ಪುತ್ತೂರು: 9 ವರ್ಷಗಳ ಹಿಂದೆ ಆರಂಭಗೊಂಡ ಪುತ್ತೂರಿನ ಏಕೈಕ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿಗೆ ಹೊಸದಾಗಿ ಶಾಶ್ವತ ಕಟ್ಟಡದ ನಿರ್ಮಾಣಕ್ಕೆ ಮಾ.6ರಂದು ಶಿಲಾನ್ಯಾಸ ನಡೆಯಲಿದೆ.
ಪುತ್ತೂರು-ಉಪ್ಪಿನಂಗಡಿ ರಸ್ತೆಯಲ್ಲಿ ಬರುವ ಕೇಪುಳು ಸಮೀಪದ ಆನೆಮಜಲು ಎಂಬಲ್ಲಿ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ನಿರ್ಮಾಣಕ್ಕಾಗಿ 6 ವರ್ಷಗಳ ಹಿಂದೆ 4.72 ಎಕ್ರೆ ಜಾಗ ಮಂಜೂರಾಗಿತ್ತು. ಇದರ ಬೆನ್ನಲ್ಲೇ ಕಟ್ಟಡ ನಿರ್ಮಾಣದ ಡಿಪಿಆರ್ ಮಾಡಲಾಯಿತು. ಕರ್ನಾಟಕ ಗೃಹ ಮಂಡಳಿ ನೇತೃತ್ವದಲ್ಲಿ 3 ಮಹಡಿಗಳ ಸುಂದರ ಕಟ್ಟಡಕ್ಕಾಗಿ 8 ಕೋಟಿ ರೂ.ಗಳ ನೀಲನಕಾಶೆ ಸಿದ್ಧಪಡಿಸಲಾಗಿತ್ತು. ಮೊದಲ ಹಂತದಲ್ಲಿ 4.80 ಕೋಟಿ ರೂ.ಮಂಜೂರಾಗಿದ್ದರೆ, 2ನೇ ಹಂತದಲ್ಲಿ 1 ಕೋಟಿ ರೂ. ಮಂಜೂರಾಗಿತ್ತು. ಆಡಳಿತಾತ್ಮಕ ಮಂಜೂರಾತಿ ಸಿಕ್ಕಿ ಕೆಲಸ ಆರಂಭಿಸಲು ಕಾರ್ಯಾದೇಶವನ್ನೂ ನೀಡಿ ಇನ್ನೇನು ಕಟ್ಟಡ ನಿರ್ಮಾಣ ಕೆಲಸ ಆರಂಭವಾಗುತ್ತದೆ ಎನ್ನುವಷ್ಟರಲ್ಲಿ ಖಾಸಗಿಯವರು ಕುಮ್ಕಿ ಜಮೀನಿನ ವಿಚಾರದಲ್ಲಿ ಕರ್ನಾಟಕ ಆಡಳಿತಾತ್ಮಕ ನ್ಯಾಯಾಲಯ(ಕೆಎಟಿ)ದ ಮೊರೆ ಹೋದರು. ಉದ್ದೇಶಿತ ಕಾಮಗಾರಿಗೆ ಕೆಎಟಿಯಿಂದ ತಡೆಯಾಜ್ಞೆ ಬಂತು. ಬಳಿಕದ ಬೆಳವಣಿಗೆಯಲ್ಲಿ ಈ ಕುರಿತು ಶಾಸಕರು, ನಗರಸಭಾ ಅಧ್ಯಕ್ಷರು ಸೇರಿದಂತೆ ನಾನಾ ಗಣ್ಯರ ನೇತೃತ್ವದಲ್ಲಿ ಸಂಧಾನ ಮಾತುಕತೆಗಳು ನಡೆದಿದ್ದರೂ ಸಮಸ್ಯೆ ಇತ್ಯರ್ಥವಾಗಿರಲಿಲ್ಲ. ನ್ಯಾಯಾಲಯದಿಂದಲೂ ತೀರ್ಪು ಪ್ರಕಟವಾಗಿಲ್ಲ. ಹೀಗಾಗಿ ಕಾಲೇಜಿಗೆ ಹೊಸ ಜಾಗ, ಹೊಸ ಕಟ್ಟಡಕ್ಕೆ ಸಮಸ್ಯೆಯುಂಟಾಗಿತ್ತು.
ಬೊಳುವಾರು ಶಾಲೆಯ ಜಾಗ ಮಂಜೂರು: ಬೊಳುವಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 1.5 ಎಕ್ರೆ ಜಾಗವಿದ್ದು, ಶಾಲೆಯನ್ನು ಉಳಿಸಿಕೊಂಡು ಅಲ್ಲಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಸ್ಥಾಪನೆಗೆ ಚಿಂತನೆ ನಡೆಸಿದಂತೆ ಶಾಸಕ ಸಂಜೀವ ಮಠಂದೂರು ಅವರು ಶಾಲೆಯ ದಾಖಲೆ ಪತ್ರಗಳನ್ನು ನೋಡಿಕೊಂಡು ಅಲ್ಲೇ ಮಹಿಳಾ ಕಾಲೇಜು ಕಟ್ಟಡ ನಿರ್ಮಾಣ ಪ್ರಕ್ರಿಯೆಗೆ ಮುಂದಾಗಿದ್ದು, ಮಾ.6ರಂದು ನೂತನ ಕಾಲೇಜು ಕಟ್ಟಡಕ್ಕೆ ಶಿಲಾನ್ಯಾಸವು ನಡೆಯಲಿದೆ.
ಸರಕಾರಿ ಕಾಲೇಜುಗಳಿಗೆ ಕನಿಷ್ಠ 1.5 ಎಕರೆ ಜಮೀನು ಇರಲೇಬೇಕಾಗಿದೆ. ಈ ನಿಟ್ಟಿನಲ್ಲಿ ಸರಿಯಾದ ಜಾಗವನ್ನು ನಾವು ಹುಡುಕಿದ್ದೇವೆ. ಪುತ್ತೂರು ನಗರಸಭೆಯ ರಸ್ತೆಯ ಬದಿಯಲ್ಲೇ ಎಲ್ಲಾ ರೀತಿಯಲ್ಲೂ ಸೌಕರ್ಯ ಇರುವ ಬೊಳುವಾರು ಸೂಕ್ತ ಆಯ್ಕೆ ಆಗಿದೆ. ಅದರಲ್ಲೂ ನಗರದ ಹೃದಯ ಭಾಗದಲ್ಲಿ ಹಾಗು ಹೆಣ್ಣು ಮಕ್ಕಳಿಗೆ ಸುರಕ್ಷಿತವಾಗಿದೆ. ಅಲ್ಲಿರುವ ಶಾಲೆಯನ್ನು ಉಳಿಸಿಕೊಂಡೇ ಮಹಿಳಾ ಪ್ರಥಮ ದರ್ಜೆ ಕಾಲೇಜು ಕಟ್ಟಡ ನಿರ್ಮಾಣ ಆಗಲಿದೆ. ಉನ್ನತ ಶಿಕ್ಷಣ ಇಲಾಖೆ ಸಚಿವ ಡಾ.ಅಶ್ವತ್ ನಾರಾಯಣ್ ಸಿ.ಎನ್ ಅವರು ಶಿಲಾನ್ಯಾಸ ನೆರವೇರಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಶಿಲಾನ್ಯಾಸ ಫಲಕ ಅನಾವರಣ ಮಾಡಲಿದ್ದಾರೆ.
ಸಂಜೀವ ಮಠಂದೂರು, ಶಾಸಕರು ಪುತ್ತೂರು