ಪುತ್ತೂರು:ಹಿಂದುತ್ವದ ನೆಲೆಯಲ್ಲಿ ಮಹಿಳೆಯರ ರಕ್ಷಣೆಗೆ ನಿಂತ ಅನೇಕ ಘಟನೆಗಳನ್ನು ನೆನಪಿಸಿಕೊಂಡು ಒಂದಷ್ಟು ಮಹಿಳೆಯರು ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಅವರ ಚುನಾವಣಾ ಖರ್ಚಿಗೆ ಕಿಂಚಿತ್ ಆರ್ಥಿಕ ನೆರವು ನೀಡಿದ ಘಟನೆ ಕುರಿಯ ಗ್ರಾಮದಲ್ಲಿ ನಡೆದಿದೆ.
ಕುರಿಯ ಗ್ರಾಮದಲ್ಲಿ ಮೇ 6ರಂದು ಮುಸ್ಸಂಜೆ ನಡೆದ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಅವರ ಮತಯಾಚನೆ ಸಭೆಯಲ್ಲಿ ಮಹಿಳೆಯರು ಚುನಾವಣಾ ಖರ್ಚಿಗೆಂದು ಆರ್ಥಿಕ ನೆರವು ನೀಡಿದರು. ಈ ವೇಳೆ ಭಾವುಕರಾದ ಅರುಣ್ ಕುಮಾರ್ ಪುತ್ತಿಲ ಅವರು ಯಾವ ಸಂದರ್ಭ ಬಂದರೂ ನಾನು ಹಿಂದುತ್ವದ ಆಧಾರದಲ್ಲೇ ಹೋರಾಟ ಮಾಡಲಿದ್ದೇನೆ. ಈ ಗೆಲುವು ನನ್ನದಲ್ಲ ಕಾರ್ಯಕರ್ತರ, ಬೆಂಬಲಿಗರ ಗೆಲುವು. ನನ್ನ ಸ್ಟಾರ್ ಪ್ರಚಾರಕರು ನೀವೇ ಎಂದರು. ಇದೇ ಸಂದರ್ಭದಲ್ಲಿ ವಿಕಲಚೇತನ ಸತೀಶ್ ಬೋಳಂತಿಮಾರ್ ಅವರು ರೂ.5 ಸಾವಿರವನ್ನು ಅರುಣ್ ಕುಮಾರ್ ಪುತ್ತಿಲರಿಗೆ ಹಸ್ತಾಂತರಿಸಿದರು. ಹಿರಿಯರಾದ ವೆಂಕಟ್ರಮಣ ನಕ್ಷತ್ರಿತ್ತಾಯ, ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಅರ್ಚಕ ಪ್ರಕಾಶ್ ರಾವ್ ಕೊಡ್ಲಾರು, ಕುರಿಯ ಅರುಣ್ ರೈ ಡಿಂಬ್ರಿ, ಕುರಿಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶಶಿಧರ್ ಕಿನ್ನಿಮಜಲು, ಧನ್ರಾಜ್ ಅಲೆಕ್ಕಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನವೀನ್ ರೈ ಪಂಜಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಸತೀಶ್ ಬೊಳಂತಿಮಾರು ಕಾರ್ಯಕ್ರಮ ನಿರೂಪಿಸಿದರು.