ವೀರಕಂಬ ಗ್ರಾ.ಪಂ.ವ್ಯಾಪ್ತಿಯಲ್ಲಿ 20 ಕೋ.ರೂ.ವೆಚ್ಚದಲ್ಲಿ ಅನುಷ್ಠಾನಗೊಂಡ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ, ಶಿಲಾನ್ಯಾಸ

0

ಬಿಜೆಪಿ ಯಾವ ಉದ್ದೇಶಕ್ಕೆ ಜನ್ಮ ತಾಳಿತೋ ಅದನ್ನು ಅನುಷ್ಠಾನಕ್ಕೆ ತಂದ ತೃಪ್ತಿಇದೆ : ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು

ವಿಟ್ಲ: ಬಂಟ್ವಾಳ ಶಾಸಕನಾಗಿ ತನ್ನ ಕರ್ತವ್ಯದ ರೀತಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸಿದ್ದು, ದೇಶದಲ್ಲಿ ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದ ಬಳಿಕ ಬಿಜೆಪಿ ಯಾವ ಉದ್ದೇಶಕ್ಕೆ ಜನ್ಮ ತಾಳಿತೋ ಅದನ್ನು ಅನುಷ್ಠಾನಗೊಳಿಸುವ ಕಾರ್ಯ ಮಾಡಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತುರವರು ಹೇಳಿದರು.
ಅವರು ವೀರಕಂಬ ಗ್ರಾ.ಪಂ.ವ್ಯಾಪ್ತಿಯಲ್ಲಿ ಸುಮಾರು 20 ಕೋ.ರೂ.ವೆಚ್ಚದಲ್ಲಿ ಅನುಷ್ಠಾನಗೊಂಡ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ನೆರವೇರಿಸಿ ಎರ್ಮೆಮಜಲಿನಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಳೆದ ಅವಧಿಯಲ್ಲಿ ಬಂಟ್ವಾಳದಲ್ಲಿ ಪ್ರಕ್ಷುಬ್ಧ ವಾತಾವರಣವಿದ್ದು, ದೃಢ ನಿಶ್ಚಯ ಮಾಡಿ ಕ್ಷೇತ್ರದ ಜನತೆಯ ಸಹಕಾರದಿಂದ ಶಾಂತಿಯ ಬಂಟ್ವಾಳ ನಿರ್ಮಾಣ ಮಾಡಿದ ತೃಪ್ತಿ ಇದೆ. ಕೋವಿಡ್ ನಂತಹ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಪ್ರತಿಯೊಬ್ಬರಿಗೆ ತಲಾ 10 ಕೆಜಿ ಅಕ್ಕಿ‌ ನೀಡಿದ್ದು, ಆದರೆ ಕಾಂಗ್ರೆಸ್ ಈಗ ಮುಂದೆ ಕೊಡುತ್ತೇನೆ ಎಂದು ಗ್ಯಾರಂಟಿ ನೀಡುತ್ತಿದೆ.

ನಮ್ಮ ಜಿಡಿಪಿ ದರ 6.8 ವೇಗದಲ್ಲಿ ಬೆಳೆಯುತ್ತಿದ್ದು, ಜಗತ್ತಿನಲ್ಲೇ ಇದು ಅತ್ಯಂತ ವೇಗದ ಆರ್ಥಿಕ ಬೆಳೆವಣಿಗೆಯಾಗಿದೆ. 24 ಸಾವಿರಕ್ಕೂ ಅಧಿಕ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆಯ ಸಹಾಯಧನ ಬಂದಿದ್ದು, 24 ಕೋ.ರೂ.ಗಳಿಗೂ ಅಧಿಕ‌ ಮೊತ್ತ ಕಳೆದ 2 ವರ್ಷಗಳಲ್ಲಿ ಫಸಲ್ ಭೀಮಾ ಯೋಜನೆ ಸೌಲಭ್ಯ ಬಂದಿರುತ್ತದೆ. ಕೃಷಿ ಕಾರ್ಮಿಕ ಮಹಿಳೆಯರಿಗೆ ಮುಂದಿನ ತಿಂಗಳಿನಿಂದ 1 ಸಾವಿರ ರೂ. ನೆರವು ಲಭಿಸಲಿದೆ. ನಾವು ನೀಡಿರುವ ಎಲ್ಲಾ ಯೋಜನೆಗಳನ್ನು ಕಾಂಗ್ರೆಸ್ ಮುಂದೆ ಕೊಡುತ್ತೇವೆ ಎಂದು ಗ್ಯಾರಂಟಿ ಭರವಸೆ ನೀಡಿರುವುದು ಹಾಸ್ಯಾಸ್ಪದವಾಗಿದೆ ಎಂದರು.

ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನು, ಮತಾಂತರ ನಿಷೇಧ ಕಾನೂನನ್ನು ಕೂಡ ಬಿಜೆಪಿ ನೀಡಿದ ಭರವಸೆಯಂತೆ ಈಡೇರಿಸಿದ್ದು, ರಾಜ್ಯದಲ್ಲಿ ಸರಕಾರ ಇದ್ದ ಕಾರಣದಿಂದಲೇ ಈ ಎಲ್ಲಾ ಕಾರ್ಯಗಳನ್ನು ಅನುಷ್ಠಾನ ಮಾಡಲು ಸಾಧ್ಯವಾಗಿದೆ. ಬಿಜೆಪಿಯಲ್ಲಿ ಸಾಮಾನ್ಯ ಕಾರ್ಯಕರ್ತನು ಬೆಳೆಯಲು ಸಾಧ್ಯವಿದ್ದು, ಸಾಧಕನನ್ನೇ ಹುಡುಕಿ ಪ್ರಶಸ್ತಿ ನೀಡುವ ಕಾರ್ಯವನ್ನು ಬಿಜೆಪಿ ಮಾಡಿದೆ ಎಂದರು.‌

ವೀರಕಂಭ ಗ್ರಾ.ಪಂ.ಅಧ್ಯಕ್ಷ ದಿನೇಶ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಗ್ರಾ.ಪಂ.ಸದಸ್ಯರಾದ ಜಯಪ್ರಸಾದ್ ಶೆಟ್ಟಿ, ಸಂದೀಪ್, ಜಯಂತಿ ಜನಾರ್ದನ, ಮೀನಾಕ್ಷಿ, ಉಮಾವತಿ, ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ವಿಶ್ವನಾಥ್ ಎಂ, ಬಂಟ್ವಾಳ ಬಿಜೆಪಿ ಮಾಧ್ಯಮ ಪ್ರಮುಖ್ ದೇವಿಪ್ರಸಾದ್, ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಸೀಮಾ ಮಾಧವ, ಪ್ರಮುಖರಾದ ಚಂದ್ರಹಾಸ ಶೆಟ್ಟಿ, ರಾಮಚಂದ್ರ ಪೂಜಾರಿ ಪಾದೆಗುತ್ತು, ಸಂದೀಪ್ ಶೆಟ್ಟಿ ಅರೆಬೆಟ್ಟು ಉಪಸ್ಥಿತರಿದ್ದರು.

ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂಕ್ ಉಪಾಧ್ಯಕ್ಷ ಚಂದ್ರಶೇಖರ ಬಾಯಿಲ ಸ್ವಾಗತಿಸಿದರು. ವೀರಕಂಭ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ವೀರಪ್ಪ ಮೂಲ್ಯ ವಂದಿಸಿದರು.

LEAVE A REPLY

Please enter your comment!
Please enter your name here