ಗುಡುಗು ಸಹಿತ ಗಾಳಿ-ಮಳೆ; ನೆಟ್ಟಣದಲ್ಲಿ ಮರ ಬಿದ್ದು ಎರಡು ಕಾರುಗಳು ಜಖಂ

0

ಕಡಬ: ಸೋಮವಾರ ರಾತ್ರಿ ಗುಡುಗು ಸಹಿತ ಗಾಳಿ ಮಳೆಗೆ ಕಡಬ ತಾಲೂಕಿನ ನೆಟ್ಟಣ ಸಮೀಪ ಹೆದ್ದಾರಿ ಬದಿಯ ಮರಗಳು ಉರುಳಿ ಎರಡು ಕಾರುಗಳ ಮೇಲೆ ಬಿದ್ದ ಪರಿಣಾಮ ಕಾರುಗಳು ಜಖಂಗೊಂಡ ಹಾಗೂ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡ ಘಟನೆ ಸಂಭವಿಸಿದೆ. ನೆಟ್ಟಣದ ಕೇಂದ್ರೀಯ ಮರ ಸಂಗ್ರಹಣ ಘಟಕದ ಬಳಿ ಘಟನೆ ಸಂಭವಿಸಿದೆ. ಭಾರೀ ಗಾಳಿಗೆ ಹೆದ್ದಾರಿ ಬದಿಯ ದೂಪದ ಹಲವು ಮರಗಳು ರಸ್ತೆಗೆ ಬಿದ್ದಿದೆ. ಈ ವೇಳೆ ಸಂಚರಿಸುತ್ತಿದ್ದ ನ್ಯಾನೋ ಹಾಗೂ ಒಮ್ನಿ ಕಾರುಗಳ ಮೇಲೆ ಮರ ಬಿದ್ದಿದೆ ಎಂದು ತಿಳಿದುಬಂದಿದೆ. ಕಾರಿನಲ್ಲಿ ಇದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪೊಲೀಸ್, ಅರಣ್ಯ, ಅಗ್ನಿಶಾಮಕ ದಳ, ಲೋಕೋಪಯೋಗಿ ಇಲಾಖೆ, ಸ್ಥಳೀಯಾಡಳಿತ, ಸ್ಥಳೀಯರ ನೆರವಿನಿಂದ ಮರಗಳ ತೆರವು ಕಾರ್ಯ ನಡೆಸಲಾಗಿದೆ. ತೆರವಿಗೆ ಹರಸಾಹಸ ಪಡಬೇಕಾಯಿತು. ಹಾನಿಗೊಂಡ ಕಾರು ಯಾತ್ರಿಕರದ್ದು ಎಂದು ತಿಳಿದುಬಂದಿದೆ.

ಈ ಭಾಗದಲ್ಲಿ ಹೆದ್ದಾರಿ ಬದಿಯಲ್ಲಿ ದೂಪದ ಮರಗಳು ಅಪಾಯಕಾರಿಯಾಗಿದ್ದು ವರ್ಷಂಪ್ರತಿ ಹೆದ್ದಾರಿಗೆ ಉರುಳುತ್ತಾ, ರಸ್ತೆ ಸಂಚಾರಕ್ಕೆ ತೊಡಕಾಗುತ್ತಿದೆ ಎಂಬ ದೂರು ವ್ಯಕ್ತವಾಗಿದ್ದು, ಅಪಾಯಕಾರಿ ಮರಗಳನ್ನು ಕೂಡಲೇ ಅರಣ್ಯ ಇಲಾಖೆ ತೆರವು ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಗುಡುಗು ಸಹಿತ ಗಾಳಿ-ಮಳೆ: ಸುಳ್ಯ ಹಾಗೂ ಕಡಬ ತಾಲೂಕಿನ ಕೆಲವೆಡೆ ಗುಡುಗು ಸಹಿತ ಗಾಳಿ ಮಳೆಯಾಗಿದೆ. ಕೆಲವೆಡೆ ಧಾರಾಕಾರ ಮಳೆ ಹಾಗೂ ಕೆಲವೆಡೆ ಕೇವಲ ಹನಿ ಮಳೆಯಾಗಿದೆ. ಕೆಲವೆಡೆ ಗುಡುಗು – ಗಾಳಿ ಮಾತ್ರವೇ ಬಂದಿದೆ. ಪಂಜ, ಬಳ್ಪ, ಬೆಳ್ಳಾರೆ, ಸುಳ್ಯ, ಸಂಪಾಜೆ, ಕೊಲ್ಲಮೊಗ್ರು, ಸುಬ್ರಹ್ಮಣ್ಯ ಭಾಗದಲ್ಲಿ ಸಾಧಾರಣ ಮಳೆಯಾಗಿದೆ.

LEAVE A REPLY

Please enter your comment!
Please enter your name here