





ಪುತ್ತೂರು: ಮಾಜಿ ಮುಖ್ಯಮಂತ್ರಿ, ಸಂಸದ ಡಿ.ವಿ.ಸದಾನಂದ ಗೌಡ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ, ದ.ಕ.ಸಂಸದ ನಳಿನ್ ಕುಮಾರ್ ಕಟೀಲ್ ಅವರ ಭಾವಚಿತ್ರವಿದ್ದ ಬ್ಯಾನರ್‌ಗೆ ಚಪ್ಪಲಿ ಹಾರ ಹಾಕಿದ್ದ ಪ್ರಕರಣದಲ್ಲಿ ಹಿಂದೂ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ದೌರ್ಜನ್ಯ ನಡೆಸಿರುವ ಘಟನೆಗೆ ಸಂಬಂಧಿಸಿ ಕಾಂಗ್ರೆಸ್ ಮೇಲೆ ಆರೋಪ ಮಾಡಿದ್ದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮತ್ತು ಆರ್‌ಎಸ್‌ಎಸ್ ಮುಖಂಡ ಡಾ.ಪ್ರಭಾಕರ ಭಟ್ ಕಲ್ಲಡ್ಕ, ನಳಿನ್ ಕುಮಾರ್ ಕಟೀಲ್ ಅವರ ಹೇಳಿಕೆಗಳಿಗೆ ಸಂಬಂಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಅಭಿಪ್ರಾಯಗಳೊಂದಿಗೆ ವ್ಯಾಪಕವಾಗಿ ಸಂದೇಶಗಳು ರವಾನೆಯಾಗುತ್ತಿವೆ.



ಪುತ್ತೂರಿಗೆ ಆಗಮಿಸಿ ಗಾಯಾಳು ಯುವಕರನ್ನು ಭೇಟಿಯಾಗಿ ಯೋಗಕ್ಷೇಮ ವಿಚಾರಿಸಿದ ಬಳಿಕ ಮಾಧ್ಯಮದ ಜೊತೆ ಮಾತನಾಡಿದ್ದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಪೊಲೀಸರ ಮಾನಸಿಕತೆ ಹೇಗಿರುತ್ತದೆ ಎಂದು ಇವತ್ತು ಸ್ಯಾಂಪಲ್ ರೀತಿಯಲ್ಲಿ ತೋರಿಸಿದ್ದಾರೆ. ಇದನ್ನು ನಾನು ಖಂಡಿಸುತ್ತೇನೆ ಎಂದು ಹೇಳಿದ್ದರಲ್ಲದೆ, ಕಾಂಗ್ರೆಸ್ ಬಂದ ಬಳಿಕ ಭಟ್ಕಳದಲ್ಲಿ ಪಾಕಿಸ್ಥಾನ ಧ್ವಜ ಹಾರಿಸಿದ್ರು, ಗೋವೊಂದನ್ನು ಕೊಂದು ಅದರ ಮೇಲೆ ಬಿಜೆಪಿ ಧ್ವಜ ಹಾಕಿದ್ರು ನಾಲ್ಕೈದು ದಿನಗಳಲ್ಲಿ ಈ ರೀತಿಯ ಘಟನೆಗಳಾಗಿದ್ದು ಮುಂದಿನ ದಿನಗಳಲ್ಲಿ ಹಿಂದೂ ಸಮಾಜ ಇನ್ನೂ ನೋಡಲಿಕ್ಕಿದೆ.ನಾವು ಹಿಂದೂ ಸಮಾಜ ಒಟ್ಟಾಗಿರಬೇಕು ಎಂದು ಹೇಳಿದ್ದರು.ಆ ಬಳಿಕ ಅವರು ತನ್ನ ಫೇಸ್ ಬುಕ್ ಖಾತೆಯಲ್ಲಿ, ‘ಇಂದು ಪುತ್ತೂರಿನಲ್ಲಿ ನಡೆದ ಪೊಲೀಸ್ ದೌರ್ಜನ್ಯದ ಘಟನೆಯಲ್ಲಿ ನೋವನ್ನು ಅನುಭವಿಸಿದ ನಮ್ಮ ಕಾರ್ಯಕರ್ತರನ್ನು ಭೇಟಿಯಾಗಿ ಆತ್ಮಸ್ಥೈರ್ಯ ತುಂಬಲಾಯಿತು. ಕಾಂಗ್ರೆಸ್ ಕುಮ್ಮಕ್ಕಿನಿಂದ ಪೊಲೀಸರು ಕಾನೂನು ಮೀರಿ ಹಿಂದು ಸಂಘಟನೆಯ ನಮ್ಮ ಕಾರ್ಯಕರ್ತರ ಮೇಲೆ ದೈಹಿಕ ಹಲ್ಲೆಯನ್ನು ನಡೆಸಿದ ಘಟನೆಯನ್ನು ಕಟು ಶಬ್ದಗಳಲ್ಲಿ ಖಂಡಿಸುತ್ತಾ ಈ ಹೀನ ಕೃತ್ಯದಲ್ಲಿ ಭಾಗಿಗಳಾದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ತಕ್ಷಣವೇ ಅಮಾನತುಗೊಳಿಸುವಂತೆ ಆಗ್ರಹಿಸಲಾಯಿತು’ ಎಂದು ಬರೆದುಕೊಂಡಿದ್ದಾರೆ.







ಕಾಂಗ್ರೆಸ್ ಕಿತಾಪತಿ-ಡಾ.ಪ್ರಭಾಕರ್ ಭಟ್: ಸರಕಾರ ಬದಲಾದ ತಕ್ಷಣ ಏನು ಬೇಕಾದರೂ ಮಾಡಬಹುದಾ?. ಹಿಂದೂ ಯುವಕರ ಮೇಲೆ ಪೊಲೀಸ್ ದೌರ್ಜನ್ಯ ನೂರಕ್ಕೆ ನೂರು ಕಾಂಗ್ರೆಸ್ ಮಾಡಿದ ಕಿತಾಪತಿ ಎಂದು ಆರ್‌ಎಸ್‌ಎಸ್ ಮುಖಂಡ ಡಾ.ಪ್ರಭಾಕರ ಭಟ್ ಕಲ್ಲಡ್ಕ ಹೇಳಿದ್ದರು. ಒಂದು ಸಣ್ಣ ವಿಷಯಕ್ಕಾಗಿ ಪೊಲೀಸ್ ಠಾಣೆಗೆ ಕರೆದೊಯ್ದು ಈ ರೀತಿ ಅಮಾನುಷವಾಗಿ ಹೊಡೆಯುವುದು ತಪ್ಪು. ಕಂಬಳ ಆದರೂ ಕೋಣಗಳನ್ನು ಓಡಿಸುವವರು ಹೊಡೆದರೆ ಶಿಕ್ಷೆಯಾಗುತ್ತದೆ. ಒಂದು ಪ್ರಾಣಿಗೆ ಗಾಯವಾದರೂ ಶಿಕ್ಷೆ ಇದೆ. ಆದರೆ ಪೊಲೀಸರು ಮಾಡಿದ ಇಂತಹ ಅಮಾನುಷ ಕೃತ್ಯಕ್ಕೆ ಏನು ಶಿಕ್ಷೆಯಾಗಿದೆ. ಸರಕಾರ ಬಂದ ತಕ್ಷಣ ಏನು ಬೇಕಾದರೂ ಮಾಡಬಹುದಾ? ಎಂದು ಅವರು ಪ್ರಶ್ನಿಸಿದ್ದರಲ್ಲದೆ ಪೊಲೀಸರಿಗೆ ಮೇಲಿಂದ ವಿಪರೀತ ಒತ್ತಡ ಇತ್ತು ಎಂದು ಗಾಯಾಳು ಹೇಳಿದಂತೆ ಇಲ್ಲಿ ಸರಕಾರವೇ ಒತ್ತಡ ಮಾಡಬೇಕಷ್ಟೆ. ಯಾಕೆಂದರೆ ಉಳಿದವರಿಗೆ, ಬಿಜೆಪಿಯವರಿಗೆ ಮಾತನಾಡಲು ಆ ರೀತಿಯ ವ್ಯವಸ್ಥೆ ಇವತ್ತಿಲ್ಲ. ಹಾಗಾಗಿ ಇದು ನೂರಕ್ಕೆ ನೂರು ಕಾಂಗ್ರೆಸ್ ಮಾಡಿದ ಕಿತಾಪತಿ. ಯಾರು ಇದರ ಹಿಂದಿನ ಪ್ರೇರಣಾ ಶಕ್ತಿ ಎನ್ನುವುದು ಗೊತ್ತಾಗಬೇಕು. ಯಾರ ಒತ್ತಡ, ಯಾಕೆ ಒತ್ತಡ ಎಂದೂ ಹೇಳಲಿ ಎಂದು ಹೇಳಿದ್ದರು. ಇವರೀರ್ವರ ಈ ಹೇಳಿಕೆಗಳಿಗೆ ಸಂಬಂಧಿಸಿ ಪರ-ವಿರೋಧದ ಅಭಿಪ್ರಾಯಗಳೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ. ಈ ಪೈಕಿ ಆಯ್ದ ಕೆಲವು ಟ್ವೀಟ್‌ಗಳನ್ನು ಇಲ್ಲಿ ನೀಡಲಾಗಿದೆ.











