ಪುತ್ತೂರು: ಬಲ್ನಾಡಿನಲ್ಲಿ ತೋಟದ ಮೇಲ್ವಿಚಾರಕನಾಗಿ ಕೆಲಸ ಮಾಡುತ್ತಿದ್ದ ಮಗನ ಮನೆಗೆ ಬರುತ್ತಿದ್ದ ಸುಳ್ಯ ಮರ್ಕಂಜದ ವೃದ್ಧರೊಬ್ಬರು ಪುತ್ತೂರು ಮಯೂರ ಇನ್ಲ್ಯಾಂಡ್ ಬಳಿ ಅಸ್ವಸ್ಥರಾಗಿ ಕುಸಿದು ಬಿದ್ದದ್ದು, ಇದನ್ನು ಗಮನಿಸಿದ ಅದೇ ರಸ್ತೆಯಾಗಿ ಸಾಗುತ್ತಿದ್ದ ಪುತ್ತೂರು ನಗರಸಭೆ ಅಧಿಕಾರಿ ಮತ್ತು ಸಿಬ್ಬಂದಿಗಳು ತಮ್ಮದೇ ಜೀಪಿನಲ್ಲಿ ವೃದ್ಧರನ್ನು ಅಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದಿದ ಘಟನೆ ಮೇ 29ರಂದು ನಡೆದಿದೆ.
ಸುಳ್ಯದ ಮರ್ಕಂಜ ನಿವಾಸಿ ಸದಾನಂದ ಎಂಬವರು ಪುತ್ತೂರು ಬಲ್ನಾಡಿನಲ್ಲಿ ತೋಟದ ಮೇಲ್ವಿಚಾರಕನಾಗಿ ಕೆಲಸ ನಿರ್ವಹಿಸುತ್ತಿರುವ ಮಗನ ಮನೆಗೆ ತನ್ನ ನಾಲ್ಕು ವರ್ಷದ ಮೊಮ್ಮಗೊನೊಂದಿಗೆ ಬಸ್ನಲ್ಲಿ ಪುತ್ತೂರಿಗೆ ಬಂದಿದ್ದಾರೆ. ಅಲ್ಲಿಂದ ನಡೆದುಕೊಂಡು ಹೋಗುವ ವೇಳೆ ಮಯೂರ ಇನ್ಲ್ಯಾಂಡ್ ಸಮೀಪಿಸುತ್ತಿದ್ದಂತೆ ಸದಾನದಂದ ಅವರು ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದಾರೆ. ಕುಸಿದು ಬಿದ್ದ ಸದಾನಂದ ಅವರನ್ನು ಸಾರ್ವಜನಿಕರು ಬಂದು ಆರೈಕೆ ಮಾಡುತ್ತಿದ್ದ ವೇಳೆ ರಸ್ತೆ ಬದಿಯಲ್ಲಿ ಗುಂಪು ಸೇರಿರುವುದನ್ನು ಗಮನಿಸಿದ ನಗರಸಭೆ ಅಧಿಕಾರಿ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ತೆರಳಿದಾಗ ವಿಚಾರ ತಿಳಿದು ತಕ್ಷಣ ತಮ್ಮದೇ ಜೀಪಿನಲ್ಲಿ ಕರೆದೊಯ್ದು ಸದಾನಂದ ಅವರನ್ನು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕ ರಾಮಚಂದ್ರ, ಚಾಲಕ ರಾಧಾಕೃಷ್ಣ, ಪೌರ ಕಾರ್ಮಿಕ ಚಂದ್ರ, ವೇಣುಗೋಪಾಲ್ ಅವರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವ ವೇಳೆ ಸದಾನಂದ ಅವರು ಮಾತನಾಡುವ ಸ್ಥಿತಿಯಲ್ಲಿ ಇರಲ್ಲಿಲ್ಲ. ಮೊಮ್ಮಗನಲ್ಲಿ ವಿಚಾರಿಸಿದಾಗ ಬಲ್ನಾಡು ಮತ್ತು ಬನ್ನೂರು ಎಂದು ಹೇಳುತ್ತಿದ್ದ. ಗೊಂದಲಕ್ಕೊಳಗಾದ ಅಧಿಕಾರಿಗಳು ಸದಾನಂದ ಅವರ ಕಿಸೆಯಲ್ಲಿದ್ದ ಮೊಬೈಲ್ ಪೋನ್ ನಿಂದ ಕರೆ ಮಾಡಿದಾಗ ಬಳ್ನಾಡಿನಲ್ಲಿರುವ ಪುತ್ರ ಮಾತನಾಡಿದ್ದಾನೆ. ಈ ವೇಳೆ ಸದಾನಂದ ಅವರು ಮರ್ಕಂಜದವರಾಗಿದ್ದು, ತನ್ನ ಮಗ ವಾಸ್ತವ್ಯವಿರುವ ಬಲ್ನಾಡಿಗೆ ತೆರಳುತ್ತಿದ್ದ ಬಗ್ಗೆ ಮಾಹಿತಿ ಲಭ್ಯವಾಯಿತು ಎಂದು ನಗರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತಿಳಿಸಿದ್ದಾರೆ.