ನಾರಾಯಣಗುರುಗಳ ಸಂದೇಶ ಪಾಲಿಸಿ ಧರ್ಮಿಷ್ಟರಾಗಿ, ಆದರ್ಶರಾಗಿ-ಮಠಂದೂರು
ಚಿತ್ರ: ಸಂತೋಷ್ ಮೊಟ್ಟೆತ್ತಡ್ಕ
ಪುತ್ತೂರು: ಹುಟ್ಟುವಾಗ ಜಾತಿ ಇರೋದಿಲ್ಲ, ಹುಟ್ಟಿದ ಮೇಲೆ ಜಾತಿ ಬರುವುದು. ಧಾರ್ಮಿಕ ಚಿಂತಕ ನಾರಾಯಣಗುರುಗಳ ತತ್ವ ಸಂದೇಶ ಎಲ್ಲಾ ಸಮಾಜಕ್ಕೆ ಮಾದರಿಯಾಗಿದೆ. ನಾರಾಯಣಗುರುಗಳ ಸಂದೇಶವನ್ನು ಎಲ್ಲರೂ ಪಾಲಿಸಿ ಸಮಾಜದಲ್ಲಿ ಧರ್ಮಿಷ್ಟರಾಗಿ, ಆದರ್ಶರಾಗಿ ಬದುಕುವ ಕನಸು ಕಾಣಬೇಕು ಎಂದು ಶಾಸಕ ಸಂಜೀವ ಮಠಂದೂರುರವರು ಹೇಳಿದರು.
ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿ ಇದರ ಆಶ್ರಯದಲ್ಲಿ ೭ನೇ ವರ್ಷದ ಗುರುಪೂಜಾ ಮತ್ತು ಭಜನಾ ಕಾರ್ಯಕ್ರಮ ಹಾಗೂ ಸನ್ಮಾನ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮವು ಮಾ.೧೨ ರಂದು ಕಲ್ಲರ್ಪೆ ಬಂಗೇರ ಕುಟುಂಬಸ್ಥರ ತರವಾಡು ಮನೆಯಲ್ಲಿ ಜರಗಿದ್ದು, ಈ ಕಾರ್ಯಕ್ರಮದ ಉದ್ಘಾಟನೆಯನ್ನು ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಯುವಸಮೂಹ ವಿದ್ಯೆಯನ್ನು ಪಡೆದು ವಿದೇಶಕ್ಕೆ ಪ್ರತಿಭಾ ಪಲಾಯನ ಮಾಡಬಾರದು. ತಾನು ಹುಟ್ಟಿದ ದೇಶದಲ್ಲಿಯೇ ಪ್ರತಿಭೆಯನ್ನು ಪ್ರದರ್ಶಿಸಿ, ಉದ್ಯಮವನ್ನು ಸೃಷ್ಟಿಸಿ ಉದ್ಯೋಗ ನೀಡುವವರಾಗಬೇಕು. ಯುವಸಮೂಹ ದುಶ್ಚಟ ಮುಕ್ತ ಸಮಾಜ ಆದಾಗ ಮಾತ್ರ ನಾವು ಆರ್ಥಿಕ ಸದೃಢತೆ ಹೊಂದುವವರಾಗುತ್ತೇವೆ. ಜಾತಿಗೊಂದು ಸಮಾಜವಿದ್ದಾಗ ವಿವಿಧತೆಯಲ್ಲಿ ಏಕತೆ ಉಂಟು ಮಾಡಿದೆ. ವಿದ್ಯಾರ್ಥಿಗಳು ವಿದ್ಯಾರ್ಜನೆ ಹೊಂದಿ ಸಾಧಕರಾಗಿ ಹೊರಹೊಮ್ಮುವಂತಾಗಲಿ ಎಂದರು.
ಯುವಸಮೂಹವು ಮೊದಲು ತನ್ನ ಮನೆಗಾಗಿ ಕೆಲಸ ಮಾಡಬೇಕು-ಸತೀಶ್ ಕೆಡೆಂಜಿ:
ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿರವರು ಸನ್ಮಾನಿತರನ್ನು ಸನ್ಮಾನಿಸಿ ಮಾತನಾಡಿ, ಉಡುಪಿ ಹಾಗೂ ದ.ಕ ಜಿಲ್ಲೆಯಲ್ಲಿ ಪುತ್ತೂರು ಬಿಲ್ಲವ ಸಂಘಕ್ಕೆ ಬಹಳ ಗೌರವ ಪ್ರಾಪ್ತಿಯಾಗಬೇಕಾದರೆ ಅದು ಬಿಲ್ಲವ ಸಂಘದ ಅಡಿಯಲ್ಲಿ ೫೧ ಗ್ರಾಮ ಸಮಿತಿಗಳು ಸಕ್ರಿಯವಾಗಿ ನಿರ್ವಹಿಸಿದ ಕಾರ್ಯನಿರ್ವಹಣೆಯಾಗಿದೆ. ಈ ನಿಟ್ಟಿನಲ್ಲಿ ಶಾಂತಿಗೋಡು ಗ್ರಾಮ ಸಮಿತಿಯ ತನ್ನ ಸಕ್ರಿಯ ಪಾಲ್ಗೊಳ್ಳುವಿಕೆಯು ವಿಶೇಷವಾಗಿದೆ. ಸಮಾಜವು ದೌರ್ಜನ್ಯಕ್ಕೊಳಗಾದ ಸಂದರ್ಭದಲ್ಲಿ ದೇವದೂತರಾಗಿ ಅವತಾರವೆತ್ತಿದವರು ನಾರಾಯಣಗುರುಗಳು. ವಿದ್ಯೆಯಿಂದ ಸ್ವತಂತ್ರರಾಗಿರಿ, ಸಂಘಟನೆಯಿಂದ ಬಲಯುತರಾಗಿರಿ ಎಂಬ ಸಂದೇಶವನ್ನು ಸಾರಿದವರು ನಾರಾಯಣಗುರುಗಳು. ಇಂದಿನ ಯುಗದಲ್ಲಿ ಯುವಸಮೂಹವು ರಾಜಕೀಯ ಕಪಿಮುಷ್ಟಿಯೊಳಗೆ ತತ್ತರಿಸಿ ಅನ್ಯದಾರಿಯತ್ತ ಹೋಗುವ ಮೂಲಕ ಜೀವನವನ್ನು ವ್ಯರ್ಥಗೊಳಿಸುತ್ತಿದ್ದಾರೆ. ಯುವಸಮೂಹವು ಮೊದಲು ತನ್ನ ಮನೆಗಾಗಿ ಕೆಲಸ ಮಾಡಬೇಕು ಎಂದರು.
ನಾರಾಯಣಗುರುಗಳ ತತ್ವ ಸಂದೇಶ ಅದು ದೊಡ್ಡ ಸಾಗರ-ರೇಣುಕಾ ಕಣಿಯೂರು:
ಗುರು ಸಂದೇಶ ನೀಡಿ ಮಾತನಾಡಿದ ಉಪನ್ಯಾಸಕಿ ಶ್ರೀಮತಿ ರೇಣುಕಾ ಕಣಿಯೂರುರವರು, ನಾರಾಯಣಗುರುಗಳ ತತ್ವ ಸಂದೇಶಗಳ ಫಲಕಗಳನ್ನು ಅಳವಡಿಸುವ ಮೂಲಕ ಶಾಂತಿಗೋಡು ನೀತಿಯ ಗೂಡಾಗಿದೆ. ಸಕಲ ಜೀವರಾಶಿಗಳಲ್ಲಿ ಶ್ರೇಷ್ಟವಾದ ಮಾನವ ಜನ್ಮದಲ್ಲಿ ನಾರಾಯಣಗುರುಗಳ ತತ್ವ ಸಂದೇಶಗಳನ್ನು ಮೊದಲಾಗಿ ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಜೀವನ ಸಾರ್ಥಕವಾಗಬಲ್ಲುದು. ನಾರಾಯಣಗುರುಗಳ ತತ್ವ ಸಂದೇಶ ಅದು ದೊಡ್ಡ ಸಾಗರ. ಅವರ ಕಥೆ ಹೇಳುತ್ತಾ ಹೋದರೆ ಅದು ಮತ್ತಷ್ಟು ತೆರೆದುಕೊಳ್ಳುತ್ತದೆ. ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ಸತ್ಯವನ್ನು ನಾವು ಎಷ್ಟರಮಟ್ಟಿಗೆ ಅನುಷ್ಠಾನ ಮಾಡಿದ್ದೇವೆ. ನಾವು ಮೇಲ್ಜಾತಿಯವರಿಗೆ ಬೊಟ್ಟು ಮಾಡಿ ತೋರಿಸುತ್ತೇವೆ ಆದರೆ ನಾವು ನಮ್ಮ ಕೆಳಜಾತಿಯವರನ್ನು ಹೇಗೆ ಕಾಣುತ್ತೇವೆ ಎಂಬುದನ್ನು ನಾವು ಕಾಣಬೇಕಿದೆ. ಮೊದಲು ನಮ್ಮಲ್ಲಿ ಬದಲಾವಣೆಯ ಗಾಳಿ ಬೀಸಬೇಕಾಗಿದೆ ಎಂದರು.
ಆತ್ಮೋದ್ಧಾರ ಎಂಬುದು ಅದು ಜ್ಞಾನಕ್ಕಿಂತ ಮಿಗಿಲು-ಮನೋಹರ್:
ವಕೀಲರು ಹಾಗೂ ಪುತ್ತೂರು ಬಿಲ್ಲವ ಸಂಘದ ವಿದ್ಯಾನಿಧಿ ಸಂಚಾಲಕ ಮನೋಹರ್‌ರವರು ಬಹುಮಾನ ವಿತರಿಸಿ ಮಾತನಾಡಿ, ಆತ್ಮೋದ್ಧಾರ ಎಂಬುದು ಅದು ಜ್ಞಾನಕ್ಕಿಂತ ಮಿಗಿಲು. ಸಮಾಜದಲ್ಲಿ ನಾವು ಮಾಡುವ ಕೈಂಕರ್ಯವು ಸಾಕ್ಷಾತ್ಕಾರವಾಗಿ ಉಳಿಯಬೇಕು. ಧರ್ಮ ಎಂಬುದು ಜೀವನದ ಕ್ರಮ. ನಾವು ಯಾರಿಗೂ ತೊಂದರೆಯಾಗದಂತೆ ಧರ್ಮದ ನೆಲೆಗಟ್ಟಿನಲ್ಲಿ ಜೀವನ ಸಾರಿದಾಗ ಸಮಾಜದಲ್ಲಿ ಸಹಬಾಳ್ವೆ ಉಂಟು ಮಾಡಬಲ್ಲುದು ಎಂದರು.
ರಕ್ತದಾನಿಗಳಿಗೆ ಪ್ರಮಾಣಪತ್ರ ವಿತರಣೆ:
ಅಗತ್ಯ ಸಂದರ್ಭದಲ್ಲಿ ರಕ್ತದಾನ ಮಾಡಿದ ಹೊನ್ನಪ್ಪ ಪೂಜಾರಿ ಕೈಂದಾಡಿ, ಸುರೇಶ್ ಹೊಸಮನೆ, ಚಂದ್ರಾಕ್ಷ ಪೇರಡ್ಕ, ಸತ್ಯ ಎಂ, ರಾಜೇಶ್ ಪೂಜಾರಿ, ರೋಹಿತ್ ಕೆ, ದಾಮೋದರ್ ಕೆ, ಪ್ರಬಾತ್, ಅಖಿನ್, ಹರೀಶ್ ಕೆ, ಜಗದೀಶ್ ಎಂ, ಸುದರ್ಶನ್, ಕೆ.ಸುಧಾಕರ, ಜಯರಾಂ ಗೌಡ, ಮಂಜುನಾಥ ಚೌಹಾಣ್, ಜನಾರ್ದನ ಆಚಾರ್ಯ, ಭಾಸ್ಕರ ಬಿ,ಪ್ರದೀಪ್ ಜಿ, ಶಶಿಕುಮಾರ್ ಬಿ, ಪುನೀತ್,ಶ್ರೀನಿವಾಸ್, ಗಿರೀಶ್ ಕೆ,ವರುಣ್ ಕುಮಾರ್, ಸುನೀಲ್ ತೋಳ್ಪಾಡಿ,ಯೋಗೀಶ್ ನಾಯ್ಕ್, ಸುರೇಶ್ ಸಾಲಿಯಾನ್, ಉಮೇಶ್ ನಡುಮನೆ, ಸತೀಶ್ ಪೂಜಾರಿ, ಅಜಿತ್ ಪೂಜಾರಿ, ಬಿ.ನಾರಾಯಣ ಪೂಜಾರಿ, ಕೆ.ರಘುನಾಥ,ವಸಂತ ಕೆ, ರಕ್ಷಿತ್ ಜಿ.ವಿ, ನಾಗೇಶ್ ಸಾರಕೆರೆ, ಪ್ರತಾಪ್ ಅಮೀನ್,ದಿನೇಶ್ ಕೆ, ರಾಘವ ಬಿ, ಗಣೇಶ್ ಕೆರವರುಗಳಿಗೆ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.
ಸನ್ಮಾನ:
ಈ ಸಂದರ್ಭದಲ್ಲಿ ಶಾಸಕರಾದ ಸಂಜೀವ ಮಠಂದೂರು, ೨೦೨೧-೨೨ನೇ ಸಾಲಿನಲ್ಲಿ ಗಾಂಧಿ ಕೃಷಿ ವಿಜ್ಞಾನ ಕೇಂದ್ರ, ಕೃಷಿ ವಿಶ್ವವಿದ್ಯಾನಿಲಯ ಜಿಕೆವಿಕೆ ಬೆಂಗಳೂರು ಇಲ್ಲಿ ಸಮಗ್ರ ಪೋಷಕಾಂಶಗಳ ನಿರ್ವಹಣೆ ವಿಷಯದಲ್ಲಿ ಸಾಧನೆ ಮಾಡಿದ ನವ್ಯಾ ದಾಮೋದರ್, ೨೦೨೧-೨೨ನೇ ಸಾಲಿನ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಬಿಎಡ್ ವಿಭಾಗದಲ್ಲಿ ನಾಲ್ಕನೇ ರ್ಯಾಂಕ್ ಗಳಿಸಿರುವ ವಿವೇಕಾನಂದ ಕಾಲೇಜಿನ ವಿದ್ಯಾರ್ಥಿನಿ ದಿವ್ಯಾ ವಸಂತ್ ಹಾಗೂ ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ದಿಶಾ, ಕೃತಿ, ಶ್ರೇಯಾ, ಅನುಷಾ, ಕಾಲೇಜು ವಿಭಾಗದಲ್ಲಿ ಶಿಶಿರ್, ಚೇತನ್, ಪೂಜಾಶ್ರೀ, ಹರ್ಷಿತಾ, ಗೌತಮ್, ಶ್ರಾವಣ್, ಶ್ರಾವ್ಯರವರುಗಳಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು. ಸನ್ಮಾನ ಪತ್ರವನ್ನು ಮೇಘ ಬೇರಿಕೆ, ಶ್ರಾವ್ಯ ಪಾಣಂಬು, ಕಾವ್ಯ ಬೊಳ್ಳೆಕ್ಕು, ಪ್ರಭಾತ್ ಸಾರಕೆರೆ, ಸಮೀಕ್ಷಾ ಬೇರಿಕೆ, ಸಂದೀಪ್ ಕೈಂದಾಡಿ, ಚೈತನ್ಯ ಪೇರಡ್ಕ, ಆಶಾ ಬೊಳ್ಳೆಕ್ಕು, ಮನೀಷ್ ಪಾಣಂಬು, ರವಿ ಕಲ್ಕಾರು, ಅಖಿನ್, ಮನು ಕಲ್ಕಾರ್ ರವರು ಸನ್ಮಾನಿತರ ಸನ್ಮಾನ ಪತ್ರವನ್ನು ವಾಚಿಸಿದರು.
ಗೌರವಾರ್ಪಣೆ:
ತಾಲೂಕು ಅತ್ತ್ಯುತ್ತಮ ಪ್ರಶಸ್ತಿ ಪುರಸ್ಕೃತರಾದ ವಿಕ್ರಮ ಯುವಕ ಮಂಡಲದ ಅಧ್ಯಕ್ಷರು ಮತ್ತು ಸದಸ್ಯರನ್ನು, ತಾಲೂಕು ಸಂಘದ ಇತರ ಗ್ರಾಮ ಸಮಿತಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು, ತಾಲೂಕು ಬಿಲ್ಲವ ಸಂಘದ ಪದಾಧಿಕಾರಿಗಳನ್ನು, ಇತರ ಸಮಾಜದ ಗಣ್ಯರನ್ನು ಗುರುತಿಸಿ ಗೌರವಾರ್ಪಣೆ ಸಲ್ಲಿಸಲಾಯಿತು.
ಮುಖ್ಯ ಅತಿಥಿಗಳಾದ ಕಲ್ಲರ್ಪೆ ತರವಾಡು ಮನೆಯ ಹಿರಿಯರಾದ ಎಲ್ಯಣ್ಣ ಪೂಜಾರಿ ಮುಂಡೋಡಿ, ಪುತ್ತೂರು ಬಿಲ್ಲವ ಮಹಿಳಾ ವೇದಿಕೆಯ ಅಧ್ಯಕ್ಷೆ ಶ್ರೀಮತಿ ಚಂದ್ರಕಲಾ ಮುಕ್ವೆ, ಪುತ್ತೂರು ಬಿಲ್ಲವ ಸಂಘದ ಕೋಶಾಧಿಕಾರಿ ಹಾಗೂ ನರಿಮೊಗರು ವಲಯ ಸಂಚಾಲಕ ಬಿ.ಟಿ ಮಹೇಶ್ಚಂದ್ರ ಸಾಲ್ಯಾನ್ ನಡುಬೈಲು, ಪುತ್ತೂರು ಯುವವಾಹಿನಿ ಅಧ್ಯಕ್ಷ ಉಮೇಶ್ ಬಾಯಾರುರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅರ್ಚಕರಾದ ಜಗದೀಶ್ ಶಾಂತಿ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಗ್ರಾಮ ವ್ಯಾಪ್ತಿಯಲ್ಲಿ ಏರ್ಪಡಿಸಿದ ವಿವಿಧ ಮುಕ್ತ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ವಿಮಲ ನಾರಾಯಣ ಪೂಜಾರಿ ಪ್ರಾರ್ಥಿಸಿದರು. ಪುತ್ತೂರು ಬಿಲ್ಲವ ಸಂಘದ ಗುರುಮಂದಿರದ ಕಾರ್ಯನಿರ್ವಹಣಾಧಿಕಾರಿ ಹೊನ್ನಪ್ಪ ಪೂಜಾರಿ ಕೈಂದಾಡಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿ ಅಧ್ಯಕ್ಷ ನಾಗೇಶ್ ಸಾರಕರೆ ವಂದಿಸಿದರು. ಚಂದ್ರ ಕೂಡುರಸ್ತೆ, ದಿನೇಶ್ ಕರ್ಪೂತಮೂಲೆ, ನಾರಾಯಣ ಪೂಜಾರಿ ಕಲ್ಲರ್ಪೆ, ಮೋನಪ್ಪ ಪೂಜಾರಿ, ಶಾಂತಿಗೋಡು ಯುವವಾಹಿನಿ ಗ್ರಾಮ ಸಮಿತಿ ಅಧ್ಯಕ್ಷ ರಾಘವ ಬೊಳ್ಳೆಕ್ಕು, ರಾಜೀವ ಪೂಜಾರಿ ಮುಂಡೋಡಿ, ಹರೀಶ್ ಕಲ್ಲರ್ಪೆ, ಶಾಂತಿಗೋಡು ಬಿಲ್ಲವ ಮಹಿಳಾ ವೇದಿಕೆಯ ಅಧ್ಯಕ್ಷೆ ಆಶಾ ಸಚ್ಚೀಂದ್ರ ಬೊಳ್ಳೆಕ್ಕು, ಶಾಂತಿಗೋಡು ಬಿಲ್ಲವ ವಿದ್ಯಾರ್ಥಿ ಸಂಘದ ಅಧ್ಯಕ್ಷ ಚಂದ್ರಾಕ್ಷ ಪೇರಡ್ಕ, ಮಾಧವ ಸಾಲಿಯಾನ್ ರವರು ಅತಿಥಿಗಳಿಗೆ ಶಾಲು ಹೊದಿಸಿ ಸ್ವಾಗತಿಸಿದರು. ಕಿನ್ನಿಮಜಲು ಕೋಟಿ-ಚೆನ್ನಯ ಗರಡಿಯ ಆಡಳಿತ ಮೊಕ್ತೇಸರ ಶಶಿಧರ್ ಕಿನ್ನಿಮಜಲು ಕಾರ್ಯಕ್ರಮ ನಿರೂಪಿಸಿದರು.
ಮಾ.26:ಕೋಟಿ-ಚೆನ್ನಯ ಬಸ್ಸುನಿಲ್ದಾಣ ನಾಮಕರಣ…
ಕೋಟಿ-ಚೆನ್ನಯರ ಹುಟ್ಟೂರಾದ ಗೆಜ್ಹೆಗಿರಿ ಹಾಗೂ ಪಡುಮಲೆ ಎಂಬುದು ಎರಡು ಕಣ್ಣುಗಳಿದ್ದಾಗೆ. ಇವೆರಡು ಪವಿತ್ರ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ನೀಡಿದ್ದೇನೆ. ಕಳೆದ ಐದು ವರ್ಷಗಳಲ್ಲಿ ಕೊರೋನಾದ ನಡುವೆಯೂ ರೂ.1200 ಕೋಟಿ ಅನುದಾನದ ವಿನಿಯೋಗ ಆಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ರೂ.50 ಕೋಟಿ ವೆಚ್ಚದಲ್ಲಿ ನಾರಾಯಣಗುರುಗಳ ವಸತಿ ಶಾಲೆ ಆರಂಭವಾಗಲಿದೆ. ಸಮಾಜದಲ್ಲಿ ದೌರ್ಜನ್ಯದ ವಿರುದ್ಧ ಸದಾ ಹೋರಾಟ ಮಾಡುತ್ತಿದ್ದ ಕೋಟಿ-ಚೆನ್ನಯರ ನೆನಪು ಶಾಶ್ವತವಾಗಿ ಉಳಿಯಬೇಕು ಎನ್ನುವ ನಿಟ್ಟಿನಲ್ಲಿ ಸುಮಾರು ಹತ್ತು ಎಕರೆ ಜಾಗದಲ್ಲಿ ಕೋಟಿ-ಚೆನ್ನಯ ಥೀಮ್ ಪಾರ್ಕ್ ನಿರ್ಮಾಣದ ಕನಸಿನ ಜೊತೆಗೆ ಪುತ್ತೂರು ಬಸ್ಸುನಿಲ್ದಾಣಕ್ಕೆ ಕೋಟಿ-ಚೆನ್ನಯ ಬಸ್ಸು ನಿಲ್ದಾಣ ಎಂದು ಈಗಾಗಲೇ ಸರಕಾರ ನಾಮಕರಣದ ಅಧಿಸೂಚನೆ ಹೊರಡಿಸಿದ್ದು ಮಾರ್ಚ್ ೨೬ಕ್ಕೆ ಉದ್ಘಾಟನೆ ನೆರವೇರಲಿದೆ.
-ಸಂಜೀವ ಮಠಂದೂರು, ಶಾಸಕರು, ಪುತ್ತೂರು
ರಾರಾಜಿಸಿದ ನಾರಾಯಣಗುರುಗಳ ತತ್ವ ಸಿದ್ಧಾಂತಗಳ ಫಲಕಗಳು..
-ಧಾರ್ಮಿಕತೆ ವಾದಿಸಲು ಅಲ್ಲ, ಜಯಿಸಲೂ ಅಲ್ಲ, ತಿಳಿಯಲು, ತಿಳಿಸಲು ಮಾತ್ರ
-ಬರಿಯ ಹುಟ್ಟಿನಿಂದ ಯಾರೂ ದೊಡ್ಡವರಾಗೋದಿಲ್ಲ
-ಅನ್ಯರನ್ನು ತನಗಿಂತ ಬೇರೆಯವನೆಂದು ತಿಳಿಯದಿರುವುದೇ ಅದ್ವೈತ ಮೂಲ ಮಂತ್ರ
-ನಾವು ಉಪಕಾರ ಮಾಡುತ್ತೇವೆ ಎನ್ನುವ ಭ್ರಮೆ ಸರಿ ಅಲ್ಲ
-ಆತ್ಮವಿಶ್ವಾಸದ ಬಲದಿಂದ ಎಲ್ಲವನ್ನೂ ಸಂಪಾದಿಸಬಹುದು
-ತನ್ನಂತೆ ಪರರಿಗೆ ಹಿತವನ್ನು ಬಯಸುವುದು ನಿಜವಾದ ಸಮಾಜಸೇವೆ
-ಒಳ್ಳೆಯ ಗುಣ ಸಂಸ್ಕಾರದಿಂದ ಬೆಳಗುತ್ತದೆ
-ಆತ್ಮೋದ್ಧಾರವು ಎಲ್ಲ ಜ್ಞಾನಕ್ಕಿಂತ ಮಿಗಿಲು
-ವಿದ್ಯೆಯಿಂದ ಸ್ವತಂತ್ರರಾಗಿರಿ, ಸಂಘಟನೆಯಿಂದ ಬಲಯುತರಾಗಿರಿ
-ಮಾನವ ಜನ್ಮ ಶ್ರೇಷ್ಟವಾದುದು, ಸತ್ಕರ್ಮಗಳಿಂದ ಜೀವನ ನಡೆಸಿ
-ತನ್ನ ಕೆಲಸಗಳು ಎಲ್ಲರ ಹಿತಕ್ಕಾಗಿ ಇರಲಿ
-ಎಲ್ಲರಲ್ಲೂ ಅನುಕಂಪ ಇರುವವನು ಜೀವಿ
-ಒಂದೇ ಜಾತಿ, ಒಂದೇ ಮತ, ಒಂದೇ ದೇವರು
-ಬದುಕು ನಿಂತ ನೀರಾಗದೆ ನಿರಂತರ ಹರಿಯುತ್ತಿರಬೇಕು