ಪುತ್ತೂರಿನಲ್ಲಿ ಎಸ್ಡಿಪಿಐಯಿಂದ ಈಶ್ವರಪ್ಪ, ಬಿಜೆಪಿ ಪಕ್ಷದ ವಿರುದ್ಧ ಪ್ರತಿಭಟನೆ
ಪುತ್ತೂರು: ಅಝನ್ ಮತ್ತು ಅಲ್ಲಾಹುವಿನ ಬಗ್ಗೆ ಅವಹೇಳನ ಹೇಳಿಕೆ ನೀಡಿದ ಕೆ.ಎಸ್ ಈಶ್ವರಪ್ಪ ವಿರುದ್ಧ ಸ್ವಯಂ ಪ್ರೇರಿತ ಕೇಸು ದಾಖಲಿಸಿ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಮತ್ತು ಬಿಜೆಪಿ ದುರಾಡಳಿತ ವಿರುದ್ಧ ಮಾ.17ರಂದು ಎಸ್ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರದ ವತಿಯಿಂದ ತಾಲೂಕು ಆಡಳಿತ ಸೌಧದ ಬಳಿಯ ಅಮರ್ಜವಾನ್ ಸ್ಮಾರಕ ಜ್ಯೋತಿಯ ಬಳಿ ಪ್ರತಿಭಟನೆ ನಡೆಯಿತು.
ಮುಸ್ಲಿಂ ದೇವರನ್ನು ಅಪಮಾನ ಮಾಡಿದ ಈಶ್ವರಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದ ಸೌಹಾರ್ದತೆಯನ್ನು ಸಹಿಸದ ಕೆಲವು ರಾಜಕಾರಣಿಗಳು ತಮ್ಮ ರಾಜಕೀಯ ಲಾಭಕ್ಕೆ ಅದರಲ್ಲಿ ವಿಶೇಷವಾಗಿ ಕೆ. ಎಸ್. ಈಶ್ವರಪ್ಪ ಪ್ರತಿ ಬಾರಿ ಮುಸ್ಲಿಮರ ವಿರುದ್ಧ ಹಾಗೂ ಇಸ್ಲಾಮಿನ ವಿರುದ್ಧ ಅವಹೇಳನ ಹೇಳಿಕೆ ಖಂಡಿನೀಯ ಎಂದು ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಎಸ್ಡಿಪಿಐ ರಾಜ್ಯ ಸಮಿತಿ ಸದಸ್ಯರಾಗಿರುವ ಮಾಧ್ಯಮ ವಕ್ತಾರ ರಿಯಾಜ್ ಕಡಂಬು ಅವರು ಮಾತನಾಡಿ ದೇಶ ಮತ್ತು ರಾಜ್ಯದಲ್ಲಿ ಬಿಜೆಪಿ ಬಂದ ಬಳಿಕ ದ್ವೇಷ ಭಾವನೆ ನಡೆಯುತ್ತಿದೆ. ವಾರಗಳ ಹಿಂದೆ ಯತ್ನಾಲ್, ಮುತಾಲಿಕ್ ಅವರು ಮುಸಲ್ಮಾನರ ವಿರುದ್ಧ ದ್ವೇಷ ಭಾವನೆಯಿಂದ ಮಾತನಾಡಿದರು. ಮರುದಿನ ಮುಸಲ್ಮಾನರ ಮೇಲೆ ದಾಳಿ ನಡೆಯಿತು. ಆದರೆ ಅಲ್ಲಿ ಪೊಲೀಸರು ಎಫ್ಐಆರ್ ಮಾಡಲು ಎಸ್ಡಿಪಿಐ ಪಕ್ಷ ಪ್ರಶ್ನಿಸಬೇಕಾಯಿತು. ಇವತ್ತು ಗಾಂಜ ಹಾಕಿದ ನಶೆಯಂತೆ ಅಜ್ಞಾನದ ಸಂಸದರು ದೇಶದ ಅಭಿವೃದ್ಧಿಗಳ ಕುರಿತು ಮಾತನಾಡುವುದು ಬೇಡ. ಬದಲಾಗಿ ಲವ್ ಜಿಹಾದ್ ಕುರಿತು ಜನರಲ್ಲಿ ವಿಷ ತುಂಬುವ ಕೆಲಸ ಮಾಡುತ್ತಿದ್ದಾರೆ. ಅದೇ ರೀತಿ ಮೊನ್ನೆ ಮೊನ್ನೆ ಮಂಗಳೂರಿನಲ್ಲಿ ಈಶ್ವರಪ್ಪ ಅವರು ಅಝಾನ್ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಆದರೆ ಎಲ್ಲಿಯ ತನಕ ಪ್ರಜಾಪ್ರಭುತ್ವ ಇರುತ್ತದೆಯೋ ಅಲ್ಲಿನ ತನಕ ಅಝಾನ್, ಭಜನೆ, ಚರ್ಚ್ ಇರುತ್ತದೆ. ಅದನ್ನು ಕೊನೆ ಮಾಡಲು ಸಾಧ್ಯವಿಲ್ಲ ಎಂದು ಸವಾಲು ಹಾಕಿದರಲ್ಲದೆ ಘಟನೆ ಸಂದರ್ಭ ಪೊಲೀಸರು ಎಲ್ಲಾ ವಿಚಾರಗಳನ್ನು ವಿಡಿಯೋ ಮಾಡಿಕೊಳ್ಳುತ್ತಾರೆ. ಆದರೆ ಒಂದೇ ಒಂದು ಸುಮೋಟೋ ಕೇಸ್ ದಾಖಲಿಸಲು ಅವರಿಂದ ಆಗುತ್ತಿಲ್ಲ. ಮುಸಲ್ಮಾನ ಅಮಾಯಕರನ್ನು ಮಾತ್ರ ಅವರು ಕೇಸಿಗೆ ಸಿಲುಕಿಸುವ ಕೆಲಸ ಮಾಡುತ್ತಿದ್ದಾರೆ. ಪೊಲೀಸರು ಇವತ್ತು ನಿಷ್ಪಕ್ಷಪಾತವಾಗಿ ತನಿಖೆ ಮಾಡುತ್ತಿದ್ದರೆ ಇಷ್ಟೊಂದು ಜೀವಗಳು ಬೀಳುತ್ತಿರಲಿಲ್ಲ. ಶಾಂತಿ ಮತ್ತು ನೆಮ್ಮದಿ ಕೊಡಲು ಆಗದಿದ್ದರೆ ನಮಗೆ ಇಲ್ಲಿ ಪೊಲೀಸ್ ಯಾಕೆ ಎಂದು ಪ್ರಶ್ನಿಸಿದರು. ಬೆಳ್ಳಾರೆಯಲ್ಲಿ ಸಂಸದರ ಕಾರನ್ನು ಅಲ್ಲಾಡಿಸುವಾಗ ಬದುಕಲು ಬೇರೆ ದಾರಿಯಿಲ್ಲದೆ ಅಮಾಯಕ ಶಾಫಿ ಬೆಳ್ಳಾರೆ ಅವರನ್ನು ಬಂಧಿಸುವ ಕೆಲಸ ಆಗಿದೆ. ಇವತ್ತು ನಮ್ಮಲ್ಲಿ ಭಿನ್ನಾಭಿಪ್ರಾಯ ಇರಬಹುದು. ಅದರೆ ಬಿಜೆಪಿಯೆಂಬ ಭೂತವನ್ನು ಈ ಮಣ್ಣಿನಲ್ಲಿ ನಿರ್ಣಾಮ ಮಾಡಲು ನಾವೆಲ್ಲ ಒಂದಾಗಬೇಕೆಂದರು.
ಯುಟಿ ಖಾದರ್ ಮಾತಿನಲ್ಲಿ ಬಿಗಿಯಿರಲಿ:
ಅಝಾನ್ ವಿರುದ್ಧ ಈಶ್ವರಪ್ಪ ಅವರು ಅವಹೇಳನ ಮಾಡಿದಾಗ ಕಾಂಗ್ರೆಸ್ ಒಂದೇ ಒಂದು ವಿರೋಧ ವ್ಯಕ್ತಪಡಿಸಿಲ್ಲ. ಪ್ರತಿಭಟಿಸಿಲ್ಲ. ಯುಟಿ ಖಾದರ್ ಅವರು ಹಿಜಾಬ್ ಪ್ರಕರಣದ ಸಂದರ್ಭ ಪಾಕಿಸ್ತಾನಕ್ಕೆ ಹೋಗುವಂತೆ ಹೇಳಿಕೆ ನೀಡಿದ್ದರು. ಸಂಘ ಪರಿವಾರವನ್ನು ಓಲೈಸಲು ಅವರ ಪರವಾಗಿ ಮಾತನಾಡುವ ಯಟಿ ಖಾದರ್ ಅವರು ಮಾತಿನಲ್ಲಿ ಬಿಗಿಹಿಡಿದು ಮಾತನಾಡಲಿ ಎಂದು ರಿಯಾಜ್ ಕಡಂಬು ಹೇಳಿದರು.
ದೂಷಿಸುವವನಿಗೆ ಮೇಲಿನ ಅಲ್ಲಾಹುನ ಕೋರ್ಟ್ನಲ್ಲಿ ಶಿಕ್ಷೆ:
ಎಸ್ಡಿಪಿಐ ಜಿಲ್ಲಾ ಸಮಿತಿ ಉಪಾಧ್ಯಕ್ಷ ವಿಕ್ಟರ್ ಮಾರ್ಟಿನ್ ಅವರು ಮಾತನಾಡಿ ವಿರೋಧಿಗಳನ್ನು ಕ್ಷಮಿಸಬೇಕು. ದೂಷಿಸುವವನು ಶಾಶ್ವತವಾಗಿ ನಾಶವಾಗುತ್ತಾನೆ ಎಂದು ಕುರಾನ್ನ 104ನೇ ಅಧ್ಯಾಯದಲ್ಲಿ ಇದೆ. ಹಾಗಾಗಿ ಈಶ್ವರಪ್ಪ ಅವರ ಅವಹೇಳನ ಹೇಳಿಕೆ ಅಲ್ಲಾಹುನ ಕೋರ್ಟ್ನಲ್ಲಿ ಶಿಕ್ಷೆ ಆಗಿಯೇ ಆಗುತ್ತದೆ ಎಂದು ಎಚ್ಚರಿಕೆಯ ಸಂದೇಶ ನೀಡುತ್ತೇನೆ ಎಂದ ಅವರು ಮುಸ್ಲಿಂ ಧರ್ಮವನ್ನು ದ್ವೇಷಿಸಿದ ಪ್ರಜ್ಞಾಸಿಂಗ್ಗೆ ವ್ಹೀಲ್ ಚಯರ್ ಗತಿ. ಉತ್ತರಖಂಡದ ಸಂಸದರು ಏಳುವ ಸ್ಥಿತಿಯಲ್ಲಿಲ್ಲ. ಇವೆಲ್ಲ ಮೇಲೊಬ್ಬ ನೋಡುವವನ ಕೆಲಸ ಆಗಿದೆ. ಈಶ್ವರಪ್ಪ ಅವರು ಚಡ್ಡಿಗಳ ಸಹವಾಸ ಮಾಡಿ ತಪ್ಪು ದಾರಿಗೆ ಹೋಗಿದ್ದಾರೆ. ಆದರೆ ಅವರು ಮುಂದಿನ ದಿನ ಸರಿಯಾದ ಶಿಕ್ಷೆ ಪಡೆಯಲಿದ್ದಾರೆ ಎಂದರು. ಪೊಲೀಸರು ಈಶ್ವರಪ್ಪರವರ ವಿರುದ್ಧ ಸುಮೋಟೋ ಕೇಸ್ ದಾಖಲಿಸಿ, ದೇವರ ಶಿಕ್ಷೆಯಿಂದ ಪಾರಾಗಲು ಪೊಲೀಸರು ಸಂವಿಧಾನದ ಪ್ರತಿಜ್ಞೆಯನ್ನು ನಿಭಾಯಿಸಿ ಎಂದ ವಿಕ್ಟರ್ ಮಾರ್ಟಿನ್ ಅವರು ಇವತ್ತು ನಮ್ಮ ಅಭ್ಯರ್ಥಿ ಆಯ್ಕೆಯಾಗಿದೆ. ಅವರಿಗೆ ನಿಮ್ಮ ಮತ ನೀಡಿ. ಇಲ್ಲಿ ನಮಗೆ ಧರ್ಮ ಬೇಡ. ಮನುಷ್ಯ ಧರ್ಮ ಇರಲಿ ಎಂದರು.
ದ್ವೇಷರಾಜಕಾರಣ ಬಿಡಿ:
ದೇಶಕ್ಕೆ ಜೈಹಿಂದ್, ಸಾರೆ ಜಹಾಸೆ ಅಚ್ಚ, ಮೇರೆ ಭಾರತ್ ಜೈ, ಕ್ವಿಟ್ ಇಂಡಿಯಾ ಚಳುವಳಿಗೆ ನಾಮಾಂಕಿತವನ್ನು ನೀಡಿದ್ದು ಮುಸ್ಮಿಂ ನಾಯಕರು. ದೇಶದ ದೆಹಲಿ ಗೇಟ್ನಲ್ಲಿ ಭಾರತ ದೇಶಕ್ಕಾಗಿ ಹುತಾತ್ಮರಾದವರ ವಿವರ ಇದೆ. ಅದರಲ್ಲಿ 8,350 ಹಿಂದುಗಳು ಮತ್ತು 21,895 ಮಂದಿ ಹಿಂದುಗಳು ಹುತಾತ್ಮರಾದರೆ 61,395 ಮಂದಿ ಮುಸ್ಲಿಮರು ಹುತಾತ್ಮರಾದವರು. ಹಾಗಿರುವಾಗ ಇಲ್ಲಿನ ಹುಳುಗಳು ದ್ವೇಷ ರಾಜಕಾರಣ ಬಿಟ್ಟು ಬಿಡಿ ಎಂದರು.
ಎಸ್ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಇಬ್ರಾಹಿಂ ಸಾಗರ್ ಅವರು ಮಾತನಾಡಿ ನಮ್ಮ ಆಚಾರ ವಿಚಾರದ ಕುರಿತು ಅವಹೇಳನಕಾರಿಯಾಗಿ ಮಾತನಾಡಿದಾಗ ಅದನ್ನು ಎದುರಿಸುವ ದಮ್ ಇರಬೇಕು. ಆದು ಎಸ್ಡಿಪಿಐ ಪಕ್ಷದಲ್ಲಿ ಮಾತ್ರವಿದೆ ಎಂದರು. ಎಸ್ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರದ ಉಪಾಧ್ಯಕ್ಷ ಅಬ್ದುಲ್ ಹಮೀದ್ ಸಾಲ್ಮರ ಪ್ರಾಸ್ತಾವಿಕವಾಗಿ ಮಾತನಾಡಿ ಹಿಂದು ಮತ್ತು ಮುಸ್ಲಿಂ ಧರ್ಮದ ತತ್ವ ಒಂದೇ ಆಗಿದೆ. ಆದರೆ ಬಿಜೆಪಿ ತನ್ನ ಧರ್ಮದ ಶ್ಲೋಕವನ್ನು ತಿರುಚಿ ಜನರಿಗೆ ತೋರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಧರ್ಮ ರಾಜಕೀಯವನ್ನು ಒದ್ದೋಡಿಸಿ ಸರ್ವರಿಗೂ ಸಮಬಾಲು, ಸಮಪಾಲು ನೀಡುವ ಎಸ್ಡಿಪಿಐ ಪಕ್ಷಕ್ಕೆ ಎಲ್ಲರು ಸಹಕಾರ ನೀಡಬೇಕೆಂದು ವಿನಂತಿಸಿದರು. ಎಸ್ಡಿಪಿಐ ಕ್ಷೇತ್ರ ಸಮಿತಿ ಆಶ್ರಫ್ ಬಾವು, ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹೀಮ್, ನಗರ ಸಮಿತಿ ಅಧ್ಯಕ್ಷ ಸಿರಾಜ್ ಕೂರ್ನಡ್ಕ ಸಹಿತ ಹಲವಾರು ಮಂದಿ ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.