಚಿಕಿತ್ಸೆ ನೀಡುವ ವೈದ್ಯರು, ಸಹಕರಿಸುವ ಆಸ್ಪತ್ರೆ, ಲ್ಯಾಬ್:
ಶಿಬಿರದಲ್ಲಿ ಪುತ್ತೂರು ತಜ್ಞ ವೈದ್ಯರುಗಳು, ಸುಳ್ಯ ಕೆವಿಜಿ ಆಯುರ್ವೇದ ವೈದ್ಯಕೀಯ ಮಹಾ ವಿದ್ಯಾಲಯ ಮತ್ತು ಆಸ್ಪತ್ರೆ ಹಾಗೂ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗಳ ತಜ್ಞ ವೈದ್ಯರುಗಳು ಶಿಬಿರದಲ್ಲಿ ಭಾಗವಹಿಸಿ ಚಿಕಿತ್ಸೆ ನೀಡಲಿದ್ದಾರೆ.ಮಹಾವೀರ ಆಸ್ಪತ್ರೆ ಬೊಳುವಾರು, ಸುಳ್ಯ ಕೆವಿಜಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ಧನ್ವಂತರಿ ಲ್ಯಾಬೋರೇಟರಿ ದರ್ಬೆ, ಐಡಿಯಲ್ ಲ್ಯಾಬೋರೇಟರಿ ಪುತ್ತೂರು, ಭಾರತೀಯ ಜನೌಷಧಿ ಕೇಂದ್ರಗಳು, ಉಷಾ ಸ್ಕ್ಯಾನ್ ಸೆಂಟರ್ ದರ್ಬೆ, ಪುತ್ತೂರು ಡಯಾಗ್ನೋಸ್ಟಿಕ್ ಮತ್ತು ರಿಸರ್ಚ್ ಸೆಂಟರ್ ತೆಂಕಿಲ, ಮಂಗಳೂರು ಕೆಎಂಸಿ ಆಸ್ಪತ್ರೆಯ ವೈದ್ಯರ ತಂಡ ಹಾಗೂ ಹಲವು ಔಷಧಿ ಕಂಪನಿಗಳು, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಸ್ಕೌಟ್ಸ್ ಮತ್ತು ಗೈಡ್ಸ್ನ ವಿದ್ಯಾರ್ಥಿಗಳು ಶಿಬಿರದಲ್ಲಿ ಸಹಕರಿಸಲಿದ್ದಾರೆ.
ವರುಷದ ಶಿಬಿರದಲ್ಲಿ ಪ್ರಾರಂಭದಲ್ಲಿ ಪ್ರಾತಃಕಾಲ ಧನ್ವಂತರಿ ಹವನ, ನೊಂದಣಿ, 12ನೇ ಶಿಬಿರದ ಉದ್ಘಾಟನೆ, ಉದ್ಘಾಟನೆಯ ಬಳಿಕ ವಿವಿಧ ವಿಭಾಗಳಲ್ಲಿ ವೈದ್ಯಕೀಯ ತಪಾಸಣೆ ನಡೆಯಲಿದೆ. ಶಿಬಿರದ ಉದ್ಘಾಟನಾ ಕಾರ್ಯಕ್ರಮದ ಬಳಿಕ ಆರೋಗ್ಯ ಮಾಹಿತಿ ವಿಶೇಷ ಉಪನ್ಯಾಸ ನಡೆಯಲಿದ್ದು ನರ ಮಾನಸಿಕ ತಜ್ಞ ಡಾ.ಗಣೇಶ್ ಪ್ರಸಾದ್ ಮುದ್ರಾಜೆಯವರಿಂದ ‘ಮಾನಸಿಕ ಆರೋಗ್ಯದ ಪ್ರಾಮುಖ್ಯತೆ’ ಎಂಬ ವಿಷಯದಲ್ಲಿ ಉಪನ್ಯಾಸ ನೀಡಲಿದ್ದಾರೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ಶ್ರೀ ಸಂಪುಟ ನರಸಿಂಹ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ. ಮಹಾವೀರ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಅಶೋಕ್ ಪಡಿವಾಳ್ ಶಿಬಿರವನ್ನು ಉದ್ಘಾಟಿಸಲಿದ್ದಾರೆ. ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ಸುರೇಶ್ ಪುತ್ತೂರಾಯ, ಅಧ್ಯಕ್ಷತೆ ವಹಿಸಲಿದ್ದಾರೆ.
ಶಾಸಕ ಸಂಜೀವ ಮಠಂದೂರು, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮುರಳಿಕೃಷ್ಣ ಹಸಂತಡ್ಕ. ದೇವಸ್ಥಾನದ ನಿಕಟಪೂರ್ವ ಅಧ್ಯಕ್ಷ ಎನ್ ರವೀಂದ್ರ ಶೆಟ್ಟಿ ನುಳಿಯಾಲು, ಹಿರಿಯ ವೈದ್ಯ ಗೋಪಿನಾಥ ಪೈ ಅತಿಥಿಗಳಾಗಿ ಆಗಮಿಸಲಿದ್ದಾರೆ. ಮಧ್ಯಾಹ್ನ ನಡೆಯುವ ಗೌರವ ಸಮರ್ಪಣಾ ಕಾರ್ಯಕ್ರಮದಲ್ಲಿ ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮಿಜಿ ಆಶೀರ್ವಚನ ನಡೆಯಲಿದೆ. ಮಂಗಳೂರಿನ ಉದ್ಯಮಿ ಪ್ರಭಾಕರ ಶೆಟ್ಟಿ ಅಳಕೆ, ಪುತ್ತೂರು ಪಾಪ್ಯುಲರ್ ಸ್ವೀಟ್ಸ್ ನರಸಿಂಹ ಕಾಮತ್, ಪುತ್ತೂರು ವಿದ್ಯಾಮಾತ ಅಕಾಡೆಮಿಯ ನಿರ್ದೇಶಕ ಭಾಗ್ಯೇಶ್ ಎ.ಕೆ., ಪ್ರಗತಿಪರ ಕೃಷಿಕ ಸುಂದರ ಪೂಜಾರಿ ಬಡಾವು, ಕಲ್ಲಮ ಶ್ರೀರಾಘವೇಂದ್ರ ಮಠದ ಆಡಳಿತ ವ್ಯವಸ್ಥಾಪಕ ಡಾ.ಸೀತಾರಾಮ ಭಟ್ ಕಲ್ಲಮ ಅಭ್ಯಾಗತರಾಗಿ ಅಗಲಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ವೈದ್ಯಕೀಯ ಶಿಬಿರದಲ್ಲಿ ಸಹಕರಿಸಿದ ವೈದ್ಯರಿಗೆ, ವಿಶೇಷ ದೇಣಿಗೆ ನೀಡಿ ಸಹಕರಿಸಿದ ಮಹನೀಯರಿಗೆ ಕಾರ್ಯಕ್ರಮದಲ್ಲಿ ಗೌರವಿಸಲಾಗುವುದು ಎಂದು ದೇವಸ್ಥಾನ ಹಾಗೂ ಆರೋಗ್ಯ ರಕ್ಷಾ ಸಮಿತಿ ಪ್ರಕಟಣೆ ತಿಳಿಸಿದೆ.