ಬಿಸಿರೋಡಿನಲ್ಲಿ ಕಾಂಗ್ರೆಸ್ ಪಕ್ಷದ ಚುನಾವಣಾ ಕಚೇರಿ ಉದ್ಘಾಟನೆ

0

ಮತ್ತೊಮ್ಮೆ ಗೆದ್ದರೆ ಹಿಂದೆಂದಿಗಿಂತಲೂ ಹೆಚ್ಚು ಪ್ರಾಮಾಣಿಕ ಜನಸೇವೆ : ಬೆಳ್ಳಿಪ್ಪಾಡಿ ರಮಾನಾಥ ರೈ

ವಿಟ್ಲ: ಸಾಮಾಜಿಕ ಬದ್ಧತೆಯ ಸೈದ್ಧಾಂತಿಕ ರಾಜಕಾರಣ ಮಾಡಿಕೊಂಡು ಬಂದವನು ನಾನು. ಯಾವುದೇ ಧರ್ಮ, ಜಾತಿಯ ತಾರತಮ್ಯ ಮಾಡದೆ ಎಲ್ಲಾ ವರ್ಗಗಳನ್ನು ಸಮಾನತೆಯಿಂದ ನೋಡಿದವನು. ಹೀಗಾಗಿ ಸರ್ವಜನ ವರ್ಗದ ಬಂಧುಗಳು ಮುಂಬರುವ ಚುನಾವಣೆಯಲ್ಲಿ ನನ್ನನ್ನು ಆಶೀರ್ವದಿಸಬೇಕು. ಚುನಾವಣೆಯಲ್ಲಿ ಮತ್ತೊಮ್ಮೆ ಆಯ್ಕೆಯಾದಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಜನಸೇವೆ ಮಾಡುತ್ತೇನೆ ಎಂದು ಬಂಟ್ವಾಳ ಕಾಂಗ್ರೆಸ್ ಅಭ್ಯರ್ಥಿ ಬಿ. ರಮಾನಾಥ ರೈರವರು ಹೇಳಿದರು.

ಅವರು ಎ.12ರಂದು ಬಿಸಿರೋಡಿನ ಧನಲಕ್ಷ್ಮೀ ಕಟ್ಟಡದಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಚುನಾವಣಾ ಕಚೇರಿಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಕಳೆದ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡದೆ ನಾನು ಸೋತಿಲ್ಲ, ವಿರೋಧಿಗಳ ಅಪಪ್ರಚಾರದಿಂದ ಸೋಲು ಕಂಡಿದೆ. ಮತ್ತೆ ಈ ಬಾರಿಯೂ ಅಪಪ್ರಚಾರಗಳನ್ನು ಮಾಡುವುದನ್ನು ಬಿಜೆಪಿ ನಿಲ್ಲಿಸಿಲ್ಲ ಎಂದರು. ಬಂಟ್ವಾಳ ಕ್ಷೇತ್ರದಲ್ಲಿ ಮಾಡಬೇಕಾದ ಅಭಿವೃದ್ಧಿ ಕಾರ್ಯಗಳ ಕನಸುಗಳು ಅನೇಕ ಇದ್ದು ಅದನ್ನು ಕಾರ್ಯರೂಪಕ್ಕೆ ತರಲು ಜನತೆ ನನಗೆ ಸಹಕಾರ ಮಾಡಬೇಕು, ನನ್ನ ಅವಧಿಯಲ್ಲಿ ಅರ್ಧದಲ್ಲಿ ನಿಂತ ಯೋಜನೆಗಳನ್ನು ಪೂರ್ತಿ ಮಾಡುವ ಉದ್ದೇಶದಿಂದ ನನಗೆ ಮತ್ತೊಮ್ಮೆ ಅವಕಾಶ ನೀಡಬೇಕು. ಹಿರಿಯರು ಮತ್ತು ಕಿರಿಯರು ಪಕ್ಷ ಬೇಧ ಬಿಟ್ಟು ವಿಜಯಕ್ಕೆ ಹೋರಾಟ ಮಾಡಬೇಕು ಎಂದು ಅವರು ಮನವಿ ಮಾಡಿದರು.

ಪಕ್ಷದ ಹಿರಿಯ ಮುಖಂಡರುಗಳಿಂದ ಕಚೇರಿ ಉದ್ಘಾಟಿಸಲಾಯಿತು. ಜನಾರ್ಧನ ಶೆಟ್ಟಿ ಮೊಡಂಕಾಪುಗುತ್ತು, ರಾಮಣ್ಣ ಪೂಜಾರಿ ಕಂಗಿಹಿತ್ತಿಲು, ಜಿನರಾಜ ಆರಿಗ ಕಾರಿಂಜ, ಹಾಜಿ ಬಿ.ಎಂ. ಖಾದರ್ ಬಂಟ್ವಾಳ, ನಿವೃತ್ತ ಯೋಧ ವಲೇರಿಯನ್ ಡಿಸೋಜ, ಬೇಬಿ ನಾಯಕ್ ಸಜೀಪಮುನ್ನೂರು, ಬಾಳಪ್ಪ ಶೆಟ್ಟಿ ವಗೆನಾಡು ಕರೋಪಾಡಿ ಮುಂತಾದ ಏಳು ಮಂದಿ ವಿವಿಧ ಸಮುದಾಯಗಳ ಹಿರಿಯರಿಂದ ಕಚೇರಿ ಉದ್ಘಾಟಿಸಿದುದು ವಿಶೇಷವಾಗಿತ್ತು.
ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಕೆ.ಪಿ.ಸಿ.ಸಿ. ಸದಸ್ಯರುಗಳಾದ ಪಿಯೂಸ್ ಎಲ್. ರಾಡ್ರಿಗಸ್, ಎಂ.ಎಸ್. ಮುಹಮ್ಮದ್, ಚಂದ್ರಪ್ರಕಾಶ್ ಶೆಟ್ಟಿ, ಜಿ.ಪಂ. ಮಾಜಿ ಸದಸ್ಯ ಪದ್ಮಶೇಖರ ಜೈನ್,ಪಂಚಾಯತ್‌ರಾಜ್ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು, ವಿವಿಧ ಘಟಕಗಳ ಪದಾಧಿಕಾರಿಗಳು, ಪ್ರಮುಖರು ಉಪಸ್ಥಿತರಿದ್ದರು. ಇದೇ ವೇಳೆ ಇಬ್ರಾಹೀಂ ಕೈಲಾರ ಕಾಂಗ್ರೆಸ್ ಸೇರ್ಪಡೆಗೊಂಡರು.
ಬಾಲಕೃಷ್ಣ ಆಳ್ವ ಕೊಡಾಜೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಪ್ರಚಾರ ಸಮಿತಿ ಅಧ್ಯಕ್ಷ ಉಮೇಶ್ ಸಪಲ್ಯ ವಂದಿಸಿದರು.

LEAVE A REPLY

Please enter your comment!
Please enter your name here